ADVERTISEMENT

ಮಹಿಳಾ ಕೆಪಿಎಲ್‌ನಲ್ಲಿ ನಾನೂ ಆಡುವೆ...

ಬಳ್ಳಾರಿ ಟಸ್ಕರ್ಸ್‌ ರಾಯಭಾರಿ ಶರ್ಮಾಳಾ ಮಾಂಡ್ರೆ ಮಾತಿನ ಬ್ಯಾಟಿಂಗ್‌

ಪ್ರಮೋದ ಜಿ.ಕೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಮಹಿಳಾ ಕೆಪಿಎಲ್‌ನಲ್ಲಿ ನಾನೂ ಆಡುವೆ...
ಮಹಿಳಾ ಕೆಪಿಎಲ್‌ನಲ್ಲಿ ನಾನೂ ಆಡುವೆ...   

ನೀನು ಬಂದ ಮೇಲೆ ತಾನೇ ಇಷ್ಟು ಚೆಂದ ಈ ಬಾಳು?
ನೀನೆ ತಾನೆ ಹೇಳಿಕೊಟ್ಟೆ ಪ್ರೀತಿಸಲು
ಕಣ್ಗಳು ಹಿಂದೆಂದೂ ಕಾಣದ ಹೊಸದೊಂದು
ಲೋಕಕ್ಕೆ ನನ್ನನ್ನು ನೀ ಸೆಳೆದೆ...

ಗೋಲ್ಡನ್‌ ಸ್ಟಾರ್ ಗಣೇಶ್ ಜೊತೆ ಅಂಜಲಿಯಾಗಿ ನಟಿಸಿ ಹೀಗೆ ಸುಮಧುರ ಹಾಡಿಗೆ ಹೆಜ್ಜೆ ಹಾಕಿರುವ ಮುದ್ದುಮೊಗದ ನಟಿ ಶರ್ಮಳಾ ಮಾಂಡ್ರೆ ಈಗ ಕ್ರಿಕೆಟ್ ಪ್ರೀತಿಯ ಬೆನ್ನು ಬಿದ್ದಿದ್ದಾರೆ.

ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿರುವ ಶರ್ಮಿಳಾ ಮೊದಲು ಸೆಲೆಬ್ರೆಟಿ ಕ್ರಿಕೆಟ್‌ ಲೀಗ್‌ (ಸಿಸಿಎಲ್‌) ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ರಾಯಭಾರಿಯಾಗಿದ್ದರು. ಅವರಲ್ಲಿನ ಆಸಕ್ತಿ ಕಂಡ ಬಳ್ಳಾರಿ ಫ್ರಾಂಚೈಸ್‌ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟೂರ್ನಿಗೆ ಬಳ್ಳಾರಿ ಟಸ್ಕರ್ಸ್‌ ತಂಡಕ್ಕೆ ರಾಯಭಾರಿಯನ್ನಾಗಿ ನೇಮಿಸಿಕೊಂಡಿದೆ. ಶರ್ಮಿಳಾ ಜೊತೆ ಇನ್ನೊಬ್ಬ ನಟಿ ಜೆನ್ನಿಫರ್‌ ಕೊತ್ವಾಲ್‌ ಕೂಡ ರಾಯಭಾರಿಯಾಗಿ ಹುಬ್ಬಳ್ಳಿಗೆ ಬಂದಿದ್ದರು.

ADVERTISEMENT

ಹುಬ್ಬಳ್ಳಿಯ ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೆಪಿಎಲ್‌ ಪಂದ್ಯಗಳ ವೇಳೆ ಈ ನಟಿಯರನ್ನು ನೋಡಲು, ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು. ಮೇಲಿಂದ ಮೇಲೆ ಮಳೆ ಬರುತ್ತಿರುವುದರಿಂದ ಇಲ್ಲಿನ ವಾತಾವರಣ ಕೂಡ ತಂಪಾಗಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ಶರ್ಮಿಳಾ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಕೃಷ್ಣ, ನವಗೃಹ, ವೆಂಕಟ ಇನ್‌ ಸಂಕಟ, ಸ್ವಯಂವರ, ಧನ್ ಧನಾಧನ್‌ ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕ್ರಿಕೆಟ್‌ ಪ್ರೀತಿಯ ಜೊತೆಗೆ ನಟನೆಯನ್ನು ಸರಿದೂಗಿಸಿಕೊಂಡು ಬಂದಿದ್ದಾರೆ. ತಮ್ಮ ಬದುಕಿನಲ್ಲಿ ಕ್ರಿಕೆಟ್‌ ಯಾಕೆ ಮುಖ್ಯ ಎನ್ನುವುದರ ಬಗ್ಗೆ ಅವರು ‘ಮೆಟ್ರೊ’ ಜೊತೆ ಮಾತನಾಡಿದ್ದಾರೆ.

* ಕೆಪಿಎಲ್‌ ಪಂದ್ಯಗಳಿಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿತ್ತು. ಹುಬ್ಬಳ್ಳಿಯಲ್ಲಿ ಹೇಗಿದೆ?

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಪಿಎಲ್‌ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ. ಮೈಸೂರಿನಲ್ಲಿ ಪಂದ್ಯಗಳನ್ನು ನೋಡುವ ಜೊತೆ ಸುತ್ತಮುತ್ತಲಿನ ಅನೇಕ ಸ್ಥಳಗಳನ್ನು ವೀಕ್ಷಿಸಿದ್ದೆ. ಅಲ್ಲಿ ನಿತ್ಯ ಸಾವಿರಾರು ಜನ ಬಂದು ಪಂದ್ಯ ನೋಡುತ್ತಿದ್ದರು. ಹುಬ್ಬಳ್ಳಿಯಲ್ಲಿಯೂ ಉತ್ತಮ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಲ್ಲಿನ ಆಹ್ಲಾದಕರ ವಾತಾವರಣ ತುಂಬಾ ಖುಷಿ ನೀಡಿದೆ.

* ಮೊದಲ ಸಲ ಕೆಪಿಎಲ್‌ ತಂಡಕ್ಕೆ ರಾಯಭಾರಿಯಾಗಿದ್ದೀರಿ...

ಬಾಲ್ಯದಿಂದಲೂ ಕ್ರಿಕೆಟ್‌ ಬಗ್ಗೆ ಆಸಕ್ತಿ ಇದೆ. ಗಲ್ಲಿಯಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದೇನೆ. ನನ್ನ ನೆಚ್ಚಿನ ಆಟದ ಭಾಗವಾಗಿರುವುದಕ್ಕೆ ಸಂತೋಷವಾಗಿದೆ. ಐಪಿಎಲ್‌ ಮತ್ತು ಭಾರತ ತಂಡದಲ್ಲಿ ಸ್ಥಾನ ಗಳಿಸಲು ಯುವ ಆಟಗಾರರಿಗೆ ಕೆಪಿಎಲ್‌ ಅತ್ಯುತ್ತಮ ವೇದಿಕೆ. ಎಲ್ಲಾ ತಂಡಗಳಲ್ಲಿಯೂ ಹೊಸ ಆಟಗಾರರು ಇದ್ದಾರೆ. ಈ ಟೂರ್ನಿಯಲ್ಲಿ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಆಟಗಾರರ ಗುಣಮಟ್ಟ ಕೂಡ ಹೆಚ್ಚಾಗುತ್ತಿದೆ.

* ಕಾಲೇಜು ದಿನಗಳಲ್ಲಿ ನೀವು ಕ್ರಿಕೆಟ್‌ ಆಡಿದ ನೆನಪುಗಳ ಬಗ್ಗೆ

ಇದುವರೆಗೆ ಓದಿದ್ದು ಮಹಿಳಾ ಶಾಲಾ, ಕಾಲೇಜುಗಳಲ್ಲಿ. ಆದ್ದರಿಂದ ಅಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಚಟುವಟಿಕೆಗಳು ಇರುತ್ತಿರಲಿಲ್ಲ. ಆದರೆ ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ನಮ್ಮ ಮನೆಯ ಗಲ್ಲಿಯಲ್ಲಿ ಸಹೋದರರ ಜೊತೆ, ಮನೆ ಅಕ್ಕಪಕ್ಕದವರು ಮತ್ತು ಗೆಳೆಯರ ಜೊತೆ ಸಾಕಷ್ಟು ಕ್ರಿಕೆಟ್‌ ಆಡಿದ್ದೇನೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದಾಗ ಹೋಗುತ್ತೇನೆ. ಅದೇ ಪ್ರೀತಿಯಿಂದ ಕೆಪಿಎಲ್‌ನ ಪ್ರತಿ ಪಂದ್ಯಗಳನ್ನು ನೋಡುತ್ತೇನೆ.

* ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು?

ಸಚಿನ್‌ ತೆಂಡೂಲ್ಕರ್‌

* ಮಹಿಳೆಯರಿಗೋಸ್ಕರ ವಿದೇಶದಲ್ಲಿ ಐಪಿಎಲ್‌ ಮಾದರಿಯಲ್ಲಿ ಲೀಗ್‌ಗಳು ನಡೆಯುತ್ತವೆ. ಅದೇ ರೀತಿ ಭಾರತದಲ್ಲಿ ಟೂರ್ನಿ ನಡೆಯುವ ಅಗತ್ಯವಿದೆಯೇ?

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಸಾಕಷ್ಟು ಬೆಳವಣಿಗೆಯಾಗಿದೆ. ವಿಶ್ವಕಪ್‌ ಟೂರ್ನಿಯಲ್ಲಿ ನಮ್ಮ ತಂಡದವರು ಫೈನಲ್‌ ತಲುಪಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈ ಟೂರ್ನಿಯ ಬಳಿಕ ಅನೇಕ ಯುವತಿಯರಲ್ಲಿ ತಾವೂ ಕ್ರಿಕೆಟ್‌ ಆಡಬೇಕು ಎನ್ನುವ ಆಸೆ ಬೆಳೆದಿದೆ. ಆಟಗಾರ್ತಿಯರಿಗೂ ಈಗ ಹೆಚ್ಚು ಅವಕಾಶಗಳು ಸಿಗುತ್ತಿವೆ. ಮಹಿಳೆಯರಿಗೂ ಐಪಿಎಲ್‌ ನಡೆದರೆ ಮಹಿಳಾ ಕ್ರಿಕೆಟ್‌್ ಬೆಳವಣಿಗೆಯ ವೇಗ ಹೆಚ್ಚಾಗುತ್ತದೆ. ಈ ಪ್ರಶ್ನೆಯನ್ನು ನೀವು ಯಾವಾಗ ಕೇಳಿದರೂ ಬೇಕೇ ಬೇಕು ಎನ್ನುವುದೇ ನನ್ನ ಉತ್ತರವಾಗಿರುತ್ತದೆ. ರಾಜ್ಯದ ಕೆಲ ಆಟಗಾರ್ತಿಯರನ್ನು ಭೇಟಿಯಾಗಿದ್ದೇನೆ. ಅವರೆಲ್ಲರೂ ಉತ್ತಮ ಪ್ರತಿಭೆ ಇರುವವರು. ಅವರಿಗೆಲ್ಲಾ ಅವಕಾಶ ಸಿಗಬೇಕು. ಮಹಿಳಾ ಕೆಪಿಎಲ್‌ ಆರಂಭವಾದರೆ ನಾನೂ ಆ ತಂಡದಲ್ಲಿ ಆಡುವೆ. ಉತ್ತಮ ಬೌಲರ್‌ ಆಗುವೆ.

* ಕ್ರಿಕೆಟ್ ಬಿಟ್ಟು ಬೇರೆ ಯಾವ ಕ್ರೀಡೆಗಳನ್ನು ಆಡುತ್ತೀರಿ?

ಕ್ರಿಕೆಟ್‌ಗೆ ಯಾವಾಗಲೂ ಮೊದಲ ಆದ್ಯತೆ. ಅದನ್ನು ಬಿಟ್ಟರೆ ಬ್ಯಾಸ್ಕೆಟ್‌ಬಾಲ್‌ ಮತ್ತು ಬ್ಯಾಡ್ಮಿಂಟನ್‌ ಆಡುತ್ತೇನೆ.

* ಕೆಪಿಎಲ್‌ ಟೂರ್ನಿಯಲ್ಲಿ ನಿಮ್ಮ ನೆಚ್ಚಿನ ಆಟಗಾರ ಯಾರು?

ಬಳ್ಳಾರಿ ತಂಡದ ನಾಯಕ ಅಮಿತ್‌ ವರ್ಮಾ. ಆಟದ ಬಗ್ಗೆ ಅವರು ಹೊಂದಿರುವ ಬದ್ಧತೆ ಮತ್ತು ಕಠಿಣ ಪರಿಶ್ರಮ ಪಡುವ ರೀತಿ ತುಂಬಾ ಇಷ್ಟ. ಅವರು ತಂಡದ ಕಿರಿಯ ಆಟಗಾರರಿಗೆ ಸ್ಫೂರ್ತಿ ತುಂಬುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.