ADVERTISEMENT

ಸೇವೆಯ ಹಾದಿಯಲ್ಲಿ...

ಪೃಥ್ವಿರಾಜ್ ಎಂ ಎಚ್
Published 23 ಏಪ್ರಿಲ್ 2014, 19:30 IST
Last Updated 23 ಏಪ್ರಿಲ್ 2014, 19:30 IST

ಕೃಷ್ಣಾ ರಾಮ್ಕುಮಾರ್‌

ದುರ್ಬಲರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವುದರಲ್ಲಿ ಸಿಗುವ ಆತ್ಮತೃಪ್ತಿಯೇ  ಜೀವನದ ನಿಜವಾದ ಪರಮಾನಂದ ಎನ್ನುತ್ತಾರೆ ಕೃಷ್ಣಾ ರಾಮ್ಕುಮಾರ್‌.

  ರಾಮ್‌ ಬಾಂಬೆ ಐಐಟಿಯಲ್ಲಿ ಕೆಮಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದವರು. ಬಾಸ್ಟನ್‌ ಗ್ರೂಪ್‌ ಕಂಪೆನಿಯಲ್ಲಿ ಕೈ ತುಂಬಾ ಸಂಬಳ ಬರುವ ಕೆಲಸ. ಆದರೂ ಮನಸ್ಸು ಸದಾ ಸಮಾಜ ಸೇವೆಯತ್ತ ತುಡಿಯುತ್ತಿತ್ತು. ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ದುಡಿಯುವ ಸಂಕಲ್ಪ ಮಾಡಿದರು. ತನ್ನ ಕಣ್ಣ ಮುಂದಿರುವ ಗುರಿಯ ಬಗ್ಗೆ ಗೆಳೆಯ ಅಕ್ಷಯ್‌ ಜೊತೆ ಹಂಚಿಕೊಂಡರು. ರಾಮ್‌ ಸಂಕಲ್ಪದಿಂದ ಪ್ರಭಾವಿತನಾದ ಅಕ್ಷಯ್‌ ಸಮಾಜ ಸೇವೆಗೆ ಕೈ ಜೋಡಿಸಿದರು.

  2010ರಲ್ಲಿ ಇಬ್ಬರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿ ತಾವು ಉಳಿಸಿದ ಅಲ್ಪ ಸ್ವಲ್ಪ ಹಣದಲ್ಲೇ ‘ಆವಂತಿ’ ಎಂಬ ಶೈಕ್ಷಣಿಕ ಸಂಸ್ಥೆಯನ್ನು ಕಟ್ಟಿದರು. ಆರಂಭದಲ್ಲಿ ದ್ವಿತೀಯ ಪಿಯುಸಿಯ 100 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಉತ್ತಮ ಶೈಕ್ಷಣಿಕ ತರಬೇತಿ ನೀಡುವ ಮೂಲಕ ಅವರನ್ನೆಲ್ಲ ಐಐಟಿ, ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಕಳುಹಿಸುವ ಮೂಲಕ ಹೊಸ ದಾಖಲೆ ಬರೆದರು. ವಿಶೇಷವೆಂದರೆ ಆ ನೂರು ವಿದ್ಯಾರ್ಥಿಗಳು ಕಡು ಬಡವರಾಗಿದ್ದರು!

  ಆವಂತಿ ಸಂಸ್ಥೆ ದೇಶದ ಒಂಬತ್ತು ಮಹಾನಗರಗಳಲ್ಲಿ ಕೆಲಸ ಮಾಡುತ್ತಿದೆ.  ಪ್ರಾಥಮಿಕ ಶಾಲೆಯಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಪ್ರಸ್ತುತ ಸುಮಾರು 700ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. 2019ರ ವೇಳೆಗೆ ಸುಮಾರು 20,000 ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಇದೆ ಎಂದು ರಾಮ್ ತಿಳಿಸುತ್ತಾರೆ.

ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿಯೊಂದಿಗೆ ಶಿಕ್ಷಣ ನೀಡಲಾಗುತ್ತಿದೆ. ಇದಕ್ಕೆ ವಿದೇಶಿ ದೇಣಿಗೆ ಮತ್ತು ಭಾರತ ಸರ್ಕಾರದಿಂದ ಸಿಗುವ ಹಣಕಾಸು ನೆರವು ಬಳಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಅಕ್ಷಯ್‌.   ಭವಿಷ್ಯದಲ್ಲಿ ಭಾರತೀಯರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಸಂಕಲ್ಪ ಮಾಡಿರುವ ಈ ಯುವಕರು ಸಮಾಜದ ನಿಜವಾದ ಹೀರೊಗಳು.
www.avantifellows.org

ರಿಕಿನ್‌ ಪಟೇಲ್‌

ಇರಾನ್‌ ದೇಶದ ಮಹಿಳೆ ರುಬಿಯಾಗೆ ಅಲ್ಲಿನ ಸ್ಥಳೀಯ ಪಂಚಾಯ್ತಿಯವರು ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ ನೀಡಿರುತ್ತಾರೆ. ಈ ಬಗ್ಗೆ ಅಪರಿಚಿತ ವ್ಯಕ್ತಿಯೊಬ್ಬ ‘ಆವಾಜ್‌’ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸುತ್ತಾನೆ. ಕೆಲವೇ ಗಂಟೆಗಳಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಅಲ್ಲಿಗೆ ಬಂದು ರುಬಿಯಾಳ ಘೋರ ಹತ್ಯೆಯನ್ನು ಸಿನಿಮೀಯ ರೀತಿಯಲ್ಲಿ ತಪ್ಪಿಸುತ್ತದೆ.

ADVERTISEMENT

ಇದೆಲ್ಲಾ ಸಾಧ್ಯವಾಗಿದ್ದು ಮಹಿಳಾ ದೌರ್ಜನ್ಯದ ವಿರುದ್ಧ ಸಮರ ಸಾರಿರುವ ಆವಾಜ್‌ ಎಂಬ ಸ್ವಯಂ ಸೇವಾ ಸಂಸ್ಥೆಯಿಂದ. ಇದನ್ನು ಹುಟ್ಟು ಹಾಕಿದ್ದು ಭಾರತೀಯ ಮೂಲದ ಯುವಕ ರಿಕಿನ್‌ ಪಟೇಲ್‌ ಎಂಬುದು ಹೆಮ್ಮೆಯ ಸಂಗತಿ.

ವಿಶ್ವವ್ಯಾಪಿಯಾಗಿ ಆವಾಜ್‌ ಸಂಸ್ಥೆ ಕೆಲಸ ಮಾಡುತ್ತಿದೆ. ಸಂಸ್ಥೆಯ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಸ್ಪಂದನೆ ಸಿಗಲಿದೆ. ದೂರಿನ ಬಗ್ಗೆ ಪರಿಶೀಲನೆ ನಡೆಸಿ ನ್ಯಾಯ ದೊರೆಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಸಂಸ್ಥೆವತಿಯಿಂದ ನಡೆಯುತ್ತಿದೆ. ಮಹಿಳೆಯರು ಅಪಾಯದಲ್ಲಿ ಸಿಲುಕಿರುವ ಸಂದರ್ಭಗಳಲ್ಲಿ ತ್ವರಿತ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸುವುದು ಆವಾಜ್‌ನ ವಿಶೇಷ.

  ಇಲ್ಲಿಯವರೆಗೂ ವಿಶ್ವದಾದ್ಯಂತ ಕಾಮದಕೂಪಕ್ಕೆ ತಳ್ಳಲಾಗಿದ್ದ ಸುಮಾರು 80,000 ಮಹಿಳೆಯರನ್ನು ರಕ್ಷಿಸಲಾಗಿದೆ. ಅವರಿಗೆ ವಿಶ್ವಸಂಸ್ಥೆ ಮತ್ತು ಸ್ಥಳೀಯ ಸರ್ಕಾರದ ನೆರವಿನಿಂದ ಪುನರ್ವಸತಿ ಕಲ್ಪಿಸಿದ್ದಾರೆ ಪಟೇಲ್‌.

ಭಾರತದಲ್ಲಿ ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿರುವ ಬಗ್ಗೆ ಅತಿ ಹೆಚ್ಚು ದೂರುಗಳು ಬರುತ್ತಿವೆ. ಆದರೆ ಇಲ್ಲಿನ ಸರ್ಕಾರಗಳು ಮತ್ತು ಸಾಮಾಜಿಕ ವ್ಯವಸ್ಥೆ ಪ್ರಭಾವಿಗಳ ಪರ ಇರುವುದರಿಂದ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಸಾಧ್ಯವಾಗುತ್ತಿಲ್ಲ ಎಂದು ಪಟೇಲ್‌ ಅಸಮಾಧಾನ ವ್ಯಕ್ತಪಡಿಸುತ್ತಾರೆ.

36ರ ಹರೆಯದ ಪಟೇಲ್‌ ವಿಶ್ವದ ಮಹಿಳಾ ಪರ ಹೋರಾಟಗಾರರಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಸಾಧನೆಗೆ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.
www.avaaz.org


ಹನ್ಸ್ ದಲಾಲ್‌

ದಲಾಲ್‌ಗೆ ಹುಲಿಗಳೆಂದರೆ ಹೆಚ್ಚು  ಪ್ರೀತಿ. ಕನಿಷ್ಠ ಪಕ್ಷ ಕಾಡಿಗೆ ಹೋಗಿ ಹುಲಿಗಳನ್ನು ದೂರದಿಂದ ನೋಡಲಾಗದ ದೈಹಿಕ ಅಸಮರ್ಥತೆ ಅವರದ್ದು. ಆದರೂ ಹುಲಿಗಳ ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತ ಧೈರ್ಯವಂತ ಯುವಕ. ಭಾರತದಲ್ಲಿ ಹುಲಿಗಳ ರಕ್ಷಕ ಎಂದೇ ಖ್ಯಾತಿಯಾಗಿರುವ ಅಂಗವಿಕಲ ದಲಾಲ್‌ನ ಕತೆ ಇದು.

ದಲಾಲ್‌ ಆರು ವರ್ಷದ ಬಾಲಕನಾಗಿದ್ದಾಗ ಪಾರ್ಶ್ವವಾಯು ಪೀಡಿತನಾಗಿ ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರು. ಪ್ರಾಣಿ ಪಕ್ಷಿಗಳ ಮೇಲೆ ಅತೀವ ಆಸಕ್ತಿ ಬೆಳೆಸಿಕೊಂಡಿದ್ದರು. ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡುವುದು, ಅವುಗಳ ಚಿತ್ರ ಮತ್ತು ವಿಡಿಯೊ ವೀಕ್ಷಣೆಯಲ್ಲೇ ಬಾಲ್ಯ ಕಳೆದರು. ಮುಂದೆ ಸೌಂಡ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದರು. ಅತಿ ಕಿರಿಯ ವಯಸ್ಸಿಗೆ ಬಾಲಿವುಡ್‌ನ ಹಲವಾರು ಯಶಸ್ವಿ ಚಿತ್ರಗಳಿಗೆ ಸೌಂಡ್‌ ಎಂಜಿನಿಯರ್ ಆಗಿ ಕೆಲಸ ಮಾಡಿದರು. ಅದ್ಯಾಕೊ ಬಿಟ್ಟೆನೆಂದರೂ ಬಿಡದಿ ಮಾಯೆ ಎನ್ನುವಂತೆ ಹುಲಿಯ ಮೇಲಿನ ಪ್ರೀತಿ ಗಾಢವಾಗಿ ಕಾಡಿತು.

ಹುಲಿಗಳ ರಕ್ಷಣೆಗಾಗಿ ಪ್ರೌಲ್‌ (prowl) ಎಂಬ ಸ್ವಯಂ ಸೇವಾ ಸಂಸ್ಥೆ ಪ್ರಾರಂಭಿಸಿದರು. ಇದರ ಮೂಲಕ ಭಾರತ ಸೇರಿದಂತೆ ವಿದೇಶದ ನಾನಾ ಭಾಗಗಳಿಗೆ ತೆರಳಿ ಹುಲಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ.  ಹುಲಿ ರಕ್ಷಣೆ ಕುರಿತು ಕಿರು ಚಿತ್ರಗಳನ್ನು ತಯಾರಿಸಿ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ದಲಾಲ್‌ಗೆ ಸಲ್ಲುತ್ತದೆ.

ಅರಣ್ಯವಾಸಿಗಳು ಹಣದ ಆಸೆಗೆ ಹುಲಿಗಳನ್ನು ಕೊಂದು ಅವುಗಳ ಚರ್ಮ, ಉಗುರುಗಳನ್ನು ಮಾರಾಟ ಮಾಡುತ್ತಿರುವುದರಿಂದಲೇ ದೇಶದಲ್ಲಿ ಹುಲಿಗಳ ಸಂತತಿ ಕಡಿಮೆಯಾಗುತ್ತಿದೆ. ಇದನ್ನು ತಡೆಯುವ ಸಲುವಾಗಿ ಪ್ರೌಲ್‌ ಸಂಸ್ಥೆಯನ್ನು ಕಟ್ಟಿಕೊಂಡು ಹೋರಾಡುತ್ತಿದ್ದೇನೆ ಎನ್ನುತ್ತಾರೆ ದಲಾಲ್‌.
akeadifference@prowl.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.