ADVERTISEMENT

ವಾರದ ಆ್ಯಪ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST

ಟೊರೆಂಟ್ ಡೌನ್‌ಲೋಡರ್
ಅಂತರ್ಜಾಲದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಕಡತ (ಫೈಲ್) ವರ್ಗಾವಣೆಗೆ P2P (person to person) ಎಂಬ ಹೆಸರಿದೆ. ಈ ರೀತಿ ಕಡತ ವರ್ಗಾವಣೆಗೆ ಎಂದೇ ವಿಶೇಷ ಶಿಷ್ಟತೆಯಿದೆ. ಅದಕ್ಕೆ ಟೊರೆಂಟ್ ಎಂದು ಹೆಸರು. ಹಲವರು ತಮ್ಮ ಗಣಕಗಳಲ್ಲಿ ಕಡತಗಳನ್ನು ಇಟ್ಟು ಅವನ್ನು ಟೊರೆಂಟ್ ಮೂಲಕ ಜಗತ್ತಿಗೆಲ್ಲ ಹಂಚುತ್ತಾರೆ.

ಸಿನಿಮಾ, ಹಾಡುಗಳು, ಪುಸ್ತಕ, ತಂತ್ರಾಂಶಗಳು ಎಲ್ಲ ಟೊರೆಂಟ್ ಮೂಲಕ ದೊರೆಯುತ್ತವೆ. ಬಹುತೇಕ ಮುಕ್ತ ತಂತ್ರಾಂಶಗಳು (ಉದಾ – ಉಬುಂಟು ಲೈನಕ್ಸ್, ಲಿಬ್ರೆಆಫೀಸ್) ಟೊರೆಂಟ್ ಮೂಲಕ ದೊರೆಯುತ್ತವೆ.

ಹೀಗೆ ದೊರೆಯುವ ಫೈಲ್‌ಗಳನ್ನು ನಿಮ್ಮ ಗಣಕ ಅಥವಾ ಮೊಬೈಲಿಗೆ ಇಳಿಸಿಕೊಳ್ಳಲು ಟೊರೆಂಟ್ ಅನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುವ ತಂತ್ರಾಂಶ (ಗಣಕಕ್ಕೆ) ಅಥವಾ ಕಿರುತಂತ್ರಾಂಶ (ಆ್ಯಪ್, ಮೊಬೈಲ್ ಅಥವಾ ಟ್ಯಾಬ್ಲೆಟ್‌ಗೆ) ಬೇಕು. ನಿಮ್ಮ ಆಂಡ್ರಾಯ್ಡ್‌ ಫೋನಿಗೆ ಅಂತಹ ಕಿರುತಂತ್ರಾಂಶ ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ µTorrent®- Torrent Downloader ಎಂದು ಹುಡುಕಬೇಕು ಅಥವಾ bit.ly/gadgetloka262 ಜಾಲತಾಣಕ್ಕೆ ಭೇಟಿ ನೀಡಬೇಕು. ಹೀಗೆ ಡೌನ್‌ಲೋಡ್ ಮಾಡುವಾಗ ನೀವು ಯಾರದೇ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸದಂತೆ ಎಚ್ಚರಿಕೆ ವಹಿಸಿ.

ಗ್ಯಾಜೆಟ್‌ ಸಲಹೆ
ಕೀರ್ತಿ ಅವರ ಪ್ರಶ್ನೆ: ಫೋಟೊಗಳನ್ನು ಅಪ್‌ಲೋಡ್‌ ಮಾಡಲು ಸುಲಭವಾಗುವಂತೆ ಅವುಗಳ ಫೈಲ್ ಗಾತ್ರವನ್ನು ಕಡಿಮೆ ಮಾಡುವುದು ಹೇಗೆ?

ಉ: ನೀವು Reduce Photo Size ಎಂಬ ಕಿರುತಂತ್ರಾಂಶ (ಆ್ಯಪ್)

ಅನ್ನು ಗೂಗಲ್ ಪ್ಲೇ ಸ್ಟೋರಿನಿಂದ ಹಾಕಿಕೊಂಡು ಬಳಸಬಹುದು. 

ಗ್ಯಾಜೆಟ್‌ ಸುದ್ದಿ
ಸಯನೋಜೆನ್‌ಮೋಡ್ ಅವಸಾನ

ಅತಿ ಜನಪ್ರಿಯ ಮತ್ತು ಸುಸ್ಥಿರವಾದ ಕಾರ್ಯಾಚರಣ ವ್ಯವಸ್ಥೆಯನ್ನು (operating system) ಒನ್‌ಪ್ಲಸ್ ಫೋನ್‌ಗಳು ಒಳಗೊಂಡಿವೆ. ಅವುಗಳಲ್ಲಿ ಮೊದಲಿಗೆ ಬಂದುದು ಒನ್‌ಪ್ಲಸ್ ಒನ್. ಈ ಫೋನಿನಲ್ಲಿದ್ದುದು ಸಯನೋಜೆನ್‌ಮೋಡ್ ಎಂಬ ಕಾರ್ಯಾಚರಣ ವ್ಯವಸ್ಥೆ. ಇದರ ವೈಶಿಷ್ಟ್ಯವೆಂದರೆ ಇದು ಮುಕ್ತ ತಂತ್ರಾಂಶ. ಹಾಗೆ ನೋಡಿದರೆ ಆಂಡ್ರಾಯ್ಡ್‌ ಮುಕ್ತ ತಂತ್ರಾಂಶವೇ.

ADVERTISEMENT

ಆದರೆ ಬಹುತೇಕ ಮೊಬೈಲ್ ತಯಾರಕರು ಗೂಗಲ್‌ನವರು ತಯಾರಿಸಿ ಮುಕ್ತವಾಗಿಟ್ಟ ಆಂಡ್ರಾಯ್ಡ್‌ ಆವೃತ್ತಿಯನ್ನು ತೆಗೆದುಕೊಂಡು ಅದಕ್ಕೆ ತಮ್ಮದೇ ಹೊದಿಕೆ ಸೇರಿಸಿ, ಕೆಲವೊಮ್ಮೆ ಅನಗತ್ಯ ಎನ್ನುವಷ್ಟು ತೂಕ ಸೇರಿಸಿ, ತಮ್ಮ ಸಾಧನಗಳಲ್ಲಿ ಸೇರಿಸಿ ಅವುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಯಾವುದೇ ಅನಗತ್ಯ ಹೊದಿಕೆಗಳಿಲ್ಲದ ಕಾರ್ಯಾಚರಣ ವ್ಯವಸ್ಥೆಯನ್ನು ಸಯನೋಜೆನ್‌ಮೋಡ್ ನೀಡುತ್ತಿತ್ತು. ಒನ್‌ಪ್ಲಸ್ ಕಂಪೆನಿ ಇದನ್ನು ತನ್ನ ಪ್ರಥಮ ಫೋನಿನಲ್ಲಿ ಬಳಸಿತ್ತು. ಆದರೆ ನಂತರದ ಫೋನ್‌ಗಳಲ್ಲಿ ಅದು ತನ್ನದೇ ಆದ ಆಕ್ಸಿಜನ್ ಅನ್ನು ಬಳಸತೊಡಗಿತು. ಇತ್ತೀಚೆಗೆ ಸಯನೋಜೆನ್‌ಮೋಡ್ ಅನ್ನು ಮುಚ್ಚಲಾಗಿದೆ. ಅಂದರೆ ಸಯನೋಜನ್‌ಮೋಡ್ ಬಳಸುತ್ತಿದ್ದವರು ಆದಷ್ಟು ಬೇಗನೆ ಈ ಕಾರ್ಯಾಚರಣ ವ್ಯವಸ್ಥೆಯ ಬ್ಯಾಕ್‌ಅಪ್ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಟ್ಟುಕೊಂಡರೆ ಉತ್ತಮ.

ಅವುಗಳು ಸದ್ಯಕ್ಕೆ download.cyanogenmod.org ಜಾಲತಾಣದಲ್ಲಿ ಲಭ್ಯ. ಆದರೆ ಪರಿಸ್ಥಿತಿ ತೀರ ಹದಗೆಟ್ಟಿಲ್ಲ. ಸಯನೋಜನ್ ಕಂಪೆನಿ ಮುಚ್ಚಿದಾಗ ಅದರಲ್ಲಿ ಸಯನೋಜೆನ್‌ಮೋಡ್ ತಯಾರಿಸುತ್ತಿದ್ದ ಪ್ರೋಗ್ರಾಮರ್‌ಗಳು ಸೇರಿ ಲೈನೇಜ್ ಓಎಸ್ (lineageos.org) ಎಂಬ ಒಕ್ಕೂಟ ಮಾಡಿದ್ದಾರೆ. ಮುಂದಿನ ಆವೃತ್ತಿಗಳು ಅಲ್ಲಿ ಲಭ್ಯವಾಗಲಿವೆ. ಆದರೆ ಯಾವಾಗಿನಿಂದ ಎಂದು ತಿಳಿದಿಲ್ಲ.

ಗ್ಯಾಜೆಟ್‌ ತರ್ಲೆ
ಹಿಂದಿನ ಕಾಲದಲ್ಲಿ ಮನೆಗೆ ಬಂದವರಿಗೆ ಮೊತ್ತಮೊದಲನೆಯದಾಗಿ ನೀರು ಕೊಡುತ್ತಿದ್ದೆವು. ಈಗ-

* ಚಾರ್ಜಿಂಗ್ ಪಾಯಿಂಟ್ ತೋರಿಸುತ್ತೇವೆ ಅಥವಾ ಚಾರ್ಜರ್ ನೀಡುತ್ತೇವೆ.
* ವೈಫೈ ಪಾಸ್‌ವರ್ಡ್ ನೀಡುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.