ADVERTISEMENT

ಮಾಸದ ಮಾರ್ಚ್

ಮಾರ್ಚ್ ಎಂದರೆ ವಸಂತ ಋತುವಿನ ಚೈತ್ರಮಾಸ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 19:30 IST
Last Updated 15 ಮಾರ್ಚ್ 2017, 19:30 IST
ಚಿತ್ರಮಯ ಮಾಸ
ಮಾರ್ಚ್ ಎಂದರೆ ಮೊದಲು ನೆನಪಾಗುವುದು ನಾವಿದ್ದ ಮಾವಿನಹಳ್ಳಿಯ (ಈಗಿನ ಮಾವಳ್ಳಿ, ಬೆಂಗಳೂರು) ನಮ್ಮ ಮನೆ ಎದುರಿಗೆ ಆಗ ತಾನೆ ತಳಿರೊಡೆಯುತ್ತಿದ್ದ ಮಾಮರ. ‘ಮಾಮರ ಚಿಗುರುತಿದೆ, ಹಣ್ಣೆಲೆ ಉದುರುತಿದೆ’ ಎಂಬ ಸಾಲು ನನ್ನ ಕಾವ್ಯಾನುಭವದ ಮೊದಲ ತೊದಲು.
 
ನಂತರದ ವರ್ಷಗಳಲ್ಲಿ ಮಾರ್ಚ್‌ನಲ್ಲಿ ಪ್ರೌಢಶಾಲೆಯ ಪರೀಕ್ಷೆಗಳಿಗಾಗಿ ಸಖತ್ ಉರುಹಚ್ಚುವಿಕೆ ಮತ್ತು ಕುಡುಮಿ ನಂ.1 ಪಟ್ಟಕ್ಕೆ ಪೈಪೋಟಿ, ಸೆಣಸಾಟ. ಆಗ ಗಿಡ ಮರಗಳೇಕೆ, ಮನುಷ್ಯರೂ ನಮಗೆ ಕಾಣುತ್ತಿರಲಿಲ್ಲ. ಬರೀ ಪರೀಕ್ಷೆ, ಪುಸ್ತಕಗಳು, ಮಾರ್ಗದರ್ಶಿಗಳು. ಮನದಲ್ಲಿ ಉಳಿಯುತ್ತಿದ್ದುದು ಕೇವಲ ಪದಗಳು, ಜಾಮಿಟ್ರಿಯ ಪ್ರಮೇಯಗಳು, ಬೀಜಗಣಿತದ ಬೀಜಾಕ್ಷರಗಳು a,b,c... x,y,z ಎಂಬ ಏಕಾಕ್ಷರೀ, ದ್ವೈಕ್ಷರೀ, ತ್ರೈಕ್ಷರೀ, ಚತುರಕ್ಷರೀ, ಪಂಚಾಕ್ಷರೀ ಮತ್ತು ಷಡಕ್ಷರೀ ಮಂತ್ರಗಳು.
 
ಕಾಲ ಮತ್ತೆ ಮುಂದಕ್ಕೆ ಮಾರ್ಚ್ ಫಾರ್ವರ್ಡ್‌ ಆದಾಗ, ಮೇಲಿನ ಅನುಭವಗಳ ಜೊತೆಜೊತೆಯಲ್ಲೇ, ಪ್ರಕೃತಿ ತಳಿರ ತಳೆದಂತೆ ಪ್ರೀತಿಯ ಗುಲಾಬಿ ಭಾವನೆಗಳು ಮೊಗ್ಗಾಗಿ ಮೂಡಿ, ಹೂವಾಗಿ ಅರಳಿ ಒಂದೆರಡು ದಿನದಲ್ಲಿಯೇ ದಿಕ್ಕುದೆಸೆಯಿಲ್ಲದೆ ಸೊರಗಿ, ಮಣ್ಣಿಗೊರಗಿದ್ದುಂಟು. ಅಂತೆಯೇ ಕಾಲೇಜು ಜೀವನ ಹೂವನದಂತೆ ಸಾಗಿತ್ತು.
 
ಬ್ಯಾಂಕ್ ಉದ್ಯೋಗಿಯಾದ ನಂತರವೂ 2–3 ವರ್ಷಕ್ಕೊಮ್ಮೆ ವರ್ಗಾವಣೆಯಾಗುವ ಪಾಡು. ಮಾರ್ಚ್‌ನಲ್ಲಿಯೇ ನಮ್ಮಗಳ ವರ್ಗಾವಣೆ ಪಟ್ಟಿ ಅಂತಿಮಗೊಳಿಸುತ್ತಾರೆ. ‘ಈ ಬಾರಿ ಯಾವೂರಿಗೆ?’ ಎಂಬುದು ನೆತ್ತಿ ಮೇಲಿನ ಕತ್ತಿ. ಅದಕ್ಕೆಂದೇ ಸಿಬ್ಬಂದಿ ವಿಭಾಗಕ್ಕೆ ಎಡತಾಕುವ ಪಡಿಪಾಟಲು. ನೀರು, ನೆರಳಿನ, ಮೂಲಭೂತ ಸೌಕರ್ಯಗಳ, ಉಗ್ರವಾದಿಗಳಿಲ್ಲದ ಸ್ಥಳಕ್ಕೆ ವರ್ಗಾವಣೆಯಾಗಲೆಂದು ಯೂನಿಯನ್ ಲೀಡರ್‌ಗಳಿಗೆ, ವಿಭಾಗದ ಅಧಿಕಾರಿಗಳಿಗೆ ಮತ್ತು ಮುಖ್ಯವಾಗಿ ದೇವರುಗಳಿಗೆ ಅಹೋ ರಾತ್ರಿಯ ಪ್ರಾರ್ಥನೆ ಸಲ್ಲಿಸುವುದು ಮಾರ್ಚ್‌ನ ಮಹದುದ್ಯೋಗ.
 
ಮತ್ತೆ ಕಾಲ ಮಾರ್ಚ್ ಫಾರ್ವರ್ಡ್‌ ಆದಂತೆ, ಮಕ್ಕಳು ಬೆಳೆದಂತೆ ಅವರನ್ನು ಪರೀಕ್ಷೆಗಳಿಗೆ ಸಜ್ಜುಗೊಳಿಸುವುದು, ಜೊತೆಜೊತೆಗೇ ನಮ್ಮ ಆಫೀಸಿನಲ್ಲಿನ ಪದೋನ್ನತಿಗಾಗಿ ಪರೀಕ್ಷೆಗಳಿಗೆ ಸ್ವತಃ ತಯಾರಾಗುವುದು ವರ್ತುಲಾಕಾರವಾಗಿ ನಡೆವ ಕಾರ್ಯಕ್ರಮ.
 
ಕಳೆದ ಕೆಲ ವರ್ಷಗಳಿಂದ ಬ್ಯಾಂಕುಗಳ ಲೆಕ್ಕಪತ್ರ ಚುಕ್ತಾ ಮತ್ತು ಬ್ಯಾಲೆನ್ಸ್ ಷೀಟ್ ತಯಾರಿಕೆಯೂ ಮಾರ್ಚ್ 31 ರಂದೇ ಆಗಬೇಕಾಗಿರುವುದರಿಂದ ಮತ್ತು ಅದಕ್ಕೆ ಅವಶ್ಯವಾದ ಪೂರ್ವಭಾವಿ ಸಿದ್ಧತೆಗಳನ್ನೂ ಮಾಡಬೇಕಾಗಿರುವುದರಿಂದ ಮಾರ್ಚ್ ಅಂದರೆ ಉದ್ವೇಗ, ಕಾತರ, ಆತುರ ಮತ್ತು ಆತಂಕದ ತಿಂಗಳಾಗಿದೆ. ಇಷ್ಟು ಸಾಲದೆ ಸಾಲ ವಸೂಲಾತಿಯೂ ಮಾರ್ಚ್‌ನಲ್ಲೇ ಆಗಬೇಕು. ಆಂತರಿಕ ಲೆಕ್ಕ ಪತ್ರಗಳ ಹೊಂದಾಣಿಕೆ (Tallying) ಆಗಬೇಕು. ಒಟ್ಟಿನಲ್ಲಿ ನಮ್ಮ ಕಾರ್ಯದಕ್ಷತೆ, ಕಾರ್ಯಕ್ಷಮತೆಯನ್ನು ಒರೆಗೆ ಹಚ್ಚುವ ತಿಂಗಳು ಇದು.
 
ಸಂತಸವೆಂದರೆ, ಮಾರ್ಚ್ 31ಕ್ಕೆ ವರ್ಗಾವಣೆಯ, ಲೆಕ್ಕಪತ್ರದ ವ್ಯವಹಾರಗಳೆಲ್ಲ ಮುಗಿದು, ನಮ್ಮ ಟೆನ್ಷನ್ ಗ್ರಾಫ್ ಇಳಿಮುಖವಾಗಿ ಎಲ್ಲರೂ ರಿಲಾಕ್ಸ್ ಮೂಡ್‌ಗೆ ಸಲ್ಲುತ್ತಾರೆ. ಅಷ್ಟರಲ್ಲೇ ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂಬ ಕವಿ ವಾಣಿಯಂತೆ ಯುಗಾದಿ ಬರುತ್ತದೆ.

ಹಬ್ಬದ ಒಬ್ಬಟ್ಟು ತಿಂದು, ಗಿಡಮರಗಳಂತೆ ನಾವೂ ಹೊಸಬಟ್ಟೆ ತೊಟ್ಟು, ಹೊಸ ವರ್ಷವನ್ನು ಸ್ವಾಗತಿಸುತ್ತೇವೆ. ‘ನವನವೋನ್ಮೇಷ’ ವ್ಯಕ್ತಿತ್ವ ಪಡೆದುಕೊಳ್ಳುತ್ತೇವೆ. ಮಾವಿನ ತಳಿರುತೋರಣಗಳಿಂದ ಮನೆ ಅಲಂಕೃತಗೊಳ್ಳುತ್ತದೆ. ಹಾಗೆಯೇ ಮನಸ್ಸೂ ಉಲ್ಲಾಸ, ಉತ್ಸಾಹ ಮತ್ತು ಸಂಭ್ರಮಗಳಿಂದ ಶೃಂಗಾರಗೊಳ್ಳುತ್ತದೆ.
 
ಮಾರ್ಚ್ ಎಂದರೆ ವಸಂತ ಋತುವಿನ ಚೈತ್ರಮಾಸ. ಅಂದರೆ ಪ್ರಕೃತಿ ಚಿತ್ರಮಯವಾಗಿರುವ ಮಾಸ. ನಮ್ಮ ಮನದಲ್ಲಿ ಕೋಗಿಲೆಯ ಕುಹೂ ಮಾರ್ದನಿಸುವ ಮಾಸ, ಮಾಸದ ಅನುಭವ ಚಿತ್ರಗಳನ್ನುಳಿಸುವ ಮಾಸ. 
 
ಮಾರ್ಚ್ ಎಂದರೆ ನಾವು ಮುಂದಿನ ಮೆಟ್ಟಿಲು ಏರುವ ಮಾಸ. ಮಾರ್ಚ್ ಎಂದರೆ ಮಾರ್ಚ್ ಫಾರ್ವರ್ಡ್‌. ಮುಂದೆ ನುಗ್ಗಿ ಅವಕಾಶಗಳ ಬಾಚುವ ಮಾಸ. ರೋಮನ್ ಕ್ಯಾಲೆಂಡರೊಂದರ ಪ್ರಕಾರ ಮಾರ್ಚ್, ವರ್ಷದ ಮೊದಲನೇ ತಿಂಗಳೂ ಹೌದು. 
-ವಿ. ಮಲ್ಲಿಕಾರ್ಜುನಯ್ಯ ಬೆಂಗಳೂರು
 
ಕಾಡಿದ, ಕಾಡುತ್ತಿರುವ ತಿಂಗಳು!
ನನಗರಿವಿಲ್ಲದ ಬಾಲ್ಯದ ದಿನಗಳನ್ನು ಬಿಟ್ಟರೆ ಶಾಲೆಯ ಮೆಟ್ಟಿಲೇರಿದ ದಿನದಿಂದ ಇಂದಿನವರೆಗೆ ಮಾರ್ಚ್‌ ತಿಂಗಳು ನನ್ನನ್ನು ಕಾಡಿದೆ, ಇಂದಿಗೂ ಕಾಡುತ್ತಿದೆ. ಶಾಲಾದಿನಗಳಲ್ಲಿ ಮಾರ್ಚ್‌ ತಿಂಗಳೆಂದರೆ ನಮಗೆ ಭಯೋತ್ಪಾದನೆಯ ತಿಂಗಳು. ಹಳ್ಳಿಯಲ್ಲೇ ಹುಟ್ಟಿ ಬೆಳೆದ ನಮಗೆ ಪರೀಕ್ಷೆ ನೆನಪಾಗುವುದೇ ಮಾರ್ಚ್‌ ತಿಂಗಳಲ್ಲಿ. ಅವಿಭಕ್ತ ಕುಟುಂಬದ ನಮಗೆ ಮಾರ್ಚ್ ತಿಂಗಳಲ್ಲಿ ನಮ್ಮ ಪುಸ್ತಕ ಹುಡುಕುವುದೇ  ಸಾಹಸ. ಕೆಲವೊಮ್ಮೆ ನಮ್ಮ ಪುಸ್ತಕಗಳು ಅತಿಯಾದ ನಿರ್ಲಕ್ಷ್ಯದಿಂದ ನಾಣಿಗೆ ಕೊಟ್ಟಿಗೆ (ಬಚ್ಚಲು ಮನೆ)ಯ ಒಲೆ ಸೇರಿದ್ದೂ ಉಂಟು. ಪರೀಕ್ಷಾ ಜ್ವರದಿಂದಲೇ ಕಳೆದ, ಕಾಡಿದ ಮಾರ್ಚ್‌ ತಿಂಗಳನ್ನು ಮರೆಯಲಾದೀತೆ!
 
ಸ್ನಾತಕೋತ್ತರ ಪದವಿ ಮುಗಿಸಿ ಕಾಲೇಜಿನಲ್ಲಿ ಉಪನ್ಯಾಸಕ ಹಾಗೂ ಪ್ರಾಂಶುಪಾಲನಾದ ಮೇಲೂ ಮಾರ್ಚ್‌ ತಿಂಗಳು ನನ್ನನ್ನು ಕಾಡದೇ ಬಿಡಲಿಲ್ಲ. ನಮ್ಮ ವಾರ್ಷಿಕ ಉತ್ಪನ್ನದ ಅನುಗುಣವಾಗಿ ಆದಾಯ ತೆರಿಗೆ ತುಂಬಲೇಬೇಕು. ಅದಕ್ಕೆ ಮಾರ್ಚ್‌ ತಿಂಗಳೇ ಕೊನೆ. ಕೆಲವೊಮ್ಮೆ ಮಾರ್ಚ್‌ ತಿಂಗಳಲ್ಲಿ ನಾವು ಪಡೆಯುವ ವೇತನ ಆದಾಯ ತೆರಿಗೆಯ ಪಾಲಾಗಿ ಸ್ವಾಭಿಮಾನ ಬಿಟ್ಟು ಸಾಲ ಕೇಳಿದ್ದೂ ಇದೆ. ಅಷ್ಟೇಕೆ ತೆರಿಗೆ ತುಂಬಲೂ ಸಾಲ ಮಾಡಿದ್ದಿದೆ! ಇಷ್ಟೆಲ್ಲ ಕಾಡಿದ, ಕಾಡುತ್ತಿರುವ ಮಾರ್ಚ್‌ ತಿಂಗಳು ನನ್ನ ಮನದಿಂದ ಮಾಸಲು ಸಾಧ್ಯವೆ?
    -ಬೀರಣ್ಣ ನಾಯಕ ಮೊಗಟಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.