ADVERTISEMENT

ಪೊಲೀಸಪ್ಪನ ಭಯ ಮತ್ತು ಮೇಘನಾ

ಡಿ.ಎಂ.ಕುರ್ಕೆ ಪ್ರಶಾಂತ
Published 27 ಏಪ್ರಿಲ್ 2016, 19:30 IST
Last Updated 27 ಏಪ್ರಿಲ್ 2016, 19:30 IST
- ನಟಿ ಮೇಘನಾ ಗಾಂವ್ಕರ್
- ನಟಿ ಮೇಘನಾ ಗಾಂವ್ಕರ್   

ಇತ್ತೀಚೆಗೆ ತೆರೆ ಕಂಡ ‘ಸಿಂಪಲ್ಲಾಗ್ ಇನ್ನೊಂದ್ ಲವ್‌ ಸ್ಟೋರಿ’ ಚಿತ್ರದಲ್ಲಿ ಪ್ರೇಕ್ಷಕನ ಮುಖದಲ್ಲಿ ಮಂದಹಾಸ ಮೂಡಿಸಿದವರು ನಟಿ ಮೇಘನಾ ಗಾಂವ್ಕರ್. ಗಂಭೀರ ಪಾತ್ರಗಳಲ್ಲಿ ನಟಿಸುತ್ತಿದ್ದ ಮೇಘನಾ ಲವ್ ಸ್ಟೋರಿಯಲ್ಲಿ ಚಿನಕುರುಳಿ ಸಂಭಾಷಣೆಗಳನ್ನು ಹೊಡೆದವರು.

ಇನ್ನೂ ಅವರ ಮನಸ್ಸು ಲವ್ ಸ್ಟೋರಿಯಲ್ಲಿ ತೇಲುತ್ತಿದೆ. ಮತ್ತೊಂದು ಉತ್ತಮ ಚಿತ್ರಕಥೆ ಎದುರು ನೋಡುತ್ತಿರುವ ಮೇಘನಾ ಅವರ ಖುಷಿ–ಕಚಗುಳಿಯ ಮಾತುಗಳು ಇಲ್ಲಿವೆ.

* ನಿಮ್ಮ ಮತ್ತೊಂದು ಪ್ರೇಮಕಥೆ ಯಾವಾಗ?
ಕಥೆ–ಚಿತ್ರಕಥೆ ಚೆನ್ನಾಗಿದ್ದರೆ ಆದಷ್ಟು ಶೀಘ್ರದಲ್ಲಿಯೇ ಮತ್ತೊಂದು ಪ್ರೇಮಕಥೆ ಆರಂಭವಾಗುತ್ತದೆ.

* ಕಾಲೇಜು ದಿನಗಳಲ್ಲಿ ತುಂಬಾ ತುಂಟಿ– ತರ್ಲೆಯಂತೆ ನೀವು?
ಇಲ್ಲ, ಇಲ್ಲ. ಯಾರೋ ನಿಮಗೆ ಸುಳ್ಳು ಹೇಳಿದ್ದಾರೆ. ಮೌನಿಯೂ ಅಲ್ಲ ತರ್ಲೆಯೂ ಅಲ್ಲ. ಒಂದು ರೀತಿ ಸಮತೋಲನವಾಗಿರುತ್ತಿದ್ದೆ.

* ಕಾಲೇಜಿನಲ್ಲಿ ನಿಮ್ಮ ಜತೆ ಲವ್ ಸ್ಟೋರಿ ಆರಂಭಿಸಬೇಕು ಎಂದುಕೊಂಡಿದ್ದವರು, ಸಿಕ್ಕಾಪಟ್ಟೆ ಹುಡುಗರು ಇದ್ದರಾ?
ತುಂಬಾ ತುಂಬಾ ಹುಡುಗರು ಇದ್ದರು. ಆದರೆ ಶಾಲಾ–ಕಾಲೇಜಿನಲ್ಲಿ ನನ್ನ ನೋಡಿದರೆ ಹುಡುಗರು ಹೆದರುತ್ತಿದ್ದರು. ನನ್ನ ಮಾತನಾಡಿಸುವ ವಿಷಯವಾಗಿ ಬೆಟ್‌ ಕಟ್ಟಿದ್ದಾರೆ. ಒಬ್ಬ ಹುಡುಗನೇನಾದರೂ ನನ್ನ ಮಾತನಾಡಿಸಿದರೆ ಆತ ಗ್ರೇಟ್ ಎನ್ನುವ ಮಟ್ಟಕ್ಕೆ! ಅದಕ್ಕೆ ಕಾರಣ ನಮ್ಮ ಅಪ್ಪ. ಅಪ್ಪ ಪೊಲೀಸ್ ಇನ್‌ಸ್ಪೆಕ್ಟರ್. ಒಬ್ಬ ಮಾತನಾಡಿಸಲು ಪ್ರಯತ್ನಿಸಿದ, ಅವನಿಗೆ ರಾಖಿ ಕಟ್ಟಿದೆ.

* ನೀವೇ ನಿಮ್ಮ ತಂದೆಯನ್ನು ಕಾಲೇಜಿಗೆ ಬರುವಂತೆ ಮಾಡಿ ಒಂದು ರೀತಿ ಹವಾ ಸೃಷ್ಟಿಸಿದ್ರಿ ಅನ್ನಿಸುತ್ತದೆ?
ಖಂಡಿತಾ ಇಲ್ಲ, ಇಲ್ಲ. ನಮ್ಮ ಅಪ್ಪ ಪೊಲೀಸ್ ಎನ್ನುವುದು ಬಹುತೇಕರಿಗೆ ಗೊತ್ತಿತ್ತು. ಅಪ್ಪ ಕೆಲವು ಸಮಯದಲ್ಲಿ ನನ್ನ ಶಾಲಾ ಚಟುವಟಿಕೆಗಳ ಬಗ್ಗೆ ವಿಚಾರಿಸಲು ಪೊಲೀಸ್ ಸಮವಸ್ತ್ರದಲ್ಲಿಯೇ ಬರುತ್ತಿದ್ದರು. ಅವರು ಬಂದಿದ್ದು ನನಗೆ ಅಡ್ವಾಂಟೇಜ್ ಆಯಿತು ಅಷ್ಟೇ.

* ನಟಿಯಾಗದಿದ್ದರೆ...
ಫಾರ್ಮುಲಾ ಒನ್‌ ರೇಸ್‌ ಕಾರ್ ಡ್ರೈವರ್ ಆಗಿರುತ್ತಿದ್ದೆ. ನನಗೆ ಕಾರು ಡ್ರೈವಿಂಗ್ ತುಂಬಾ ಇಷ್ಟ.

* ಹಾಗಿದ್ದರೆ 60–80ರ ಸ್ಪೀಡ್‌ನಲ್ಲಿ ಚಲಾಯಿಸಿದ್ದೀರಿ...
ಹೌದು. ಆದರೆ ಈಗ ಸಂಚಾರ ದಟ್ಟಣೆಯಿಂದ ಸಾಧ್ಯವಾಗುತ್ತಿಲ್ಲ. ‘ಚಾರ್‌ ಮಿನಾರ್’ ಸಿನಿಮಾ ಮುಗಿದಿತ್ತು... ಸ್ಥಳ ಬದಲಾವಣೆಯ ಅಪೇಕ್ಷೆ ಇತ್ತು. ಬೆಂಗಳೂರಿನಿಂದ ಪಾಂಡಿಚೇರಿಗೆ ಕಾರಿನಲ್ಲಿಯೇ ಹೋಗಿದ್ದೆ. ಆ ಡ್ರೈವಿಂಗ್‌ ಅನ್ನು ಮರೆಯಲಾಗದು. ಈ ರೀತಿ ಲಾಂಗ್‌ ಡ್ರೈವ್ ಮಾಡಿ ತುಂಬಾ ದಿನಗಳೇ ಆಯಿತು.

* ಗಂಭೀರ ಪಾತ್ರಗಳಲ್ಲಿ ನಟಿಸುತ್ತಿದ್ದವರು ‘ಸಿಂಪಲ್ಲಾಗ್ ಇನ್ನೊಂದ್ ಲವ್‌ ಸ್ಟೋರಿ’ಯಲ್ಲಿ ಸಖತ್ ಪಂಚಿಂಗ್ ಡೈಲಾಗ್ ಹೊಡೆದಿದ್ದೀರಿ?
ನನಗೆ ಹೆಚ್ಚು ನೆನಪಿನಲ್ಲಿ ಉಳಿಯುವಂಥ ಚಿತ್ರ ಇದು. ನಾನು ಮೊದಲ ಬಾರಿ ಈ ರೀತಿ ಪಾತ್ರ ಮಾಡಿದ್ದು. ಅದರ ಕ್ರೆಡಿಟ್ ನಿರ್ದೇಶಕ ಸುನಿ ಅವರಿಗೆ ಸಲ್ಲುತ್ತದೆ. ಚಿತ್ರೀಕರಣದ ವೇಳೆ ಅಡುಗೆಯವರು, ಸಹಾಯಕರು ಎಲ್ಲರ ಜತೆಯೂ ಸಿಕ್ಕಾಪಟ್ಟೆ ಮಾತನಾಡಿಕೊಂಡು ಖುಷಿಯಾಗಿ ಸಮಯ ಕಳೆದಿದ್ದೇವೆ.

* ನಿಜ ಜೀವನದಲ್ಲೂ ಹೆಚ್ಚು ಮಾತನಾಡುವಿರಾ, ಇಲ್ಲ ಮೌನಿಯೋ?
ಇಷ್ಟವಾಗುವವರೂ ಎದುರಿಗೆ ಇದ್ದರೆ ಮಾತನಾಡುತ್ತೇನೆ. ಇಷ್ಟ ಆಗದಿದ್ದರೆ ಮೌನಿ. ಕೋಪ ಬಂದರೆ ಮಾತೇ ಇಲ್ಲ. ಅಲ್ಲಿಂದ ದೂರ ಹೋಗುತ್ತೇನೆ.

* ನಿಮಗೆ ಯಾರಾದರೂ ಇಂಥ ನಟಿ ಎಂದು ಬಿರುದು ಕೊಟ್ಟರೆ ಯಾವುದನ್ನು ಅಪೇಕ್ಷಿಸುತ್ತೀರಿ?
ಸ್ಟಾರ್ ಎನ್ನುವುದು ಜನರಿಂದ ಸಿಕ್ಕುವ ಪ್ರೀತಿ– ಬಿರುದು. ಆದರೆ ಇದೆಲ್ಲಕ್ಕಿಂತ ನನಗೆ ಮೇಘನಾ ಚಿತ್ರಗಳು ಚೆನ್ನಾಗಿರುತ್ತದೆ. ನೋಡಬಹುದು ಎನ್ನುವ ನಂಬಿಕೆ ಜನರಿಗೆ ಬಂದರೆ ಅದೇ ನನಗೆ ಸಿಕ್ಕುವ ದೊಡ್ಡ ಬಿರುದು.

* ಅಳುವ ಮತ್ತು ನಗುವ ಪಾತ್ರಗಳಲ್ಲಿ ನಿಮಗೆ ಇಷ್ಟವಾದದ್ದು?  
ನಗುವ, ನಗಿಸುವ ಪಾತ್ರ. ದುಃಖಾಂತ್ಯ ಪಾತ್ರಗಳು ತಲೆ ನೋವು ಬರಿಸುತ್ತವೆ. ಅಲ್ಲದೇ ಹೆಚ್ಚು ಶಕ್ತಿ ವ್ಯಯ! ಎಲ್ಲರೂ ಹೇಳುತ್ತಾರಲ್ಲ ಖುಷಿ ಖುಷಿಯಾಗಿ ಬದುಕಿನಲ್ಲಿ ಇರಬೇಕು ಎಂದು ಆ ರೀತಿಯ ಪಾತ್ರಗಳು ನನಗೆ ಇಷ್ಟ.

* ಬಿಡುವಿನಲ್ಲಿ ನಿಮ್ಮ ಹವ್ಯಾಸಗಳು?
ನಾನು ಇಂಗ್ಲಿಷ್ ಸಾಹಿತ್ಯ ಓದಿಕೊಂಡವಳು. ಪದ್ಯ, ಸಣ್ಣ ಕಥೆಗಳನ್ನು ಬರೆಯುತ್ತೇನೆ. ಓದುತ್ತೇನೆ. ಪ್ರವಾಸ ಸಹ ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಪ್ರವಾಸದಿಂದ ಆ ದೇಶದ ಸಂಸ್ಕೃತಿ, ಆಹಾರ ಕ್ರಮ ಇತ್ಯಾದಿ ವಿಷಯಗಳು ಹೆಚ್ಚು ಹೆಚ್ಚು ಪರಿಚಯವಾಗುತ್ತವೆ.

* ಭವಿಷ್ಯದಲ್ಲಿ ಸಾಹಿತಿ ಎನ್ನುವ ದಪ್ಪ ಕನ್ನಡಕ ಹಾಕಿಕೊಳ್ಳಬೇಕು ಎಂದುಕೊಂಡಿದ್ದೀರಿ?
ಆ ರೀತಿ ಅಲ್ಲ. ಜನರೇಷನ್ ಬೆಳೆದಿದೆ. ತುಂಬಾ ಚೆನ್ನಾಗಿ ಕಾಣಿಸಿಕೊಳ್ಳುವ, ಚೆಂದವಾಗಿರುವ, ಅಷ್ಟೇ ಚೆಂದವಾಗಿ ಸಾಹಿತ್ಯ ಬರೆಯುವವಳು ಎನಿಸಿಕೊಳ್ಳಲು ಇಷ್ಟ.

ADVERTISEMENT

*
ಚಿಕ್ಕಂದಿನಿಂದಲೇ ಧೈರ್ಯವಂತೆ
ನಾನು ಶಾರುಖ್ ಖಾನ್ ಅಭಿಮಾನಿ. ಎಲ್ಲರೂ ಕಾಲೇಜು ದಿನಗಳಲ್ಲಿ ತರಗತಿಗಳಿಗೆ ಬಂಕ್ ಹೊಡೆದು ಸಿನಿಮಾಗಳಿಗೆ ಹೋಗುತ್ತಾರೆ. ಆದರೆ ನಾನು ಆರು–ಏಳನೇ ತರಗತಿಯಲ್ಲಿದ್ದಾಗಲೇ ಶಾಲೆಗೆ ಬಂಕ್ ಹೊಡೆದು ಸಿನಿಮಾಕ್ಕೆ ಹೋಗುತ್ತಿದ್ದೆ. ಸಿನಿಮಾ ಅಂದರೆ ಅಂದಿನಿಂದಲೇ ಆಸಕ್ತಿ.

ನಾನು ಶಾಲಾ–ಕಾಲೇಜಿನಲ್ಲಿ ಅತ್ಯುತ್ತಮ ವಿದ್ಯಾರ್ಥಿನಿ. ಶಾಲೆಯಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗುವಾಗ ಬಹುತೇಕ ವಿದ್ಯಾರ್ಥಿಗಳ ಮನೆಯಲ್ಲಿ ಹುಡುಗಿಯರನ್ನು ಕಳುಹಿಸಲು ಹಿಂದೇಟು ಹಾಕುತ್ತಿರುತ್ತಾರೆ.

ಆದರೆ ನನಗೆ ನಮ್ಮ ಅಪ್ಪ ಬೆಂಬಲವಾಗಿ ನಿಂತು ವಿದೇಶಕ್ಕೆ ಪ್ರವಾಸ ಕಳುಹಿಸಿದ್ದರು. ಇದು ನಾನು ಚಿಕ್ಕಂದಿನಿಂದಲೇ ಧೈರ್ಯವಾಗಿ ಬೆಳೆಯಲು ಸಹಾಯಕವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.