ADVERTISEMENT

ಮದುವೆ ನಂತರ ಬದುಕು ಇನ್ನೂ ಚೆಂದ

ಸಂದರ್ಶನ

ವಿದ್ಯಾಶ್ರೀ ಎಸ್.
Published 30 ನವೆಂಬರ್ 2016, 19:30 IST
Last Updated 30 ನವೆಂಬರ್ 2016, 19:30 IST
ಚಿತ್ರಗಳು: ಡಿ.ಸಿ.ನಾಗೇಶ್
ಚಿತ್ರಗಳು: ಡಿ.ಸಿ.ನಾಗೇಶ್   

ಇಲ್ಲಿಯವರೆಗೂ ಸುಮಾರು ಇಪ್ಪತ್ತೈದು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಪ್ರಜ್ವಲ್ ದೇವರಾಜ್, ದೊಡ್ಡ ಗೆಲುವಿಗಾಗಿ ಕಾತರರಾಗಿದ್ದಾರೆ. ತಮ್ಮ ವೈಯಕ್ತಿಕ ಬದುಕಿನ ಸಿಹಿಗಳಿಗೆಯನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ...

* ಮದುವೆ ನಂತರ ಜೀವನ ಹೇಗೆ ಬದಲಾಗಿದೆ?
ಸ್ನೇಹಿತರೆಲ್ಲ, ಮದುವೆಯ ನಂತರ ಜೀವನ ತುಂಬಾ ಕಷ್ಟ ಎಂದೆಲ್ಲಾ ಹೆದರಿಸಿಬಿಟ್ಟಿದ್ದರು. ಆದರೆ ನನಗೆ ಆ ರೀತಿಯ ತೊಂದರೆ ಎದುರಾಗಿಲ್ಲ. ಮೊದಲೇ ನಾವಿಬ್ಬರೂ ಸ್ನೇಹಿತರಾಗಿರುವುದರಿಂದ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಮೊದಲು ಇಬ್ಬರೂ ಬೇರೆ ಬೇರೆ ಮನೆಯಲ್ಲಿ ಇರುತ್ತಿದ್ದೆವು. ಈಗ ಒಂದೇ ಮನೆಯಲ್ಲಿ ಇದ್ದೇವೆ. ಇಷ್ಟರ ಹೊರತು ಮತ್ತೇನೂ ವ್ಯತ್ಯಾಸವಾಗಿಲ್ಲ. ಬದುಕು ಮತ್ತಷ್ಟು ಚೆನ್ನಾಗಿದೆ.

* ಮದುವೆಯಾದ ಮೇಲೆ ಬೇರೆ ಹುಡುಗಿಯಿಂದ ಪ್ರೇಮ ನಿವೇದನೆ ಬಂದಿದ್ಯಾ?
ಯಾರೂ ಅಷ್ಟೊಂದು ಧೈರ್ಯ ಮಾಡಿಲ್ಲ. ಬಹುಶಃ ನನ್ನ ಹೆಂಡತಿಯನ್ನು ನೋಡಿದರೆ ಭಯವಿರಬಹುದು.

* ಹಳೆ ನೋಟ್‌ ರದ್ದಾಗಿದ್ದರಿಂದ ಎಷ್ಟು ಪರದಾಡಿದ್ದೀರಿ?
ಸಾಮಾನ್ಯವಾಗಿ ನಾನು ಡೆಬಿಟ್‌, ಕ್ರಿಡಿಟ್‌ ಕಾರ್ಡ್‌ಗಳನ್ನು ಹೆಚ್ಚಾಗಿ ಬಳಸುತ್ತೇನೆ. ಮನೆಗೆ ಬೇಕಾದ ಸಣ್ಣಪುಟ್ಟ ವಸ್ತುಗಳನ್ನು ತೆಗೆದುಕೊಳ್ಳುವಾಗ ಪರದಾಡಿದ ಸನ್ನಿವೇಶವಿದೆ. ನಾವೇ ಇಷ್ಟು ಪರದಾಡಬೇಕಾದರೆ ಕಾರ್ಡ್ ಬಳಸದವರು ಏನು ಮಾಡುತ್ತಾರೆ ಎಂಬುದು ನನ್ನ ಯೋಚನೆ. 

* ಕೇಶವಿನ್ಯಾಸವನ್ನು ಎಷ್ಟು ದಿನಕ್ಕೊಮ್ಮೆ ಬದಲಾಯಿಸಿಕೊಳ್ಳುತ್ತೀರಿ?
ನನಗೆ ಪ್ರತಿಯೊಂದು ಸಿನಿಮಾದಲ್ಲಿಯೂ ವಿಭಿನ್ನವಾಗಿ ಕಾಣಿಸಿಕೊಳ್ಳುವ ಹುಚ್ಚು. ಹಾಗಾಗಿ ಆಗಾಗ್ಗೆ ಕೇಶವಿನ್ಯಾಸವನ್ನು ಬದಲಾಯಿಸಿಕೊಳ್ಳುವ ರೂಢಿ ಇದೆ. ಆದರೆ ನನ್ನ ಹೆಂಡತಿಗೆ ಅದು ಇಷ್ಟವಾಗುವುದಿಲ್ಲ. ಅವಳಿಗೆ ಒಂದು ಸ್ಟೈಲ್‌ ಇಷ್ಟವಾಯಿತೆಂದರೆ ಹಾಗೆ ನಾನು ಇರಬೇಕೆಂದು ಬಯಸುತ್ತಾಳೆ. ‘ನೀನಾದೆನಾ’ ಸಿನಿಮಾಕ್ಕಾಗಿ ನಾನು ಕ್ಲೀನ್‌ ಶೇವ್ ಮಾಡಿದ್ದೆ. ಆಗ ಒಂದು ವಾರ ಅವಳು ಸರಿಯಾಗಿ ನನ್ನ ಮುಖವನ್ನೇ ನೋಡಿರಲಿಲ್ಲ. ಹಾಗಾಗಿ ಕೇಶವಿನ್ಯಾಸ ಬದಲಾಯಿಸುವಾಗ ಸ್ವಲ್ಪ ಹೆಂಡತಿ ಬಗ್ಗೆಯೂ ಯೋಚಿಸುತ್ತೇನೆ.

* ದಿನದ ಎಷ್ಟು ಗಂಟೆಯನ್ನು ಸಾಮಾಜಿಕ ಜಾಲತಾಣದಲ್ಲಿ ಕಳೆಯುತ್ತೀರಿ?
ತುಂಬಾ ಕಡಿಮೆ ಬಳಸುತ್ತೇನೆ. ಸ್ನೇಹಿತರೆಲ್ಲ ಸೋಷಿಯಲ್‌ ಮೀಡಿಯಾದಲ್ಲಿ ಕ್ರಿಯಾಶೀಲನಾಗಿರು ಎಂದು ಹೇಳುತ್ತಲೇ ಇರುತ್ತಾರೆ. ಆದರೆ ನನಗೇನೋ ಅದನ್ನು ಹೆಚ್ಚು ಬಳಸುವುದು ಇಷ್ಟವಾಗುವುದಿಲ್ಲ. ಅಲ್ಲಿ ನಡೆಯುವ ಗಲಾಟೆ, ಗೊಂದಲಗಳನ್ನು ನೋಡುವಾಗ ಯಾಕೆ ಸುಮ್ಮನೆ ತಲೆನೋವು ಎನಿಸುತ್ತದೆ. ನಾವೇನೊ ಹೇಳಿ ಅದನ್ನು ಇನ್ನೊಬ್ಬರು ಮತ್ತೊಂದು ಅರ್ಥ ಮಾಡಿಕೊಂಡು ಇನ್ನೇನೋ ಆಗುವುದು ಏಕೆ ಎಂಬ ಕಾರಣಕ್ಕೆ ನಾನು ಅದರಿಂದ ದೂರವೇ ಇರುತ್ತೇನೆ. ಸಿನಿಮಾದ ಪ್ರಚಾರಕ್ಕೆ, ಹಬ್ಬದ ಸಂದರ್ಭದಲ್ಲಿ ಜನರಿಗೆ ಶುಭಾಶಯ ತಿಳಿಸಲು ಮಾತ್ರವೇ ಬಳಸುತ್ತೇನೆ.

* ಯಾರನ್ನು ಕಂಡರೆ ನಗು ಬರುತ್ತದೆ?
ನಾಟಕೀಯವಾಗಿ ನಡೆದುಕೊಳ್ಳುವವರನ್ನು ಕಂಡರೆ ನನಗೆ ತಮಾಷೆ ಎನಿಸುತ್ತದೆ. ಅವರ ಬಗ್ಗೆ ಮಿಮಿಕ್ರಿ ಮಾಡಿ ಸ್ನೇಹಿತರನ್ನು ನಗಿಸುತ್ತಿರುತ್ತೇನೆ. ಎಲ್ಲರೂ ಸಾಧಾರಣ ಮನುಷ್ಯರೇ, ಆದರೆ ಕೆಲವರು ತುಂಬಾ ನಾಟಕೀಯವಾಗಿ ಜೀವನ ನಡೆಸುತ್ತಾರೆ. ಅಂಥವರನ್ನು ಕಂಡರೆ ನನಗೆ ಸಿಕಾಪಟ್ಟೆ ನಗು ಬರುತ್ತದೆ. ಆದರೆ ಅವರ ಎದುರಿಗೆ ನಗುವುದಿಲ್ಲ. ಆಮೇಲೆ ಸ್ನೇಹಿತರ ಬಳಿ ಹೇಳಿಕೊಂಡು ನಗುತ್ತೇನೆ.

* ಗೋವಾದಲ್ಲಿ ದಾರಿ ತಪ್ಪಿ ಒದ್ದಾಡಿದ್ದರಂತೆ?
ವಿವಾಹ ವಾರ್ಷಿಕೋತ್ಸವದ ಆಚರಣೆಗೆ ಗೋವಾಕ್ಕೆ ಹೋದಾಗ ನಡೆದ ಘಟನೆಯಿದು.   ನಾನು ಬೆಳಿಗ್ಗೆ ಸಮುದ್ರದ ಬಳಿ ಜಾಗಿಂಗ್‌ಗೆಂದು ಹೋಗಿದ್ದೆ. ಎಷ್ಟು ದೂರ ಹೋಗಿದ್ದೆನೆಂದರೆ, ಎಲ್ಲಿದ್ದೇನೆ ಎಂಬ ಪರಿವೆಯೇ ನನಗೆ ಇರಲಿಲ್ಲ. ಗೂಗಲ್‌ ಮ್ಯಾಪ್ ಹಾಕಿಕೊಂಡು ನೋಡಿದರೆ ನನ್ನ ಹೋಟೆಲ್‌ನಿಂದ ಕಾರಿನಲ್ಲಿ ಹೋದರೆ ಅರ್ಧ ಗಂಟೆ ಆಗುವಷ್ಟು ದೂರದಲ್ಲಿದ್ದೆ. ಅಲ್ಲಿಂದ ಮ್ಯಾಪ್‌ ನೋಡಿಕೊಂಡು ನಡೆದು ಬರುತ್ತಿದ್ದೆ. ಆಗ ದಾರಿ ಮಧ್ಯೆ ಕನ್ನಡದ ಹುಡುಗರು ಸಿಕ್ಕರು. ಅವರು ಬೈಕ್‌ನಲ್ಲಿ ನನ್ನ ಹೋಟೆಲ್‌ಗೆ ಬಿಟ್ಟು ಹೋದರು.

* ಹುಡುಗಿಯರನ್ನು ಕಂಡರೆ ತುಂಬಾ ಭಯವಂತೆ?
ಕಾಲೇಜಿನಲ್ಲಿದ್ದಾಗ ಹುಡುಗಿಯರನ್ನು ಕಂಡಾಗ ತುಂಬಾ ಭಯವಾಗುತ್ತಿತ್ತು. ಅವರ ಜೊತೆ ಮಾತನಾಡುವಾಗ ಕೈಕಾಲು ನಡುಗುತ್ತಿತ್ತು. ಆದರೆ ಈಗ ಅಷ್ಟೊಂದು ಭಯವಿಲ್ಲ.ಆರಾಮವಾಗಿ ಮಾತನಾಡುತ್ತೇನೆ. ನಾನು ಚಿಕ್ಕವನಿದ್ದಾಗ ತುಂಬಾ ದಪ್ಪಗಿದ್ದೆ. ಹಾಗಾಗಿ ಎಲ್ಲ ರೇಗಿಸುತ್ತಿದ್ದರು. ಬಹುಶಃ ಆ ಭಯಕ್ಕೆ ಹಿಂಜರಿಕೆಯೇ ಕಾರಣವಿರಬಹುದು.

* ಕಾಲೇಜಿನಲ್ಲಿ ನಿಯಮವನ್ನು ನೀವು ಮೀರಿದ್ದೇ ಇಲ್ಲವಂತೆ...
ಕಾಲೇಜಿನ ನಿಯಮಗಳಿಗೆ ಬದ್ಧನಾಗಿರುವುದರ ಜೊತೆಗೆ ನನ್ನ ಗೆಳೆಯರು ನಿಯಮವನ್ನು ಪಾಲಿಸುವಂತೆ ನೋಡಿಕೊಳ್ಳುತ್ತಿದ್ದೆ. ಅಕಸ್ಮಾತ್‌ ಯಾರಾದರೂ ನಿಯಮಗಳನ್ನು ತಪ್ಪಿದರೆ ಅಧ್ಯಾಪಕರ ಬಳಿ ಅವರ ಬಗ್ಗೆ ದೂರುತ್ತಿದ್ದೆ. ಇದೇ ಕಾರಣಕ್ಕೆ ಬಹಳಷ್ಟು ಸ್ನೇಹಿತರು ನನ್ನನ್ನು ಬೈಯ್ದುಕೊಂಡಿದ್ದೂ ಇದೆ.

* ನಿಮ್ಮ ಲವ್‌ಸ್ಟೋರಿ ಪ್ರಾರಂಭಗೊಂಡಿದ್ದು ಹೇಗೆ?
ಇಮ್ರಾನ್‌ ಸರ್‌ ಬಳಿ ನೃತ್ಯ ಕಲಿಯಲು ಇಬ್ಬರು ಹೋಗುತ್ತಿದ್ದೆವು. ಆಗಲೇ ಮೊದಲ ಬಾರಿಗೆ ಇಬ್ಬರ ಭೇಟಿಯಾಗಿದ್ದು. ಆಗ ನಾನು ಒಂಬತ್ತನೇ ತರಗತಿಯಲ್ಲಿದ್ದೆ. ಇಬ್ಬರೂ ಒಳ್ಳೆ ಸ್ನೇಹಿತರಾಗಿದ್ದೆವು. ಇತ್ತೀಚೆಗೆ ಮನೆಯಲ್ಲಿ ಮದುವೆ ವಿಷಯ ಪ್ರಸ್ತಾಪವಾದಾಗ ನನಗೆ ಅವಳು ಒಳ್ಳೆಯ ಜೋಡಿ ಎನಿಸಿತು. ಹೀಗೆ ಒಮ್ಮೆ ಮಾತನಾಡುವಾಗ ಇದೇ ವಿಷಯದ ಬಗ್ಗೆ ರೇಗಿಸುತ್ತಿದ್ದೆ. ಅವಳು ಪರೋಕ್ಷವಾಗಿ ಒಪ್ಪಿಗೆ ಸೂಚಿಸಿದಳು. ಹೀಗೆ ಮುಂದುವರೆಯಿತು ನಮ್ಮ ಪ್ರೇಮ ಪಯಣ.       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT