ADVERTISEMENT

ಹಣ: ಅಂದಿನಿಂದ ಇಂದಿನವರೆಗೆ

ಅರಿವು ಹರಿವು

ಸೂರ್ಯ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST
ಹಣ: ಅಂದಿನಿಂದ ಇಂದಿನವರೆಗೆ
ಹಣ: ಅಂದಿನಿಂದ ಇಂದಿನವರೆಗೆ   

16ನೇ ಶತಮಾನದ ಮಧ್ಯ ಭಾಗದವರೆಗೆ ಭಾರತದಲ್ಲಿ ರೂಪಾಯಿ ಕಾಲೂರಿರಲಿಲ್ಲ. 1540ರ ನಂತರದಲ್ಲಿ ನಾಣ್ಯಗಳನ್ನು ರೂಪಾಯಿ ಮಾನದಂಡದಲ್ಲಿ ಅಳೆಯುವ ಪದ್ಧತಿ ಜಾರಿಗೆ ಬಂತು. ಇದಕ್ಕೆ ಕಾರಣೀಭೂತನಾದವನು ಉತ್ತರ ಭಾರತದಲ್ಲಿ ಸುರ್‌ ಸಾಮ್ರಾಜ್ಯವನ್ನು ಸ್ಥಾಪಿಸಿದ ಶೇರ್‌ ಷಾ ಸುರಿ ಎಂಬ ಆಫ್ಘಾನಿಸ್ತಾನ ಮೂಲದ ಪಠಾಣ್‌ ಸಮುದಾಯದ ರಾಜ.

ಕ್ಷಿಪ್ರ ಬೆಳವಣಿಗೆಯಲ್ಲಿ ಮೊಘಲ್‌ ದೊರೆ ಹುಮಾಯೂನ್‌ನನ್ನು ಸೋಲಿಸಿದ ಶೇರ್‌ ಷಾ, ಹೊಸದಾದ ನಾಗರಿಕ ಮತ್ತು ಸೇನಾ ಆಡಳಿತವನ್ನು ಸ್ಥಾಪಿಸಿದ. 178 ಗ್ರೇನುಗಳಷ್ಟು (ಅತ್ಯಂತ ಚಿಕ್ಕದಾದ ತೂಕಮಾನ) ತೂಕದ ಬೆಳ್ಳಿಯ ನಾಣ್ಯವನ್ನು ಚಲಾವಣೆಗೆ ತಂದ. ಈ ಬೆಳ್ಳಿ ನಾಣ್ಯವನ್ನು ‘ರುಪಿಯಾ’ (ರೂಪಾಯಿ) ಎಂದು ಕರೆಯಲಾಯಿತು. ಇದೇ ಅವಧಿಯಲ್ಲಿ ಪೈಸೆ ಲೆಕ್ಕಾಚಾರವೂ ಚಾಲ್ತಿಗೆ ಬಂತು. ಈ ಒಂದು ಬೆಳ್ಳಿ ನಾಣ್ಯವನ್ನು 40 ತಾಮ್ರದ ತುಂಡುಗಳನ್ನಾಗಿ ವಿಭಾಗಿಸಲಾಯಿತು. ಈ ತಾಮ್ರದ ತುಂಡುಗಳು ಪೈಸೆಗಳಾದವು. ಶೇರ್‌ ಷಾ ನಂತರದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಮೊಘಲ್‌ ಆಡಳಿತದಲ್ಲಿ ‘ರುಪಿಯಾ’ ಪದ್ಧತಿಯೇ ಮುಂದುವರಿಯಿತು.

1600ರ ಮೊದಲ ದಶಕದಲ್ಲಿ ಈಸ್ಟ್‌ ಇಂಡಿಯಾ ಕಂಪೆನಿ ಭಾರತಕ್ಕೆ ಕಾಲಿಡುವ ಹೊತ್ತಿಗೆ, ಇಲ್ಲಿ ದೇಶದ ಉದ್ದಗಲಕ್ಕೂ ರೂಪಾಯಿ ಪದ್ಧತಿ ಹರಡಿತ್ತು. ಈಸ್ಟ್‌ ಇಂಡಿಯಾ ಕಂಪೆನಿಯು ಇಂಗ್ಲೆಂಡ್‌ನ ಪೌಂಡ್‌ ಅನ್ನು ಇಲ್ಲಿ ಜಾರಿಗೊಳಿಸಲು ಹಲವು ಬಾರಿ ಯತ್ನಿಸಿದರೂ, ಯಶ ಕಾಣಲಿಲ್ಲ. ಅಷ್ಟರ ಮಟ್ಟಿಗೆ ರೂಪಾಯಿ ಜನಪ್ರಿಯವಾಗಿತ್ತು. ತನ್ನ ಇತರೆ ವಸಾಹತುಗಳಿಗೆ ರೂಪಾಯಿಯನ್ನು ಅದು ರಫ್ತು ಕೂಡ ಮಾಡಿತು.

1717ರಲ್ಲಿ ಬ್ರಿಟಿಷರು, ಬಾಂಬೆಯಲ್ಲಿದ್ದ ಮೊಘಲರ ನಾಣ್ಯ ತಯಾರಿಕಾ ಕೇಂದ್ರದಲ್ಲಿ ನಾಣ್ಯ ತಯಾರಿಸಲು ಅನುಮತಿ ಪಡೆದುಕೊಂಡರು. ಅಲ್ಲಿ ಬ್ರಿಟಿಷ್‌ ಆಡಳಿತ ಚಿನ್ನ, ಬೆಳ್ಳಿ ತಾಮ್ರ ಮತ್ತು ತಗಡಿನಿಂದ (ಟಿನ್‌)  ನಾಣ್ಯಗಳನ್ನು ತಯಾರಿಸಲು ಆರಂಭಿಸಿತು. ಚಿನ್ನದ ನಾಣ್ಯವನ್ನು ಕ್ಯಾರೊಲಿನಾ ಎಂದು, ಬೆಳ್ಳಿ ನಾಣ್ಯವನ್ನು ಏಂಜಲಿನಾ ಎಂದೂ, ತಾಮ್ರ ನಾಣ್ಯವನ್ನು ಕುಪ್ಪರೊನ್‌ ಹಾಗೂ ತಗಡಿನ ನಾಣ್ಯವನ್ನು ಟಿನ್ನಿ ಎಂದು ಕರೆಯಲಾಗುತ್ತಿತ್ತು.

ಬ್ರಿಟಿಷ್‌ ಇಂಡಿಯಾದಲ್ಲಿ ದೇಶದ ಮೊದಲ ಕಾಗದದ ಹಣ ತಯಾರಾಯಿತು. ಬ್ಯಾಂಕ್‌ ಆಫ್‌ ಹಿಂದೊಸ್ತಾನ್‌ 1770ರಲ್ಲಿ ಮೊದಲ ಕಾಗದದ ನೋಟನ್ನು ಬಿಡುಗಡೆ ಮಾಡಿತು. ಜನರಲ್‌ ಬ್ಯಾಂಕ್‌ ಆಫ್‌ ಬೆಂಗಾಲ್‌ ಮತ್ತು ಬೆಂಗಾಲ್‌ ಬ್ಯಾಂಕ್‌ ಕೂಡ ಕಾಗದದ ಹಣವನ್ನು ಚಲಾವಣೆಗೆ ತಂದವು. ಈ ಕಾಗದದ ನೋಟನ್ನು ಬೆಳ್ಳಿ ನಾಣ್ಯ
ಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಅವಕಾಶ ಇತ್ತು.

1835ರಲ್ಲಿ ಬ್ರಿಟಿಷರು ದೇಶದಾದ್ಯಂತ ಏಕರೂಪದ ನಾಣ್ಯಗಳನ್ನು ಬಳಸುವುದಕ್ಕಾಗಿ ನಾಣ್ಯ ಪದ್ಧತಿ ಕಾಯ್ದೆಯನ್ನೇ ಜಾರಿಗೆ ತಂದರು. 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ತಮ್ಮ ವಸಾಹತುಗಳಲ್ಲಿ ರೂಪಾಯಿ ಪದ್ಧತಿಯನ್ನು ಅಧಿಕೃತವಾಗಿ ಜಾರಿಗೆ ತಂದರು. ಹಿಂದಿನ ನೋಟುಗಳು ಮತ್ತು ನಾಣ್ಯಗಳಲ್ಲಿದ್ದ ಸ್ಥಳೀಯ ಆಡಳಿತದ ಚಿಹ್ನೆಗಳ ಬದಲಿಗೆ ಬ್ರಿಟಿಷ್‌ ಆಡಳಿತಗಾರರ ಚಿತ್ರಗಳನ್ನು ಮುದ್ರಿಸಲು ಆರಂಭಿಸಿದರು. 1862ರಲ್ಲಿ ಬ್ರಿಟನ್‌ ರಾಣಿ ವಿಕ್ಟೋರಿಯಾ ಗೌರವಾರ್ಥ ಅವರ ಚಿತ್ರಗಳನ್ನೊಳಗೊಂಡ ಸರಣಿ ನೋಟುಗಳು ಮತ್ತು ನಾಣ್ಯಗಳು ಚಲಾವಣೆಗೆ ಬಂದವು.

1935ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸ್ಥಾಪನೆಯಾಯಿತು. ನಾಣ್ಯ, ನೋಟುಗಳ ಮುದ್ರಣ ಮತ್ತು ದೇಶದಾದ್ಯಂತ ಅವುಗಳನ್ನು ಚಲಾವಣೆಗೆ ತರುವ ಹೊಣೆಯನ್ನು ಅದು ಹೊತ್ತುಕೊಂಡಿತು. 1938ರಲ್ಲಿ ಅದು 5 ರೂಪಾಯಿ ಮುಖಬೆಲೆಯ ಮೊದಲ ನೋಟನ್ನು ಮುದ್ರಿಸಿತು. ಬ್ರಿಟನ್‌ ರಾಜ 6ನೇ ಜಾರ್ಜ್‌ನ ಚಿತ್ರವನ್ನು ನೋಟಿನಲ್ಲಿ ಮುದ್ರಿಸಲಾಗಿತ್ತು. 10 ಸಾವಿರ ಮುಖಬೆಲೆಯ ನೋಟನ್ನೂ ಅದು ಮುದ್ರಿಸಿತು. ಸ್ವಾತಂತ್ರ್ಯ ನಂತರ ಅದರ ಮಾನ್ಯತೆಯನ್ನು ರದ್ದುಗೊಳಿಸಿತು.

ಎರಡನೇ ವಿಶ್ವ ಮಹಾಯುದ್ಧದಲ್ಲಿ ಬೆಳ್ಳಿ ಲೋಹಕ್ಕೆ ತೀವ್ರ ಕೊರತೆ ಉಂಟಾಯಿತು. ಹಾಗಾಗಿ ಒಂದು ರೂಪಾಯಿ, 2 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸುವುದು ಅನಿವಾರ್ಯವಾಯಿತು. ಸಣ್ಣ ಮುಖಬೆಲೆಯ ಬೆಳ್ಳಿಯ ನಾಣ್ಯಗಳ ಬದಲಿಗೆ, ತಾಮ್ರ-ನಿಕ್ಕೆಲ್‌ಗಳಿಂದ ಮಾಡಿದ ನಾಣ್ಯಗಳು ಚಲಾವಣೆಗೆ ಬಂತು.
1947ರಲ್ಲಿ ಭಾರತ ಸ್ವಾತಂತ್ರ್ಯಗೊಂಡ ನಂತರವೂ ಸ್ವಲ್ಪ ಸಮಯದ ಕಾಲ ಹಳೆಯ ಹಣಕಾಸು ಪದ್ಧತಿಯೇ ಮುಂದುವರಿಯಿತು. 1950ರ ಆಗಸ್ಟ್‌ 15ರಂದು ಆಣೆ ವ್ಯವಸ್ಥೆ ಜಾರಿಗೆ ಬಂತು. ನೋಟುಗಳಲ್ಲಿ ಮತ್ತು ನಾಣ್ಯಗಳಲ್ಲಿ ಬ್ರಿಟಿಷ್‌ ಆಡಳಿತಗಾರರ ಚಿತ್ರದ ಬದಲಿಗೆ ಅಶೋಕ ಸ್ತಂಭದ ಚಿತ್ರ ಮುದ್ರಿಸಲಾಯಿತು. ಅಲ್ಲಿಂದ ನಂತರ ಭಾರತೀಯ ಹಣಕಾಸು ವ್ಯವಸ್ಥೆ ಮತ್ತೊಂದು ಹಂತಕ್ಕೆ ಕಾಲಿರಿಸಿತು. (ಆಣೆ ವ್ಯವಸ್ಥೆಯಲ್ಲಿ ಒಂದು ರೂಪಾಯಿ ಎಂದರೆ 16 ಆಣೆ (ಅಥವಾ 60 ಪೈಸೆ) ಆಗಿತ್ತು).

1955ರಲ್ಲಿ ಭಾರತೀಯ ನಾಣ್ಯ ಪದ್ಧತಿ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. 1957ರ ಏಪ್ರಿಲ್‌ 1ರಿಂದ ಜಾರಿಗೆ ಬಂತು. ಒಂದು ರೂಪಾಯಿ ಎಂದರೆ 100 ಪೈಸೆ ಎಂಬ ಮಾನದಂಡವನ್ನು ಅಂದಿನಿಂದ ಅನುಸರಿಸಲಾಯಿತು. ಅಂಧರಿಗೂ ಗುರುತಿಸಲು ಸುಲಭವಾಗುವ ರೀತಿಯಲ್ಲಿ ವಿವಿಧ ಆಕಾರದ ನಾಣ್ಯಗಳನ್ನು ಆರ್‌ಬಿಐ ಬಿಡುಗಡೆ ಮಾಡಿತು. 1969ರಲ್ಲಿ ಮಹಾತ್ಮ ಗಾಂಧಿ ಅವರ ಜನ್ಮಶತಮಾನೋತ್ಸವದ ಗೌರವಾರ್ಥ ನೋಟುಗಳನ್ನು ಬಿಡುಗಡೆಗೊಳಿಸಲಾಯಿತು. ವ್ಯಕ್ತಿಯೊಬ್ಬರ ಗೌರವಾರ್ಥ ಆರ್‌ಬಿಐ ನೋಟು ಚಲಾವಣೆಗೆ ತಂದಿದ್ದು ಅದೇ ಮೊದಲು. 1996ರಲ್ಲಿ ಹೆಚ್ಚು ಸುರಕ್ಷತಾ ಗುಣಲಕ್ಷಣಗಳನ್ನೊಳಗೊಂಡ ಮಹಾತ್ಮ ಗಾಂಧಿ ಅವರ ಚಿತ್ರಗಳನ್ನೊಳಗೊಂಡ ಸರಣಿ ನೋಟುಗಳು ಬಂದವು. 2005ರಲ್ಲಿ ಮತ್ತಷ್ಟು ಸುರಕ್ಷತಾ ಅಂಶಗಳನ್ನೊಳಗೊಂಡ ಹೊಸ ನೋಟುಗಳು ಬಂದವು.

ರೂಪಾಯಿಗೊಂದು ಚಿಹ್ನೆ...

2010ರ ಜುಲೈನಲ್ಲಿ ರೂಪಾಯಿಗೆ ಒಂದು ಚಿಹ್ನೆಯೂ ಸಿಕ್ಕಿತು. ಆ ಮೂಲಕ ಕರೆನ್ಸಿಗೆ ಚಿಹ್ನೆ ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ ಭಾರತವೂ ಸೇರಿತು. ಅದಕ್ಕೂ ಮೊದಲು ರೂ, Rs ಎಂದೆಲ್ಲ ಬರೆಯಲಾಗುತ್ತಿತ್ತು. ಉದಯ ಕುಮಾರ್‌ ಧರ್ಮಲಿಂಗಂ ಎಂಬುವವರು ಈ ಚಿಹ್ನೆಯ ವಿನ್ಯಾಸಕಾರ.

(ಮುಗಿಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT