ADVERTISEMENT

ವಿಚಿತ್ರ ಮ್ಯೂಸಿಯಂಗಳಿವು...

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 9:45 IST
Last Updated 23 ಮಾರ್ಚ್ 2017, 9:45 IST
ವಿಚಿತ್ರ ಮ್ಯೂಸಿಯಂಗಳಿವು...
ವಿಚಿತ್ರ ಮ್ಯೂಸಿಯಂಗಳಿವು...   

ಕಿರುಕುಳದ ಸಾಧನ ಸಂಗ್ರಹ

ಅನಾದಿ ಕಾಲದಲ್ಲಿ, ತಪ್ಪು ಮಾಡಿದವರನ್ನು ಹೇಗೆ ಶಿಕ್ಷಿಸುತ್ತಿದ್ದರು? – ಯಾವ ರೀತಿ ಶಿಕ್ಷೆಗಳನ್ನು ನೀಡಲಾಗುತ್ತಿತ್ತು? ಇಂಥ ಕುತೂಹಲಕ್ಕೆ ನೆದರ್‌ಲೆಂಡ್‌ನ ‘ಮ್ಯೂಸಿಯಂ ಆಫ್ ಮೆಡಿವಲ್ ಟಾರ್ಚರ್ ಇನ್ಸ್‌ಟ್ರುಮೆಂಟ್ಸ್’ನಲ್ಲಿ ಉತ್ತರ ಸಿಗುತ್ತದೆ. ಆಗಿನ ಕಾಲದಲ್ಲಿ ಶಿಕ್ಷೆಗೆ ಒಳಗಾದವರಿಗೆ ಹೇಗೆಲ್ಲಾ ಕಿರುಕುಳ ನೀಡಲಾಗುತ್ತಿತ್ತು ಎಂಬುದನ್ನು ಹೇಳುವ ನೂರಕ್ಕೂ ಹೆಚ್ಚು ಸಾಧನಗಳ ಸಂಗ್ರಹ ಇಲ್ಲಿದೆ.

***

ADVERTISEMENT

ಸುಂದರವೆನಿಸಿಕೊಳ್ಳದ ಕಲೆಗಳ ತಾಣ

‘ದಿ ಮ್ಯೂಸಿಯಂ ಆಫ್ ಬ್ಯಾಡ್ ಆರ್ಟ್ಸ್‌’ ಎಂದು ಕರೆಸಿಕೊಳ್ಳುವ ಈ ಸಂಗ್ರಹಾಲಯ ಇರುವುದು ಅಮೆರಿಕದ ಮೆಸಾಚುಸೆಟ್‌ನಲ್ಲಿ. ಇದನ್ನು ನಿರ್ಲಕ್ಷಿತ ಅಥವಾ ಸುಂದರವೆನಿಸಿಕೊಳ್ಳದ ಕಲೆಯನ್ನು ಸಂಗ್ರಹಿಸುವ, ಸಂರಕ್ಷಿಸುವ, ಹಾಗೆಯೇ ಅದನ್ನು ಸಂಭ್ರಮಿಸಲೆಂದೇ ಇರುವ ವಿಶ್ವದ ಏಕೈಕ ಮ್ಯೂಸಿಯಂ ಎನ್ನಲಾಗಿದೆ.

ಇಂಥ 600ಕ್ಕೂ ಹೆಚ್ಚು ಕಲಾಕೃತಿಗಳು ಇಲ್ಲಿವೆ.­

***

ಕೂದಲಿಗೂ ಒಂದು ಮ್ಯೂಸಿಯಂ

ಟರ್ಕಿಯಲ್ಲಿನ ಅವೆನೋಸ್ ಹೇರ್ ಮ್ಯೂಸಿಯಂ ಆರಂಭಗೊಂಡಿದ್ದು  ಶೆಝ್ ಗಾಲಿಪ್ ಎಂಬುವರಿಂದ. ತನ್ನ ಗೆಳತಿ ನೆನಪಿಗೆ ಆಕೆಯ ಕೂದಲನ್ನು ತನ್ನ ಅಂಗಡಿಯ ಗೋಡೆಗೆ ಅಂಟಿಸಿದ್ದ. ಅದನ್ನು ನೋಡಿ ಇಲ್ಲಿಗೆ ಬಂದ ಮಹಿಳೆಯರೂ ತಮ್ಮ  ಹೆಸರು ಬರೆದು ಕೂದಲು ಅಂಟಿಸಲು ಆರಂಭಿಸಿದರು. ಇದೀಗ 16,000 ಮಹಿಳೆಯರ ಕೂದಲುಗಳ ಪಟ್ಟಿ ಇಲ್ಲಿದೆ.

***

ನಾಯಿ ಕುತ್ತಿಗೆ ಪಟ್ಟಿಗಿಲ್ಲಿದೆ ಜಾಗ

ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳಿಗೆ ಸಂಬಂಧಿಸಿದ ವಸ್ತುಗಳೂ ಮುಖ್ಯ ಎಂಬ ಆಲೋಚನೆಯೊಂದಿಗೆ ಶುರುವಾದದ್ದು ಈ ಮ್ಯೂಸಿಯಂ. ಇಂಗ್ಲೆಂಡ್‌ನಲ್ಲಿರುವ

ಈ ಮ್ಯೂಸಿಯಂನಲ್ಲಿ ನೂರಾರು ವರ್ಷಗಳ ಹಿಂದಿನಿಂದ ನಾಯಿಯ ಕುತ್ತಿಗೆಗೆ ಬಳಸುತ್ತಿದ್ದ ಪಟ್ಟಿಗಳ ಸಾಕಷ್ಟು ಮಾದರಿಗಳು ಇವೆ. ನಾಯಿಗೆ ಬಳಸುವ ಇನ್ನಿತರ ಪರಿಕರಗಳ ಇತಿಹಾಸವನ್ನೂ ಇಲ್ಲಿ ತಿಳಿಯಬಹುದು.

***

ಕಾಲಮಾನದಲ್ಲಿ ಸೌಂದರ್ಯದ ಪರಿಕಲ್ಪನೆ

ಕಾಲಕ್ಕೆ ತಕ್ಕಂತೆ ಸೌಂದರ್ಯದ  ಪರಿಕಲ್ಪನೆ ಬದಲಾಗುತ್ತಾ ಸಾಗುತ್ತದೆ. ಜಗತ್ತಿನಲ್ಲಿ ಸೌಂದರ್ಯದ ಹಿಂದಿನ ಕೆಲವು ಪರಿಕಲ್ಪನೆಯನ್ನು ತೋರುವ ನಿಟ್ಟಿನಲ್ಲಿ ರೂಪು ಪಡೆದ ಮ್ಯೂಸಿಯಂ ‘ಎಂಡ್ಯೂರಿಂಗ್ ಬ್ಯೂಟಿ’ ಮ್ಯೂಸಿಯಂ. ಮಲೇಷ್ಯಾದಲ್ಲಿನ ಈ ಮ್ಯೂಸಿಯಂನಲ್ಲಿ ವಿವಿಧ ಸಂಪ್ರದಾಯಗಳಲ್ಲಿ ಜನ ಅಲಂಕರಿಸಿಕೊಳ್ಳುತ್ತಿದ್ದ ರೀತಿ, ಬಳಸುತ್ತಿದ್ದ ಸೌಂದರ್ಯ ಸಲಕರಣೆಗಳು ಇವೆ.

***

ನೂಡಲ್ ಪ್ರಿಯರ ‘ಮೊಮೊಫುಕು’

ನೂಡಲ್‌ಗಳೆಂದರೆ ತುಂಬಾ ಜನರಿಗೆ ಇಷ್ಟ. ವಿದ್ಯಾರ್ಥಿಗಳ ಪಾಲಿಗಂತೂ ವರದಾನದಂತೆ. ಈ ಅಗ್ಗದ ಊಟಕ್ಕೆ ಒಂದು ಕೃತಜ್ಞತೆ ಹೇಳುವ ಸಲುವಾಗಿ ಹುಟ್ಟಿಕೊಂಡ ಮ್ಯೂಸಿಯಂ ಇದು. ಈ ಮ್ಯೂಸಿಯಂ ಇರುವುದು ಜಪಾನ್‌ನಲ್ಲಿ. ಇನ್‌ಸ್ಟಂಟ್‌ ನೂಡಲ್‌ ಬ್ರ್ಯಾಂಡ್‌ಗಳ ಸಾಕಷ್ಟು ಸಂಗ್ರಹವೇ ಇಲ್ಲಿದೆ.

***

ಒಡೆದ ಸಂಬಂಧಗಳ ಧ್ಯೋತಕ

ಸೋತ ಸಂಬಂಧಗಳ ನೆನಪುಗಳನ್ನು ಹೊತ್ತ ಈ ಮ್ಯೂಸಿಯಂ ಇರುವುದು ಕ್ರೋಟಿಯಾದಲ್ಲಿ. ಕಳೆದುಕೊಂಡ ತಮ್ಮ ಪ್ರೀತಿಯನ್ನು ನೆನಪಿಸುವ ವಸ್ತುಗಳನ್ನು ಇಲ್ಲಿಗೆ ಕೊಟ್ಟು ಭಾವಮುಕ್ತರಾದವರು ಎಷ್ಟೋ ಮಂದಿ. ಇದೀಗ ಅವುಗಳ ದೊಡ್ಡ ಸಂಗ್ರಹವೇ ಆಗಿದೆ. ಇದರಲ್ಲಿ ಬಟ್ಟೆ, ಉಂಗುರ, ಗೊಂಬೆ ಹೀಗೆ ಸಾವಿರಾರು ಉಡುಗೊರೆಗಳಿವೆ.

***

ಶೌಚಾಲಯಗಳ ಇತಿಹಾಸ

ಮಾನವನ ಇತಿಹಾಸದಲ್ಲಿ ಶೌಚಾಲಯ ಎಂಬ ಪರಿಕಲ್ಪನೆ ಹೇಗೆ ರೂಪು ಪಡೆಯಿತು ಎಂಬುದರ ಜೊತೆಗೆ  4,500 ವರ್ಷಗಳ ಹಿಂದಿನಿಂದಿದ್ದ ಶೌಚಾಲಯಗಳ ಮಾಹಿತಿ ನೀಡುತ್ತದೆ ಈ ಸುಲಭ್ ಇಂಟರ್‌ನ್ಯಾಷನಲ್ ಮ್ಯೂಸಿಯಂ ಆಫ್ ಟಾಯ್ಲೆಟ್ಸ್. ಇದು ಇರುವುದು ದೆಹಲಿಯಲ್ಲಿ. ಭಿನ್ನ ಶೈಲಿಗಳ ನೂರಾರು ಶೌಚಾಲಯಗಳು ಇಲ್ಲಿವೆ.

***

ಸೆಕ್ಸ್ ಮ್ಯೂಸಿಯಂ

ಈ ಮ್ಯೂಸಿಯಂಗೆ ವಯಸ್ಕರಿಗೆ ಮಾತ್ರ ಪ್ರವೇಶ. ನ್ಯೂಯಾರ್ಕ್‌ನಲ್ಲಿನ ಈ ಮ್ಯೂಸಿಯಂನಲ್ಲಿ ವಿವಿಧ ಜೀವಸಂಕುಲದ ಲೈಂಗಿಕತೆಗೆ ಸಂಬಂಧಿಸಿದ ಚಿತ್ರಕಲೆ, ಛಾಯಾಚಿತ್ರಗಳು ಹಾಗೂ ಶಿಲ್ಪಕೃತಿಗಳಿವೆ. ಮನುಷ್ಯರು, ಪ್ರಾಣಿ, ಪಕ್ಷಿಗಳಲ್ಲಿನ ಜೀವಸೃಷ್ಟಿಯ ವಿಜ್ಞಾನವನ್ನು ತೆರೆದಿಟ್ಟಿದೆ ಈ ಮ್ಯೂಸಿಯಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.