ADVERTISEMENT

ಸಂವಹನ: ಅಂದಿನಿಂದ ಇಂದಿನವರೆಗೆ...

ಸೂರ್ಯ
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST

ಮಾಹಿತಿ ‌ತಂತ್ರಜ್ಞಾನದ ಈ ಯುಗದಲ್ಲಿ ಇನ್ನೊಬ್ಬರೊಂದಿಗೆ ಸಂವಹನ ನಡೆಸುವುದು ಅಥವಾ ಬೇರೆಯವರಿಗೆ ಸಂದೇಶ ರವಾನಿಸುವುದು ಕಷ್ಟವೇನಲ್ಲ. ಅರೆ ಕ್ಷಣ ಸಾಕು. ಆಧುನಿಕ ಕಾಲಘಟ್ಟದಲ್ಲಿ ಸಂವಹನ ನಡೆಸಲು ಅದೆಷ್ಟು ಸಾಧನಗಳು, ದಾರಿಗಳಿಲ್ಲ? ದೂರವಾಣಿ, ಮೊಬೈಲ್‌, ಇಂಟರ್‌ನೆಟ್‌, ಸಾಮಾಜಿಕ ಜಾಲತಾಣಗಳು... ಹೀಗೆ ಹಲವನ್ನು ಪಟ್ಟಿ ಮಾಡಬಹುದು.

ಕೆಲವು ದಶಕಗಳ ಹಿಂದೆ ದೂರದಲ್ಲಿರುವವರೊಂದಿಗೆ ಮಾತ ನಾಡುವುದು ಇಲ್ಲವೇ ಅವರಿಗೆ ಸಂದೇಶ ರವಾನಿಸುವುದು, ಪಡೆಯುವುದು ಅಷ್ಟೊಂದು ಸುಲಭವಾಗಿರಲಿಲ್ಲ. ನಮ್ಮ ಸಂದೇಶಗಳು ಅವರಿಗೆ ವೇಗವಾಗಿ ತಲುಪುತ್ತಲೂ ಇರಲಿಲ್ಲ. ಅದಕ್ಕಾಗಿ ದಿನಗಟ್ಟಲೆ ಕಾಯಬೇಕಿತ್ತು. ಅದಕ್ಕಾಗಿ ಅಂಚೆ ವ್ಯವಸ್ಥೆಯನ್ನೇ ಅವಲಂಬಿಸಬೇಕಿತ್ತು.

ಇತ್ತೀಚಿನವರೆಗೆ ಅಂದರೆ, ಒಂದೆರಡು ದಶಕದ ಹಿಂದಿನವರೆಗೂ ಸಂವಹನ ಎಂದಾಕ್ಷಣ ಅಂಚೆ ನೆನಪಾಗುತ್ತಿತ್ತು. ಹಲವು ಶತಮಾನಗಳಿಂದ ಅದು ಸಂವಹನದ ಜೀವನಾಡಿಯೇ ಆಗಿತ್ತು. ಈಗಲೂ ಪ್ರಪಂಚದಾದ್ಯಂತ ಅಂಚೆ/ಟಪಾಲು ಸೇವೆ ಇದೆ. ಆದರೆ, ಅದು ಮೊದಲಿನಷ್ಟು ಅನಿವಾರ್ಯವಾಗಿ ಉಳಿದಿಲ್ಲ. ಬೇರೆ ಬೇರೆ ರೂಪದಲ್ಲಿ ಲಭ್ಯವಿರುವ ಸಂವಹನ ಸೇವೆಗಳು ಅದರ ಅನಿವಾರ್ಯತೆಯನ್ನು ಕಡಿಮೆಗೊಳಿಸಿದೆ.

ADVERTISEMENT

ಅಂಚೆಯ ಮೂಲಕ ಸಂವಹನ ನಡೆಸುವ ಪದ್ಧತಿ ಬೆಳೆದು ಬಂದ ಹಾದಿಯಲ್ಲಿ ಅಚ್ಚರಿಯ ಸಂಗತಿಗಳೇ ಎದುರಾಗುತ್ತವೆ. ಸರಿ ಸುಮಾರು ನಾಲ್ಕೂವರೆ ಸಾವಿರಕ್ಕಿಂತಲೂ ಹೆಚ್ಚಿನ ಇತಿಹಾಸ ಹೊಂದಿರುವ ಅಂಚೆ ಬೆಳೆದು ಬಂದಿದ್ದು ಹಂತಹಂತವಾಗಿ. ಅದನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಪ್ರಯತ್ನ ಇದು.

ಮಾನವನಿಗೆ ಬರವಣಿಗೆ (ಅಕ್ಷರಗಳ ಬರವಣಿಗೆ ಸರಿ ಸುಮಾರು ಕ್ರಿ.ಪೂ 3,500ರ ಅವಧಿಯಲ್ಲಿ ಆವಿಷ್ಕಾರ ಆಯಿತು ಎಂದು ಅಂದಾಜಿಸಲಾಗಿದೆ) ಯಾವಾಗ ಅರಿವಿಗೆ ಬಂತೋ, ಅಂದಿನಿಂದಲೇ ಲಿಖಿತ ದಾಖಲೆಗಳ ಮೂಲಕ ಸಂದೇಶಗಳನ್ನು ಇನ್ನೊಬ್ಬರಿಗೆ ಮತ್ತು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಿಸುವ ವ್ಯವಸ್ಥೆ ಈ ಭೂಮಿಯಲ್ಲಿ ಅಸ್ತಿತ್ವಕ್ಕೆ ಬಂತು ಎಂದು ಇತಿಹಾಸ ತಜ್ಞರು ಬಲವಾಗಿ ಪ್ರದಿಪಾದಿಸುತ್ತಾರೆ. ಆದರೆ, ಅಂಚೆ ವ್ಯವಸ್ಥೆಗೆ ಸ್ಪಷ್ಟ ರೂಪ ಸಿಗಲು ತುಂಬಾ ಸಮಯ ಬೇಕಾಯಿತು. ಆರಂಭದ ದಿನಗಳಲ್ಲಿ ಅಂಚೆಯ ಸೇವೆಗಳು ಅಧಿಕಾರದಲ್ಲಿದ್ದವರಿಗೆ ಮಾತ್ರ ಮೀಸಲಾಗಿತ್ತು. ತಮ್ಮ ಆಡಳಿತದ ಕಾರ್ಯಗಳಿಗಾಗಿ ಇದನ್ನು ಬಳಸುತ್ತಿದ್ದರು. ವಿವಿಧ ದೇಶಗಳಲ್ಲಿನ ಅಂಚೆಯ ಇತಿಹಾಸವನ್ನು ನೋಡಿದಾಗ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಸಾರ್ವಜನಿಕರಿಗೆ ಈ ಸೇವೆ ಮುಕ್ತವಾಗಿದ್ದು ಬಹಳ ಸಮಯದ ನಂತರ.

ಮೊತ್ತ ಮೊದಲ ವ್ಯವಸ್ಥಿತ ಅಂಚೆ ಸೇವೆ ಆರಂಭವಾಗಿದ್ದು ಪುರಾತನ ಈಜಿಪ್ಟ್‌ನಲ್ಲಿ ಎಂದು ನಂಬಲಾಗಿದೆ. ಕ್ರಿ.ಪೂ 2400ರ ಅವಧಿಯಲ್ಲಿ ಪ್ರಾಚೀನ ಈಜಿಪ್ಟ್‌ ಅನ್ನು ಆಳುತ್ತಿದ್ದ ಫೆರೊಗಳು, ತಮ್ಮ ಆಜ್ಞೆಗಳನ್ನು ಪ್ರಜೆಗಳಿಗೆ ತಲುಪಿಸಲು ಅಂಚೆ ಸೇವೆಯನ್ನು ಬಳಸಿದ್ದರಂತೆ. ಈಜಿಪ್ಟ್‌ನಲ್ಲಿ ಅಂಚೆ ಪದ್ಧತಿ ಜಾರಿಯಲ್ಲಿತ್ತು ಎಂಬುದಕ್ಕೆ ದಾಖಲೆಯೂ ಸಿಕ್ಕಿದೆ. ಇದು ಕ್ರಿ.ಪೂ 255ರ ಅವಧಿಗೆ ಸಂಬಂಧಿಸಿದ್ದು. ಪ್ರಾಚೀನ ಕಾಲದಲ್ಲೇ ಈ ವ್ಯವಸ್ಥೆ ಅಸ್ತಿತ್ವದಲ್ಲಿದ್ದ ಬಗ್ಗೆ ಸಿಕ್ಕಿದ ಮೊದಲ ಪುರಾವೆಯೂ ಇದುವೇ.

ಪುರಾತನ ಪರ್ಷಿಯಾದಲ್ಲೂ ಅತ್ಯಂತ ವ್ಯವಸ್ಥಿತ ಅಂಚೆ ವ್ಯವಸ್ಥೆ ಇತ್ತು ಎಂಬ ವಾದವೂ ಇದೆ. ಆದರೆ, ಇದು ಆರಂಭಗೊಂಡ ಸಮಯದ ಬಗ್ಗೆ ಮಾಹಿತಿ ಇಲ್ಲ. ಕ್ರಿ.ಪೂ 550ರಲ್ಲಿ ಆಳ್ವಿಕೆ ನಡೆಸಿದ್ದ ಪರ್ಷಿಯಾ ರಾಜ ಸೈರಸ್‌ ದಿ ಗ್ರೇಟ್‌ನ ಆಡಳಿತದಲ್ಲಿ ಈ ಪದ್ಧತಿ ಜಾರಿಯಲ್ಲಿತ್ತು ಎಂಬುದನ್ನು ಇತಿಹಾಸಕಾರ ಕ್ಸೆನಫೋನ್‌ ಅವರು ದಾಖಲಿಸಿದ್ದಾರೆ. ಅವರ ಪ್ರಕಾರ, ಅಂಚೆಯ ಸೃಷ್ಟಿಕರ್ತ ಕೂಡ ಇದೇ ರಾಜ. ತನ್ನ ಆಡಳಿತದ ಎಲ್ಲ ಪ್ರಾಂತ್ಯಗಳಲ್ಲೂ ಜನರಿಗೆ ಪತ್ರಗಳನ್ನು ಹಂಚುವುದಕ್ಕಾಗಿಯೇ ಕಾರ್ಯಕ್ರಮ ಆಯೋಜಿಸುವುದನ್ನು ಸೈರಸ್‌ ಕಡ್ಡಾಯಗೊಳಿಸಿದ್ದ. ಅಲ್ಲದೇ ಇದೇ ವ್ಯವಸ್ಥೆಯನ್ನು ಅನುಕರಿಸುವಂತೆ ನೆರೆಯ ರಾಜ್ಯಗಳ ರಾಜರ ಮನವೊಲಿಸಲು ಆತ ಯತ್ನಿಸಿದ್ದ. ಇನ್ನೂ ಕೆಲವು ಬರಹಗಾರರ ಪ್ರಕಾರ, ಪರ್ಷಿಯಾದಲ್ಲಿ ಅಂಚೆ ವ್ಯವಸ್ಥೆ ಜಾರಿಗೆ ತಂದಿದ್ದು ಸೈರಸ್‌ನ ಉತ್ತರಾಧಿಕಾರಿ 1ನೇ ಡೇರಿಯಸ್‌ (ಕ್ರಿ.ಪೂ 521). ‌

ಇದಕ್ಕೂ ಮೊದಲು ಅಸ್ಸೀರಿಯಾದಲ್ಲಿ (ಮೆಸಪೊಟೇಮಿಯಾದಲ್ಲಿದ್ದ ಒಂದು ರಾಜ್ಯ) ಅಂಚೆ ಪದ್ಧತಿಯನ್ನು ಹೋಲುವ ವ್ಯವಸ್ಥೆ ಇತ್ತು ಎಂಬ ಇನ್ನೊಂದು ವಾದವೂ ಇದೆ. ಕ್ರಿ.ಪೂ 1700ರ ಅವಧಿಯಲ್ಲಿ ಆಡಳಿತದಲ್ಲಿದ್ದ ಹಮ್ಮುರಬಿ ಮತ್ತು ಕ್ರಿ.ಪೂ 722ರಲ್ಲಿ ಆಡಳಿತದಲ್ಲಿದ್ದ 2ನೇ ಸರ್ಗೊನ್‌ ಇದಕ್ಕೆ ಹೆಚ್ಚು ಉತ್ತೇಜನ ನೀಡಿದರು ಎಂದು ನಂಬಲಾಗಿದೆ. ಆದರೆ, ಲಿಖಿತ ದಾಖಲೆಗಳನ್ನು ರವಾನಿಸುವುದು ಈ ವ್ಯವಸ್ಥೆಯ ಉದ್ದೇಶ ಆಗಿರಲಿಲ್ಲ. ಇದನ್ನು ಬಳಸಿಕೊಂಡು ಗುಪ್ತಚರ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿತ್ತು. ತದ ನಂತರದಲ್ಲಿ ತೆರಿಗೆ ಸಂಗ್ರಹಕ್ಕೂ ಇದನ್ನು ಅನುಸರಿಸಲಾಗುತ್ತಿತ್ತು.

ಈ ವ್ಯವಸ್ಥೆಯ ಆರಂಭದ ದಿನಗಳಲ್ಲಿ ಅಂಚೆ ಸೇವೆಗಳಿಗಾಗಿಯೇ ನಿರ್ದಿಷ್ಟ ಮಾರ್ಗವನ್ನು ನಿಗದಿಪಡಿಸಲಾಗುತ್ತಿತ್ತು. ಆ ಮಾರ್ಗದಲ್ಲಿ ಹಲವು ಅಂಚೆ ಕೇಂದ್ರಗಳನ್ನೂ ಗುರುತಿಸಲಾಗಿತ್ತು. ಅದರ ಮೂಲಕವೇ ಟಪಾಲುಗಳು ವಿಲೇವಾರಿ ಆಗುತ್ತಿತ್ತು. ಕುದುರೆ ಅಥವಾ ಅದರ ಗಾಡಿಗಳ ಮೂಲಕ ಟಪಾಲುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ರವಾನಿಸಲಾಗುತ್ತಿತ್ತು.

ಪರ್ಷಿಯಾದಲ್ಲಿ ವಿಶಿಷ್ಟ ವಿಧಾನವನ್ನು ಅನುಸರಿಸಲಾಗುತ್ತಿತ್ತು. ಪತ್ರಗಳೊಂದಿಗೆ ಸವಾರನೊಬ್ಬ ಕುದುರೆಯೊಂದಿಗೆ ಒಂದು ಸ್ಥಳದಿಂದ (ಅಂಚೆ ಕೇಂದ್ರ) ಇನ್ನೊಂದು ಜಾಗಕ್ಕೆ ಪ್ರಯಾಣಿಸುತ್ತಿದ್ದ. ನಿರ್ದಿಷ್ಟ ಕೇಂದ್ರಕ್ಕೆ ತಲುಪಿದ ನಂತರ ಅಲ್ಲಿ ಆ ಕುದುರೆಯನ್ನು ಬಿಟ್ಟು, ಹೊಸ ಕುದುರೆಯನ್ನು ಏರಿ ಇನ್ನೊಂದು ಸ್ಥಳಕ್ಕೆ ಹೋಗುತ್ತಿದ್ದ. ಅಥವಾ ಇನ್ನೊಬ್ಬ ಕುದುರೆ ಸವಾರನಿಗೆ ಪತ್ರಗಳನ್ನು ರವಾನಿಸುತ್ತಿದ್ದ. ಅಂಚೆ ಪತ್ರಗಳನ್ನು ಶೀಘ್ರದಲ್ಲಿ ತಲುಪಿಸುವುದಕ್ಕಾಗಿ ಈ ವಿಧಾನ ಅನುಸರಿಸಲಾಗುತ್ತಿತ್ತು.
⇒(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.