ADVERTISEMENT

ನುಡಿಗೆಲ್ಲ ಸಲ್ಲುವ ‘ಸಂಕ’ದ ಸೇತು

ತಂತ್ರೋಪನಿಷತ್ತು

ದಯಾನಂದ ಎಚ್‌.ಎಚ್‌.
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
ನುಡಿಗೆಲ್ಲ ಸಲ್ಲುವ ‘ಸಂಕ’ದ ಸೇತು
ನುಡಿಗೆಲ್ಲ ಸಲ್ಲುವ ‘ಸಂಕ’ದ ಸೇತು   

ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಟೈಪ್‌ ಮಾಡಿದ ಪಠ್ಯವನ್ನು ಯುನಿಕೋಡ್‌ಗೆ ಪರಿವರ್ತಿಸಲು ಇರುವ ಆನ್‌ಲೈನ್‌ ಪರಿವರ್ತಕಗಳ (converter) ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇದೆ. ಆದರೆ, ಯುನಿಕೋಡ್‌ನಿಂದ ನುಡಿಗೆ (ASCII) ಪಠ್ಯವನ್ನು ಪರಿವರ್ತಿಸಲು ಇರುವ ಪರಿವರ್ತಕಗಳ ಬಗ್ಗೆ ಹಲವರಿಗೆ ಗೊತ್ತಿಲ್ಲ.

ಹೀಗಾಗಿ ಯುನಿಕೋಡ್‌ನಿಂದ ನುಡಿಗೆ ಪಠ್ಯವನ್ನು ಬದಲಿಸಲು ಸಾಧ್ಯವಿರುವ ಆನ್‌ಲೈನ್‌ ಪರಿವರ್ತಕದ ಬಗ್ಗೆ ಈ ವಾರ ತಿಳಿಯೋಣ.

ಯುನಿಕೋಡ್‌ನಲ್ಲಿ ಟೈಪ್‌ ಮಾಡಿದ ಪಠ್ಯವನ್ನು ನುಡಿಗೆ ಬದಲಿಸಲು ಅರವಿಂದ (aravindavk.in/) ಎಂಬುವರು ಆನ್‌ಲೈನ್‌ ಪರಿವರ್ತಕವನ್ನು ಅಭಿವೃದ್ಧಿಪಡಿಸಿದ್ದಾರೆ. ನುಡಿ/ಬರಹದಲ್ಲಿ ಟೈಪಿಸಿದ ಪಠ್ಯವನ್ನು ಯುನಿಕೋಡ್‌ಗೆ ಬದಲಿಸಲು ಅರವಿಂದ ಅವರು ಈ ಹಿಂದೆ ಒಂದು ಆನ್‌ಲೈನ್‌ ಪರಿವರ್ತಕವನ್ನು ರೂಪಿಸಿದ್ದರು. ‘ಸಂಕ’ ಎಂಬ ಆನ್‌ಲೈನ್‌ ಪರಿವರ್ತಕ ತಾಣದ ಮೂಲಕ ಅವರು ಆಸ್ಕಿ – ಯುನಿಕೋಡ್‌ನ ನಡುವೆ ಆನ್‌ಲೈನ್‌ ಸೇತುವೆಯನ್ನು ನಿರ್ಮಿಸಿದ್ದಾರೆ.

ADVERTISEMENT

ಹೊಸದಾಗಿ ರೂಪಿಸಿರುವ ‘ಸಂಕ’ದಲ್ಲಿ ನುಡಿ/ಬರಹದಿಂದ ಯುನಿಕೋಡ್‌ಗೆ ಹಾಗೂ ಯುನಿಕೋಡ್‌ನಿಂದ ನುಡಿ/ಬರಹಕ್ಕೆ ಪಠ್ಯವನ್ನು ಪರಿವರ್ತಿಸಬಹುದು. ಎರಡೂ ಆಯ್ಕೆಗಳು ಇಲ್ಲಿರುವುದರಿಂದ ಕನ್ನಡ ಪಠ್ಯವನ್ನು ಪರಿವರ್ತಿಸುವವರಿಗೆ ಇದು ಹೆಚ್ಚು ಅನುಕೂಲಕರ.

‘ಸಂಕ’ ಪರಿವರ್ತಕಕ್ಕಾಗಿ ನಿಮ್ಮ ಬ್ರೌಸರ್‌ನಲ್ಲಿ aravindavk.in/sanka/ ಎಂದು ಟೈಪಿಸಿ ಎಂಟರ್‌ ಒತ್ತಿ. ಇಲ್ಲಿ ತೆರೆದುಕೊಳ್ಳುವ ಪುಟದಲ್ಲಿ ASCII to Unicode ಮತ್ತು Unicode to ASCII ಎಂಬ ಆಯ್ಕೆಗಳು ಕಾಣುತ್ತವೆ. ನುಡಿಯಿಂದ ಯುನಿಕೋಡ್‌ಗೆ ಪಠ್ಯ ಪರಿವರ್ತಿಸಲು ASCII to Unicode ಆಯ್ಕೆ ಮಾಡಿಕೊಳ್ಳಿ.

ಇಲ್ಲಿ ಎಡಕ್ಕೆ ಕಾಣುವ ಬಾಕ್ಸ್‌ನಲ್ಲಿ ನುಡಿ ಪಠ್ಯ ಹಾಕಿದ ಕೂಡಲೇ ಬಲ ಭಾಗದಲ್ಲಿರುವ ಬಾಕ್ಸ್‌ನಲ್ಲಿ ನಿಮ್ಮ ನುಡಿ ಪಠ್ಯ ಯುನಿಕೋಡ್‌ ಆಗಿ ಪರಿವರ್ತನೆಯಾಗಿರುತ್ತದೆ. ಇದನ್ನು ನೀವು ನೇರವಾಗಿ ಕಾಪಿ ಮಾಡಿಕೊಂಡು ಬಳಸಬಹುದು. ಅದೇ ರೀತಿ ನೀವು ಯುನಿಕೋಡ್‌ನಿಂದ ನುಡಿಗೆ ಪಠ್ಯ ಬದಲಿಸಲು Unicode to ASCII ಆಯ್ಕೆ ಮಾಡಿಕೊಳ್ಳಿ. ಈಗ ಎಡಭಾಗದ ಬಾಕ್ಸ್‌ಗೆ ಯುನಿಕೋಡ್‌ ಪಠ್ಯ ಹಾಕಿ. ಬಲಭಾಗದಲ್ಲಿ ಪರಿವರ್ತನೆಗೊಂಡ ನುಡಿ ಪಠ್ಯ ನಿಮಗೆ ಸಿಗಲಿದೆ. ಈ ಸಂಕವನ್ನು ನೀವೂ ಒಮ್ಮೆ ಹಾದು ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.