ADVERTISEMENT

ಮೆಚ್ಚುಗೆ ಪಡೆದ ಪ್ರೇಮ ಪತ್ರಗಳು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 19:30 IST
Last Updated 28 ಫೆಬ್ರುವರಿ 2018, 19:30 IST
ಮೆಚ್ಚುಗೆ ಪಡೆದ ಪ್ರೇಮ ಪತ್ರಗಳು
ಮೆಚ್ಚುಗೆ ಪಡೆದ ಪ್ರೇಮ ಪತ್ರಗಳು   

ಹೃದಯಂಗಮ ಓಲೆ

ನನ್ನ ಪ್ರಿಯತಮೆ ಚಿ.ಸೌ. ಚಿನ್ಮಣಿ,

ನನ್ನ ತನುಮನದ ಆಮೋದಳಾಗಿರುವ ಚಿನ್ಮಣಿ, ಈ ಇಳೆಯಲ್ಲಿ ನನ್ನಿಂದ ಹನ್ನೆರಡುಸಾವಿರ ಕಿ.ಮೀ ದೂರದಲ್ಲಿದ್ದರೂ, ಹನ್ನೆರಡು ಸೆಂ.ಮೀ ಅಗಲದ ನನ್ನ ಹೃದಯದಲ್ಲಿ ಸದಾ ನೆಲೆಸಿರುವೆ. ನಮ್ಮ ಮಕ್ಕಳು ನನ್ನ ಹುಟ್ಟಿದ ಹಬ್ಬದ ಗಿಫ್ಟ್ ಆಗಿ ಕೊಟ್ಟಿರುವ ಈ ಹೊಸ ಲ್ಯಾಪ್‍ಟಾಪ್‍ನಿಂದ ನಿನಗೊಂದು ಹೃದಯಂಗಮ ಓಲೆಯನ್ನು ಇಮೇಲ್ ಮೂಲಕ ಕಳಿಸಬೇಕೆನಿಸಿತು. ಹಲವಾರು ದಶಕಗಳಿಂದ, ಒಟ್ಟಿಗೆ ಬದುಕಿ, ಬಾಳಿದ ನಮಗೆ; ಪತ್ರಗಳ ಮೂಲಕ ಮನದೋಕುಳಿಯನ್ನು ಸಿಂಪಡಿಸುವ ಅಗತ್ಯ ಬರಲೇ ಇಲ್ಲ. ಇಷ್ಟು ವರ್ಷ ಹೆಪ್ಪುಗಟ್ಟಿ ಅದುಮಿ ಹಿಡಿದಿದ್ದ ಬಣ್ಣಗಳನ್ನೆಲ್ಲವನ್ನು ಕಾರಂಜಿಯಂತೆ ಚಿಮ್ಮಿಸುತ್ತೇನೆ. ‘ಲಿಖೆ ಜೋ ಖತ್ ತುಜ್ಹೆ ವೊ ತೇರಿ ಯಾದ್‌ ಮೇ ಹಜಾರೊ ರಂಗ್‌ ಕೆ ನಝರೆ ಬನ್ ಗಯೆ’ –ಈ ಹಾಡು ಪ್ರಸ್ತುತವೆನಿಸುತ್ತದೆ.

ADVERTISEMENT

‘ಇದೇನು; ಈ ರೀತಿ ಪತ್ರ ಬರೆಯುವ ಹುಚ್ಚು ಹಿಡೀತು, ಏನಾಗಿದೆ ನಿಮಗೆ?’ ಎಂದು ನಿನ್ನ ಹುಸಿಮುನಿಸನ್ನು ನಗುತ್ತಲೇ ತೋರಿಸುತ್ತ, ಯಾವ ಕುಸುಮಾಸ್ತ್ರವನ್ನು ನನ್ನೆದೆ ನಾಟುವಂತೆ ಪ್ರಯೋಗಿಸುತ್ತೀಯ ಎಂಬುದನ್ನು ತುಂಟತನದಿಂದ ನೋಡಿಯೇ ಅನುಭವಿಸಬೇಕು. ನೀನು ಹೀಗೆಯೇ ಪ್ರಶ್ನಿಸುತ್ತೀಯೆಂಬುದು ಮನದಲ್ಲಿ ಉದ್ಭವಿಸಿದ್ದ ಕಪೋಲಕಲ್ಪಿತ ಪ್ರಶ್ನೆಗೆ; ಉತ್ತರ...

‘ಕಾಲನಿಯಮದಂತೆ, ನನ್ನೀಶರೀರಕ್ಕೆ; ಎಪ್ಪತ್ತೈದು ವಯೋ ಮಾನದ ಗಡಿ ಹತ್ತಿರವಿದ್ದರೂ, ನಿನ್ನೊಡನೆ ಈ ರೀತಿ ನಲ್ವಾಡಲು, ಮನದ ತುಂಟತನಕ್ಕೆ ಇಪ್ಪತ್ತೈದರ ಗಡಿಯನ್ನೂ ದಾಟಿಲ್ಲ. ಪ್ರೇಮಕ್ಕೆ, ಮುಪ್ಪೆನ್ನುವುದೇ ಇಲ್ಲವಲ್ಲಾ ಚಿನ್ನಾ. ಆ ಯೌವ್ವನದ ದಿನಗಳಲ್ಲಿ ನನ್ನ ಬಿಸಿ ಉಸಿರು, ತೇಲುವ ನೋಟ ಮತ್ತು ನಡತೆಗಳು ಕೇವಲ ವಾಂಛೆಗಾಗಿಯೇ ತವಕಿಸುತ್ತಾ, ಅಂಧನಾಗಿ ಪ್ರೇಮ ಸೂಸುತ್ತಿತ್ತು. ಆದರೆ ಇಂದು ಆ ಚಂಚಲತೆ ಬಿಸುಟು, ಪ್ರೌಢ ಮನದ ಚಿಂತನೆಯು ವಾತ್ಸಲ್ಯದ ಕರೆ, ಆಸರೆಗಾಗಿ ತಾಕಲಾಡುತ್ತಿದೆ. ಇಂದು ನೊಂದ ಮನಕ್ಕೆ ಶರೀರಕ್ಕಿಂತ, ಮನೋಬಲ ನೀಡುವ ಮನಸ್ಸಿನ ಅಗತ್ಯವಿದೆ.

ಸಿಹಿಕನ್ನಡದಲಿ, ನನಗಿಂತ ಹೆಚ್ಚು ಪ್ರೌಢಿಮೆಯುಳ್ಳ ನಿನ್ನಮುಂದೆ; ಇದಕ್ಕಿಂತ ಉನ್ನತ ಕಲ್ಪನೆಯ ಮನವನ್ನು ಬಿಚ್ಚಿಡಲಾರೆ. ತಪ್ಪುಗಳಿದ್ದಲ್ಲಿ ನಕ್ಕು, ನನ್ನ ಬೆಪ್ಪುತನವನ್ನು ಸಂಕೋಚವಿಲ್ಲದೇ ಎತ್ತಿ ತೋರಿಸಿದರೆ, ನಗುತ್ತೇನೆ. ಇಷ್ಟು ವರ್ಷ; ನನ್ನ ಮನದಲ್ಲಡಗಿ ಕುಳಿತಿದ್ದ ಹಲಕೆಲವು ಚಿಕ್ಕಪುಟ್ಟ ಆಭಾಸಗಳ ನೆನಪು ಮಾಡುತ್ತೇನೆ. ಅಂದಿನ ಕಾಲದಲ್ಲಿ ಸಿಗುತ್ತಿದ್ದ ಸವಲತ್ತು ಯಾವ ರೀತಿಯಲ್ಲಿ ಪೇಚಾಟಕ್ಕೆ ಸಿಲುಕಿಸುತ್ತಿತ್ತೆಂದು ಜ್ಞಾಪಿಸಿಕೊಳ್ಳೋಣ. ಪೀಠಿಕೆ ಉದ್ದವಾಯಿತೇನೋ?

ನಮ್ಮ ಮದುವೆಯ ಬಗ್ಗೆ ಪ್ರಪೋಸ್ ಮಾಡಿದ ಸ್ನೇಹಿತನ ಸಲಹೆಯಂತೆ, ನಿನ್ನ ರೂಪಶ್ರೀಯನ್ನು ನೋಡಲು ಅವನೊಟ್ಟಿಗೆ ನಿಮ್ಮ ಮನೆಗೆ ಬಂದು ಮುಕ್ಕಾಲು ಗಂಟೆ ಕಾದ ನಂತರ, ನನ್ನ ನೆಚ್ಚಿಕೆಯಲ್ಲದ ಸಜ್ಜಿಗೆಯ ಜೊತೆ ನೆಚ್ಚಿನ ಉಪ್ಪಿಟ್ಟನ್ನು ತಂದುಕೊಟ್ಟೆ. ‘ಸ್ಟ್ರೈಕ್ಕ್ಡ್ ಎಟ್ ಫಸ್ಟ್ ಸೈಟ್’ ಎನ್ನುವ ರೀತಿಯಲ್ಲಿ ನಿನ್ನ ರೂಪಕ್ಕೆ ಶರಣಾದೆ ಎನ್ನುವುದನ್ನು, ನಾನು ಸಜ್ಜಿಗೆ ತಿನ್ನುತ್ತಿದ್ದಂತೆ; ಈ ಮದುವೆ ಗ್ಯಾರಂಟಿ ಎಂದು ಸ್ನೇಹಿತ ಡಿಕ್ಲೇರ್‌ ಮಾಡಿಬಿಟ್ಟ. ಹೀಗೆ, ಒಳ್ಳೆಯ ತುಪ್ಪ ಹಾಕಿ ಘಮ ಘಮಿಸುತ್ತಿದ್ದ ಸಜ್ಜಿಗೆ, ಉಪ್ಪಿಟ್ಟು ತಿಂದು ನಮ್ಮ ಬಾಂಧವ್ಯ ಬೆಸೆಯಿತು. ಈಗಿನ ಕಾಲದಲ್ಲಿ, ಸ್ನೇಹಿತ, ಚೌಚೌಭಾತ್‍ನ ಗೊಡವೆ ಇಲ್ಲದೇ ಸಂಬಂಧಿಗಳಾಗಿ ಬಿಡುತ್ತಾರೆ.

ನಮ್ಮ ಮದುವೆಯಾದ ಹೊಸದರಲ್ಲಿ, ನೀನೊಮ್ಮೆ ತವರಿಗೆ ಹೋಗಿದ್ದೆ. ನಾನು ಸುಮ್ಮನಿರದೇ ಇನ್‍ಲ್ಯಾಂಡ್ ಲೆಟರ್‌ನಲ್ಲಿ ‘ನೀನಿಲ್ಲದೇ ನನ್ನ ತನುಮನ ಒಣಗುತ್ತಿವೆ’ ಎಂದು ‘ಕವಿಕಾಣದ’ ಶಬ್ದಪ್ರಯೋಗಗಳಿಂದ ಕೂಡಿದ ಪ್ರೇಮಪತ್ರವನ್ನು ಬರೆದು ಪೋಸ್ಟ್ ಮಾಡಿದೆ. ಇದು ನವದಂಪತಿಗಳಲ್ಲಿನ ಗೋಪ್ಯವಿಚಾರ, ಇಣುಕಬಾರ ದೆಂಬ ಗಂಭೀರತೆಗೆ ಬೆಲೆ ಕೊಡದೆ ಪೋಸ್ಟ್ ಇಸಿದುಕೊಂಡವರು, ಮಕ್ಕಳಾಟದಂತೆ ಕೇಕೆಹಾಕುತ್ತಾ ಬಹಿರಂಗವಾಗಿ ಓದಿದಾಗ, ನಿನಗಾದ ಮುಜುಗರದಿಂದ ನನ್ನ ಮೇಲೆ ಮುನಿಸಿಕೊಂಡಿದ್ದೆ.

ಫ್ರಿಜ್‌ನಲ್ಲಿಟ್ಟು ಗಟ್ಟಿಯಾಗಿದ್ದ ಬೆಣ್ಣೆಯಂಥ ನಿನ್ನ ಮನಸನ್ನು ಕರಗಿಸಲು ಪಟ್ಟಪಾಡು; ಓಹ್!!! ಹೊಸ ರೀತಿಯ ಮಜ ತಂದಿತ್ತು. ಜ್ಞಾಪಕವಿದೆಯಾ? ‘ಹಮ್ಮ್ ಔರ್, ತುಮ್ಮ್ ಔರ್’ ಹಾಡನ್ನು (ರಫಿ ಸಾಹೇಬ್‍ರವರು ಹೇಳಿರುವ ತುಂ ಸಾ ನಹಿ ದೇಖಾ ಚಿತ್ರದ ಹಾಡು) ಹೇಳಿದ ನಂತರ ಇಬ್ಬರೂ ನಶೆಯಲ್ಲೇ ತೇಲಿದ್ದೆವು. ಕೇಕೆ ಹಾಕಿದವರಿಗೆ ಮನದಲ್ಲೇ ಥ್ಯಾಂಕ್ಸ್ ಹೇಳಿದ್ದೆ. ಆದರಿಂದು; ಆಧುನಿಕ ಪ್ರಪಂಚದಲ್ಲಿ ಸಿಗುತ್ತಿರುವ ವೈವಿಧ್ಯಮಯ ಸವಲತ್ತುಗಳಲ್ಲೊಂದಾದ ‘ಇಮೇಲ್’ ವ್ಯವಸ್ಥೆಯಿರುವುದರಿಂದ ಮೂರನೆಯವರು ಇಣುಕಲು ಬಹಳ ಪ್ರಯಾಸಪಡಬೇಕು.

ನಾವಾಡುತ್ತಿದ್ದ ಕೆಲವು ಚೇಷ್ಟೆಗಳನ್ನು ನೆನೆಸಿಕೊಂಡರೆ; ನಗುಬರುತ್ತೆ. ನನ್ನ ಪರಿಚಯಸ್ಥ ರೊಬ್ಬರು ಕೊಟ್ಟಿದ್ದ ದೊಡ್ಡ ಬುಟ್ಟಿಯಲ್ಲಿ ರಸಪೂರಿ ಮಾವಿನಹಣ್ಣನ್ನು, ನಮ್ಮ ಮಂಚದ ಕೆಳಗೆ ಇಟ್ಟಿದ್ದೆವು, ಎಲ್ಲರೂ ಮಲಗಿದ ಮೇಲೆ ನಾವಿಬ್ಬರೂ, ಸಕ್ಕರೆಯನ್ನು ನಾಚಿಸುವಂತೆ ಸಿಹಿಯಿರುತ್ತಿದ್ದ ಆ ರಸಭರಿತ ಮಾವಿನ ಹಣ್ಣನ್ನು ತಿನ್ನುತ್ತಿದ್ದೆವು. ಒಮ್ಮೆ, ಹೋಟೆಲ್‍ನಲ್ಲಿ ಊಟ ಮಾಡಬೇಕೆನಿಸಿ; ಮದುವೆ ಮನೆ ಊಟಕ್ಕೆ ಹೋಗಬೇಕೆಂದು ಸುಳ್ಳುಹೇಳಿ ಹೋಗಿದ್ದೆವು.

ಮನೆಯಲ್ಲಿ, ಎರಡು ಕಾಯಿ ಬರುತ್ತೆಂತ ಲೆಕ್ಕವಿಟ್ಟುಕೊಂಡವರು ‘ತಾಂಬೂಲ ಕೊಡಲಿಲ್ಲವಾ?’ ಎಂದು ಕೇಳಿದರೆ?? ಆಭಾಸವಾಗು ತ್ತದಲ್ಲಾ ಎಂದು ಅಂಗಡಿಯಲ್ಲಿ ಖರೀದಿಮಾಡಿ ಮನೆಗೆ ಬಂದಿದ್ದೆವು. ತಾಂಬೂಲದ ಬ್ಯಾಗಲ್ಲಿ ವಿಳ್ಳೆದೆಲೆ, ಅಡಿಕೆ ಇಲ್ಲಾಂತ ಮುಸಿನಕ್ಕ ನನ್ನ ತಾಯಿಯ ಮುಖ ನೋಡಿ, ಬಿಳಿಚಿಕೊಂಡ ನಮ್ಮದನ್ನು ನೋಡಬಾರದೆಂದು ಕೊಠಡಿಗೆ ಓಡಿದ್ದೆವು. ನಮ್ಮ ಮನೆಯಲ್ಲೇ ನಾವು ಕಳ್ಳರಂತೆ ಆಡಿದ ಚೇಷ್ಟೆ ಮರೆಯುವ ಹಾಗೇಇಲ್ಲಾ ಅಲ್ಲ್ವೇನೆ?.

ಮುಗ್ಧತೆಯಿಂದ ತುಂಬಿ ತುಳುಕುತ್ತಿದ್ದ ನಿನ್ನ ತಾರುಣ್ಯದ ಮುಖವು, ಸಂಸಾರದ ದುಃಸ್ಥಿತಿಗಳನ್ನು ಧೈರ್ಯವಾಗಿ ಎದುರಿಸುತ್ತಾ ಮೂರು ಮಕ್ಕಳಾದ ಮೇಲೆ, ಗಂಭೀರಮುದ್ರೆಯ ವದನವಾಗತೊಡಗಿತು. ನಿನ್ನ ಜೊತೆಯಲ್ಲಿ ನಾನೂ ಬೆಳೆಯುವುದು ಸಹಜವಲ್ಲವೇ. ಅದಕ್ಕೆ ತಕ್ಕಂತೆ ಮಾತು, ನಡತೆ ಬದಲಾಯಿಸುತ್ತಾ ಸಾಗಿದೆ. ಜೀವನದಲ್ಲಿ ದಿನ ಬೆಳಗಾದರೆ ಹುಟ್ಟಿಕೊಳ್ಳುತ್ತಿದ್ದ ವಿವಿಧ ಕರ್ತವ್ಯಗಳಿಗೆ ಆದ್ಯತೆನೀಡುವ ವಿಚಾರಗಳು ಶಾರೀರಿಕ ಸಂಬಂಧಗಳಿಗಿಂತ, ಮಾನಸಿಕ ಪ್ರೌಢತೆಯನ್ನು ಬೆಳೆಸಿಕೊಳ್ಳುತ್ತಾ, ನಾವು ಪ್ರಾಮುಖ್ಯ ನೀಡದ ವಿಚಾರಗಳಿಂದ ಸರಿಯತ್ತಿದ್ದಂತೆ; ನಾವು ಕಳೆದುಕೊಂಡ ಯೌವನ ಕಣ್ಣಿಗೆ ಕಾಣದಷ್ಟು ದೂರದಲ್ಲಿ ಬಿದ್ದಿತ್ತು.

ಈ ಮುಪ್ಪಿನ ಸಮಯದಲ್ಲೂ; ನಾವು ಬಿತ್ತಿ ಬೆಳೆಸಿದ ಸಂಸಾರದ ಸ್ಥಿರತೆಗಾಗಿ ಮತ್ತು ಅವರ ಪೂರೈಕೆಗಳನ್ನು ತುಂಬಿ ಕೊಡಲು, ನಮ್ಮ ಕೊರತೆಗಳ ಬಗ್ಗೆ ಆಲೋಚಿಸದೇ, ಅಗಲಿಕೆಯನ್ನು ಸಹಿಸ ಬೇಕಾಗಿದೆ. ಇದರಿಂದ ನಮ್ಮ ಮನಸ್ಸು ಹಾಗೂ ಶಾರೀರಿಕ ಬಲವು ಕುಗ್ಗುತ್ತಿದೆ ಎಂಬರಿವಿದ್ದರೂ; ಅನಿವಾರ್ಯ ಪರಿಸ್ಥಿತಿಯಿಂದ ಒಪ್ಪಿಕೊಳ್ಳುತ್ತಿದ್ದೇವೆ. ನಮ್ಮ ಶರೀರಕ್ಕೆ ಬಿಸುಪಿನ ವಿನಿಮಯದ ಅವಶ್ಯಕತೆ ಅಷ್ಟೊಂದಿಲ್ಲದಿದ್ದರೂ ದೃಷ್ಟಿಗೆ ಮತ್ತು ಅನಾರೋಗ್ಯದ ಸಮಯದಲ್ಲಿ ನಮಗೆ ಜೊತೆಯಲ್ಲಿರಬೇಕೆನಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ಸಾಂಗತ್ಯದ ಆಧಾರದ ಕೊರತೆ ಬಹಳವಾಗಿ ಕಾಡುತ್ತಿದೆ. ಹಲವಾರು ಸಂಕೋಚದ ವಿಷಯಗಳನ್ನು ಮಕ್ಕಳ ಹತ್ತಿರ ನಿವೇದಿಸಿಕೊಳ್ಳಲಾಗುವುದಿಲ್ಲ.

ಹನ್ನೆರಡು ಸಾವಿರ ಕಿ.ಮೀ ಸಾಗರದಾಚೆಯ ದೇಶವೆಂದರೆ; ಬೇಕೆನಿಸಿದಾಗ ಭೇಟಿಯಾಗಲು ಹಲವಾರು ಅಡಚಣೆಗಳು ಮತ್ತು ಅದು ಸಾಧ್ಯವಿಲ್ಲದ ಮಾತು. ನನ್ನ ಜೀವನದಲ್ಲಿ ಮದುವಣಗಿತ್ತಿಯಾಗಿ ಕೈಹಿಡಿದ ದಿನದಿಂದ, ಎಲ್ಲಾ ರೀತಿಯ ಕಷ್ಟಕರ ಹಾಗೂ ಸುಲಲಿತ ಮಾರ್ಗಗಳಲ್ಲಿ ಸಂತೋಷದಿಂದ ಸಹಕರಿಸಿದ ನಿನ್ನ ಮೆಲುನಗೆಯ ನೆನಪು ಕಾಡುತ್ತದೆ.
ಇನ್ನುಮುಂದೆ ಸ್ಕೈಪ್ ಮೂಲಕ ಮುಖಾಮುಖಿ ಸಂವಾದಿಸೋಣ. ಓ! ಆದಿತ್ಯನೇ, ಚಿನ್ಮಣಿ ನನ್ನ ತೆಕ್ಕೆಗೆ ಬರಲು ದಿನಗಳನ್ನು ಬೇಗುರುಳಿಸು.

ನಿನ್ನ ಪ್ರೀತಿಯ

ಪ್ರಭು

***

ಕಲ್ಪನಾ ಛಾಯೆಯಲ್ಲಿ

ಯಾವಾಗ್ಲೂ ‘ನಿಂದು ಡಬ್ಬಾ ಮೊಬೈಲ್, ಸ್ಕ್ರೀನ್ ಟಚ್ ಮೊಬೈಲ್ ಬಂದ್ರೂ, ಅಡುಗೆ ಕೋಣೆಯಲ್ಲಿ ಅಕ್ಕಿನೋ ಜೋಳನೋ ಹಾಕಿ ಅಟ್ಟಣಗಿಯ ಮೇಲಿಟ್ಟಿರೋ ಮೇಣ ಮೆತ್ತಿದ ಕರೀ

ಡಬ್ಬದಂತೆ ಇರೋ

ಈ ಕೀಪ್ಯಾಡ್ ಮೊಬೈಲ್

ಇಟ್ಟುಕೊಂಡಿದ್ದಿಯಲ್ಲೋ, ಸ್ವಲ್ಪ ಸುಧಾರಿಸು. ನಿನ್ನ ಹೈಟ್‍ಗೆ ಈ ಡ್ರೆಸ್ ಸೂಟ್ ಆಗಲ್ಲ, ಚಪ್ಪಲ್ ಹಾಕಬೇಡ, ಶೂ ಹಾಕೋ, ಕೂದಲು ಸ್ವಲ್ಪ ಉದ್ದಕ್ಕೆ ಬಿಡು, ಚರ್ಮ ಕೀಳೋ ಹಂಗೆ ಶೇವ್ ಮಾಡ್ಕೋಬೇಡ, ಸ್ವಲ್ಪ ಕುರುಚಲು ಗಡ್ಡ ಇರಲಿ, ಮೀಸೆನಾ ಟ್ರಿಮ್ ಮಾಡಿಕೊಂಡಿರೋ, ನಡೆಯುವಾಗ ನಿನ್ನ ಕಾಲ ಹೆಬ್ಬೆರಳುಗಳು ಎಲ್ಲಿ ಉದುರಿ ಹೋಗಬಹುದು ಅಂತ ಬರೀ ಕೆಳಗೆ ನೋಡ್ತಾ ಡೂಗನ ಥರ ನಡೀಬೇಡ, ಮುಖ ಮೇಲೆತ್ತಿ ಎದೆ ಸೆಟಿಸಿ ನಡಿಯೋ, ಕನ್ನಡಕ ಬೇಡ ನಿನಗೆ’ ಹಾಗೆ... ಹೀಗೆ.... ಸಿಕ್ಕಾಗ ಅಥವಾ ಫೋನಿನಲ್ಲಿ ಬರೀ ನನ್ನನ್ನು ಸುಧಾರಿಸುವ ಮಾತನ್ನೇ ಆಡುತ್ತ, ಹುಡುಗ ಇರಲಿ/ಹುಡುಗಿ ಇರಲಿ ನೀವು ಅಂತ ಸಂಬೋಧಿಸಿ ಮಾತಾಡೋ ನನಗೆ, ಅದೂ ಏಕವಚನದಲ್ಲಿ ಮಾತಾಡ್ತಾ ಇದ್ದಾಗ ನೀವು, ಒಮ್ಮೆ ಸಿಟ್ಟು ಬರ್ತಿತ್ತು. ಯಾರಿದಾರೇ ಅನ್ನೋ ಪರಿವೇ ಇಲ್ದೆ ದಢಕ್ಕನೇ ಮಾತಾಡೋ ನಿಮ್ಮ ಶೈಲಿಗೆ ಅದೆಂಥ ಹುಚ್ಚು ಕಾಳಜಿ ನನ್ಮೇಲೆ ಇವರ್ದು ಅನ್ಕೋತಿದ್ದೆ.

ಈಗ ಗೊತ್ತಾಗ್ತಿದೆ. ಅದು ಹುಚ್ಚು ಕಾಳಜಿ ಅಲ್ಲ ಪ್ರೀತಿ ಮಿಶ್ರಿತ ಕಾಳಜಿ ಅಂತ...
ನನ್ನ ವಯಸ್ಸಿನವರಾಗಿದ್ದರೂ, ನೀವು ನನಗಿಂತ ಪ್ರೌಢವಾಗಿರೋರು, ಮಾತು ಬೆಳ್ಳಿ-ಮೌನ ಬಂಗಾರ ಅನ್ನೋ ಗಾದೆ ಪಾಲಿಸೋ ಅರ್ಧಂಬರ್ಧ ಆದರ್ಶವಾದಿಯಾದ ನನಗೆ ಬೆಳ್ಳಿಯ ಬೆಲೆಯನ್ನು ಗೊತ್ತು ಮಾಡಿಸಿಕೊಟ್ಟವರು ನೀವು. ವಿಜ್ಞಾನವನ್ನು ಓದಿದ್ದರೂ ಸರ್ವಜ್ಞಾನಿಯಂತೆ ಗೋಚರಿಸುತ್ತಿದ್ದ ನಿಮ್ಮ ನಿಲುವು ಈಗಲೂ ನಾನು ಕಣ್ಮುಚ್ಚಿದರೆ ಎದುರು ಬಂದು ನಿಲ್ಲುತ್ತೆ...

ದಶಕದ ಹಿಂದಿನ ಮುಂಗಾರುಮಳೆ ಸಿನಿಮಾದ ಗೀತೆಗಳನ್ನು ಮುಂಗಾರು ಮಳೆ-2 ಬಂದರೂ ಗುನುಗುಡುವ ನಿಮ್ಮ ರೀತಿಗೆ ನಾನು ಮನಸಲ್ಲೇ ಖುಷಿಪಡುತ್ತಿದ್ದೆ. ನಿಮ್ಮಿಷ್ಟದ ‘ಅರಳುತಿರು ಜೀವದ ಗೆಳೆಯಾ ಪ್ರೇಮದಾ ಸಿಂಚನದಲ್ಲಿ...’ ಹಾಡು ನನಗೂ ಇಷ್ಟ. ಆದ್ರೆ ನಿಮ್ಮ ಮುಂದೆ ಅದೂ ಇದೂ ಅಂತ ಹೆಚ್ಚು ಮಾತಾಡ್ತಾ ಇರಲಿಲ್ಲ. ನಿಮ್ಮ ಮಾತುಗಳನ್ನ ಸುಮ್ನೇ ಆಸ್ವಾದಿಸ್ತಾ ಇದ್ದೆ.

‘ಎಷ್ಟೋ ಸಾರಿ ಬಸ್ಸಿನಲ್ಲಿ ನಿನ್ನ ಹಿಂದೆ ಅಥವಾ ಪಕ್ಕಕ್ಕೆ ಕೂತಿದ್ರೂ ನೋಡೋದಿಲ್ಲ ನೀನು’ ಅನ್ನೋ ನಿಮ್ಮ ದೂರಿಗೆ ನಾನು ಏನು ಹೇಳಲಿ? ಒಂದನೇ ಕ್ಲಾಸಿನಿಂದ ಡಿಗ್ರಿವರೆಗೂ ಯಾವ ಹುಡುಗಿಯರು ಅಥವಾ ಹುಡುಗರ ಗಾಢ ಸ್ನೇಹಕ್ಕೆ ಒಳಗಾಗದ ನನಗೆ ಬಸ್‍ನಲ್ಲಿ ಯಾರ ದಾರಿ ಕಾಯುವ ಪ್ರಮೇಯವೇ

ಬರ್ತಿರಲಿಲ್ಲ. ತಿರುಗಿ ನೋಡುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ.

ಆದರೂ ನಿಮ್ಮ ದೂರಿಗೆ ನೆನಪಿಟ್ಟು ಸ್ಪಂದಿಸಲೆಂದು ಬಸ್‍ನಲ್ಲಿ ತಿರುತಿರುಗಿ ನೋಡಲು ಹೋಗಿ ಸ್ಥಳ ಕಾದಿರಿಸಿ, ಮುಖ ಭಂಗ ಅನುಭವಿಸಿ ಸೋತಿದ್ದು ಸಾಕಷ್ಟಿದೆ ರೀ... ಆವಾಗ ಅನ್ಸೋದು ‘ಬ್ಯಾಡಪ್ಪ ಇದು ನನ್ನಿಂದ ಸಾಧ್ಯವಿಲ್ಲ, ಸಾಧ್ಯವಿಲ್ಲ’...

ಕೇಶಿರಾಜನ ಶಬ್ದಮಣಿ ದರ್ಪಣವನ್ನು ಯಾವಾಗ ಓದಿದ್ದಿರೋ, ಯಾಕೆ ಓದಿದ್ದಿರೋ ನನಗೆ ಗೊತ್ತಿಲ್ಲ. ಅದರಲ್ಲಿ ಬರುವ ‘ಎಳೆ ಗಿಳಿಗಳ ಬಳಗಂ... ಪಾಲ್ದೆನೆಯನುಂಡವು’ ವರ್ಣಿಸುತ್ತಿದ್ದಿರಿ.

ಎಳೆಗಿಳಿ ಶಬ್ದ ನಿಮಗೆ ಇಷ್ಟವೋ ಅಥವಾ ಗಿಳಿಯಂತಿರುವ ನನ್ನ ಮೂಗನ್ನು ನೋಡಿ ಹೆಸರಿಟ್ಟಿರೋ ಗೊತ್ತಿಲ್ಲ. ನನ್ನ ಸಂಬೋಧಿಸುವಾಗ ಗಿಳಿ ಅಂತ ಕರಿಯೋದು, ಆಗಾಗ ಎಳೆಯ ಗಿಳಿ ಅಂತ ಕರೆಯುವ ನಿಮ್ಮ ತುಂಟತನವನ್ನು ನೆನೆದರೆ ಈಗಲೂ ಕಿರುನಗೆ ಉಕ್ಕುತ್ತೆ...

ಇಷ್ಟು ಪ್ರೀತಿ ಅಂಕುರಿಸಿದೆ, ಅದು ದೊಡ್ಡ ಪ್ರೇಮ ವೃಕ್ಷವಾಗಿದೆ ಅನ್ನೋದು ನನಗೆ ತಿಳಿಯಲೇ ಇಲ್ಲ. ಯಾವಾಗ ಅಗಲುವಿಕೆಯ ಬಿರುಗಾಳಿ ಬೀಸತೊಡಗಿತೋ, ಆವಾಗ ನೆನಪಿನ ಕೊಂಬೆಗಳು, ಮಧುರ ಕ್ಷಣದ ಎಲೆಗಳು ಅಲುಗಾಡಲಿಕ್ಕೆ ಶುರುವಾದವು. ಆವಾಗಲೇ ನನಗೂ ಅರಿವಾಗಿದ್ದು, ನಿಮ್ಮ ಮೇಲಿನ ಪ್ರೇಮ ವೃಕ್ಷ ಎಷ್ಟೊಂದು ಬೆಳೆದಿದೆ ಹಾಗೂ ಅಷ್ಟೇ ಆಳವಾಗಿ ಬೇರನ್ನೂ ಬಿಟ್ಟಿದೆ ಎಂದು.

ಈಗ ಗೊತ್ತಾಗ್ತಿದೆ ನಿಮ್ಮಲ್ಲಿ ನನಗಿಂತಲೂ ಮೊದಲೇ ಪ್ರೀತಿ ಅಂಕುರಿಸಿ, ಪ್ರೇಮವೃಕ್ಷ ಬೆಳೆದಿದ್ದು, ಅದು ಯಾವಾಗಲೂ ನನಗೆ ತಂಗಾಳಿ ಕೊಡಲು ಪ್ರಯತ್ನಿಸಿ ಸೋತು ಸೋತು ಬಾಡಿದ ಗಿಡವಾಗಿಸಿದೆ ಅನ್ನುವ ತಪ್ಪಿತಸ್ಥ ಭಾವ ನನ್ನನ್ನು ಪ್ರತಿದಿನ ಕೊಲ್ತಾಯಿದೆ.

ಎದುರು ಬದುರಾಗಿ ಮಾತನಾಡಿ ನಿಮ್ಮನ್ನು ಓಲೈಸುವ ಧೈರ್ಯ ಯಾಕೋ ಕಾಲುಗಳಿಗೆ ಶಕ್ತಿ ಕೊಡುತ್ತಿಲ್ಲ. ಫೋನಾಯಿಸಬೇಕೆಂಬ ತುಡಿತದ ಹಿಂದೆ ಶಬ್ದಗಳ ಬರಗಾಲ ಸ್ಥಿತಿ ಬಂದಿದೆ. ಕೈಗಳು ತಡವರಿಸಿವೆಯಾದರೂ ತಹಬದಿಗೆ ತಂದು ಪ್ರೇಮದೋಲೆಯನು ಬರೆಯುತಿರುವೆ.

ನಿಮ್ಮನ್ನು ಕಲ್ಪಿಸಿಕೊಂಡು ಕಳೆದ ಮಧುರ ಕ್ಷಣಗಳನು ಒಂದೊಂದಾಗಿ ಆಯ್ದುಕೊಳ್ಳಲು ನನಗೆ ಅರಿವಿಲ್ಲದಂತೆ ಕವಿಯಾಗಿದ್ದೇನೆ. ನೀವು ಎಲ್ಲಿದೀರಿ ಗೊತ್ತಿಲ್ಲ, ಆದರೆ ಕಾಣದೇ ಕಣ್ಣು ಮುಚ್ಚಾಲೆ ಆಡುತ್ತಿದ್ದೀರಿ ಅನ್ನೋದು ನನಗೆ ಭಾಸವಾಗುತ್ತಿದೆ.

ನಿಮ್ಮ ಹೆಸರೇನೆಂದು ಕೇಳಿದಾಗ ಕಲ್ಪನಾ ಎಂದು ಮರುಕ್ಷಣ ಛಾಯಾ ಎಂದು ಕೀಟಲೆ ಮಾಡುತ್ತಿದ್ದ ನೀವು ಕಲ್ಪನೆಯೋ? ಛಾಯೆಯೋ? ತಿಳಿಯಲೇ ಇಲ್ಲ.

ನಾನಂತೂ ನಿಮ್ಮ ಕಲ್ಪನಾ ಛಾಯೆಯಲಿ ವಿಹರಿಸುತ್ತಿರುವೆ, ಅಲೆಯುತ್ತಿರುವೆ, ಅರಸುತ್ತಿರುವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.