ADVERTISEMENT

ಮಾತು ಎಂಬ ಆಭರಣ

ಪಶ್ಚಿಮದ ಅರಿವು /ಹಾರಿತಾನಂದ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST

ಭರ್ತೃಹರಿಯ ನೀತಿಶತಕದ ಪದ್ಯವೊಂದು ಹೀಗಿದೆ:

ಕೇಯೂರಾ ನ ವಿಭೂಷಯಂತಿ ಪುರುಷಂ
ಹಾರಾ ನ ಚಂದ್ರೋಜ್ಜ್ವಾಲಾಃ

ನ ಸ್ನಾನಂ ನ ವಲೇಪನಂ ನ ಕುಸುಮಂ
ನಾಲಂಕೃತಾ ಮೂರ್ಧಜಾಃ|

ADVERTISEMENT

ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ
ಸಂಸ್ಕೃತಾ ಧಾರ್ಯತೇ

ಕ್ಷೀಯಂತೇ ಖಲು ಭೂಷಣಾನಿ ಸತತಂ
ವಾಗ್ಭೂಷಣಂ ಭೂಷಣಮ್‌||

ಇದರ ತಾತ್ಪರ್ಯ: ‘ಕಂಕಣಗಳಾಗಲೀ, ಚಂದ್ರನಂತೆ ಬೆಳಕನ್ನು ಸೂಸುವ ಹಾರಗಳಾಗಲೀ, ಸ್ನಾನವಾಗಲೀ, ಗಂಧ ಮುಂತಾದವುಗಳ ಲೇಪನವಾಗಲೀ, ಹೂವಾಗಲೀ, ಅಲಂಕರಿಸಲ್ಪಟ್ಟ ಕೂದಲುಗಳಾಗಲೀ ಮನುಷ್ಯನನ್ನು ಅಲಂಕರಿಸುವುದಿಲ್ಲ. ಸಂಸ್ಕಾರದಿಂದ ಕೂಡಿದ ಮಾತುಗಳನ್ನು ಆಡುವುದೇ ಮನುಷ್ಯನಿಗೆ ಅಲಂಕಾರ. ನಾವು ಧರಿಸುವ ಒಡವೆಗಳೆಲ್ಲವೂ ನಾಶವಾಗುವಂಥವೇ. ಆದರೆ ಮಾತು ಎಂಬ ಅಲಂಕಾರ ಮಾತ್ರವೇ ನಾಶವಾಗದೇ ಇರುವಂಥದು.’

ಮಾತಿನ ಸೊಗಸಿನ ಬಗ್ಗೆ ಸೊಗಸಾದ ಮಾತುಗಳಿವು.

ಮಾತಿಲ್ಲದೆ ನಮ್ಮ ಜೀವನವೇ ಇಲ್ಲ. ಮಾತೇ ನಮ್ಮ ಪ್ರಪಂಚವನ್ನು ಕ್ಷಣ ಕ್ಷಣವೂ ಸೃಷ್ಟಿಸುತ್ತಿರುವ ‘ಬ್ರಹ್ಮ’ ಎಂದರೂ ತಪ್ಪಲ್ಲ. ಇಷ್ಟು ಶಕ್ತಿವಂತವಾದ ಮಾತನ್ನು ನಾವು ಅಷ್ಟೇ ಎಚ್ಚರಿಕೆಯಿಂದಲೂ ಹೊಣೆಗಾರಿಕೆಯಿಂದಲೂ ಬಳಸುತ್ತಿದ್ದೇವೆಯೆ?

ಬೆಂಗಳೂರಿನ ಟ್ರಾಫಿಕ್‌ನ ಮಧ್ಯೆ ಒಮ್ಮೆ ಸಿಕ್ಕಿಹಾಕಿಕೊಂಡರೆ ಮಾತು ಹೇಗೆಲ್ಲ ವಿಕೃತಸ್ಥಿತಿಯನ್ನು ಪಡೆಯುತ್ತಿದೆ ಎಂಬುದು ಮನದಟ್ಟಾಗುತ್ತದೆ. ಕಿರಿದಾದ ರಸ್ತೆಗಳು; ಒಂದರ ಮೈಮೇಲೆಯೇ ಏರಿಬರುವಷ್ಟು ವಾಹನಗಳ ಪ್ರವಾಹ; ರಸ್ತೆಗಳ ಸ್ಥಿತಿ ದೇವರಿಗೇ ಪ್ರೀತಿ; ಸಂಚಾರನಿಯಮಗಳನ್ನು ಪಾಲಿಸುವುದೇ ಅಪರಾಧ – ಎಂಬ ಮನಃಸ್ಥಿತಿಯಲ್ಲಿ ವಾಹನಗಳನ್ನು ಓಡಿಸುವವರು ಹಲವರು; ಇದರ ಜೊತೆ ಎಲ್ಲರಿಗೂ ಧಾವಂತ ಬೇರೆ. ಇಷ್ಟೊಂದು ಅಡ್ಡಿ–ಆತಂಕಗಳ ನಡುವೆ ವಾಹನಗಳನ್ನು ಓಡಿಸುವುದೇ ಅಶ್ವಮೇಧಯಾಗ ಮಾಡಿದಷ್ಟು ಶ್ರಮದಾಯಕ. ಸರ್ಕಸ್‌ನಲ್ಲಿ ಓಡಿಸುವಂತೆ ವಾಹನಗಳನ್ನು ಚಲಿಸಬೇಕು. ಹೀಗೆ ವಾಹನವನ್ನು ನಡೆಸುವಾಗ ಅಕಸ್ಮಾತ್‌ ಏನಾದರೊಂದು ತೊಂದರೆ ಎದುರಾಗಬಹುದು – ವಾಹನ ನಿಂತುಹೋಗಬಹುದು, ಮುಂದೆ ಹಳ್ಳ ಇರುವ ಕಾರಣ ನಿಧಾನವಾಗಬಹುದು, ಮುಂದೆಯೋ ಹಿಂದೆಯೋ ಯಾರೋ ಬೇರೊಬ್ಬ ವಾಹನಸವಾರ ಮಾಡುವ ಎಡವಟ್ಟಿನಿಂದ ನಮ್ಮ ವಾಹನ ಇನ್ಯಾರ ವಾಹನಕ್ಕೋ ತಾಕಿದಂತೆ ಆಗಬಹುದು. ಆಗ ಅಕ್ಕಪಕ್ಕದ ವಾಹನಸವಾರರು ಆಡುವ ಮಾತುಗಳು ಎಷ್ಟು ಸಂಸ್ಕಾರಹೀನವಾಗಿರುತ್ತವೆಯೆಂದರೆ, ಏಕಾದರೂ ಮನುಷ್ಯನಿಗೆ ಮಾತನ್ನು ಆಡುವ ಶಕ್ತಿ ಇದೆಯೋ ಎಂದೆನಿಸಿಬಿಡುತ್ತದೆ. ಮಾತಿಗೆ ಅಪಚಾರ ಆಗುವಂಥ ಮಾತುಗಳನ್ನೇ ಆ ಸಂದರ್ಭದಲ್ಲಿ ಕೇಳುವಂಥದ್ದು!

ನಾವಾಡುವ ಮಾತು ನಮ್ಮ ಜೀವನಕ್ಕೆ ಪೂರಕವಾಗಿ ಒದಗಬೇಕು. ಹೀಗಾಗಲು ನಾವು ಮಾತನ್ನು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಆದರೆ ಮಾತನ್ನು ನಾವು ಹೆಚ್ಚಿನ ಸಂದರ್ಭದಲ್ಲಿ ದುರ್ಬಳಕೆ ಮಾಡುತ್ತಿರುತ್ತೇವೆ. ಸುಳ್ಳನ್ನು ಹೇಳುತ್ತಿರುತ್ತೇವೆ; ಬೇರೆಯವರಿಗೆ ನೋವಾಗುವಂಥ ಮಾತುಗಳನ್ನೇ ಆಡುತ್ತಿರುತ್ತೇವೆ; ಇತರರಿಗೆ ಕೇಡಾಗಲಿ ಎಂದು ಬಯಸಿ ಮಾತನಾಡುತ್ತಿರುತ್ತೇವೆ; ಅಶ್ಲೀಲವಾಗಿ ಮಾತನಾಡುತ್ತಿರುತ್ತೇವೆ; ಹೊರಗೆ ನಯವಾಗಿ ಮಾತನಾಡುತ್ತಿದ್ದರೂ ಒಳಗೆ ಕಟುವಾಗಿರುತ್ತೇವೆ. ಹೀಗಾಗಿ ನಮ್ಮ ಮಾತಿನ ಮೂಲಕವೇ ಮಾತನ್ನು ನಾವು ಹಿಂಸಿಸುತ್ತಿರುತ್ತೇವೆ.

ಭರ್ತೃಹರಿ ಹೇಳುತ್ತಿರುವುದು ಇದನ್ನೇ. ನಮ್ಮ ಆಸ್ತಿ–ಅಂತಸ್ತು ನಮ್ಮ ವ್ಯಕ್ತಿತ್ವಕ್ಕೆ ಅಲಂಕಾರವಲ್ಲ; ನಾವು ತೊಟ್ಟ ಉಡುಗೆ ನಮ್ಮ ವ್ಯಕ್ತಿತ್ವದ ಕುರುಹಲ್ಲ; ನಾವು ಪಡೆದ ಶಿಕ್ಷಣ ನಮ್ಮ ವಿವೇಕದ ಮಾನದಂಡವಲ್ಲ. ನಾವು ಒಬ್ಬರ ಜೊತೆ ಹೇಗೆ ಮಾತನಾಡುತ್ತೇವೆ – ಎನ್ನುವುದೇ ನಮ್ಮ ವ್ಯಕ್ತಿತ್ವದ ದಿಟವಾದ ಅಳತೆಗೋಲು.

ನಾವು ತತ್‌ಕ್ಷಣಕ್ಕೆ ಆಡುವ ಮಾತು ಅದು ಆ ಕ್ಷಣದಲ್ಲಿಯೇ ಹುಟ್ಟಿಬರುವಂಥದ್ದಲ್ಲ. ಅದು ಈ ಕ್ಷಣ ಹೊರಗೆ ಪ್ರಕಟವಾಗಿರ ಬಹುದು. ಆದರೆ ಅದು ಹಾಗೆ ಹೊರಬರುವ ಮೊದಲು ನಮ್ಮ ಅಂತರಂಗದ ಭಾವ–ಬುದ್ಧಿಗಳಲ್ಲಿ ಸಾಕಷ್ಟು ಸಮಯ ಸಂಸ್ಕಾರವನ್ನು ಪಡೆದಿರುತ್ತದೆ. ನಾವು ಸದಾ ಯಾವ ರೀತಿಯಲ್ಲಿ ಚಿಂತನೆ ಮಾಡುತ್ತಿರುತ್ತೇವೆಯೋ ಅದು ಪಕ್ವವಾಗಿ ಹದಗೊಂಡು ಆ ಕ್ಷಣದಲ್ಲಿ ಅಭಿವ್ಯಕ್ತವಾಗಿರುತ್ತದೆ.

ನಾವು ನಿರಂತರವಾಗಿ ಒಳಿತಾದುದನ್ನೇ ಕುರಿತು ಯೋಚಿಸುತ್ತಿದ್ದರೆ ಎಂಥ ಸಂದರ್ಭದಲ್ಲೂ ನಮ್ಮ ಮಾತು ಹಿತವಾಗಿಯೇ ಪ್ರಕಟವಾಗುತ್ತದೆ; ಯಾವಾಗಲೂ ದುಷ್ಟತನದ ಲೆಕ್ಕಾಚಾರದಲ್ಲಿ ನಮ್ಮ ಮನಸ್ಸು ಮುಳುಗಿದ್ದರೆ ನಮ್ಮ ಮಾತುಗಳು ಕೂಡ ಕೇಡಿನ ದುರ್ಗಂಧದಿಂದಲೇ ಹೊರಹೊಮ್ಮುತ್ತವೆ. ಹೀಗಾಗಿ ನಮ್ಮ ವ್ಯಕ್ತಿತ್ವಕ್ಕೂ ನಾವಾಡುವ ನಮ್ಮ ಮಾತುಗಳಿಗೂ ನೇರ ನಂಟಿದೆ. ಮಾತು ಆಡುವ ಮೊದಲು ನಾವಿದನ್ನು ಮರೆಯಬಾರದಷ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.