ADVERTISEMENT

ವೈಫೈ ಶಕ್ತಿ ಪರಿಶೀಲಿಸಿ

ವಾರದ ಆ್ಯಪ್

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2017, 19:30 IST
Last Updated 22 ಫೆಬ್ರುವರಿ 2017, 19:30 IST
ವೈಫೈ ಶಕ್ತಿ ಪರಿಶೀಲಿಸಿ
ವೈಫೈ ಶಕ್ತಿ ಪರಿಶೀಲಿಸಿ   

ವೈಫೈ ಶಕ್ತಿ ಪರಿಶೀಲಿಸಿ
ನಿಮ್ಮ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ವೈಫೈ ಆಕರಗಳಿರಬಹುದು. ವಿಮಾನ ನಿಲ್ದಾಣಗಳಲ್ಲಿ, ಹಲವು ಹೋಟೆಲ್‌ಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಇತ್ತೀಚೆಗೆ ವೈಫೈ ಮೂಲಕ ಅಂತರಜಾಲಕ್ಕೆ ಸಂಪರ್ಕ ಪಡೆಯುವ ಸೌಲಭ್ಯಗಳಿವೆ. ನಿಮ್ಮ ಆಂಡ್ರಾಯ್ಡ್‌ ಫೋನಿನಲ್ಲಿ ವೈಫೈ ಆನ್ ಮಾಡಿ ನೋಡಿದಾಗ ಎಷ್ಟು ವೈಫೈಗಳು ಲಭ್ಯವಿವೆ ಎಂದು ಅದು ತೋರಿಸುತ್ತದೆ. ಅವುಗಳಲ್ಲಿ ಯಾವುದರ ಶಕ್ತಿ ಎಷ್ಟಿದೆ ಎಂದು ತಿಳಿಯುವುದು ಹೇಗೆ? ನಿಮ್ಮ ಫೋನೇ ಅದನ್ನು ಸ್ವಲ್ಪ ಮಟ್ಟಿಗೆ ತೋರಿಸುತ್ತದೆ. ಇನ್ನೂ ಸರಿಯಾಗಿ ತಿಳಿಯಬೇಕಾದರೆ ನೀವು ಗೂಗಲ್ ಪ್ಲೇ ಸ್ಟೋರಿನಿಂದ Wifi Analyzer ಎಂಬ ಕಿರುತಂತ್ರಾಂಶ (ಆ್ಯಪ್) ಹುಡುಕಿ ಹಾಕಿಕೊಳ್ಳಬಹುದು. ಇದನ್ನು bit.ly/gadgetloka267 ಎಂಬ ಜಾಲತಾಣದ ಮೂಲಕವೂ ಪಡೆಯಬಹುದು. ನಿಮ್ಮ ಫೋನ್ ಇರುವ ಸ್ಥಳದಲ್ಲಿ ಲಭ್ಯವಿರುವ ವೈಫೈಗಳ ಶಕ್ತಿಯನ್ನು ಇದು ಗ್ರಾಫ್ ಮೂಲಕ ತೋರಿಸುತ್ತದೆ. ಜೊತೆಗೆ ಯಾವ ವೈಫೈಗೆ ಪಾಸ್‌ವರ್ಡ್‌ ಇಲ್ಲ ಎಂಬುದನ್ನೂ ತೋರಿಸುತ್ತದೆ.

ಸ್ಯಾಮ್‌ಸಂಗ್ ಮತ್ತು ಮುಂದುವರೆದ ಸ್ಫೋಟಗಳು
ಸ್ಯಾಮ್‌ಸಂಗ್ ನೋಟ್ 7 ಫೋನ್‌ನ ಬ್ಯಾಟರಿ ಮತ್ತು ಬ್ಯಾಟರಿ ಫ್ಯಾಕ್ಟರಿ ಸ್ಫೋಟಗೊಂಡ ಸುದ್ದಿಯನ್ನು ಕಳೆದ ವಾರದ ಗ್ಯಾಜೆಟ್‌ಲೋಕ ಅಂಕಣದಲ್ಲಿ ನೀಡಲಾಗಿತ್ತು. ಸ್ಯಾಮ್‌ಸಂಗ್ ಮತ್ತು ಸ್ಫೋಟಗಳಿಗೆ ಅಂಟಿದ ನಂಟು ಅಲ್ಲಿಗೆ ಮುಗಿದಂತೆ ಕಾಣಿಸುತ್ತಿಲ್ಲ. ಅಮೆರಿಕ ದೇಶದಿಂದ ಬಂದ ವರದಿಯ ಪ್ರಕಾರ ಅಲ್ಲಿ ಸುಮಾರು 700 ಸ್ಯಾಮ್‌ಸಂಗ್ ವಾಶಿಂಗ್ ಮೆಶಿನ್‌ಗಳಲ್ಲಿ ಸ್ಫೋಟ ಸಂಭವಿಸಿದೆ. ಈ ಸ್ಫೋಟಗಳಿಂದ ಜನರಿಗೆ ಅಲ್ಪ ಸ್ವಲ್ಪ ನೋವು ಕೂಡ ಸಂಭವಿಸಿದೆ. ಹೀಗೆ ಸ್ಫೋಟಗಳು ಸಂಭವಿಸಿದ ನಂತರ ಸ್ಯಾಮ್‌ಸಂಗ್ ಕಂಪೆನಿ ಸುಮಾರು 30 ಲಕ್ಷ ವಾಶಿಂಗ್ ಮೆಶಿನ್‌ಗಳನ್ನು ಮಾರುಕಟ್ಟೆಯಿಂದ ವಾಪಸು ಪಡೆದಿದೆ.

ಸುನಿಲ್ ಅವರ ಪ್ರಶ್ನೆ: ನೀವು ಯಾಕೆ ಐಫೋನ್ ವಿಮರ್ಶೆ ನೀಡುತ್ತಿಲ್ಲ?
ಉ: ನಾನು ನನಗೆ ವಿಮರ್ಶೆಗೆಂದು ಕಂಪೆನಿಯವರು ಸ್ವಲ್ಪ ಸಮಯದ ಮಟ್ಟಿಗೆ ಕಳುಹಿಸಿದ ಗ್ಯಾಜೆಟ್‌ಗಳ ವಿಮರ್ಶೆ ಬರೆಯುವುದು. ಕೆಲವೊಮ್ಮೆ ನಾವೇ ಹಣ ನೀಡಿ ಕೊಂಡುಕೊಂಡು ನಮ್ಮ ಮನೆಯಲ್ಲಿ ಬಳಸುತ್ತಿರುವ ಗ್ಯಾಜೆಟ್‌ಗಳ ವಿಮರ್ಶೆಯನ್ನೂ ನೀಡಿದ್ದೇನೆ. ನಾವು ಯಾವುದೇ ಐಫೋನ್ ಕೊಂಡುಕೊಂಡಿಲ್ಲ ಹಾಗೂ ಕಂಪೆನಿಯವರು ವಿಮರ್ಶೆಗೆ ನೀಡಿಲ್ಲ. ನನ್ನ ಪ್ರಕಾರ ಐಫೋನ್ ಅತಿಯಾದ ಮತ್ತು ಅನವಶ್ಯಕವಾಗಿ ದುಬಾರಿಯಾದ ಗ್ಯಾಜೆಟ್. ಜೊತೆಗೆ ಹಲವು ನಿರ್ಬಂಧನೆಗಳಿಗೆ ಒಳಪಟ್ಟ ಸಾಧನ.

ADVERTISEMENT

ಸ್ಮಾರ್ಟ್ ಛತ್ರಿ
ಆಗಾಗ ಛತ್ರಿ ಕಳೆದುಕೊಳ್ಳುವವರ ಸಾಲಿಗೆ ನೀವೂ ಸೇರಿದ್ದೀರಾ? ಛತ್ರಿ ಎಲ್ಲಿದೆ ಎಂದು ನಮಗೆ ಸಂದೇಶ ನೀಡುವಂತಿದ್ದರೆ ಒಳ್ಳೆಯದು ಅಂದುಕೊಂಡಿದ್ದೀರಾ? ಛತ್ರಿ ನಮ್ಮಿಂದ ದೂರವಾದಾಗ ಸಂದೇಶ ಬಂದರೆ ಚೆನ್ನಾಗಿತ್ತು ಅಂದುಕೊಂಡಿದ್ದೀರಾ? ಈ ಎಲ್ಲ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದಲ್ಲಿ ನಿಮಗೆ ಈ ಸ್ಮಾರ್ಟ್‌ಛತ್ರಿ ಬೇಕು. ಇದು ಬ್ಲೂಟೂತ್ ಮೂಲಕ ನಿಮ್ಮ ಸ್ಮಾರ್ಟ್‌ಫೋನಿನ ಸಂಪರ್ಕದಲ್ಲಿರುತ್ತದೆ. ಸಂಪರ್ಕ ಕಡಿದ ತಕ್ಷಣ, ಅಂದರೆ ನೀವು ಛತ್ರಿಯಿಂದ 30 ಅಡಿಗಿಂತಲೂ ದೂರ ಹೋದಾಗ ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಕಿರುತಂತ್ರಾಂಶ ನಿಮ್ಮನ್ನು ಎಚ್ಚರಿಸುತ್ತದೆ. ಈ ಛತ್ರಿಯ ಬೆಲೆ ಕೇವಲ 129 ಡಾಲರು (ಸುಮಾರು ₹8652). ಇಷ್ಟು ಬೆಲೆಗೆ ಎಷ್ಟು ಮಾಮೂಲಿ ಛತ್ರಿಗಳನ್ನು ಕೊಳ್ಳಬಹುದು ಎಂದು ಲೆಕ್ಕಹಾಕಿಕೊಳ್ಳಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.