ADVERTISEMENT

ಖಾದಿ, ನೇಷನ್ ಫ್ಯಾಷನ್

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST
ಖಾದಿ, ನೇಷನ್  ಫ್ಯಾಷನ್
ಖಾದಿ, ನೇಷನ್ ಫ್ಯಾಷನ್   

ಖಾದಿ ನಮ್ಮತನದ ಅಸ್ಮಿತೆ, ಅನನ್ಯತೆಯ ಪ್ರತೀಕ. ಸ್ವಾತಂತ್ರ್ಯಪೂರ್ವದಲ್ಲಿ ಸ್ವಾಭಿಮಾನದ ಸಂಕೇತವಾಗಿ ಬಳಕೆಯಾಗುತ್ತಿದ್ದ ಖಾದಿ ಉತ್ಪನ್ನಗಳು ಈಗ ಸ್ವಾವಲಂಬನೆಯ ಸಾಧನವಾಗಿ ಬಳಕೆ ಆಗುತ್ತಿರುವುದು ನಮ್ಮ ದೇಸಿ ಸಂಸ್ಕೃತಿಯ ಸತ್ವದ ದ್ಯೋತಕ. ಖಾದಿ ಬರಿ ಒಂದು ಉತ್ಪನ್ನವಲ್ಲ, ಅದೊಂದು ಜೀವನಸಂಸ್ಕೃತಿ. ನಮ್ಮ ಖಾದಿ ಉದ್ಯಮಕ್ಕೆ ಜಾಗತೀಕರಣದ ಪ್ರಬಲ ಪೈಪೋಟಿಯನ್ನು ಎದುರಿಸುವ ಸಾಮರ್ಥ್ಯವಿದೆ.

ಖಾದಿ ತತ್ತ್ವವನ್ನು ಅನುಷ್ಠಾನಗೊಳಿಸುವ ಮೂಲಕ ಮಹಾತ್ಮ ಗಾಂಧೀಜಿಯೊಂದಿಗೆ ಅನುಸಂಧಾನಿಸುವುದು ಗ್ರಾಮ ಭಾರತದ ಕನಸಿನ ಸಾಕಾರಕ್ಕೆ ಪೂರಕ ಎಂಬುದು ನನ್ನ ಬಲವಾದ ನಂಬಿಕೆ.

ನನ್ನ ಬಾಲ್ಯದ ದಿನಗಳಲ್ಲಿ ಊರಿನ ಹಿರಿಯರು ಖಾದಿ ಶರ್ಟ್, ಗಾಂಧಿ ಟೋಪಿ, ನೆಹರೂ ಪೈಜಾಮ್ ಧರಿಸುತ್ತಿದ್ದುದನ್ನು ನೋಡಿ ನಾನೂ ಒಂದಲ್ಲ ಒಂದು ದಿನ ಖಾದಿ ತೊಡಲೇಬೇಕು ಎಂಬ ಬಯಕೆ ಹುಟ್ಟಿತ್ತು. ಈಗ ಖಾದಿ ನನ್ನ ಅಚ್ಚುಮೆಚ್ಚಿನ ಉಡುಪು. ಅದನ್ನು ಹಾಕಿಕೊಂಡಾಗ ಎಲ್ಲರಿಗಿಂತಲೂ ನಾನು ವಿಶೇಷವಾಗಿದ್ದೇನೆ ಎನ್ನುವ ಭಾವನೆ ಮೂಡುತ್ತದೆ. ದೇಹಕ್ಕೂ ಹಿತ, ಮನಸ್ಸಿಗೂ ಮುದ ನೀಡುವ ಖಾದಿ ನನ್ನಲ್ಲಿ ವಿಶೇಷ ಮೋಡಿ ಮಾಡಿದೆ. ಅದೇನೋ ಗೊತ್ತಿಲ್ಲ. ಖಾದಿ ಬಟ್ಟೆಯನ್ನು ತೊಟ್ಟಾಗ ನನ್ನಲ್ಲಾಗುವ ಪುಳಕ ವರ್ಣನಾತೀತ.

ADVERTISEMENT

ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ವಿಕಾಸ ಸಂಸ್ಥೆಯ ಮೂಲಕ ಹೊಲಿಗೆ ತರಬೇತಿ, ಸ್ವಯಂ ಉದ್ಯೋಗ ತರಬೇತಿ, ಮಹಿಳಾ ಸಬಲೀಕರಣದಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವೆ. ಸಂಸ್ಥೆಯ ಉದ್ಯೋಗಿಗಳು ಖಾದಿಯನ್ನೇ ಪ್ರಮುಖವಾಗಿ ಬಳಸುವಂತೆ ಪ್ರೇರಣೆ ನೀಡಬೇಕೆಂಬ ಬಯಕೆ ನನ್ನದು.

ಕೃಷಿಗೆ ಪೂರಕವಾಗಿರುವ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸಬಲ್ಲ ರಾಷ್ಟ್ರೀಯ ರಚನಾತ್ಮಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ಖಾದಿ ನೂಲು ತೆಗೆಯುವ ಹಾಗೂ ಕೈಮಗ್ಗ ಬಟ್ಟೆ ನೇಯುವ ಕೆಲಸ ಅಗ್ರಸ್ಥಾನದಲ್ಲಿದೆ. ಖಾದಿ ಉತ್ಪನ್ನಗಳ ಬಳಕೆಯ ಪ್ರಜ್ಞೆ ಜಾಗೃತಗೊಳ್ಳುತ್ತಿದೆ. ಜಾಗತಿಕ ಮಟ್ಟದಲ್ಲಿ ಖಾದಿ ಮತ್ತು ಕೈಮಗ್ಗ ವಸ್ತುಗಳ ಬೇಡಿಕೆ ಹೆಚ್ಚತೊಡಗಿದೆ.

ಖಾದಿ ಉದ್ದಿಮೆಗೆ ಬೇಕಾದ ಪಾರಂಪರಿಕ ಜ್ಞಾನ, ತಂತ್ರಜ್ಞಾನ, ಮೂಲಸೌಕರ್ಯ ಹಾಗೂ ಕಚ್ಚಾವಸ್ತುಗಳು ಭಾರತದಲ್ಲಿ ಮಾತ್ರ ಲಭ್ಯವಿದ್ದು, ಭಾರತದಲ್ಲಿರುವ ಮಾನವ ಸಂಪನ್ಮೂಲಕ್ಕೂ ಬಹುದೊಡ್ಡ ಉದ್ಯೋಗಾವಕಾಶವನ್ನು ಸೃಷ್ಟಿಸುವ ಮೂಲಕ ‘ಸ್ವದೇಶಿ ಬಳಸಿ, ವಿದೇಶಿ ಅಳಿಸಿ’ ತತ್ತ್ವವನ್ನು ಸಾಕಾರಗೊಳಿಸಬಹುದಾಗಿದೆ.

ಸರ್ಕಾರಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಖಾದಿ ಬಟ್ಟೆಯನ್ನು ಕಡ್ಡಾಯಗೊಳಿಸಬೇಕು. ಹತ್ತಿ ಬೆಳೆಗಾರರಿಗೆ ಉತ್ತೇಜನ ನೀಡಬೇಕು. ಕೈಮಗ್ಗ ಕೇಂದ್ರಗಳಿಗೆ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡಬೇಕು. ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಖಾದಿ ಬಟ್ಟೆಯ ಸಮವಸ್ತ್ರವನ್ನು ಕಡ್ಡಾಯಗೊಳಿಸಬೇಕು.

ಖಾದಿ ಬಟ್ಟೆಯನ್ನು ಬಳಸಿ ಮಹಿಳೆಯರ ಉಡುಪುಗಳನ್ನು ಹೊಸ ವಿನ್ಯಾಸದೊಂದಿಗೆ ಸಿದ್ಧಪಡಿಸಬೇಕು. ರಿಯಾಯಿತಿ ದರದಲ್ಲಿ ಖಾದಿ ಬಟ್ಟೆ ಮಾರಾಟ ವ್ಯವಸ್ಥೆ ಸದಾಕಾಲ ಜಾರಿಯಲ್ಲಿರಬೇಕು. ಖಾದಿ ಪಾರ್ಕ್ ಸ್ಥಾಪಿಸಿ ಅಲ್ಲಿ ಖಾದಿ ಉತ್ಪನ್ನಗಳನ್ನು ಉತ್ಪಾದಿಸಿ, ಮಾರಾಟ ವ್ಯವಸ್ಥೆ ಕಲ್ಪಿಸಬೇಕು. ಕೈಮಗ್ಗ ನೇಕಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಒದಗಿಸಿ, ಸಮರ್ಪಕ ವೇತನ ಪಾವತಿಸಿ ಅವರಿಗೆ ಜೀವನ ಭದ್ರತೆ ನೀಡಬೇಕು. ಚರಕ ಸಂಹಿತೆ ಆಚರಣೆಯಲ್ಲಿ ಬರಬೇಕು.

ಗುಡಿ ಕೈಗಾರಿಕೆಗಳಲ್ಲಿ ಖಾದಿ ಬಟ್ಟೆ ತಯಾರಿಕೆಗೂ ಅವಕಾಶ ಕಲ್ಪಿಸಿ ಸ್ವಾವಲಂಬಿ ದಾರಿಯನ್ನು ಒದಗಿಸಿಕೊಡಬೇಕು. ಸಾಮಾನ್ಯ ಜನರೂ ಸ್ವಯಂ ಜಾಗೃತರಾಗಿ ವಾರದಲ್ಲಿ ಒಂದು ದಿನವಾದರೂ ಖಾದಿಯನ್ನು ಬಳಸಬೇಕು. ಹೀಗೆ ಖಾದಿ ಮರುಬಳಕೆ ಮಾಡುವ ಮೂಲಕ ದೇಸಿ ಉದ್ದಿಮೆಯೊಂದರ ಬೆಳವಣಿಗೆಗೆ ಸ್ವಯಂಹಿತಾಸಕ್ತಿಯಿಂದ ಪ್ರಯತ್ನಿಸಬೇಕು.
ಅನಂತ ಜೋಶಿ, ಹೊಸಪೇಟೆ

* * 

ಹುದ್ಲಿದೇ– ಗಂಜಿ ಇಸ್ತ್ರಿ ಹಾಕಿಬಿಟ್ರಾ?
ಬೆಳಗಾವಿಯ ಪುಟ್ಟಗ್ರಾಮ ಅಂಕಲಿಗಿಯ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ನಾನೇ ಖಾದಿ ಬಟ್ಟೆ ಹೊಲಿದು ತೊಟ್ಟ ನೆನಪಿದೆ. ನನ್ನ ಬ್ಯಾಂಕ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಹಾಗೂ ವಿಶೇಷತೆ ಏನೆಂದು ತಿಳಿದುಕೊಳ್ಳಲು ಮುಂದಾದಾಗ ನನಗೆ ತುಂಬಾ ಇಷ್ಟವಾದ ಗ್ರಾಮ ‘ಹುದಲಿ’. ಇದಕ್ಕೆ ಕಾರಣ 1937ರಲ್ಲಿ ಮಹಾತ್ಮ ಗಾಂಧೀಜಿ ಸ್ಥಾಪಿಸಿದ ‘ಖಾದಿ ಗ್ರಾಮ’. ಅಲ್ಲಿದ್ದ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಉತ್ಪಾದಕ ಸಂಘದವರು ನಮ್ಮ ಬ್ಯಾಂಕಿನೊಂದಿಗೆ ವ್ಯವಹಾರವಿದ್ದರಿಂದ ಆ ಗ್ರಾಮದೊಂದಿಗಿನ ಒಡನಾಟ ಹೆಚ್ಚಾಗಿತ್ತು. 

ಆ ಗ್ರಾಮದವರು ಬ್ಯಾಂಕಿಗೆ ಬಂದಾಗ ಅವರು ಧರಿಸುತ್ತಿದ್ದ ಶುಭ್ರ ಶ್ವೇತವರ್ಣದ ಖಡಕ್ ಗಂಜಿ (ಸ್ಟಾರ್ಚ್) ಹಾಕಿದ ಗಾಂಧಿಟೋಪಿ, ಜುಬ್ಬಾ ಪೈಜಾಮಾ ನೋಡುತ್ತಲೇ ಅವರ ಬ್ಯಾಂಕ್ ಕೆಲಸ ಮಾಡಿ ಕೊಡುತ್ತಿದ್ದೆ. ಆ ಗ್ರಾಮದಲ್ಲಿ ತಯಾರಾಗವ ಖಾದಿಬಟ್ಟೆಗೆ ಫಿದಾ ಆಗಿ ನಾನೇಕೆ ಖಾದಿ ಸಮವಸ್ತ್ರ ತೊಡಬಾರದೆಂದು, ಖಾದಿ ಉತ್ಪಾದಕ ಸಂಘದಿಂದ ಬಟ್ಟೆ ಖರೀದಿಸಿ, ನನ್ನ ತಂದೆ ಹೇಳಿಕೊಟ್ಟಿದ್ದ ಹೊಲಿಗೆ ಕೌಶಲ ಬಳಸಿ ನಾನೇ ಜುಬ್ಬಾ ಪೈಜಾಮ ಹೊಲಿದುಕೊಂಡೆ.

ಅದೇನೋ, ಹುದಲಿ ಗ್ರಾಮದಲ್ಲಿನ ಖಡಕ್ ಗಂಜಿ (ಸ್ಟಾರ್ಚ್) ಇಸ್ತ್ರಿನೇ ಬೇರೆ. ಹೀಗಾಗಿ, ನಮ್ಮಲ್ಲಿ ಗಂಜಿ ಇಸ್ತ್ರಿ ಮಾಡುವವರಿದ್ದರೂ ನನ್ನ ಜುಬ್ಬಾ ಪೈಜಾಮಾ ಹುದಲಿಗೆ ಕಳುಹಿಸಿ ಖಡಕ್ ಗಂಜಿ (ಸ್ಟಾರ್ಚ್) ಇಸ್ತ್ರಿ ಹಾಕಿಸಿ ತಂದ ಮರುದಿನವೇ ತೊಟ್ಟು ಬ್ಯಾಂಕಿಗೆ ಹೋದೆ. ದಾರಿ ಉದ್ದಕ್ಕೂ ‘ಏನ್ರೀ ಸಾರ್... ಹುದ್ಲಿ ಖಾದಿಬಟ್ಟೆ. ಹುದ್ಲಿದೇ ಗಂಜಿ-ಇಸ್ತ್ರಿ ಹಾಕ್ಸಿ ಬಿಟ್ರಾ? ಈಗ ಥೇಟ್ ರಾಜಕಾರಣಿ ಥರಾನೇ ಕಾಣ್ತೀರ್ ನೋಡ್ರಿ’ ಎಂದಾಗ ಖುಷಿಯೋ ಖುಷಿ. ಖಾದಿ ಅಂದ್ರೆನೇ ಹಾಗೆ; ಹೆಮ್ಮೆ.
ರಘನಾಥರಾವ್ ತಾಪ್ಸೆ, ದಾವಣಗೆರೆ

* * 

ಖಾದಿ ಸೀರೆಯಿಂದ ದೊರೆತ ಗೌರವ
ನಾನು ಮೊದಲು ಖಾದಿ ಸೀರೆ ಧರಿಸಿದ್ದು ಇನ್ನೂ ಅಚ್ಚಳಿಯದೆ ನೆನಪಿನಲ್ಲಿ ಉಳಿದಿದೆ. ಕನ್ನಡ ಶಾಲೆಯ ಟೀಚರ್ ಆಗಿ ಕೆಲಸಕ್ಕೆ ಸೇರಿದ್ದೆ. ಸೇರಿದ ಒಂದು ತಿಂಗಳಿಗೆಲ್ಲ ಸ್ವಾತಂತ್ರ್ಯ ದಿನಾಚರಣೆ ಬರುವುದಿತ್ತು.

ಶಾಲೆಯ ಹೆಡ್‌ಮಾಸ್ಟರ್ ಪ್ರಾರ್ಥನೆ ಮುಗಿದ ಮೇಲೆ ಆಗಸ್ಟ್ 15 ರಂದು ಸ್ವಚ್ಛವಾದ ಸಮವಸ್ತ್ರವನ್ನು ಧರಿಸಿಕೊಂಡು ಬರಬೇಕೆಂದು ಮಕ್ಕಳಿಗೆ ತಾಕೀತು ಮಾಡುತ್ತಿದ್ದರು. ಆಗಷ್ಟೆ ಸೀರೆ ಧರಿಸಲು ಪ್ರಾರಂಭಿಸಿದ್ದ ನನ್ನ ಬಳಿ ಎರಡು ಮೂರು ನೈಲಾನ್ ಸೀರೆಗಳಿದ್ದವು. ಆಗಸ್ಟ್ 15 ರಂದು ಉಡಲೆಂದು ಮಲ್ಲೇಶ್ವರಕ್ಕೆ ಅಮ್ಮನೊಡನೆ ಹೊರಟೆ. ಅಲ್ಲಿ ಅಂಗಡಿಯವ ಬಣ್ಣಗಳ ಸೀರೆಗಳನ್ನು ತೋರಿಸುತ್ತಿದ್ದ. ಅಮ್ಮ ನೋಡುತ್ತಿದ್ದರು. ನನಗೆ ಯಾವುದೂ ಸರಿಬೀಳಲಿಲ್ಲ. ಅಲ್ಲೇ ಎದುರಿನ ಅಂಗಡಿಯಲ್ಲಿದ್ದ ಬೋರ್ಡಿನಲ್ಲಿ ಚರಕದಿಂದ ನೂಲು ನೇಯುತ್ತಿದ್ದ ಗಾಂಧೀಜಿಯವರ ಚಿತ್ರ ನನ್ನನ್ನು ಆಕರ್ಷಿಸಿತು.

ಅಲ್ಲಿಗೆ ಹೋದಾಗ ಎಲ್ಲಾ ರೀತಿಯ ಖಾದಿ ಸೀರೆಗಳನ್ನೂ ತೋರಿಸಿದರು. ಅದರಲ್ಲಿ ಕ್ರೀಂ ಕಲರ್ ಸೀರೆಯನ್ನು ತೋರಿಸಿದರು. ಸ್ವಲ್ಪ ಒರಟಾಗಿದ್ದರೂ ಅದರ ಹಸಿರು ಅಂಚು ಕೇಸರಿ ಮತ್ತು ಕಪ್ಪನೆಯ ಸೆರಗು ನನಗೆ ನನಗಿಷ್ಟವಾಯಿತು. ಅದರ ಬೆಲೆ ತುಸು ಹೆಚ್ಚೆನಿಸಿದರೂ ಆ ಸೀರೆಯನ್ನೇ ಕೊಂಡೆ. ಅಂದು ಮುಂಜಾನೆ ಆ ದಪ್ಪ ಸೀರೆಯನ್ನು ತಿದ್ದಿ ತೀಡಿ ಉಟ್ಟಾಗ ಅಮ್ಮ ಚೆನ್ನಾಗಿದೆ ಎಂದರು.

ಅಂದು ಶಾಲೆಯಲ್ಲಿ ಮಕ್ಕಳ ಹಾಡು, ಸ್ವಾತಂತ್ರ್ಯ ಗೀತೆಗಳು ಎಲ್ಲವೂ ಮುಗಿದು ಮಕ್ಕಳಿಗೆಲ್ಲ ಸಿಹಿ ಹಂಚಿದ ನಂತರ ನಾವು ಕಾಫಿ ಕುಡಿಯುತ್ತಿದ್ದೆವು. ಆಗ ಹೆಡ್ ಮಾಸ್ಟರ್ ಬಂದರು. ನಾವೆಲ್ಲ ಎದ್ದು ನಿಂತೆವು. ನಮಗೆಲ್ಲ ಕೂಡಲು ಹೇಳಿ, ‘ನಾವು ಧರಿಸುವ ಬಣ್ಣದ ಬಟ್ಟೆಗಳು ನೋಡಲೇನೊ ಚೆನ್ನಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ನೋಡಿ ಇವರು ಧರಿಸಿರುವಂತಹ ಖಾದಿ ಸೀರೆ ನಮ್ಮ ದೇಶದ ಪ್ರತೀಕವೆನಿಸುತ್ತದೆ’ ಎಂದು ನನ್ನನ್ನು ತೋರಿಸುತ್ತಾ ಹೇಳಿದರು. ಮಕ್ಕಳಿಗೂ ನಿಮ್ಮಲ್ಲಿ ಗೌರವ ಭಾವನೆ ಉಂಟಾಗುತ್ತದೆ ಎಂದಾಗ ಎಲ್ಲರೂ ತಲೆಯಾಡಿಸಿದರು.

ಅಂದಿನ ದಿನಗಳಲ್ಲಿ ಸಾಮಾನ್ಯವಾಗಿ ಧರಿಸದ ಖಾದಿ ಧರಿಸಿದ್ದು ನನಗೂ ಹೆಮ್ಮೆಯುಂಟಾಗಿತ್ತು. ಮುಂದೆ ಹಲವು ಸಂದರ್ಭಗಳಲ್ಲಿ ಶಿಕ್ಷಕಿಯರು ಖಾದಿ ಸೀರೆಯನ್ನು, ಶಿಕ್ಷಕರು ಖಾದಿ ಜುಬ್ಬ, ಪೈಜಾಮಗಳನ್ನು ಧರಿಸಿಕೊಂಡು ಬಂದಾಗ ಸಮಾರಂಭಗಳು ಕಳೆ ಕಟ್ಟುತ್ತಿದ್ದವು. ವಿದ್ಯಾರ್ಥಿಗಳಿಗೂ ಖಾದಿ, ಚರಕ ಹಾಗೂ ಮಹಾತ್ಮ ಗಾಂಧಿಯವರ ಮಹತ್ವದ ಬಗ್ಗೆ ತಿಳಿಸಿಕೊಡುತ್ತಿದ್ದೆವು.

ಪ್ರಸ್ತುತ, ಬಟ್ಟೆಗಳಲ್ಲಿ ನೈಲಾನ್, ರೇಯಾನ್, ಜೂಟ್, ರೇಷ್ಮೆ ಇವುಗಳ ತರಹೇವಾರಿ ಡಿಸೈನ್‌ಗೆ ಎಲ್ಲರೂ ಮಾರುಹೋಗಿದ್ದಾರೆ. ಆದುದರಿಂದ ನೋಡಲು ಒರಟಾಗಿ ಕಾಣುವ ಖಾದಿಗೆ ಕಸುವು ತುಂಬುವ ಅಗತ್ಯವಿದೆ.ಖಾದಿಯನ್ನೂ ಅಂದಗೊಳಿಸಿದಾಗ ಧರಿಸುವ ಜನರತ್ತ ಆಸಕ್ತಿ ಹೊಂದುವುದರಲ್ಲಿ ಸಂದೇಹವೇ ಇಲ್ಲ.
ಎಸ್. ವಿಜಯಲಕ್ಷ್ಮಿ , ಬೆಂಗಳೂರು

* * 

ಅಕ್ಟೋಬರ್ ಸರಕು ಆಗದಿರಲಿ
ಅಲ್ಲಲ್ಲಿ ಖಾದಿಯ ರಿಯಾಯಿತಿ ಬೋರ್ಡ್‌ಗಳು ಕಾಣಿಸಿದಾಗ ಇದು ಪಕ್ಕಾ ಅಕ್ಟೋಬರ್ ತಿಂಗಳು ಎಂದು ತಿಳಿಯುತ್ತದೆ. ಇಲ್ಲವೆ ಅಕ್ಟೋಬರ್ ತಿಂಗಳಿಗೆ ಸಂಬಂಧಿಸಿದಂತೆ ಮಾತಾಡುವಾಗ ಖಾದಿ ನೆನಪಾಗುತ್ತದೆ. ಹೌದು, ನಾವು ಖಾದಿಯನ್ನು ಕೇವಲ ಒಂದು ಐಕಾನ್ ಆಗಿ ಕೂರಿಸಿದ್ದೇವೆ. ಗಾಂಧಿಯ ವಿಚಾರಗಳು ಹೇಗೆ ಮರೆಯಾಗುತ್ತಿವೆಯೋ ಖಾದಿಯೂ ಮುಂದೆ ಮರೆಯಾಗಬಹುದೆಂಬ ಆತಂಕವಿದೆ.

ಖಾದಿ ಬಗೆಗೆ ಹೇಳಲೇಬೇಕಿಲ್ಲ. ಎಲ್ಲಾ ಕಾಲಕ್ಕೂ ಸಲ್ಲುವ ಅತ್ಯುತ್ತಮ ಬಟ್ಟೆ! ಅಂದು ಖಾದಿ ಸೋತಿದ್ದು ಮೂರು ದಿನಕ್ಕೆ ಹಾಳಾಗಿ ಹೋಗುವ ಬ್ರಿಟನ್‌ನಿಂದ ಬಂದ ಅಗ್ಗದ ಬೆಲೆಯ ಬಟ್ಟೆಯ ಮುಂದೆ. ಇಂದು ಆಗುತ್ತಿರುವುದು ಅದೇ! ಉತ್ತಮವೆನ್ನುವ ಎಲ್ಲಾ ಅರ್ಹತೆಗಳಿದ್ದರೂ ಖಾದಿ ಸೋಲುತ್ತಿರುವುದೇಕೆ? ಖಾದಿ ಬಟ್ಟೆ ಎಂದರೆ ಈಗಿನ ಪೀಳಿಗೆ ಮೂಗು ಮುರಿಯುವುದೇಕೆ? ಅದು ನಮ್ಮದೇ ವೈಫಲ್ಯ.

ಬೇರೆ ಬಟ್ಟೆಗಳ ಆಕರ್ಷಣೆ ಮುಂದೆ ಖಾದಿಯನ್ನು ತರುವುದಕ್ಕೆ ಸೋತಿದ್ದೇವೆ. ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಹೆಚ್ಚು ತಲೆ ಕೆಡಿಸಿ ಕೊಂಡಂತಿಲ್ಲ. ಕೆಲವು ನಗರಗಳಲ್ಲಿ ಖಾದಿ ಭಂಡಾರ ಅಂತ ಮಾಡಿ ಕೈ ತೊಳೆದುಕೊಂಡಿವೆ. ಅಲ್ಲಿ ಒಂದೆರಡು ದೊಗಳೆ ಕುರ್ತಾ, ಅದೇ ಹಳೆಯ ಕಾಲದ ಮಾದರಿಯ ಉಡುಪುಗಳನ್ನು ಇಟ್ಟುಕೊಂಡು ಕೂರಲಾಗಿದೆ. ಇಂದಿನ ಯುವ ಪೀಳಿಗೆಯನ್ನು ಸೆಳೆಯದ ಹೊರೆತು ಖಾದಿಗೆ ಭವಿಷ್ಯವಿಲ್ಲವೆಂದೇ ಹೇಳಬಹುದು!

ವಾರಕ್ಕೊಮ್ಮೆ ಖಾದಿ ಕಡ್ಡಾಯ ಮಾಡುವ ಮಾತುಗಳು ಕೇಳಿ ಬರುತ್ತಿವೆ. ಏನೂ ಮಾಡದೇ ಸೋತವರಷ್ಟೇ ಕಡ್ಡಾಯದ ಮೊರೆ ಹೋಗುವುದು. ಖಾದಿ ಬಟ್ಟೆಯ ವಿಷಯದಲ್ಲಿ ಸಾಕಷ್ಟು ಹೊಸ ಪ್ರಯೋಗಗಳಾಗಬೇಕಿದೆ. ಈಗಿನ ಟ್ರೆಂಡ್‌ಗೆ ಒಗ್ಗುವಂತೆ ಅವುಗಳನ್ನು ರೂಪಿಸಬೇಕು. ಖಾದಿಗೆ ಪುನರ್ಜನ್ಮ ಬೇಕಿದೆ. ಸಾಕಷ್ಟು ಖಾಸಗಿ ಬಂಡವಾಳಕ್ಕೆ ಅವಕಾಶ ನೀಡಬೇಕಿದೆ. 
ಸದಾಶಿವ್ ಸೊರಟೂರು, ಚಿಂತಾಮಣಿ

* * 

ಭಿನ್ನವಾಗಿ ಕಾಣುವ ಹಂಬಲ
ಖಾದಿ ಬಟ್ಟೆಗಳ ಕಡೆಗೆ ನನಗೆ ಒಲವು ಮೂಡಿದ್ದು ಎಂ.ಎ ತರಗತಿಯಲ್ಲಿ ಓದುತ್ತಿದ್ದಾಗ. ಅಂದು ಎಂ.ಎ ತರಗತಿಯ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ. ಅದಕ್ಕೂ ಹಿಂದಿನ ದಿನ ನಾವು ಮೂರು ಜನ ಸ್ನೇಹಿತರು ಸೇರಿ, ನಾಳೆ ನಾವು ಭಿನ್ನವಾಗಿ ಕಾಣಬೇಕು ಎಂದು ವಿಚಾರ ಮಾಡಿಕೊಂಡೆವು. ಸರಿ ಮೂವರು ಸೇರಿಕೊಂಡು ಆ ದಿನವೇ ಧಾರವಾಡದಲ್ಲಿರುವ ಖಾದಿ ಭಂಡಾರಕ್ಕೆ ಹೋದೆವು. ಒಂದೇ ಬಣ್ಣದ ಮೂರು ಶರ್ಟ್‌ಗಳನ್ನು ಕೊಂಡುಕೊಂಡೆವು.

ಮರುದಿನ ಕಾಲೇಜ್ ಕ್ಯಾಂಪಸ್ ಒಳಗೆ ಬರುವುದೇ ತಡ, ಇಡೀ ಪಿ.ಜಿ ವಿದ್ಯಾರ್ಥಿಗಳೆಲ್ಲ ನಮ್ಮನ್ನೇ ನೋಡುತ್ತಿದ್ದರು. ನಮ್ಮ ಗುರುಗಳು ಇನ್ನೂ ಕಾರ್ಯಕ್ರಮದ ತಯಾರಿಯಲ್ಲಿದ್ದರು. ನಮ್ಮನ್ನು ನೋಡಿದ ತಕ್ಷಣ ‘ಏನ್ರೊ ಹುಡ್ಗುರಾ, ಒಂದ್‌ ರೀತಿ ಆಗಿರಿ. ನಮಗೂ ಹೇಳಬಾರದಾ? ನಾವೂ ಖಾದಿ ತೊಟಕೊಂಡ ಬರ್ತಿದ್ವಿ’ ಎಂದಿದ್ದರು.

ಇಡೀ ಸಭೆ ತುಂಬ ನಾವೇ ಎದ್ದು ಕಾಣುತ್ತಿದ್ದೆವು. ಪ್ರತಿದಿನ ಕಾಲೇಜಿಗೆ ಸಾದಾ ಬಟ್ಟೆಯಲ್ಲಿ ಹೋಗುತ್ತಿದ್ದ ನಮಗೆ ಅಂದು ಆದ ಅನುಭವ ನಿಜಕ್ಕೂ ಮರೆಯ ಲಾರದ್ದು. ಅಂದಿನಿಂದ ಪ್ರತಿಸಾರಿ ಬಟ್ಟೆ ಖರೀದಿಸಲು ಹೋದರೆ ಒಂದು ಜೊತೆ ಖಾದಿ ಬಟ್ಟೆ ತರುವುದು ರೂಢಿಯಾಯಿತು.

ಇಂದು ಖಾದಿ ಹೆಸರಿನಲ್ಲಿ ಕಳಪೆ ಗುಣಮಟ್ಟದ ಬಟ್ಟೆಗಳು ಲಗ್ಗೆ ಇಟ್ಟಿರುವುದು ಕಳವಳಕಾರಿ. ಜೊತೆಗೆ ಅವುಗಳಿಗೆ ಬೇರೆ ಬಟ್ಟೆಗಳಿಗಿಂತ ಹೆಚ್ಚು ಬೆಲೆ ನಿಗದಿ ಮಾಡಿರುವುದು ಜನ ಸಾಮಾನ್ಯರಿಗೆ ದೊರಕದಂತಾಗಿವೆ. ಖಾದಿ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಾ ಯುವ ಜನಾಂಗವನ್ನೂ ಸೆಳೆಯುವ ಪ್ರಯತ್ನದಲ್ಲಿದೆ. ಇದು ಭರವಸೆಯ ಸಂಕೇತವಾಗುತ್ತಿದೆ.
ಎಸ್.ಎಸ್.ಹಾರೋಬಿಡಿ, ಧಾರವಾಡ

* * 

ಖಾದಿ ತೊಟ್ಟು ಕವಿತೆ ವಾಚಿಸಿದ ಪುಳಕ
ಕಾಲೇಜು ಓದುವಾಗ ಕವಿತೆಯ ರಚನೆ ಜೊತೆಗೆ, ಮೈಸೂರಿನ ಮಹಾರಾಜ ಕಾಲೇಜಿನ ಕೆಲವು ಅಧ್ಯಾಪಕರು ಹಾಗೂ ಕನ್ನಡದ ಸಾಹಿತಿಗಳನ್ನು ನೋಡಿ ಖಾದಿ ಕಡೆಗೆ ಆಕರ್ಷಿತನಾದೆ.

ಕಲಾ ಮಂದಿರದಲ್ಲೊಮ್ಮೆ ನಾಟಕೋತ್ಸವ ನಡೆಯುತ್ತಿರುವಾಗ ಮೊದಲ ಬಾರಿ ಖಾದಿ ಶರ್ಟ್ ಖರೀದಿಸಿದೆ. ಅಲ್ಲಿಂದ ಈ ದಿನದವರೆಗೂ ಹಲವು ಬಣ್ಣದ ಖಾದಿ ಶರ್ಟ್‌ಗಳು ಅಲ್ಮೆರಾದಲ್ಲಿ ಸೇರಿವೆ. ಆದರೂ ಮೊದಲ ಸಲ ಖಾದಿ ತೊಟ್ಟು ಕವಿತೆ ವಾಚಿಸಿದ ನೆನಪು ಈಗಲೂ ಪುಳಕ ಉಂಟು ಮಾಡುತ್ತದೆ.

ಮೊದಲ ವರ್ಷದಲ್ಲಿರುವಾಗ ಕಾಲೇಜಿನ ಕನ್ನಡ ಸಂಘದಿಂದ ಕವಿಗೋಷ್ಠಿ ಏರ್ಪಡಿಸಿದ್ದರು. ಅಂದು ಬಿಸ್ಕೆಟ್ ಬಣ್ಣದ ಕೆಂಪು, ನೀಲಿ ಗೆರೆಯ ಅರ್ಧ ತೋಳಿನ ಶರ್ಟ್ ತೊಟ್ಟು ‘ಹಂಗರಹಳ್ಳಿ ಪ್ರಕರಣ’ ಎಂಬ ಕವಿತೆ ವಾಚಿಸಿದ್ದೆ. ಆಗ ಅಲ್ಲಿ ಭಾಗವಹಿಸಿದ್ದ ಕೆಲ ಸಹಪಾಠಿಗಳು ಕವಿತೆಗೂ, ಜೊತೆಗೆ ಖಾದಿಗೂ ಮನಸೋತರು. ನಂತರ ನನ್ನ ವ್ಯಾಸಂಗದುದ್ದಕ್ಕೂ ಖಾದಿ ಜೊತೆಗಾತಿಯಾಯಿತು. ಹಾಗೆಯೇ ಪ್ರತಿ ಸಲ ಕವನ ವಾಚಿಸುವಾಗ ಖಾದಿ ಧರಿಸಿ ವಾಚಿಸುವುದು ರೂಢಿಯಾಯಿತು. ಮುಂದೆ ಪೊಲೀಸ್ ಕೆಲಸಕ್ಕೆ ಸೇರಿದಾಗ ನನ್ನಿಂದ ಅನೇಕ ಪೊಲೀಸ್ ಸ್ನೇಹಿತರು ಖಾದಿಗೆ ಆಕರ್ಷಿತರಾಗಿದ್ದರು.

ಅತ್ಯಂತ ಅವಸರದ ಇವತ್ತಿನ ಬದುಕಿನಲ್ಲೂ ಜನತೆ ಖಾದಿ ಕಡೆ ಮುಖ ಮಾಡುತ್ತಿರುವುದು ಸ್ವಾಗತಾರ್ಹ. ನಮ್ಮ ಬದುಕು ಪೂರ್ಣಪ್ರಮಾಣದಲ್ಲಿ ವಿದೇಶಿ ಉತ್ಪನ್ನಗಳ ಹಾದಿಯಲ್ಲಿ ಯಾಂತ್ರಿಕವಾಗಿರುವಾಗ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡುವುದು ಅತ್ಯವಶ್ಯಕ. ಸರ್ಕಾರ ಖಾದಿ ಉತ್ಪನ್ನಕ್ಕೆ ಮತ್ತಷ್ಟು ಆದ್ಯತೆ ನೀಡಬೇಕು. ಅದೇ ರೀತಿ ಭಾರತೀಯ ಮನಸ್ಸುಗಳು ಖಾದಿ ಕಡೆ ವಾಲಬೇಕು ಎಂಬ ತುಡಿತ ನನ್ನದು.
ಬಿ. ಆರ್. ಕೃಷ್ಣಕುಮಾರ್, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.