ADVERTISEMENT

‘ದೂರದರ್ಶನಾಯಣ’

ಒಡಲಾಳ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST

ಅದೇ ಡುಮ್ಮ ಬೆನ್ನು, ಅದೇ ಕರೀ ವೈರ್, ಅದೇ ನವಿಲು ಚಿತ್ರದ ಕವರ್. ಮೊದಲ ದಿನ ಬಳಿದು, ಬಳಿಕ ಪ್ರತಿ ವರ್ಷ ಆಯುಧ ಪೂಜೆಗೊಮ್ಮೆ ಹಚ್ಚಿ ಹಚ್ಚಿ ಬ್ಲಾಕ್ ಫ್ರೇಮ್‌ನ ಕಾಯಂ ಕಲೆಗಳಾಗಿರುವ ಬಿಳಿಯ ವಿಭೂತಿ ಗೆರೆಗಳು. ಸ್ವಿಚ್ ಹಾಕಿ ರಿಮೋಟ್‌ನ ಬಟನ್ ಒತ್ತಿದ 20-30 ಸೆಕೆಂಡ್‌ಗೆ ಪ್ರಾರಂಭವಾಗುವ, ಪರದೆ ಮೇಲೆ ಮೂಡುವ ಅದೇ ಏಳು ವರ್ಣಗಳ ಚಿತ್ತಾರ. ಸುಮಾರು ಎರಡು ಸಾವಿರದ ಎರಡನೇ ಇಸವಿಯಲ್ಲಿ ಮನೆಗೆ ಬಂದ ಟಿ.ವಿ ಜೊತೆ ಮೇಲೆ ಹೇಳಿದ ಎಲ್ಲವೂಗಳು ಮತ್ತು ಅಳಿಸಬಹುದಾದ ದೂಳು, ಅಳಿಸಲಾಗದ ನೆನಪುಗಳೂ ಹಾಗೆಯೇ ಉಳಿದಿವೆ.

ಆ 20 ಇಂಚಿನ ಟಿ.ವಿಯೊಂದಿಗೆ ತಂದ ಆಂಟೆನಾವನ್ನು ಮೇಲೆ ಕಟ್ಟಿದಾಗ ಪರದೆಯಲಿ ಮೂಡಿದ ಚಾನೆಲ್ ಸಂಖ್ಯೆ ಒಂದೇ ಒಂದು. ಅದೇ ಡಿ.ಡಿ ಒಂದು! ಗೋಲಿ, ಬುಗುರಿ, ಮರಕೋತಿ, ಚಿನ್ನಿ ದಾಂಡುಗಳ ಜೊತೆಜೊತೆಗೆ ನಮ್ಮ ಬಾಲ್ಯದ ದಿನಗಳನ್ನು ಸುಂದರಗೊಳಿಸಿದ ಶ್ರೇಯ ನಮ್ಮ ಈ ಟಿ.ವಿಗೂ, ದೂರದರ್ಶನ ವಾಹಿನಿಗೂ ಸಲ್ಲುತ್ತದೆ. ನಮಗೆಲ್ಲಾ ರಜಾ ದಿನವಾದ ಭಾನುವಾರ ಟಿ.ವಿ ಬ್ಯುಸಿ.

ಅಂದು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಸದಭಿರುಚಿಯ ಕಾರ್ಯಕ್ರಮಗಳು ನಮ್ಮ ಕುತೂಹಲಗಳನ್ನು ಕೆರಳಿಸುತ್ತಿದ್ದವು. ಉಪಯುಕ್ತ ಮಾಹಿತಿಗಳ ಕಣಜವಾಗಿದ್ದವು. ನಮ್ಮ ಮುಗ್ಧ ಕಲ್ಪನೆಗಳನ್ನು ಗದಿಗೆರಿಸುತ್ತಿದ್ದವು. ಆಗೊಮ್ಮೆ ಈಗೊಮ್ಮೆ ಪ್ರಸಾರವಾಗುತ್ತಿದ್ದ ಕ್ರಿಕೆಟ್ ಮ್ಯಾಚುಗಳಂತೂ ಹಬ್ಬದ ವಾತಾವರಣ ಸೃಷ್ಟಿಸುತ್ತಿದ್ದವು. ಹಸಿರ ಹಾಸಿನಲಿ, ಕೆಂಪು ಚೆಂಡು ಬಾರಿಸಲು, ಬಿಳಿ ಬಟ್ಟೆ ಧರಿಸಿ ಬ್ಯಾಟ್ ಹಿಡಿದು ನಿಲ್ಲುತ್ತಿದ್ದ ಸಚಿನ್, ದ್ರಾವಿಡರನು ಕಣ್ತುಂಬಿಕೊಳ್ಳಲು ಕಣ್ಣುಗಳು ರೆಪ್ಪೆಗಳಿರುವುದನ್ನೇ ಮರೆಯುತ್ತಿದ್ದವು.

ಆ ಟೆಸ್ಟ್‌ ಮ್ಯಾಚ್‌ಗಳನ್ನೂ ಐದು ದಿನ ಬಿಟ್ಟು ಬಿಡದೇ ನೋಡುವ ವ್ಯವಧಾನವು ಆಗ ನಮ್ಮಲ್ಲಿತ್ತು. ಬದಲಾವಣೆಯ ಗಾಳಿ ಬೀಸಿತು. ಆ ಗಾಳಿ ಹೊಡೆತಕೆ ಸಿಲುಕಿ ಆಂಟೆನಾ ಮುರಿದುಬಿತ್ತು. ಆಗ ಬಂದ ಕೇಬಲ್ ನಮ್ಮ ಟಿ.ವಿಗೆ ಸುಮಾರು ಐದು-ಹತ್ತು ಚಾನೆಲ್‌ಗಳನ್ನು  ಹೊತ್ತು ತಂದಿತು. ಹಿಂದೆ ಒಂದೇ ಚಾನಲ್ ಇದ್ದುದರಿಂದ ಮನೆ ಮಂದಿಯೆಲ್ಲಾ ಕುಳಿತು ನೋಡುತ್ತಿದ್ದೆವು. ಆದರೆ ಈಗ ಟಿ.ವಿಯನ್ನು ಮನೆ ಮಂದಿ ಕುಳಿತು ನೋಡಿಯೇ ಇಲ್ಲ. ಯಾವಾಗಲಾದರೊಮ್ಮೆ ಟಿ.ವಿ ನೋಡುತ್ತಿರುವ ತಂಗಿಗೆ, ಬೇರೆ ಚ್ಯಾನಲ್ ಹಾಕೆಂದಾಗ ಅವಳು ಮೊದಲು ಕೇಳಿಸಿದರೂ ಕೇಳದಂತೆ ನೋಡುತ್ತಲೇ ಇರುತ್ತಾಳೆ.

‘ಬೇರೆ ಭಾಷೆಯ ಚ್ಯಾನಲ್ ನೋಡುತ್ತೀಯಲ್ಲ ಕನ್ನಡ ದ್ರೋಹಿ’ ಎಂದು ನಾನವಳ ಕೆಣಕಿದರೆ, ‘ನೀನು ಹಿಂದಿ ನೋಡ್ತಿಯಲ್ಲ’ ಎಂದು ತಿರುಗೇಟು ನೀಡುತ್ತಾಳೆ. ‘ಹಿಂದಿ ರಾಷ್ಟ್ರ ಭಾಷೆ ಕಣೇ’ ಎಂದು  ಸಮಜಾಯಿಷಿ ನೀಡುತ್ತಾ ಒಬ್ಬರಿಗೊಬ್ಬರು ಭಾಷಾ ಪಂಡಿತರಂತೆ ವಾಗ್ಯುದ್ಧ ನಡೆಸಿರುವಾಗ ಮೆಲ್ಲನೆ ಬರುವ ತಮ್ಮ, ರಿಮೋಟ್ ಎಗರಿಸಿ ಕ್ರಿಕೆಟ್ ಹಾಕಿದನೆಂದರೆ ಮುಗಿಯಿತು. ಇಪ್ಪತ್ತು ದಿನದ ಹಿಂದಿನ ಮ್ಯಾಚಿನ ಮರು ಪ್ರಸಾರವೇ ಇರಲಿ, ಇಪ್ಪತ್ತು ವರ್ಷದ ಹಿಂದಿನ ಮ್ಯಾಚೇ ಇರಲಿ, ಅದು ಮುಗಿಯುವ ತನಕ ರಿಮೋಟ್ ನಮ್ಮ ಕೈ ಸೇರುವುದು ಅಸಾಧ್ಯವೇ ಸರಿ.

ಈ ಜಮಾನದ ಜನಪ್ರಿಯ ಎಲೆಕ್ಟ್ರಾನಿಕ್ ಸಾಧನಗಳಾದ ಸ್ಮಾರ್ಟ್‌ಫೋನ್‌ಗಳು,ಲ್ಯಾಪ್‌ಟಾಪ್‌ಗಳು ಬಂದ ಮೇಲೆ ಟಿ.ವಿ ಜನಪ್ರಿಯತೆ ಸ್ವಲ್ಪ ಮಟ್ಟಿಗೆ ಕುಸಿಯಿತಾದರೂ, ಚ್ಯಾನಲ್‌ಗಳ ಟಿ.ಆರ್.ಪಿ ಭರ್ಜರಿಯಾಗಿ ಏರುತ್ತಲೇ ಇದೆ. ಕೈಯಲ್ಲಿ ಮೊಬೈಲ್ ಅನ್ನೂ, ತೊಡೆ ಮೇಲೆ ಲ್ಯಾಪ್‌ಟಾಪ್ ಅನ್ನೂ ಹಿಡಿದುಕೊಂಡು ಮುಂದೆ ಟಿ.ವಿ.ಯನ್ನೂ ಉರಿಸಿಕೊಂಡು ಕುಳಿತಿದ್ದರೆ ಕರೆಂಟ್ ಬಿಲ್ಲು ಕಟ್ಟುವವರಿಗೆ ಹೊಟ್ಟೆ ಉರಿಯುವುದು ಸಹಜ. ಅದಕ್ಕೇ ಅಪ್ಪಾಜಿ ಬಂದು ಟಿ.ವಿ ಆಫ್ ಮಾಡಿ ನನ್ನ ಬೇಜವಾಬ್ದಾರಿಗೆ ಉಗಿದು ಉಪ್ಪಿನಕಾಯಿ ಹಾಕಿದಾಗಲೇ ಗೊತ್ತಾಗುವುದು ಓಹ್!

ಟಿ.ವಿ.ಯೂ ಆನ್ ಆಗಿಯೇ ಇತ್ತೆಂದು. ಸಾವಿರದ ಒಂಬೈನೂರ ಎಪ್ಪತ್ತು, ಎಂಬತ್ತರ ದಶಕದವರಾದ ಅವರಿಗೆ ಟಿ.ವಿ ಮೇಲೆ ಅಷ್ಟೇನೂ ವ್ಯಾಮೋಹವಿಲ್ಲದಿದ್ದರೂ, ನನ್ನ ಮಕ್ಕಳು, ಅಂದರೆ ನಾವು ನೋಡಲೆಂದು ಅಥವಾ ನೋಡಲು ಬೇರೆಯವರ ಮನೆ ಅಲೆದಾಡದಿರಲೆಂದು ಅದನ್ನು ತಂದಿಟ್ಟು ನಾವೇನು ನೋಡುತ್ತೇವೆಯೋ ಅದನ್ನೇ ಬಿಡುವಿದ್ದಾಗ ನೋಡುತ್ತಾ, ನಿಮಿಷಕ್ಕೊಮ್ಮೆ ಚ್ಯಾನಲ್ ಪಲ್ಲಟದ ಉಪಟಳ ತಾಳದೇ ‘ಯಾವುದಾದರೂ ಒಂದು ನೋಡ್ರೋ’ ಎಂದು ಗದರಿದಾಗ ನಾವು ಹೆದರಿ ‘ಒಂದಿದ್ದದ್ದನ್ನು ಒಂಬತ್ತು ಮಾಡುವ’ ಯಾವುದಾದರೊಂದು ಸುದ್ದಿವಾಹಿನಿ ಹಚ್ಚಿ ಜಾಗ ಖಾಲಿ ಮಾಡುವುದು ವಾಡಿಕೆ.

ಈ ಎಲ್ಲ ವಾಡಿಕೆಗಳನ್ನು ಮೀರಿ ನಮ್ಮನ್ನು ಆಡಿಸುವುದರಲ್ಲಿಯೇ ಎಲ್ಲಾ ವಾಹಿನಿಗಳ ತಂಡ ನಿರತ. ನಮ್ಮಮ್ಮ ತನಗೆ ಬಿಡುವಿದ್ದಾಗ ತನ್ನಿಷ್ಟದ ಧಾರಾವಾಹಿಗಳನ್ನು ನೋಡುತ್ತಾಳಾದರೂ, ನನಗಾಗಿ ಧಾರಾವಾಹಿಗಳನು ತ್ಯಾಗ ಮಾಡಿ ನನ್ನ ಜೊತೆ ಕುಳಿತು ಕ್ರಿಕೆಟ್ ಮ್ಯಾಚ್‌ಗಳನೂ, ಮೋದಿ ಭಾಷಣಗಳನೂ (ಭಾಷೆ ಬರದಿದ್ದರೂ) ಸ್ವಲ್ಪವೂ ತೂಕಡಿಸದೇ ನೋಡುವುದನ್ನು ಕರಗತ ಮಾಡಿಕೊಂಡಿದ್ದಾಳೆ.

ಇನ್ನೊಂದು ಪುಣ್ಯವೆಂದರೆ ಅವಳು ಯಾವ ಅಡುಗೆ ಕಾರ್ಯಕ್ರಮಗಳನ್ನೂ ನೋಡುವುದಿಲ್ಲ. ಅಪ್ಪಿತಪ್ಪಿ ನೋಡಿದರೂ ಅಲ್ಲಿ ಬರುವ ತರಹೇವಾರಿ ಅಡುಗೆಗಳ ಮಾಡಿ ನಮ್ಮ ಮೇಲೆ ಪ್ರಯೋಗಿಸುವುದಿಲ್ಲ. ಬದಲಾವಣೆಯ ಗಾಳಿ ಇನ್ನೂ ಜೋರಾಗಿ ಬೀಸಿದೆ. ಟಿ.ವಿ ಅದೇ ಇದೆ, ಕಾಲ ಬದಲಾಗಿದೆ. ನೋಡುವ ಕಣ್ಣುಗಳು ಅವೇ, ದೃಷ್ಟಿಕೋನ ಬದಲಾಗಿದೆ. ಆಂಟೆನಾದ ಜಾಗವನ್ನು ಡಿಶ್ ತಟ್ಟೆ ಆವರಿಸಿಕೊಂಡಿದೆ. ಒಂದು ಚ್ಯಾನಲ್‌ಗೆ ತೊಂಬತ್ತಂಬತ್ತು ಸೇರಿ ನೂರು ಚ್ಯಾನಲ್‌ಗಳಾಗಿವೆ, ನೂರು ಬಾರಿಸಲು ಸಚಿನ್ ಬದಲಿಗೆ ವಿರಾಟ್ ಬಂದಿದ್ದಾನೆ, ಐದೈದು ದಿನಗಳ ಟೆಸ್ಟ್‌ ಬಿಡಿ, ಐದು ತಾಸಿನ ಟಿ 20 ನೋಡಲೇ ಸಮಯ ಇಲ್ಲವಾಗಿದೆ (ಇದ್ದರೂ ನೋಡುವ ತಾಳ್ಮೆ ಇಲ್ಲ).

ಶಕ್ತಿಮಾನ್ ಸಾಧನೆಗಳನ್ನು ಬೆಕ್ಕಸಬೆರಗಾಗಿ ನೋಡುತ್ತಿದ್ದ ಕುತೂಹಲ ಈಗ ಈ ಗ್ರಹ ದಾಟಿ ಚಂದ್ರ ಸೂರ್ಯರ ತೋರಿಸಿದರೂ ಮೂಡದಾಗಿದೆ. ಪ್ರತಿಯೊಂದಕ್ಕೂ ಇದೇನು? ಇದೇನು? ಎಂದು ಪ್ರಶ್ನಿಸುವ ಮುಗ್ಧತೆ ಕಳೆದುಹೋಗಿದೆ. ಈ ನೂರು ಚ್ಯಾನಲ್‌ಗಳ ಮಧ್ಯೆ ಡಿಡಿ1 ಎಲ್ಲಿ ಕಳೆದು ಹೋಯಿತೋ, ಚಾನಲ್ ಪಲ್ಲಟಿಸುತಿರುವಾಗ ಎಲ್ಲೋ ಮಧ್ಯದಲಿ ಸಿಗುವ ಆ ವಾಹಿನಿ ನೋಡಿದಾಗ ವಯಸ್ಸಾದ ಮುದುಕಿಯಂತೆ ಕಾಣುತ್ತದೆ. ಟಿ.ಆರ್.ಪಿ ಹೊಡೆತಕ್ಕೆ ಮುಪ್ಪಾಗಿ ತೆವಳುತ್ತಾ ಸಾಗುವಂತೆ ಕಂಡು ಅದರ ಸ್ಥಿತಿ ನೋಡಲು ಮರುಗಿ ರಿಮೋಟ್ ಮುಂದುವರೆಯುತ್ತದೆ. ದಿನಕ್ಕೆರಡು ಬಾರಿ ವಾರ್ತೆಗಳ ನೋಡಿ ತಿಳಿದುಕೊಳುತ್ತಿದ್ದ ಸುದ್ದಿ ಈಗ ಹತ್ತತ್ತು ನ್ಯೂಸ್ ಚ್ಯಾನಲ್‌ಗಳ ನೋಡಿದರೂ ತಿಳಿಯದಾಗಿದೆ... ಬದಲಾದ ಕಾಲವಲ್ಲವೇ?

ಇದೆಲ್ಲ ಇರಲೇಬೇಕು ಬಿಡಿ. ಮನರಂಜನೆಯನು ಮೊಗೆ ಮೊಗೆದು ಕೊಡುವ ಮುನ್ನೂರು ಚ್ಯಾನಲ್‌ಗಳಿದ್ದರೂ ಒಂದನ್ನೂ ಸಂಪೂರ್ಣವಾಗಿ ನೋಡುವ ವ್ಯವಧಾನ ಇಲ್ಲವಾಗಿದೆ. ಹೌದು. ಈ ಎಲ್ಲ ಜಂಜಾಟಗಳ ನಡುವೆ ಸ್ಪಷ್ಟವಾಗಿರುವುದು ಗೊಂದಲವೊಂದೇ. ಅದಕೆ ನಾ ಯಾವಾಗಲೂ ದೇವರಲಿ ಪ್ರಾಥಿಸುವೆ. ‘ಮತ್ತೆ ನನಗದೇ ಕಣ್‌ಗಳ ನೀಡು. ಚಿಕ್ಕವಾದರೂ ಸರಿ, ಆ ಬಾಲ್ಯದ ದೃಷ್ಟಿಕೋನವನೇ ಕೊಡು.

ಒಂದೇ ಚಾನಲ್ ಇದ್ದರೂ ಡಿಡಿ ಒಂದೇ ಇರಲಿ. ಶಕ್ತಿಮಾನ್ ಮೂರು ಸುತ್ತು ತಿರುಗಿದರೂ ಬೆರಗಿನಿಂದ ನೋಡುತ್ತಲೇ ಇರುವ ಕುತೂಹಲವನ್ನೂ, ಓವರ್‌ಗೊಮ್ಮೆ ಬರುವ ಜಾಹೀರಾತಿನ ಸಮಯದಲಿ ಆಟಗಾರರೇನು ಮಾಡುತಿರುವರು? ಎಂಬ ಮುಗ್ಧತೆಯನೇ ನನಗೆ ಕರುಣಿಸು. ಸಮಯ ಎಷ್ಟೇ ವ್ಯರ್ಥವಾದರೂ ಸರಿ ಐದು ದಿನಗಳ ಟೆಸ್ಟ್ ನೋಡುವ ವ್ಯವಧಾನವನು ನೀಡು’ ಎಂದು.
-ಶಿವಕುಮಾರ್ ಅರಹುಣಶಿ ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.