ADVERTISEMENT

ನಗರಕ್ಕೆ ರೋಡ್‌ಮಾಸ್ಟರ್‌ ಡಾರ್ಕ್‌ ಹಾರ್ಸ್‌

ಜಯಸಿಂಹ ಆರ್.
Published 20 ಮೇ 2015, 19:30 IST
Last Updated 20 ಮೇ 2015, 19:30 IST

ಬಲಿಷ್ಠ ಕ್ರೂಸರ್‌ಗಳೆಂದರೆ ಹಾರ್ಲೆ ಡೇವಿಡ್‌ಸನ್ ಎಂಬ ಮಾತು ಪ್ರಚಲಿತದಲ್ಲಿದೆ. ಹಾರ್ಲೆ ಕ್ರೂಸರ್‌ಗಳು ಭಾರತಕ್ಕೆ ಬರುವ ಮುನ್ನವೇ ಅಮೆರಿಕದ ಇಂಡಿಯನ್ ಚೀಫ್ ಕ್ರೂಸರ್‌ಗಳು ನಮ್ಮ ರಸ್ತೆಯಲ್ಲಿ ಓಡಾಡಿ ಹೋಗಿವೆ. ವಿಂಟೇಜ್ ಬೈಕ್ ಷೋಗಳು ನಡೆದಾಗ 40–50ರ ದಶಕದ ಇಂಡಿಯನ್ ಚೀಫ್ ಕ್ರೂಸರ್‌ಗಳೂ ಗಡತ್ತಾಗಿ ನಿಂತಿರುತ್ತವೆ.

ಇಂಡಿಯನ್ ಮೋಟಾರ್‌ ಸೈಕಲ್ಸ್ 2014ರಲ್ಲೇ ಭಾರತದಲ್ಲಿ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿತ್ತು. ಇಂಡಿಯನ್ ರೋಡ್ ಮಾಸ್ಟರ್, ಸ್ಕಾಟ್ ಮಾದರಿಗಳನ್ನು ಮತ್ತೆ ಪರಿಚಯಿಸಿತ್ತು. ಅವುಗಳ ಎಕ್ಸ್ ಷೋರೂಂ ಬೆಲೆಯೇ 30 ಲಕ್ಷದ ಆಸುಪಾಸಿನಲ್ಲಿ ಇದ್ದುದ್ದರಿಂದ ಅದರ ಸೇಲ್ ಗ್ರಾಫ್ ಏನೂ ಏರಿಲ್ಲ. ಆದರೆ ಕೆಲವಾರು ರೋಡ್‌ ಮಾಸ್ಟರ್‌ಗಳು ನಮ್ಮ ರಸ್ತೆಗಿಳಿದಿದ್ದಂತೂ ನಿಜ.

ಈಗ ಮತ್ತೆ ಹೊಸ ಇನ್ನಿಂಗ್ಸ್ ಕಟ್ಟಲು ಇಂಡಿಯನ್ ಮೋಟಾರ್‌ಸೈಕಲ್ಸ್ ಮುಂದಡಿ ಇಟ್ಟಿದೆ. ಬೆಂಗಳೂರಿನಲ್ಲಿ ತಾನೇ ನೇರವಾಗಿ ಮತ್ತು ಪೋಲಾರಿಸ್‌ನ ಸಹಯೋಗದಲ್ಲಿ ಒಂದು ಷೋರೂಂ ತೆರೆದಿದೆ. ಅದೂ ಎರಡು ಭರ್ಜರಿ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ. ಅಂದೇ ಎರಡೂ ಬೈಕ್‌ಗಳನ್ನು ಬೆಂಗಳೂರಿನ ಇಬ್ಬರು ಬೈಕ್ ಪ್ರಿಯರಿಗೆ ಹಸ್ತಾಂತರಿಸಲಾಯಿತು. ಅವರೇ ಭಾರತದಲ್ಲಿ ರೋಡ್‌ಮಾಸ್ಟರ್‌ ಮತ್ತು ಡಾರ್ಕ್‌ ಹಾರ್ಸ್‌ನ ಮೊದಲ ಗ್ರಾಹಕರು.

ರೋಡ್‌ಮಾಸ್ಟರ್ 2015
ನೋಡಲು ಥೇಟ್ ಕೋಣದಷ್ಟು ದೊಡ್ಡದಾಗಿರುವ ಇದರ ಎಕ್ಸ್ ಷೋರೂಂ ಬೆಲೆ 35 ಲಕ್ಷ. ಇದೊಂದು ಪಕ್ಕಾ ಟೂರಿಂಗ್ ಬೈಕ್. ಇದರ ತೂಕ ಬರೋಬ್ಬರಿ 421 ಕೆ.ಜಿ. 140 ಲೀಟರ್ ಸ್ಟೋರೇಜ್ ಸ್ಪೇಸ್ ಇರುವ ಈ ಬೈಕ್ ರಸ್ತೆಯಲ್ಲಿ ಚಲಿಸಲು, ನ್ಯಾನೋದಂತಹ ಸಣ್ಣ ಕಾರಿನಷ್ಟು ಜಾಗ ಇಕ್ಕಟ್ಟಾಗುತ್ತದೆ. ಫುಟ್‌ಬಾಲ್ ಗಾತ್ರದ ಹೆಡ್‌ಲ್ಯಾಂಪ್‌ಗಳು, ದೊಡ್ಡ ಸೈಡ್‌ಲೈಟ್‌ಗಳು, ದಟ್ಟವಾದ ಬಣ್ಣ ರೋಡ್‌ಮಾಸ್ಟರ್‌ಗೆ ಒರಟು ಮತ್ತು ರಿಚ್ ನೋಟ ನೀಡಿವೆ. 21 ಲೀಟರ್  ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ದೂರದ ಪಯಣಕ್ಕೆ ಹೇಳಿ ಮಾಡಿಸಿದಂತಿದೆ.

ಇಂತಿಪ್ಪ ಬೈಕ್‌ ಅನ್ನು ಮುಂದೋಡಿಸಲು ಪ್ರಚಂಡ ಎಂಜಿನ್ ಬೇಕು. ಇಂಡಿಯನ್ ತನ್ನ ಹೊಸ ಮಾದರಿಯ ಎಂಜಿನ್‌ಗಳಿಗೆ ಥಂಡರ್‌ ಸ್ಟ್ರೋಕ್ ಎಂದು ಹೆಸರಿಟ್ಟಿದೆ. ಬರೋಬ್ಬರಿ 1811 ಸಿ.ಸಿ ಸಾಮರ್ಥ್ಯದ ಎಂಜಿನ್ ರೋಡ್ ಮಾಸ್ಟರ್‌ನಲ್ಲಿದೆ. ನಮ್ಮ ರಸ್ತೆಗೆ ಇಳಿಯುವ ದೊಡ್ಡ ಸೆಡಾನ್‌ಗಳಲ್ಲಿ ಇರುವ ಎಂಜಿನ್ ಸಾಮರ್ಥ್ಯ ಸಹ 1400 ಸಿ.ಸಿ ಇಂದ ಆರಂಭವಾಗಿ 2000ಸಿ.ಸಿ.ವರೆಗೆ ಇದೆ.

ಅವಳಿ ಸಿಲಿಂಡರ್, ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನವಿರುವ ಈ ಎಂಜಿನ್ ಕೇವಲ 2600 ಆರ್‌ಪಿಎಂನಲ್ಲಿ 139 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 15 ಎನ್‌ಎಂ ಟಾರ್ಕ್ ಉತ್ಪಾದಿಸುವ ನಮ್ಮ 150 ಸಿ.ಸಿ ಬೈಕ್‌ಗಳ ವೇಗವೇ ಹೆಚ್ಚು ಅಂದ ಮೇಲೆ 139 ಎನ್‌ಎಂ ಟಾರ್ಕ್‌ನ ಶಕ್ತಿ ಎಷ್ಟಾಗಬಹುದು? ಅನುಭವಿಸಿಯೇ ನೋಡಬೇಕು. ಅತಿವೇಗದಲ್ಲಿ ಗಾಳಿ ಸವಾರನಿಗೆ ಹೊಡೆಯದಂತೆ ತಡೆಯಲು ಹಾರಿಝಾನ್ ಪವರ್ ವಿಂಡ್‌ಶೀಲ್ಡ್ ಇದೆ. ಹ್ಯಾಂಡಲ್ ಬಾರ್ ಉದ್ದಕ್ಕೂ ಇರುವ ವಿಂಡ್‌ಶೀಲ್ಡ್‌ನಿಂದ ಮೇಲಕ್ಕೆ ಚಾಚಿದ ಗಾಜು ನೋಟಕ್ಕೆ ಮತ್ತಷ್ಟು ಮೆರುಗು ನೀಡಿದೆ.

ಇನ್ನು ಕೀ ಎಲ್ಸ್ ಇಗ್ನೀಷನ್, ಕ್ರೂಸ್ ಕಂಟ್ರೋಲ್, ಎಬಿಎಸ್ ಮೊದಲಾದ ಐಷಾರಾಮಿ ಕಾರುಗಳಲ್ಲಿ ಇರಬಹು ದಾದ ಆಧುನಿಕ ತಂತ್ರಜ್ಞಾನಗಳೆಲ್ಲಾ ರೋಡ್‌ಮಾಸ್ಟರ್‌ನಲ್ಲಿ ಇದೆ. ಹೀಗಾಗಿ ಅತಿವೇಗದಲ್ಲೂ ಸುರಕ್ಷಿತ ಚಾಲನೆ ಸಾಧ್ಯ.

ಡಾರ್ಕ್ ಹಾರ್ಸ್
ಹೆಸರಿಗೆ ತಕ್ಕಂತೆ ಭಾಗಶಃ ಸಂಪೂರ್ಣ ಗಾಢ, ಮೇಟ್ ಫಿನಿಷಿಂಗ್ ಕಪ್ಪು ಬಣ್ಣದ ಕ್ರೂಸರ್ ಇದು. ಸೈಲೆನ್ಸರ್, ಡಿಸ್ಕ್ ಬ್ರೇಕ್, ಹೆಡ್‌ಲ್ಯಾಂಪ್‌, ಲಿವರ್‌ಗಳು ಹೊಳೆಯುವ ಬಣ್ಣವಾದ್ದರಿಂದ ಆಳವಾದ ನೋಟ್ ಬೈಕ್‌ಗೆ ಲಭಿಸಿದೆ. ರೋಡ್‌ಮಾಸ್ಟರ್‌ನಲ್ಲಿರುವ ಥಂಡರ್‌ಸ್ಟ್ರೋಕ್ 111 ಎಂಜಿನ್ ಇಲ್ಲೂ ಇದೆ. ಅದೇ ಪರಮಾನದ ಟ್ಯೂನಿಂಗ್ ಇದ್ದು, ಶಕ್ತಿಯಲ್ಲೇನೂ ವ್ಯತ್ಯಾಸವಿಲ್ಲ. ಆದರೆ ಇದರ ತೂಕ ಮಾತ್ರ 341 ಕೆ.ಜಿ.
20 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಇದ್ದು, ದೂರದ ಪಯಣಕ್ಕೆ ಲಗತ್ತಾದ ಕ್ರೂಸರ್ ಇದು.

ರೋಡ್‌ಮಾಸ್ಟರ್‌ನಲ್ಲಿರುವಂತೆಯೇ ಎಬಿಎಸ್, ಕ್ರೂಸ್ ಕಂಟ್ರೋಲ್, ಕೀ ಲೆಸ್ ಇಗ್ನೀಷನ್ ಇದರಲ್ಲೂ ಇದೆ. ಮುಚ್ಚಿದ ವ್ಹೀಲ್ ಫೆಂಡರ್ ಇರುವ ಡಾರ್ಕ್ ಹಾರ್ಸ್ ಬೆಲೆ 22 ಲಕ್ಷ.

ಬೆಲೆ ಹೆಚ್ಚಾದರೂ ರಸ್ತೆಯಲ್ಲಿ ಓಡಾಡುವಾಗ ರೋಡ್‌ ಮಾಸ್ಟರ್‌ ಮತ್ತು ಡಾರ್ಕ್ ಹಾರ್ಸ್ ಅನ್ನು ನೋಡುವಾಗ ಒಂದು ಮೆರವಣಿಗೆ ನೋಡಿದಂತೆ ಭಾಸವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.