ADVERTISEMENT

ವಿಶ್ವ ಮಾನವನ ಪ್ರಪಂಚ ಪರ್ಯಟನೆ

3 ಲಕ್ಷ ಕಿ.ಮೀ. ಹಾದಿಯಲ್ಲಿ ನಾಲ್ಕು ವರ್ಷಗಳ ಸಂಚಾರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2017, 19:30 IST
Last Updated 23 ಆಗಸ್ಟ್ 2017, 19:30 IST
ಜಿ.ಎಂ.ಕೇದಾರನಾಥ್
ಜಿ.ಎಂ.ಕೇದಾರನಾಥ್   

ಇಡೀ ಜಗದ ಜ್ಞಾನ ಸಿಗಬೇಕಾದರೆ ಕೋಶ ಓದಬೇಕು, ದೇಶ ಸುತ್ತಬೇಕು. ಆದರೆ, ಉತ್ತಮ ಸಂಬಳದ ನೌಕರಿ ತೊರೆದು, ಯಾವತ್ತಿಗೂ ಕಾಣದಿದ್ದ ಯಾವುದೋ ಹಾದಿಯಲ್ಲಿ ನಿರಂತರ ಸಾಗುವುದೆಂದರೆ? ಮೂರು-ನಾಲ್ಕು ವರ್ಷ ಮನೆಯವರ ಸಂಪರ್ಕವಿಲ್ಲದೆ, ಆಗಾಗ್ಗೆ ಸ್ನೇಹಿತರೊಂದಿಗೆ ಹರಟಲು ಮೊಬೈಲ್ ಇಲ್ಲದೆ, ನಾಲ್ಕೈದು ಜತೆ ಬಟ್ಟೆಯನ್ನಷ್ಟೇ ಹೊತ್ತು, ಇರುವಷ್ಟು ಹಣದಲ್ಲೇ ‘ಬದುಕಿನ ಭರವಸೆ’ಯೊಂದಿಗೆ ಏಕಾಂಗಿಯಾಗಿ ವಿಶ್ವಪರ್ಯಟನೆಗೆ ಹೊರಡುವುದೆಂದರೆ? ಅದೇನೇ ಆದರೂ ಜಿ.ಎಂ.ಕೇದಾರನಾಥ್ ಅವರ ಸದ್ಯದ ಗುರಿ ಇದೇ.

ಭೂಪಟದಲ್ಲಿ ಗುರುತು ಮಾಡಿರುವಂತೆ 113 ರಾಷ್ಟ್ರಗಳಲ್ಲಿ ಸಂಚರಿಸಿ ಇಡೀ ಪ್ರಪಂಚವನ್ನು ತನ್ನ ಪ್ರಯಾಣದ ಅನುಭವದಲ್ಲಿ ಕಟ್ಟಿಕೊಳ್ಳಬೇಕು. ನಾಲ್ಕು ವರ್ಷಗಳು 3 ಲಕ್ಷ ಕಿ.ಮೀ.ಗೂ ಹೆಚ್ಚು ದೂರದ ಸುದೀರ್ಘ ಬೈಕ್ ಚಾಲನೆಯೊಂದಿಗೆ ‘ವಿಶ್ವ ಮಾನವ’ ತತ್ವವನ್ನು ಸಾರಬೇಕು, ಅನುಭವಿಸಬೇಕು ಎಂಬುದು.

ದೂರದ ಪ್ರಯಾಣದ ತಮ್ಮ ಖಯಾಲಿ ಕುರಿತು ಕೇದಾರನಾಥ್‌ ಬಲು ಸೊಗಸಾಗಿ ವಿವರಿಸುತ್ತಾರೆ: ಬಳ್ಳಾರಿಯ ಹಂಪಿ ಸಮೀಪದಲ್ಲಿ ವಾಸ, ಓದು ಹಾಗೂ ನೌಕರಿ. ತಂದೆ ರೈಲ್ವೆ ಇಲಾಖೆಯಲ್ಲಿ ಇದ್ದಿದ್ದರಿಂದ ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಸಂಚರಿಸುತ್ತಲೇ ಶಿಕ್ಷಣ ಪೂರೈಸಿದ್ದು. ಜೆಎಸ್‌ಡಬ್ಲ್ಯು ಸ್ಟೀಲ್ ಕಂಪೆನಿಯಲ್ಲಿ ಡೆಪ್ಯುಟಿ ಮ್ಯಾನೇಜರ್ ಹುದ್ದೆ, ಕೈತುಂಬ ಸಂಬಳ. ಶೈಕ್ಷಣಿಕ ಓದಿನ ಗುಂಗಿನಿಂದಾಗಿ ಆನ್‌ಲೈನ್ ಎಂಬಿಎಯೂ ಆಯಿತು. ಸ್ನೇಹಿತರೊಂದಿಗೆ ಟ್ರೆಕ್ಕಿಂಗ್, ರಾಫ್ಟಿಂಗ್, ಸುತ್ತಾಟ ಇದ್ದದ್ದೇ.

ADVERTISEMENT

2012ರ ಯಾವುದೋ ಒಂದು ದಿನ ದೂರದ ಪ್ರಯಾಣ ಮಾಡಬೇಕೆಂಬ ಹಂಬಲ ಹೆಚ್ಚಾಗಿ, ಹೆಚ್ಚು ಯೋಚಿಸದೆ ಪೂರ್ವ ಯೋಜನೆಯೂ ಇಲ್ಲದೇ ರಾಯಲ್ ಎನ್‌ಫೀಲ್ಡ್ ಥಂಡರ್ ಬರ್ಡ್‌ ಬೈಕ್ ಏರಿ ಹೊರಟೇಬಿಟ್ಟೆ. ಉತ್ತರ ಭಾರತದ ಕಡೆಗೆ ಹೋಗಬೇಕು ಎಂಬುದಷ್ಟೇ ಸ್ಪಷ್ಟ. ಒಂಟಿಯಾಗಿ ಹೊರಟ ಈ ಮೊದಲ ಪ್ರಯಾಣದಲ್ಲಿಯೇ 8,300 ಕಿ.ಮೀ ಪೂರೈಸಿದೆ. 39 ದಿನಗಳ ಬೈಕ್ ಚಾಲನೆಯಲ್ಲಿ ಲಡಾಖ್ ತಲುಪಿ ಹಾದಿ ತೋರಿದಲ್ಲಿಗೆ ಸಾಗಿದ್ದೆ.

ಇರುವ ಹಣದಲ್ಲಿ ಇಷ್ಟಪಟ್ಟ ಜಾಗಕ್ಕೆ ಹೋಗುವ ಹಾದಿಯೇ ಬೈಕ್ ರೈಡ್ ಅಂದುಕೊಂಡಿದ್ದೆ. ಅದಕ್ಕಿಂತಲೂ ಹೆಚ್ಚಿನ ಅನುಭವವನ್ನು ಸವಿದೆ. ಕರ್ನಾಟಕದಿಂದ ಬಂದಿರುವುದನ್ನು ತಿಳಿದು ‘ಅಷ್ಟು ದೂರದಿಂದ ಒಬ್ಬರೇ ಬೈಕ್‍ಲಿ ಬಂದ್ರಾ’ ಎನ್ನುತ್ತಾ ಡಾಬಾದಲ್ಲಿ ಮಲಗುವುದಕ್ಕೆ ಸ್ಥಳ ನೀಡಿದರು, ಊಟ ಕೊಟ್ಟರು.

ಇದಾವುದಕ್ಕೂ ಅವರು ನನ್ನಿಂದ ಹಣ ಪಡೆಯಲಿಲ್ಲ. ಹಿಂದಿ ಚೆನ್ನಾಗಿ ಮಾತನಾಡುವುದೂ ನನಗೆ ಅನುಕೂಲ ಆಗಿರಬಹುದು. ಒಟ್ಟಿನಲ್ಲಿ ಮನುಷ್ಯ ಪ್ರೀತಿಯ ಅನುಭವವಂತೂ ಸಿಗುತ್ತಿತ್ತು. ಮೊದಮೊದಲ ಇಂಥ ಅನುಭವವೇ ಮತ್ತಷ್ಟು ಸುತ್ತಲು ಪ್ರೇರೇಪಿಸಿತೇನೋ ಎಂದು ನೆನಪಿನ ಪುಟಗಳಲ್ಲಿ ಕೆಲ ನಿಮಿಷ ದಿಟ್ಟಿಸುತ್ತಾರೆ ಕೇದಾರನಾಥ್.

6 ತಿಂಗಳು, 13 ದೇಶ: ನನ್ನ ಭಾಷೆ ತಿಳಿಯದ, ನನ್ನ ರಾಷ್ಟ್ರದವರಲ್ಲದ, ಭಿನ್ನ ಪರಿಸರದ ಜನರನ್ನು ಭೇಟಿಯಾಗಬೇಕು. ಅವರ ಜಾಗದಲ್ಲಿ ಅಲ್ಲಿನ ಜನ, ಅವರ ಪ್ರೀತಿಯನ್ನು ಕಾಣಬೇಕೆಂಬ ಬಯಕೆ ಮೊದಲ ರೈಡ್ ಮುಗಿಯುತ್ತಿದ್ದಂತೆ ದಟ್ಟವಾಯಿತು. ಮತ್ತೆ, 2013ರಲ್ಲಿ ಅದೇ ಬೈಕ್ ಏರಿ ಪ್ರಯಾಣ ಹೊರಟೆ. ಇದು 13 ರಾಷ್ಟ್ರಗಳನ್ನು ಸುತ್ತಿ ಬರುವ ಮಹತ್ವಾಕಾಂಕ್ಷೆ. ಮುಂಚಿತವಾಗಿಯೇ ಅಗತ್ಯ ವೀಸಾ ಪಡೆಯಲು ಮುಂದಾದೆ.

ಪಾಕಿಸ್ತಾನ ವೀಸಾ ದೊರೆಯಲಿಲ್ಲ, ಅದಕ್ಕೆ ಸೂಕ್ತ ಕಾರಣವನ್ನೂ ನೀಡಲಿಲ್ಲ. ಹಾಗಾಗಿ, ನೇರ ಇರಾನ್ ಪ್ರವೇಶಿಸಿದೆ. ಅಲ್ಲಿಂದ ಟರ್ಕಿ ಮೂಲಕ ಯುರೋಪ್ ಪ್ರವೇಶ. ಆರು ತಿಂಗಳಲ್ಲಿ 18 ಸಾವಿರ ಕಿ.ಮೀ. ಸಂಚರಿಸಿದ್ದೆ. ಬೇರೆ ಬೇರೆ ದೇಶಗಳಲ್ಲಿ ರೆಸ್ಟೊರೆಂಟ್ ಇಟ್ಟಿದ್ದ ಪಾಕಿಸ್ತಾನಿಯರು ನನ್ನ ಕಂಡೊಡನೆ ‘ಭಾರತದವರಾ’ ಎಂದು ಕೇಳಿ ಉಚಿತವಾಗಿ ಊಟ ನೀಡಿದ್ದೂ ಇದೆ.

ಭಾಷೆ ಬಾರದಿದ್ದರೂ ಸಂವಹನಕ್ಕೆ ಅಡಚಣೆಯಾಗಲಿಲ್ಲ, ತಮ್ಮದೇ ರೀತಿಯಲ್ಲಿ ಅರ್ಥೈಸಿಕೊಳ್ಳಲು ಪ್ರಯತ್ನಿಸಿದರು. ಉಡುಗೊರೆಯಾಗಿ ಅನೇಕ ಕವನಗಳನ್ನೂ ಪಡೆದೆ. ಇಲ್ಲೆಲ್ಲ ಪದೇ ಪದೇ ಸಿಕ್ಕಿದ್ದು ಪ್ರೀತಿ, ಸಹಾನುಭೂತಿ ಹಾಗೂ ಮಾನವೀಯತೆ ಎನ್ನುತ್ತಾರೆ ಕೇದಾರನಾಥ್.

ಜನರೇ ಜಿಪಿಎಸ್: ಹದಿಮೂರು ರಾಷ್ಟ್ರಗಳ ಪರ್ಯಟನೆಗೆ ಸ್ಮಾರ್ಟ್‌ಫೋನ್ ಬಳಸಲಿಲ್ಲ. ಸಿಮ್ ಕಾರ್ಡ್ ಇಲ್ಲದ ಪುಟ್ಟ ಬೇಸಿಕ್ ಸೆಟ್ ಅನ್ನು ಸಮಯ ನೋಡಲು ಬಳಕೆ ಮಾಡುತ್ತಿದ್ದೆ. ಸಾಗುವ ಊರಿನ ಭೂಪಟ ಹಿಡಿದು ಹೊರಡುತ್ತಿದ್ದೆ. ದಾರಿಯಲ್ಲಿ ಸಿಗುವವರೇ ಜಿಪಿಎಸ್ ಮಾರ್ಗದರ್ಶಕರು.

ಹೀಗೆ ಜನರನ್ನೇ ಜಿಪಿಎಸ್ ಆಗಿ ನಂಬಿದ್ದರಿಂದ ಎಷ್ಟೋ ಕಡೆ ಹಾದಿ ತಪ್ಪಿದೆ, ಬಹಳಷ್ಟು ಕಡೆ ಮುಂದಿನ ದಾರಿಗಾಗಿ ಮತ್ತೊಬ್ಬರನ್ನು ಕಾದು ಗಂಟೆಗಟ್ಟಲೆ ಕುಳಿತಿದ್ದೆ. ಈಗಿನ ವಿಶ್ವಪರ್ಯಟನೆಗೆ ಸ್ಮಾರ್ಟ್ ಫೋನ್ ಜತೆಗಿದೆ. ಆದರೆ ಅದರಲ್ಲೂ ಸಿಮ್ ಬಳಸುವುದಿಲ್ಲ ಎಂದು ಅವರು ಹೇಳುತ್ತಾರೆ!

ಮೊದಲು ಮಾನವನಾಗು: ಹುಟ್ಟಿದಾಗ ಮಗು, ಸತ್ತಾಗ ಶವ. ಜಗತ್ತಿನ ಯಾವುದೇ ಭಾಗದಲ್ಲಿ ಮನುಷ್ಯ ಕುಲದಲ್ಲಿ ಹುಟ್ಟುವ ಜೀವ ‘ಮಗು’ವೇ ಆಗಿರುತ್ತೆ, ಅದೇ ಮಗು ಬೆಳೆದು ಸಾವಿನೊಂದಿಗೆ ಅಂತ್ಯವಾದರೆ ‘ಶವ’. ಎಂಥ ಶ್ರೀಮಂತನಾಗಲಿ, ಬಡವನಾಗಲಿ, ಬುದ್ಧಿವಂತನಾಗಲಿ, ದಡ್ಡನಾಗಲಿ ಕೊನೆಗೆ ಶವವೇ! ಈ ನಡುವಿನ ನಾವು ‘ಮಾನವರು’. ಜಾತಿ, ಧರ್ಮ, ರಾಷ್ಟ್ರೀಯತೆ, ಭಾಷೆ, ಸಂಸ್ಕೃತಿ, ವರ್ಣ ಎಷ್ಟೆಲ್ಲ ಗಡಿಗಳನ್ನು ಸುತ್ತಿಕೊಂಡಿರುವ ಮನುಷ್ಯರು.

ಈ ಮನುಷ್ಯನ ಬದುಕಿಗೆ ಏನು ಅರ್ಥ? ಈ ನನ್ನ ಬದುಕಿನಲ್ಲಿ ಆಗಬೇಕಿರುವುದೇನು? ಮಾನವ ‘ವಿಶ್ವ ಮಾನವ’ನಾಗಿ ಇರಲು ಆಗುವುದಿಲ್ಲವೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಹಾಗೂ ‘ಪ್ರೀತಿ-ಶಾಂತಿ’ಯನ್ನು ಎಲ್ಲೆಡೆ ಪಸರಿಸುವ ಉದ್ದೇಶದೊಂದಿಗೆ ಈ ಸುದೀರ್ಘ ಪಯಣ ಎನ್ನುವುದು ಅವರ ದೃಢವಾದ ನಿಲುವು.

ಸಂಚಾರದಲ್ಲಿನ ಅನುಭವಗಳನ್ನೇ ಸೇರಿಸಿ ‘ಡ್ರೀಮ್ ಟು ರೈಡ್ ಅರೌಂಡ್ ದಿ ವರ್ಲ್ಡ್‌’ ಚಿತ್ರಪುಟ ಪುಸ್ತಕ ಹೊರತಂದಿದ್ದಾರೆ. ಮೊದಲು ಮಾನವನಾಗಿರು, ಆನಂತರವೇ ಎಲ್ಲವೂ ಎನ್ನುವ ಇವರ ಮುಂದಿನ ಪುಸ್ತಕ ‘ನೋ ಕಂಟ್ರಿ ಮ್ಯಾನ್’ ಮುಂದಿನ ತಿಂಗಳು ಹೊರಬರಲಿದೆ.

₹ 50 ಲಕ್ಷ ಅಂದಾಜು: ಯಾವುದೇ ಯೋಜನೆ ಶೇ 100 ಹೂಡಿಕೆ ಇಟ್ಟು ಪ್ರಾರಂಭಿಸೋಕೆ ಆಗುವುದಿಲ್ಲ. ಇರುವುದರಲ್ಲಿ ಶುರುವಾಗಿ ಬೆಳೆಯುತ್ತ ಸಾಗಬೇಕು. ರಾಯಲ್ ಎನ್‌ಫೀಲ್ಡ್‌ ‘ಹಿಮಾಲಯನ್’ನಲ್ಲಿ ವಿಶ್ವ ಪರ್ಯಟನೆಗೆ ಅಂದಾಜು ₹50 ಲಕ್ಷ ಅಗತ್ಯವಿದೆ. ಬೈಕ್‌ಗೆ ಸಂಬಂಧಿಸಿದ ಖರ್ಚನ್ನು ರಾಯಲ್ ಎನ್‌ಫೀಲ್ಡ್ ವಹಿಸಿಕೊಂಡಿದೆ. ಇನ್ನು ಪೆಟ್ರೋಲ್‌ಗೆ ₹15-16 ಲಕ್ಷ ಬೇಕಾಗಬಹುದು.



ಹತ್ತಕ್ಕೂ ಹೆಚ್ಚು ವರ್ಷ ಎಂಜಿಯರ್ ಆಗಿ ಕಾರ್ಯನಿರ್ವಹಿಸಿ ಈಗ ಬೈಕ್ ರೈಡ್ ಎಲ್ಲವೂ ಆಗಿದೆ. ಪಿಎಫ್ ಸೇರಿದಂತೆ ದುಡಿಮೆಯಲ್ಲಿ ದೊರೆತ ಎಲ್ಲ ಹಣ ರೈಡಿಂಗ್ ಖರ್ಚಿನಲ್ಲಿ ಕಳೆದಿದೆ. ನಾಲ್ಕು ವರ್ಷಗಳ ಈ ಪ್ರಯಾಣಕ್ಕೆ ಅಗತ್ಯವಿರುವ ಮೊತ್ತದ ಶೇ 30ರಷ್ಟು ಮಾತ್ರ ಜತೆಗಿದೆ. ಆಗಸ್ಟ್ 8ರಂದು ಚೆನ್ನೈನಿಂದ ಪ್ರಯಾಣ ಆರಂಭಿಸಿದ್ದು, ಈ ಪರ್ಯಟನೆಗೆ ಸಹಕಾರ ನೀಡುವವರ ನಿರೀಕ್ಷೆಯಲ್ಲಿ ಅವರಿದ್ದಾರೆ.

ಅದೃಷ್ಟವೋ, ಇದೇ ಜಗವೋ?: ದೇಶ ದೇಶಗಳನ್ನು ಸುತ್ತುವಾಗ ಉಳಿದುಕೊಳ್ಳಲು ಇಂಥದ್ದೇ ವ್ಯವಸ್ಥೆ ಇರುವುದಿಲ್ಲ. ಸಿಕ್ಕಲ್ಲಿ ಮಲಗುವುದು, ಇಲ್ಲವೇ ಟೆಂಟ್ ಹಾಕಿಕೊಳ್ಳುವುದು. 113 ರಾಷ್ಟ್ರಗಳ ಪೈಕಿ ಈಗಾಗಲೇ ಅಮೆರಿಕ, ಕೆನಡಾದಂತಹ ಹಲವು ದೇಶಗಳ ವೀಸಾ ದೊರೆತಿದೆ. ಕೆಲ ದೇಶಗಳಿಗೆ ಪ್ರವೇಶಕ್ಕೆ ಮುನ್ನ ವೀಸಾ ಪಡೆಯಬೇಕಾಗುತ್ತದೆ. ಮಾಂಸಾಹಾರಿ ಪದಾರ್ಥಗಳ ಸೇವನೆ ಮಾಡುವುದರಿಂದ ಆಹಾರ ಯಾವುದೇ ಆದರೂ ಒಗ್ಗಿಕೊಂಡು ಸಾಗಬಹುದು(ಸಾಗಬೇಕು!). ಮಾನಸಿಕವಾಗಿ ಸಿದ್ಧನಾಗಿ ಹೊರಟಿದ್ದೇನೆ, ಏನೇ ಅಡೆತಡೆಗಳು ಎದುರಾದರೂ ಎದುರಿಸಬೇಕಾಗುತ್ತದೆ.

ಮೂರು ಜೀನ್ಸ್ ಪ್ಯಾಂಟ್, ನಾಲ್ಕು ಟಿ-ಶರ್ಟ್, ಬೈಕ್ ರೈಡಿಂಗ್ ಜಾಕೆಟ್ ಹಾಗೂ ಗಾರ್ಡ್, ಪ್ರಥಮ ಚಿಕಿತ್ಸೆಗಾಗಿ ಕಿಟ್, ಚಾಕೊಲೇಟ್, ಟೂಲ್ಸ್ ಮತ್ತು ಬಿಡಿಭಾಗಗಳು, ನ್ಯಾನೊ ಫೀಲ್ಟರ್ ಇರುವ ನೀರಿನ ಬಾಟೆಲ್, ಕ್ಯಾಮೆರಾ ಜತೆಗಿದೆ ಎಂದು ಕೇದಾರನಾಥ್ ಸಿದ್ಧತೆಗೆ ಅಗತ್ಯ ಪಟ್ಟಿ ತೆರೆದಿಟ್ಟಿದ್ದಾರೆ. ಸಾಗುವ ಹಾದಿಯನ್ನು ಚಿತ್ರೀಕರಿಸುವ ಇವರ ಹವ್ಯಾಸದ ಭಾಗವಾಗಿ ಈ ಹಿಂದೆ ಸಿದ್ಧಪಡಿಸಿದ ಕಿರುಚಿತ್ರ 2016ರಲ್ಲಿ ವಿಶ್ವಕ್ಕೆ ಶಾಂತಿ ಸಂದೇಶ ಸಾರುವ ಪ್ರಶಸ್ತಿಯನ್ನೂ ಪಡೆದಿದೆ.

*

ಪಯಣದ ಹಾದಿ ಹೀಗಿದೆ
ಚೆನ್ನೈ-ಬೆಂಗಳೂರು-ದೆಹಲಿ-ಕೋಲ್ಕತ್ತಾ–ಥಾಯ್ಲೆಂಡ್-ಆಗ್ನೇಯ ರಾಷ್ಟ್ರಗಳು- ಆಸ್ಟ್ರೇಲಿಯಾ-ನ್ಯೂಜಿಲೆಂಡ್-ಅಮೆರಿಕ-ಕೆನಡಾ-ಮೆಕ್ಸಿಕೊ-ಸೌತ್ ಸೆಂಟ್ರಲ್ ಅಮೆರಿಕ- ಆಫ್ರಿಕಾ(ಪಶ್ಚಿಮ/ದಕ್ಷಿಣ/ಉತ್ತರ)-ಯುರೋಪ್-ಮಧ್ಯ ಏಷ್ಯಾ-ಚೀನಾ-ಭಾರತ

*
ಭಾರತದಲ್ಲಿ ಬಹಳಷ್ಟು ವ್ಯತ್ಯಾಸಗಳಿದ್ದರೂ ಎಲ್ಲರೂ ಒಂದಾಗಿ ಬದುಕುತ್ತಿದ್ದೇವೆ. ವಿಶ್ವದ ಪ್ರತಿ ರಾಷ್ಟ್ರವೂ ಭಿನ್ನ. ನಾನು ಮಾನವನಾಗಿ ಇಡೀ ವಿಶ್ವಕ್ಕೆ ಸೇರಿದವನು. ಜಗತ್ತಿನ ಎಲ್ಲೆಡೆ ಪ್ರೀತಿ-ಶಾಂತಿ ಕಾಣುವುದೇ ನನ್ನ ಉದ್ದೇಶ. ದೂರದ ಪ್ರಯಾಣದಲ್ಲಿ ಸಿಕ್ಕ ಎಲ್ಲರೊಂದಿಗೂ ಮಾತನಾಡುತ್ತೇನೆ, ಮಿಕ್ಕಂತೆ ನನ್ನ ಬೈಕ್‌ನೊಂದಿಗೆ ಇರುತ್ತೇನೆ. ಹಾಗಾಗಿ, ಸುದೀರ್ಘ ಪ್ರಯಾಣದಲ್ಲಿ ಎಲ್ಲಿಯೂ ಒಂಟಿತನ ಸುಳಿಯುವುದಿಲ್ಲ.
–ಜಿ.ಎಂ. ಕೇದಾರನಾಥ್,
ಬೈಕ್ ರೈಡರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.