ADVERTISEMENT

ಡ್ರಾಪೌಟ್ ಸಾಧಕರು

ಪೃಥ್ವಿರಾಜ್ ಎಂ ಎಚ್
Published 4 ಮೇ 2016, 19:30 IST
Last Updated 4 ಮೇ 2016, 19:30 IST
ಕ್ಷಿತಿಜ್‌ ಮೆಹ್ರಾ
ಕ್ಷಿತಿಜ್‌ ಮೆಹ್ರಾ   

ಕ್ಷಿತಿಜ್‌ ಮೆಹ್ರಾ
ಅದು ಪಂಜಾಬ್‌ ರಾಜ್ಯದ ನಗರ ಜಿರಾಕ್‌ಪುರ. ಅಲ್ಲಿನ ಫ್ಲಾಟ್‌ವೊಂದರಲ್ಲಿ ವಾಸವಾಗಿದ್ದ ಕ್ಷಿತಿಜ್‌ ಮೆಹ್ರಾ ಎಂಬ ಯುವಕ ನಾಲ್ಕು ಜನ ಸ್ನೇಹಿತರೊಂದಿಗೆ ಕೆಲಸ ಹುಡುಕುತ್ತಿದ್ದ.

ಸತತ ಮೂರು ತಿಂಗಳು ಕೆಲಸಕ್ಕಾಗಿ ಅಲೆದರೂ ಉದ್ಯೋಗ ಮಾತ್ರ ದೊರೆಯಲಿಲ್ಲ.  ಗೆಳೆಯರೆಲ್ಲಾ ಸೇರಿ ಯಾವುದಾದರೊಂದು ಬ್ಯುಸಿನೆಸ್ ಮಾಡುವ ಬಗ್ಗೆ ಆಲೋಚಿಸಿದರಾದರೂ ಅದನ್ನು ಮಾಡಲಾಗಲಿಲ್ಲ! ಕೊನೆಗೆ  ಆ ನಾಲ್ಕು ಜನ ಗೆಳೆಯರು ಊರು ಸೇರಿದರು. ಸಾಧಿಸುವ ಹಟ ತೊಟ್ಟಿದ್ದ ಕ್ಷಿತಿಜ್‌ ಮಾತ್ರ ನಗರ ತೊರೆಯದೇ ಬದುಕಿನ ದಾರಿ ಹುಡುಕ ತೊಡಗಿದರು.

ಐಐಟಿ ಪದವೀಧರ ಕ್ಷಿತಿಜ್‌ಗೆ ಗಣಿತ, ಇಂಗ್ಲಿಷ್ ಎಂದರೆ ಅಚ್ಚುಮೆಚ್ಚು. ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಗಣಿತ ಕಲಿಸುತ್ತಿದ್ದರು. ಇದನ್ನೇ ವೃತ್ತಿಯನ್ನಾಗಿ ಯಾಕೆ ಸ್ವೀಕರಿಸಬಾರದು ಎಂದು ಆಲೋಚಿಸಿದರು. ನಂತರ ಖಾಸಗಿ ವಿದ್ಯಾಸಂಸ್ಥೆಯೊಂದಕ್ಕೆ ಈ ಬಗ್ಗೆ ಮೇಲ್ ಮಾಡಿದರು. ಅವರು ಮರು ದಿನವೇ ರಾಯಪುರಕ್ಕೆ ಬಂದು ಭೇಟಿಯಾಗುವಂತೆ ಕರೆ ಮಾಡಿದ್ದರು.

ಈ ಹಂತದಲ್ಲಿ ಕ್ಷಿತಿಜ್‌ ಅವರ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರಲಿಲ್ಲ. ಗೆಳೆಯರೆಲ್ಲ ಊರು ಸೇರಿದ್ದರು. ಹಣ ಸಹಾಯ ಮಾಡುವವರು ಯಾರೂ ಇರಲಿಲ್ಲ! ಎರಡು ತಿಂಗಳಿನಿಂದ ಫ್ಲಾಟ್‌ನ ಬಾಡಿಗೆ, ಮೊಬೈಲ್ ಬಿಲ್ ಕೂಡ ಕಟ್ಟಿರಲಿಲ್ಲ, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ!

ಜೇಬಿನಲ್ಲಿ ಇದ್ದದ್ದು 5೦ ರೂಪಾಯಿ ಮಾತ್ರ. ಬಸ್ ಪ್ರಯಾಣಕ್ಕೆ ಹಣ ಕಡಿಮೆಯಾಗಬಹುದು ಎಂದು ಆ ರಾತ್ರಿ ಊಟ ಮಾಡದೇ ಮಲಗಿದ್ದರು. ಬೆಳಿಗ್ಗೆ ರಾಯಪುರಕ್ಕೆ ಬಸ್ ಹತ್ತಿದರು. ನಿರ್ವಾಹಕ 15 ರೂಪಾಯಿ ವಾಪಸ್ ಕೊಟ್ಟಾಗ ತಿಂಡಿ ತಿನ್ನಬಹುದು ಎಂದು ನಿಟ್ಟುಸಿರು ಬಿಟ್ಟಿದ್ದರು.

ಶಾಲೆಯ ಆಡಳಿತಾಧಿಕಾರಿಯನ್ನು ಭೇಟಿಯಾಗಿ ಸುಲಭ ಕಲಿಕೆ ಬಗ್ಗೆ ಒಂದು ಪ್ರಾತ್ಯಕ್ಷಿಕೆ ನೀಡಿದರು. ನಂತರ ‘ಪರ್ಸ್ ಬಿಟ್ಟು ಬಂದಿರುವುದಾಗಿ ಸುಳ್ಳು ಹೇಳಿ ಅವರ ಬಳಿ 500 ರೂಪಾಯಿ ಪಡೆಯುವ’ ಯೋಚನೆಯಲ್ಲಿ ಕ್ಷಿತಿಜ್‌ ಇದ್ದರು. ಆದರೆ ಆ ಆಡಳಿತಾಧಿಕಾರಿ 25 ಸಾವಿರ ಕೊಟ್ಟು ಸುಲಭ ಗಣಿತ ಕಾರ್ಯಾಗಾರ ನಡೆಸಲು ಸೂಚಿಸಿದರು.

ಈ ಹಣದಲ್ಲಿ ‘ಯುವ್‌ಶಾಲಾ’ ಎಂಬ ಸಂಸ್ಥೆಯನ್ನು ಆರಂಭಿಸುವ ಮೂಲಕ ಕ್ಷಿತಿಜ್ ಇಂದು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಕಷ್ಟಗಳೇ ಮನುಷ್ಯರಿಗೆ  ಬದುಕಿನ ಪಾಠ ಕಲಿಸುತ್ತವೆ ಎಂದು ಕ್ಷಿತಿಜ್ ಯುವಕರಿಗೆ ಕಿವಿ ಮಾತು ಹೇಳುತ್ತಾರೆ.
www.yuvshaala.com

***
ಅಜಿತ್ ಬಾಬು
ಸೆರಬ್ರಲ್ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿರುವ ಅಜಿತ್ ಬಾಬು ಅವರ ಸಾಧನೆಯ ಕಥೆ ಇದು. ಬೆಂಗಳೂರಿನ ಅಜಿತ್ ಬಾಬು ಮಾಧ್ಯಮ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂರು ಸ್ಟಾರ್ಟ್‌ಅಪ್‌ಗಳನ್ನು ನಡೆಸುತ್ತಿದ್ದಾರೆ.

ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತಿ ಹೊಂದಿದ್ದ ಅಜಿತ್, ಇಂಗ್ಲಿಷ್ ಸಾಹಿತ್ಯ, ಸೈಕಾಲಜಿ ಮತ್ತು ಪತ್ರಿಕೋದ್ಯಮ ವಿಷಯಗಳನ್ನು ಆರಿಸಿ ಪದವಿಗೆ ಸೇರಿದರು. ಆದರೆ ಲ್ಯಾಬ್‌ನಲ್ಲಿ ಕೆಲಸ ಮಾಡಲಾಗದೇ ಪದವಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಬರೆಯುವುದು ಮತ್ತು ಮಾತನಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ  ಅಜಿತ್ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ‘ಸ್ಟ್ರೀಟ್‌ಲೈಟ್‌ಮೀಡಿಯಾ’ ಎಂಬ ಸ್ಟಾರ್ಟ್‌ಅಪ್ ಆರಂಭಿಸಿದರು. ಇದರ ಮೂಲಕ ಸಿನಿಮಾ, ಜಾಹೀರಾತು, ಟಿ.ವಿ ಕಾರ್ಯಕ್ರಮ ಸೇರಿದಂತೆ ಮ್ಯೂಸಿಕ್‌ ವಿಡಿಯೊ ಸೇವೆಯನ್ನು ನೀಡುತ್ತಿದ್ದಾರೆ.

ನೇಪಾಳದ ಭೂಕಂಪ ಸಂತ್ರಸ್ತರಿಗಾಗಿ ಸೌರದೀಪಗಳನ್ನು ಖರೀದಿಸಿ ಅಲ್ಲಿಗೆ ಕಳುಹಿಸಿಕೊಟ್ಟಿದ್ದರು. ಈ ಸೌರದೀಪಗಳ ಪ್ರೇರಣೆಯಿಂದ ‘ಸೌರಪವರ್‌ಬ್ಯಾಂಕ್’ ತಯಾರಿಕೆಗಾಗಿ ‘ಲೈಫ್‌ಹ್ಯಾಕ್’ ಎಂಬ ಕಂಪೆನಿ ಆರಂಭಿಸಿದ್ದಾರೆ. ಕ್ಲೌಡ್ ಫಂಡಿಂಗ್ ಮೂಲಕ ಬಂಡವಾಳ ಸಂಗ್ರಹಿಸಿ ಈ ಕಂಪೆನಿ ಆರಂಭಿಸಿರುವುದು ವಿಶೇಷ. ಇಲ್ಲಿ ಪವನ ಮತ್ತು ಸೌರಶಕ್ತಿ ಮೂಲಕ ಚಾರ್ಜ್ ಮಾಡಬಹುದಾದ ಪವರ್ ಬ್ಯಾಂಕ್‌ಗಳನ್ನು ತಯಾರಿಸಲಾಗುತ್ತಿದೆ.

ಈ ಪವರ್ ಬ್ಯಾಂಕ್‌ಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಅಜಿತ್. ಕೇವಲ 5 ಅಡಿ ಎತ್ತರವಿರುವ ಮತ್ತು ಸರಿಯಾಗಿ ನಡೆದಾಡಲು ಬಾರದ ಅಜಿತ್ ಸಾಧನೆ ಯುವ ಪೀಳಿಗೆಗೆ ಮಾದರಿ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ (ಪತ್ರಿಕೋದ್ಯಮದಲ್ಲಿ) ಪಡೆಯಬೇಕು ಎಂಬುದು ಅವರ ಕನಸು. ಸ್ಟಾರ್ಟ್‌ಅಪ್‌ಗಳನ್ನು ನಿರ್ವಹಣೆ ಮಾಡುತ್ತಲೇ ಓದಿನಲ್ಲೂ ಅಜಿತ್ ಮಗ್ನರಾಗಿರುವುದು ವಿಶೇಷ.
www. streetlightmedia.wix.com

***
ರಿತೇಶ್ ಮಲಿಕ್

ಕೈಯಲ್ಲಿ ನಯಾ ಪೈಸೆ ಹಣವಿರಲಿಲ್ಲ, ಓದುತ್ತಿದ್ದದು ಎಂಬಿಬಿಎಸ್ ಪದವಿ! ಅದನ್ನು ಮೊಟಕುಗೊಳಿಸಿ ಹೂಡಿಕೆ ಕ್ಷೇತ್ರಕ್ಕೆ ರಿತೇಶ್ ಮಲಿಕ್ ಪದಾರ್ಪಣೆ ಮಾಡಿದರು. ಹಣವಂತರ ಬಳಿ ತೆರಳಿ ಯಾವ ಕ್ಷೇತ್ರದಲ್ಲಿ, ಯಾವ ಕಂಪೆನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂಬ ಹೂಡಿಕೆ ಮಂತ್ರವನ್ನು ಹೇಳಿಕೊಟ್ಟು ಅಪಾರ ಹಣ ಸಂಪಾದಿಸುವ ಮೂಲಕ ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ಹೆಸರು ಪಡೆದರು.

26ರ ಹರೆಯದ ರಿತೇಶ್ ಮೂಲತಃ ತಮಿಳುನಾಡಿನವರು. ಎಂ.ಜಿ.ಆರ್ ಮೆಡಿಕಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಪದವಿ ಓದುವಾಗ ಬ್ಯುಸಿನೆಸ್ ಮಾಡುವ ಇಚ್ಛೆಯಿಂದ ಪದವಿ ಮೊಟಕುಗೊಳಿಸಿ ‘ಲಂಡನ್ ಕಾಮರ್ಸ್ ಸ್ಕೂಲ್ ಆಫ್ ಎಕನಾಮಿಕ್ಸ್‌’ನಲ್ಲಿ ಡಿಪ್ಲೊಮಾಗೆ ಸೇರಿದರು. ಅಲ್ಲಿ ಉತ್ತಮ ತರಬೇತಿ ಪಡೆದು ಭಾರತಕ್ಕೆ ಮರಳಿದ ರಿತೇಶ್ ಹೂಡಿಕೆ ಕ್ಷೇತ್ರದಲ್ಲಿ ವಹಿವಾಟು ಆರಂಭಿಸಿದರು. ಕೆಲಸ ಮಾಡುತ್ತಲೇ ಅರ್ಧಕ್ಕೆ ನಿಲ್ಲಿಸಿದ್ದ ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಿದರು.

ಗೊರಿಲ್ಲಾ ವೆಂಚರ್ ಎಂಬ ಕಂಪೆನಿ ಆರಂಭಿಸಿದ ರಿತೇಶ್‌ ಇದರ ಮೂಲಕ ವಿವಿಧ ಕ್ಷೇತ್ರಗಳಿಗೆ ಹಣ ಹೂಡಿಕೆ ಮಾಡತೊಡಗಿದ್ದಾರೆ. ಉದ್ಯಮಿಗಳು, ಫೈನಾನ್ಸಿಯರ್‌ಗಳಿಂದ ಹಣ ಸಂಗ್ರಹಿಸಿ ದೇಶೀಯ ಹಾಗೂ ವಿದೇಶಿ ಕಂಪೆನಿಗಳಲ್ಲಿ ಹೂಡಿಕೆ ಮಾಡುವುದು ಈ ಕಂಪೆನಿಯ ಮುಖ್ಯ ಕೆಲಸ. ಪ್ರತಿಷ್ಠಿತ 26 ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ರಿತೇಶ್‌ ಕೋಟ್ಯಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ. ಮೇಕಿನ್ ಇಂಡಿಯಾ ಜೊತೆ ಕೈಜೋಡಿಸಿರುವ ರಿತೇಶ್ ಕಾಲೇಜು ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿ ಯುವಕರಿಗೆ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸು, ತಂತ್ರಜ್ಞಾನ ಮತ್ತು ಬೌದ್ಧಿಕ ನೆರವನ್ನು ನೀಡುತ್ತಿದ್ದಾರೆ.

ಮೆಡಿಸಿನ್, ಸಾಫ್ಟ್‌ವೇರ್, ಹಾರ್ಡ್‌ವೇರ್ ಕಂಪೆನಿಗಳಲ್ಲಿ ಹೆಚ್ಚು ಹಣ ಹೂಡಿಕೆ ಮಾಡುತ್ತಿದ್ದಾರೆ. ಹೂಡಿಕೆ ಮಾಡಿರುವ ಗ್ರಾಹಕರಿಗೆ ಕಾಲಕಾಲಕ್ಕೆ ಸರಿಯಾಗಿ ಲಾಭಾಂಶ ಕೊಡುವ ಮೂಲಕ ಗ್ರಾಹಕರಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡಿದ್ದಾರೆ. ಯಶಸ್ಸು ಸುಲಭವಾಗಿ ದಕ್ಕುವುದಿಲ್ಲ, ಅದಕ್ಕಾಗಿ ನಾವು ನಿರಂತರ ಪ್ರಯತ್ನ ಮಾಡಬೇಕು ಎಂದು ರಿತೇಶ್‌   ಹೇಳುತ್ತಾರೆ.
www.branded.me

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.