ADVERTISEMENT

ಶಿಕ್ಷಣ ಕ್ರಾಂತಿ ಜಾಡು ಹಿಡಿದು

ಪೃಥ್ವಿರಾಜ್ ಎಂ ಎಚ್
Published 17 ಸೆಪ್ಟೆಂಬರ್ 2014, 19:30 IST
Last Updated 17 ಸೆಪ್ಟೆಂಬರ್ 2014, 19:30 IST

ಬಾಬರ್‌ ಅಲಿ
ಆಟ ಆಡುವ ವಯಸ್ಸಿನಲ್ಲಿ ಹಿರಿದಾದ ಸಾಧನೆ ಮಾಡಿದ ಹೆಗ್ಗಳಿಕೆ ಬಾಬರ್‌ ಅಲಿಗೆ ಸಲ್ಲುತ್ತದೆ.  ಹೈಸ್ಕೂಲ್‌ ಓದುತ್ತಿದ್ದ ಹುಡುಗನೊಬ್ಬ ಶಾಲೆ ಆರಂಭಿಸಿದ ಕಥೆ ಇದು. ಪಶ್ಚಿಮ ಬಂಗಾಳದ ಮೊಶಿರಾಬಾದ್‌ ಬಾಬರ್‌ ಅಲಿಯ ಹುಟ್ಟೂರು. ಅಪ್ಪ ಸೆಣಬಿನ ವ್ಯಾಪಾರಿ.  ಮೊಶಿರಾಬಾದ್‌ ಕುಗ್ರಾಮವಾಗಿದ್ದರಿಂದ ಅಲ್ಲಿ ಯಾವುದೇ ಶಾಲೆ ಇರಲಿಲ್ಲ.

ಅಲ್ಲಿನ ಮಕ್ಕಳು ಶಾಲೆಗೆ ಹೋಗಬೇಕಾದರೆ   ಹತ್ತು ಕಿ.ಮೀ ದೂರ ನಡೆದೇ   ಹೋಗಬೇಕಿತ್ತು. ಓದಿನ ಮೇಲೆ ಆಸಕ್ತಿ ಇದ್ದುದರಿಂದ ಬಾಬರ್‌ ಕಷ್ಟಪಟ್ಟು ಶಾಲೆಗೆ ಹೋಗುತ್ತಿದ್ದ. ಇತರ ಮಕ್ಕಳು ಶಾಲೆಗೆ ಹೋಗದೆ ದನ, ಕುರಿ ಮೇಯಿಸುವುದು ಸೇರಿದಂತೆ ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ಇವರೂ ತನ್ನಂತೆ ಶಾಲೆಗೆ ಬರಬೇಕು ಎಂಬ ಹಂಬಲ ಬಾಬರ್‌ಗೆ ಇತ್ತು.

8ನೇ ತರಗತಿ ಓದುತ್ತಿದ್ದ ಬಾಬರ್‌ ತನ್ನ ಮನೆಯ ಸಮೀಪದಲ್ಲಿದ್ದ  ಮರದಡಿಯಲ್ಲಿ ಶಾಲೆಯನ್ನು ಆರಂಭಿಸಿದ. ಆ ಶಾಲೆಗೆ ಮೊದಲ ವಿದ್ಯಾರ್ಥಿಯಾಗಿ ಸೇರಿದ್ದು ಬಾಬರ್‌ ಅಕ್ಕ. ಹೀಗೆ ಆರಂಭವಾದ ಬಾಬರ್‌ ಬಯಲು ಶಾಲೆ ಇಂದು ದೇಶದ ಗಮನ ಸೆಳೆದಿದ್ದು, ಈ ಭಾಗದ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. 

ಈ ಶಾಲೆ ಆರಂಭಿಸಲು ಸ್ವಾಮಿ ವಿವೇಕಾನಂದರ ಚಿಂತನೆಗಳು ಸ್ಫೂರ್ತಿ ಎನ್ನುವ ಬಾಬರ್‌ ಇದೀಗ ಪದವಿ ಮುಗಿಸಿದ್ದು, ಐಎಎಸ್‌ ಅಧಿಕಾರಿಯಾಗುವ ಗುರಿ ಇಟ್ಟುಕೊಂಡಿದ್ದಾರೆ.  ಬಾಬರ್‌ ಸಾಧನೆ ಮೆಚ್ಚಿ ಬಿಬಿಸಿ ಸುದ್ದಿವಾಹಿನಿ ವಿಶ್ವದ ‘ರಿಯಲ್‌ ಹೀರೊ’ ಎಂಬ ಬಿರುದು ನೀಡಿ ಗೌರವಿಸಿದೆ.  ಶಾಲಾ ವಂಚಿತ ಮಕ್ಕಳಿಗೆ ಶಿಕ್ಷಣ ನೀಡುವುದೇ ನನ್ನ ಗುರಿ ಎನ್ನುವ 21ರ ಹರೆಯದ ಬಾಬರ್‌, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಒಂದು ಶಾಲೆಯನ್ನು ತೆರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.


ಭಾರತಿ ಕುಮಾರಿ
ಬಿಹಾರದ ರಾಜಧಾನಿ ಪಟ್ನಾದಿಂದ ಸುಮಾರು 87 ಕಿ.ಮೀ ದೂರದಲ್ಲಿರುವ ಕುಸುಂಭರ ಎಂಬ ಗ್ರಾಮ 2010ರಲ್ಲಿ ವಿಶ್ವದ ಗಮನ

ಸೆಳೆದ ಹಳ್ಳಿ. ಈ ಪುಟ್ಟ ಗ್ರಾಮದಲ್ಲಿ ಶಿಕ್ಷಣ ಕ್ರಾಂತಿ ಮಾಡುವ ಮೂಲಕ ಅತಿ ಕಿರಿಯ ವಯಸ್ಸಿಗೆ ಹಿರಿದಾದ ಸಾಧನೆ ಮಾಡಿದ  ಭಾರತಿ ಕುಮಾರಿಯ ಕಥೆ ಇದು.

ಭಾರತಿ ಮೂರು ವರ್ಷದ ಮಗುವಾಗಿದ್ದಾಗ ಹೆತ್ತವರು ಪಟ್ನಾ ರೈಲು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಆಗ ಕುಸುಂಭರ ಗ್ರಾಮದ ರಾಮಪತಿ ಎಂಬುವರು ಮನೆಗೆ ತಂದು ಆಕೆಯನ್ನು ಮುದ್ದಿನಿಂದ ಬೆಳೆಸಿದರು. ರಾಮಪತಿಗೆ ಮಾತ್ರವಲ್ಲದೆ ಇಡೀ ಊರಿಗೆ ಮುದ್ದಿನ ಮಗಳಾಗಿ ಭಾರತಿ ಬೆಳೆದಳು. ಕುಸುಂಭರದಲ್ಲಿ ಶಾಲೆ ಇರಲಿಲ್ಲ. ಹಾಗಾಗಿ ಅಲ್ಲಿಂದ ಐದು ಕಿ.ಮೀ ದೂರದಲ್ಲಿದ್ದ ಪಕ್ಕದ ಹಳ್ಳಿಯ ಶಾಲೆಗೆ ನಡೆದು ಹೋಗಬೇಕಿತ್ತು. ಕುಸುಂಭರದ ಯಾವ ಮಕ್ಕಳೂ ಶಾಲೆಗೆ ಹೋಗುತ್ತಿರಲಿಲ್ಲ. ಹೋಗುತ್ತಿದ್ದದ್ದು ಭಾರತಿ ಮಾತ್ರ.

ಊರಿನ ಇತರ ಮಕ್ಕಳು ಶಾಲೆಗೆ ಬರಬೇಕು ಎಂಬುದು ಭಾರತಿ ಆಸೆಯಾಗಿತ್ತು. ಆದರೆ ಅಲ್ಲಿನ ಅನಕ್ಷರಸ್ಥ ಜನರು ಮಕ್ಕಳನ್ನು ಶಾಲೆಗೆ ಕಳುಹಿಸದೆ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.  ಆ ಮಕ್ಕಳಿಗೆ ತಾನು ಶಾಲೆಯಲ್ಲಿ ಕಲಿತ ಪಾಠವನ್ನು ಹೇಳಿಕೊಡಲು ಭಾರತಿ ಮುಂದಾದರು. ಇದಕ್ಕೆ ಸಾಕು ತಂದೆ ರಾಮಪತಿ ಮತ್ತು ಕೆಲ ಹಿರಿಕರು ಸಾಥ್‌ ನೀಡಿದರು. 

ಪ್ರತಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಟ್ಯೂಷನ್‌ ಮಾದರಿಯಲ್ಲಿ ಭಾರತಿ  ಹಿಂದಿ, ಇಂಗ್ಲಿಷ್‌ ಮತ್ತು ಗಣಿತ ಕಲಿಸುತ್ತಿದ್ದರು. ಮುಂದೆ ಜನರೇ ಒಂದು ಕಚ್ಚಾ ಶಾಲೆ ನಿರ್ಮಿಸಿಕೊಟ್ಟರು. 20ರ ಪ್ರಾಯದ ಭಾರತಿ ಇದೀಗ ಪಟ್ನಾದಲ್ಲಿ ಪದವಿ ಓದುತ್ತಿದ್ದಾರೆ. ಭಾರತಿಯ ಸೇವೆಯಿಂದಾಗಿ ಕುಸುಂಭರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಆರಂಭವಾಗಿದೆ. ಊರಿನ ಎಲ್ಲಾ ಮಕ್ಕಳು ಶಿಕ್ಷಣ ಪಡೆಯುತ್ತಿರುವುದು  ಸಂತಸ ತಂದಿದೆ ಎನ್ನುವ ಭಾರತಿ ಅವರಿಗೆ ಶಿಕ್ಷಕಿಯಾಗುವ ಕನಸು.


ADVERTISEMENT

ಎವೆಂಡ್ರೋ ಜೊಯೊ ಸಿಲ್ವಾ
ಬ್ರೆಜಿಲ್‌ ದೇಶದ ಬಾಲಕ ಎವೆಂಡ್ರೋ ಜೊಯೊ ಸಿಲ್ವಾ ಅವರದ್ದು ಮನಕರಗುವ ಕಥೆ. ಆಗ ಸಿಲ್ವಾನಿಗೆ ಕೇವಲ ಐದು ವರ್ಷ.  ಒಂದು ದಿನ ಶಾಲೆ ಮುಗಿಸಿಕೊಂಡು ಮನೆಗೆ ಬಂದಾಗ ಅಪ್ಪ ಅಮ್ಮ ಕೊಲೆಯಾಗಿ ಬಿದ್ದಿದ್ದರು. ದರೋಡೆಕೋರರ ದುಷ್ಕೃತ್ಯದಿಂದ ಸಿಲ್ವಾ ಅನಾಥನಾದ. ಬ್ರೆಜಿಲ್‌ ಪೊಲೀಸರು ಸಿಸಿಟಿ.ವಿ ನೆರವಿನಿಂದ ಹಂತಕರನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸಿದರು. ಆದರೆ ಸಿಲ್ವಾ ನೈಜಿರಿಯಾ ಮೂಲದವನಾಗಿದ್ದರಿಂದ ಸರ್ಕಾರದಿಂದ ಯಾವುದೇ ನೆರವು ದೊರೆಯಲಿಲ್ಲ.

ಬೀದಿಯಲ್ಲಿ ಪಿಟೀಲು ಬಾರಿಸುತ್ತಿದ್ದ ಡಿಯೋಗೊ ಫ್ರಜೋಯೋ ಎಂಬ ಮಧ್ಯ ವಯಸ್ಕ ಸಿಲ್ವಾನನ್ನು ಸಾಕಿದ. ಅವನಿಗೆ ಪಿಟೀಲು ನುಡಿಸುವುದನ್ನು ಹೇಳಿಕೊಟ್ಟ. ಏಕಾಂಗಿಯಾಗಿದ್ದ  ಡಿಯೋಗೋ ಅನಾಥ ಮಕ್ಕಳನ್ನು ಸಾಕುತ್ತಿದ್ದ. ಬೀದಿಯಲ್ಲಿ ಪಿಟೀಲು ನುಡಿಸಿ ಅದರಿಂದ ಬಂದ ಹಣದಿಂದ ಜೀವನ ನಡೆಸುತ್ತಿದ್ದ. ಅನಾರೋಗ್ಯಕ್ಕೆ ತುತ್ತಾಗಿ ಡಿಯೋಗೋ ಕೂಡ ಸಾವನ್ನಪ್ಪಿದ.

ಡಿಯೋಗೋ ಸಾಯುವ ವೇಳೆಗೆ ಸಿಲ್ವಾ ಪಿಟೀಲು ನುಡಿಸುವುದರಲ್ಲಿ ಪರಿಣತನಾಗಿದ್ದ. ಡಿಯೋಗೋ ಕೆಲಸದ ಪರಂಪರೆಯನ್ನು ಸಿಲ್ವಾ ಮುಂದುವರೆಸಿಕೊಂಡು ಬೆಳೆದ. ಇದೀಗ ಸಿಲ್ವಾನಿಗೆ 21 ವರ್ಷ. ಬ್ರೆಜಿಲ್‌ ರಾಜಧಾನಿ ರಿಯೋ ಡಿ ಜನೈರೊ ನೆಲೆಸಿದ್ದು ಪಿಟೀಲು ನುಡಿಸುವ ಮೂಲಕ ಅನಾಥ ಮಕ್ಕಳು ಮತ್ತು ಗಲಭೆಗಳಲ್ಲಿ ಸಂತ್ರಸ್ತರಾಗಿರುವ ಮಕ್ಕಳನ್ನು ಸಾಕುತ್ತಿದ್ದಾನೆ. ಸಿಲ್ವಾನ ಈ ಸಾಮಾಜಿಕ ಸೇವೆಯನ್ನು ಮೆಚ್ಚಿ ಕೆಲ ಸ್ವಯಂ ಸಂಸ್ಥೆಗಳು ಮತ್ತು ಬ್ರೆಜಿಲ್‌ ಸರ್ಕಾರ ಹಣಕಾಸು ನೆರವು ನೀಡುತ್ತಿವೆ. ಈ ಹಣದಿಂದ  ಅನಾಥಾಶ್ರಮ ಆರಂಭಿಸಿದ್ದು, ಮಕ್ಕಳಿಗೆ ಪಿಟೀಲು ನುಡಿಸುವುದನ್ನು ಕಲಿಸುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.