ADVERTISEMENT

ಗೆಲುವಿನ ಬಯಕೆ...

ಪೃಥ್ವಿರಾಜ್ ಎಂ ಎಚ್
Published 30 ಆಗಸ್ಟ್ 2017, 19:30 IST
Last Updated 30 ಆಗಸ್ಟ್ 2017, 19:30 IST
ಗೆಲುವಿನ ಬಯಕೆ...
ಗೆಲುವಿನ ಬಯಕೆ...   

ರೂಪಾಲಿ ಅಂಬೆಗಾಂವ್ಕರ್‌

ಭಾರತೀಯರಿಗೆ ಕಾಫಿ ಮತ್ತು ಟೀ ಅಂದರೆ ತುಂಬಾ ಇಷ್ಟ. ಜಾಗತಿಕವಾಗಿ ಭಾರತ ಟೀ ರಫ್ತು ಮಾಡುವಲ್ಲಿ 4 ಸ್ಥಾನವನ್ನು ಪಡೆದಿದೆ. ಮಹಾರಾಷ್ಟ್ರದ ಯುವತಿಯೊಬ್ಬರು ಟೀ ಉತ್ಪನ್ನ ಮಾರಾಟ ಮಾಡುವ ಸ್ಟಾರ್ಟ್ಅಪ್‌ ಆರಂಭಿಸಿ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

35ರ ಹರೆಯ ರೂಪಾಲಿ ಅಂಬೆಗಾಂವ್ಕರ್‌ ಅವರು ‘ಟೀ ಕಲ್ಚರ್‌ ಆಫ್‌ ದಿ ವರ್ಲ್ಡ್‌ ’ಎಂಬ ಕಂಪೆನಿಯನ್ನು 2010ರಲ್ಲಿ ಸ್ಥಾಪಿಸಿದರು. ಕೇವಲ ಇಬ್ಬರು ಕೆಲಸಗಾರರನ್ನು ಇಟ್ಟುಕೊಂಡು ಸ್ಥಾಪಿಸಿದ ಈ ಕಂಪೆನಿಯಲ್ಲಿ ಇಂದು 300 ಜನರು ಕೆಲಸ ಮಾಡುತ್ತಿದ್ದಾರೆ.

ADVERTISEMENT

‘ಟೀ ಕಲ್ಚರ್‌ ಆಫ್‌ ದಿ ವರ್ಲ್ಡ್‌ ’ನಲ್ಲಿ ಗ್ರೀನ್‌ ಟೀ, ಮಸಾಲ ಟೀ, ಬ್ಲಾಕ್‌ ಟೀ ಸೇರಿದಂತೆ ಎಲ್ಲ ಮಾದರಿಯ ಟೀ ಸೊಪ್ಪು ದೊರೆಯುತ್ತದೆ. ಚಹಾ ಪ್ರಿಯರು ಆನ್‌ಲೈನ್‌ನಲ್ಲಿ ಬುಕ್‌ ಮಾಡಿ ತರಿಸಿಕೊಳ್ಳಬೇಕು ಎನ್ನುತ್ತಾರೆ ರೂಪಾಲಿ. ಭಾರತದ ಟೀ ಮಾತ್ರವಲ್ಲದೆ, ಜಪಾನ್‌, ಚೀನಾ, ಅರ್ಜೆಂಟೈನಾ, ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ವಿಯೆಟ್ನಾಂ ದೇಶದ ಟೀ ಸೊಪ್ಪು ದೊರೆಯುವುದು ವಿಶೇಷ. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೂಪಾಲಿ 2008ರಲ್ಲಿ ಒಮ್ಮೆ ಭೀಮಂಡಿಯಲ್ಲಿರುವ ಉಗ್ರಾಣಕ್ಕೆ ಭೇಟಿಕೊಟ್ಟಿದ್ದರು. ಈ ವೇಳೆ ಅಲ್ಲಿ ಟೀ ಸೊಪ್ಪನ್ನು ಪ್ಯಾಕ್‌ ಮಾಡಿ ವಿವಿಧೆಡೆಗೆ ಕಳುಹಿಸುತ್ತಿರುವುದನ್ನು ಗಮನಿಸಿದ್ದರು. ಆಗ ಇಂತಹದೇ ಒಂದು ಉದ್ಯಮ ಸ್ಥಾಪಿಸಬೇಕು ಎಂಬ ಕನಸು ಕಂಡಿದ್ದರಂತೆ!

ಟೀ ಮೇಲಿನ ವ್ಯಾಮೋಹದಿಂದಾಗಿ ಕನಸು ಕಂಡ ಎರಡು ವರ್ಷಗಳಲ್ಲೇ ‘ಟೀ ಕಲ್ಚರ್‌ ಆಫ್‌ ದಿ ವರ್ಲ್ಡ್‌ ’ ಸ್ಥಾಪಿಸಿದರು. ಇಂದು ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಮಟ್ಟಕ್ಕೆ ಈ ಕಂಪೆನಿ ಬೆಳೆದಿದೆ. ಮಾರುಕಟ್ಟೆ ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡಿದ್ದು ವಿಶೇಷ ಎಂದು ರೂಪಾಲಿ ಹೇಳುತ್ತಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಾಹೀರಾತು ನೀಡುವುದಕ್ಕಿಂತ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಿ ಎಂದು ನವೋದ್ಯಮಕ್ಕೆ ಕಾಲಿಡುತ್ತಿರುವ ಯುವಕರಿಗೆ ಕಿವಿ ಮಾತು ಹೇಳುತ್ತಾರೆ.
https://teacultureoftheworld.com/

***

ಪೀಯುಶ್‌ ಬನ್ಸಾಲ್‌

ಲೆನ್ಸ್‌ಕಾರ್ಟ್‌ ಇ–ಕಾಮರ್ಸ್‌ ಕಂಪೆನಿ ಸ್ಥಾಪನೆ ಮಾಡಿದ ಸಾಧಕ ಪೀಯುಶ್ ಬನ್ಸಾಲ್‌ ಅವರ ಸಾಧನೆಯ ಕಥೆ ಇದು.

ದೆಹಲಿಯ ಪೀಯುಶ್‌ ಬನ್ಸಾಲ್‌ ಐಐಎಂ ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪದವಿ ಬಳಿಕ ಹಲವು ಕಂಪೆನಿಗಳ ಕಚೇರಿಗೆ ಕೆಲಸಕ್ಕಾಗಿ ಎಡತಾಕಿದರೂ ಕೆಲಸ ಮಾತ್ರ ಸಿಗಲಿಲ್ಲ. ಕೊನೆಗೆ ಮೈಕ್ರೋ ಸಾಫ್ಟ್‌ ಕಂಪೆನಿಯಲ್ಲಿ ಕೆಲಸ ದೊರೆಯಿತು. ನ್ಯೂಯಾರ್ಕ್‌ಗೆ ತೆರಳಿದ ಪೀಯುಶ್‌ ಎರಡು ವರ್ಷ ಕೆಲಸ ಮಾಡಿದರು. ಅದ್ಯಾಕೋ ಆ ವೃತ್ತಿ ತೃಪ್ತಿಕೊಡಲಿಲ್ಲ. ಭಾರತಕ್ಕೆ ಹಿಂತಿರುಗಿ ಏನಾದರೂ ಸಾಧನೆ ಮಾಡಬೇಕು, ಸ್ಟಾರ್ಟ್‌ಅಪ್‌ ಆರಂಭಿಸಬೇಕು ಎಂದು ಯೋಚಿಸಿದರು. ಇದಕ್ಕೆ ಮನೆಯವರ ಬೆಂಬಲ ದೊರಕಿದ ಕೂಡಲೇ ಕೆಲಸಕ್ಕೆ ರಾಜೀನಾಮೆ ಕೊಟ್ಟು ಭಾರತಕ್ಕೆ ಮರಳಿದರು.

ಸಾಫ್ಟ್‌ವೇರ್‌ ಬಗ್ಗೆ ತಿಳಿದಿದ್ದ ಪೀಯುಶ್‌ ಆನ್‌ಲೈನ್‌ ಮಾರ್ಕೆಟಿಂಗ್‌ ಅಥವಾ ಇ–ಕಾಮರ್ಸ್‌ ಕಂಪೆನಿ ಸ್ಥಾಪಿಸುವ ಉದ್ದೇಶ ಹೊಂದಿದ್ದರು. ಆದರೆ ಅದರ ಸ್ವರೂಪ ಮತ್ತು ಉದ್ದೇಶದ ಬಗ್ಗೆ ಯೋಚಿಸಿರಲಿಲ್ಲ. ಪುಸ್ತಕ, ಮಕ್ಕಳ ಆಟಿಕೆಗಳು, ಔಷಧಿ, ಸಿದ್ಧ ಆಹಾರದ ಬಗ್ಗೆ ಯೋಚಿಸಿದರಾದರೂ ಇವುಗಳ ಮಾರುಕಟ್ಟೆ ವಹಿವಾಟು ಕಂಡು ಹಿಂದೆ ಸರಿದರು.

ಒಂದು ದಿನ ತನ್ನ ಅಜ್ಜಿಗೆ ಕನ್ನಡಕ ತರಲು ಹೋಗಿದ್ದಾಗ ಹೊಳೆದ ಆಲೋಚನೆಯೇ ಕನ್ನಡಕಗಳ ಇ–ಕಾಮರ್ಸ್‌ ಕಂಪೆನಿ ಸ್ಥಾಪನೆ! ಕೇವಲ ಆರು ತಿಂಗಳು ಸಿದ್ಧತೆ ಮಾಡಿಕೊಂಡು 2010ರಲ್ಲಿ ಲೆನ್ಸ್‌ಕಾರ್ಟ್‌ ಇ–ಕಾಮರ್ಸ್‌ ಕಂಪೆನಿ ಆರಂಭಿಸಿದರು.

ಫ್ಯಾಷನ್‌, ಸನ್‌ಗ್ಲಾಸ್‌, ಕಣ್ಣಿನ ತೊಂದರೆ ಸೇರಿದಂತೆ ಎಲ್ಲ ಮಾದರಿಯ ಹಾಗೂ ವಿವಿಧ ಬ್ರ್ಯಾಂಡ್‌ಗಳ ಕನ್ನಡಕಗಳು ಇಲ್ಲಿ ಲಭ್ಯ. ಮಾಸಿಕ 1.5 ಲಕ್ಷಕ್ಕೂ ಹೆಚ್ಚು ಕನ್ನಡಕಗಳು ಮಾರಾಟವಾಗುತ್ತಿವೆ.

ಸುಮಾರು ನೂರಾರು ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದ್ದು, ವಾರ್ಷಿಕ 150 ಕೋಟಿ ರೂಪಾಯಿ ವರಮಾನ ಬರುತ್ತಿದೆ ಎಂದು ಪೀಯುಶ್‌ ಹೇಳುತ್ತಾರೆ. ಜೀವನದಲ್ಲಿ ರಿಸ್ಕ್‌ ತೆಗೆದುಕೊಂಡಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ ಎನ್ನುತ್ತಾರೆ ಇವರು.

***

ಆಕಾಶ್‌ ಕಕ್ಕರ್‌ ಮತ್ತು ರಿಧೀಮಾ ಚೋಪ್ರಾ

ಇಂದಿನ ಫ್ಯಾಷನ್‌ ಯುಗದಲ್ಲಿ ಹದಿಹರೆಯದವರು ಯಾವ ರೀತಿಯ ಉಡುಪುಗಳನ್ನು ಧರಿಸಬೇಕು ಎಂಬ ಸಲಹೆ ನೀಡುವ ಸ್ಟಾರ್ಟ್‌ಅಪ್‌ವೊಂದು ಆರಂಭವಾಗಿದೆ. ಅದೇ ಕಕ್‌ಚೋ ಕಂಪೆನಿ.

ಈ ಕಕ್‌ಚೋ ಕಂಪೆನಿಯನ್ನು ದೆಹಲಿಯ ಆಕಾಶ್‌ ಕಕ್ಕರ್‌ ಮತ್ತು ರಿಧೀಮಾ ಚೋಪ್ರಾ ಆರಂಭಿಸಿದ್ದಾರೆ. ಮೆಟ್ರೊ ಮತ್ತು ಮೊದಲ ದರ್ಜೆ ನಗರಗಳನ್ನು ಗುರಿಯಾಗಿಸಿಕೊಂಡು ಈ ಸ್ಟಾರ್ಟ್‌ಅಪ್‌ ಪ್ರಾರಂಭಿಸಲಾಗಿದೆ ಎಂದು ಆಕಾಶ್‌ ಹೇಳುತ್ತಾರೆ.

ಡೇಟಿಂಗ್‌, ಮದುವೆ ಸಮಾರಂಭ, ಪಾರ್ಟಿಗಳು ಸೇರಿದಂತೆ ಇನ್ನಿತರ ಸಭೆ ಸಮಾರಂಭಗಳಿಗೆ ಯಾವ ರೀತಿಯ ಉಡುಪುಗಳನ್ನು ತೊಡಬೇಕು ಎಂಬ ಸಲಹೆಯನ್ನು ವಸ್ತ್ರ ವಿನ್ಯಾಸಕರು ನೀಡುತ್ತಾರೆ. ಕಕ್‌ಚೋ ಆ್ಯಪ್‌ ಮೂಲಕ ಇಲ್ಲಿಯವರೆಗೂ 85 ಸಾವಿರ ಜನರು ಫ್ಯಾಷನ್‌ ಸಲಹೆ ಪಡೆದುಕೊಂಡಿದ್ದಾರೆ ಎಂದು ರಿಧೀಮಾ ಚೋಪ್ರಾ ವಿವರಿಸುತ್ತಾರೆ.

ಸಲಹೆ ಕೇಳುವ ಮೊದಲು ಗ್ರಾಹಕರು ಕಕ್‌ಚೋ ಆ್ಯಪ್‌ಗೆ ಲಾಗಿನ್‌ ಆಗಬೇಕು. ನಂತರ ಫುಲ್‌ಸೈಜ್‌ ಫೋಟೊ ರವಾನಿಸುವುದರ ಜತೆಗೆ ದೇಹದ ಅಳತೆಯನ್ನು ನಮೂದಿಸಬೇಕಾಗುತ್ತದೆ. ಗ್ರಾಹಕರ ಮಾಹಿತಿ ಪಡೆದು ನಮ್ಮ ವಿನ್ಯಾಸಕರು ಅವರಿಗೆ ಒಪ್ಪುವ ಡ್ರೆಸ್‌ ಕೋಡ್‌ ಸಲಹೆ ಮಾಡುತ್ತಾರೆ. ಹಾಗೇ ಗ್ರಾಹಕರಿಗೆ ಸಿದ್ಧ ಉಡುಪುಗಳನ್ನು ಆನ್‌ಲೈನ್‌ ಮೂಲಕ ಒದಗಿಸಿಕೊಡುತ್ತಾರೆ.

ಮೆಟ್ರೊ ಮತ್ತು ಮೊದಲ ದರ್ಜೆ ನಗರಗಳಲ್ಲಿ ವಿವಿಧ ಸ್ತರದ ಜನರು ವಾಸವಾಗಿರುತ್ತಾರೆ. ಇಂಥ ನಗರಗಳಲ್ಲಿ ಫ್ಯಾಷನ್ ಮೋಹಿ ಜನರೇ ಹೆಚ್ಚಿರುತ್ತಾರೆ. ಇವರು ವಾಣಿಜ್ಯ ಜಾಹೀರಾತುಗಳು, ಸಿನಿಮಾ, ಧಾರಾವಾಹಿಗಳಲ್ಲಿನ ಡ್ರೆಸ್‌ಕೋಡ್‌ ನೋಡಿ ಅನುಕರಣೆ ಮಾಡುತ್ತಾರೆ. ಅದು ಕೆಲವರಿಗೆ ಸರಿ ಹೊಂದುತ್ತದೆ ಮತ್ತೆ ಕೆಲವರಿಗೆ ಸರಿ ಹೊಂದುವುದಿಲ್ಲ. ಆಗ ಸ್ನೇಹಿತರು, ಹಿತೈಷಿಗಳು, ಸಂಬಂಧಿಕರ ಸಲಹೆ ಪಡೆಯುತ್ತಾರೆ. ಇದಕ್ಕೆ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಈ ರೀತಿಯ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸ್ಟಾರ್ಟ್‌ಅಪ್‌ ಆರಂಭಿಸಲಾಗಿದೆ ಎಂದು ಆಕಾಶ್‌ ಹೇಳುತ್ತಾರೆ.

ವಿಭಿನ್ನ ಆಲೋಚನೆ ಮೂಲಕ ಕಡಿಮೆ ಬಂಡವಾಳದಲ್ಲಿ ಸ್ಥಾಪನೆಯಾದ ಈ ಸ್ಟಾರ್ಟ್‌ಅಪ್‌ ಉತ್ತಮ ಆದಾಯ ತಂದುಕೊಂಡುತ್ತಿದೆ ಎನ್ನುತ್ತಾರೆ ರಿಧೀಮಾ ಚೋಪ್ರಾ. App link: https://goo.gl/La3DFd

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.