ADVERTISEMENT

ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಮೊಬೈಲ್ ಕೋಟೆಯಲಿ!

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2016, 19:30 IST
Last Updated 14 ಡಿಸೆಂಬರ್ 2016, 19:30 IST

ಆತ ಉಗ್ರತಪಸ್ಸಿಗೆ ಕೂತುಬಿಟ್ಟ! ಎಷ್ಟೇ ಆದರೂ ಕಲಿಯುಗದವನಲ್ವಾ? ಹಿಡಿದುದ್ದೇ ಹಟ. ಇತ್ತ ಬ್ರಹ್ಮ ನಡುಗಿ ಹೋದ. ಭಕ್ತನ ಕರೆಗೆ ಬರದೇ ದಾರಿಯೇ ಇಲ್ಲದಾಗ ಪ್ರತ್ಯಕ್ಷನಾಗಿಬಿಟ್ಟ. ‘ಭಕ್ತ ಏನು ಬೇಕು?’ ಎಂದ. ‘ನನಗೆ ಕೈಯಲ್ಲಿ ಮೊಬೈಲ್ ಹಿಡಿದು ಹಿಡಿದು ಇತ್ತೀಚಿಗೆ ಅರ್ಧ ಗಂಟೆಯಲ್ಲಿಯೇ ನೋವು ಬರುತ್ತದೆ. ಏನಿಲ್ಲವೆಂದರೂ ಕನಿಷ್ಠ 20 ಗಂಟೆ ಸ್ಮಾರ್ಟ್‌ಫೋನ್ ಬಳಸುತ್ತೇನೆ.

ಕೈನೋವು ಮತ್ತು ತಲೆನೋವು ಬಾಧಿಸದಿರಲಿ ನನ್ನೊಡೆಯ, ಹಾಗೆಯೇ ಚಾರ್ಚರ್ ಕೂಡ ದೀರ್ಘಕಾಲ ಬರುವಂತಿರಲಿ’ ಎಂದ. ಬ್ರಹ್ಮ ಗಲಿಬಿಲಿಗೊಂಡು ಮಾಯವಾದ. ಇದು ನಮ್ಮ ಸದ್ಯದ ಸ್ಥಿತಿ.

ಮನುಷ್ಯ ಯಾವ ಪರಿಯಾಗಿ ಈ ಮೊಬೈಲ್ ಮೇನಿಯಾಕ್ಕೆ ಶರಣಾಗಿದ್ದಾನೆ ಅಂದರೆ, ಅಶೋಕ ಶಾಂತಿಗೆ ಶರಣಾದ ನೂರು ಪಾಲಿಗಿಂತ ಹೆಚ್ಚು. ಏನಿಲ್ಲವೆಂದರೂ ಒಂದು ನಿಮಿಷಕ್ಕೆ ಐದು ಬಾರಿ ಮೊಬೈಲ್‌ ತೆಗೆದು ನೋಡುತ್ತಾನೆ. ಕಾಲ್ ಬರಲಿ, ಮಸೇಜ್ ಬರಲಿ, ಇನ್ಯಾವುದೇ ನೋಟಿಫಿಕೇಷನ್ ಬರಲಿ, ಬಾರದಿರಲಿ ಅದು ಅವನಿಗೆ ಬೇಕಿಲ್ಲ. ಮೊಬೈಲ್ ತೆಗೆದು, ಮೆನು ಬಟನ್ ಒತ್ತಿ, ವಾಟ್ಸಪ್ ತೆಗೆದು, ಫೇಸ್ಬುಕ್ ತೆರೆದು, ಕಾಟ್ಯಾಂಕ್ಟ್ಸ್ ನೋಡಿ ಏನೆಲ್ಲಾ ಬೇಕೋ ಅದನ್ನೆಲ್ಲಾ ಒಂದ್ಸಾರಿ ನೋಡಿ ಮತ್ತೇ ಜೇಬಿಗಿಡುತ್ತಾನೆ, ಇನ್ನೊಂದು ನಿಮಿಷಕ್ಕೆ ಮತ್ತೊಮ್ಮೆ. ಇನ್ನು ಕೆಲವರಂತೂ ಮೊಬೈಲ್ ಜೇಬಿಗಿಳಿಸುವುದೇ ಇಲ್ಲ.

ಈಗ ಅವನ ವ್ಯವಹಾರ ಏನಿದ್ದರೂ ಜಿಬಿ ಲೆಕ್ಕದಲ್ಲಿ. ಮುಖದ ಮೇಲೆ ರೋಮ ಬಾರದಿದ್ದರೂ ರ್‍ಯಾಮ್ ಜಾಸ್ತಿ ಇರಬೇಕು, ಜೇಬಿನಲ್ಲಿ ದುಡ್ಡಿಲ್ಲವೆಂದರೂ ಇನ್ಬಿಲ್ಟು ಚೆನ್ನಾಗಿರಬೇಕು. ಮೆಗಾಪಿಕ್ಸೆಲ್‌ಗಳ ಹಿಂದೆ ಬಿದ್ದು ಎರಡು-ಮೂರು ತಿಂಗಳಿಗೊಂದರಂತೆ ಮೊಬೈಲ್ ಬದಲಾಯಿಸುವ ಹುಚ್ಚರಿಗೂ ಕಡಿಮೆ ಇಲ್ಲ. ಬೆಳಿಗ್ಗೆ ಎದ್ದು ಶೌಚಕ್ಕೆ ಮೊಬೈಲ್ ಹಿಡಿದು ಹೊರಟ ಎಂದರೆ, ಊಟ, ಕೆಲಸ, ಮಾತು, ಮಡಿ, ಪ್ರೀತಿ ಇವೆಲ್ಲದರ ಮಧ್ಯೆಯು ಮೊಬೈಲ್ ಕೂತಿರುತ್ತದೆ.

ರಾತ್ರಿಯಾದರೂ  ಆನ್‌ಲೈನ್‌ನಲ್ಲೇ ಜೋತುಬೀಳುವುದು. ಸುಮ್‌ಸುಮ್ನೆ ಕಾಮೆಂಟ್, ಲೈಕ್ಸ್, ಒಂದಿಷ್ಟು ಕಾಡುಹರಟೆ, ಅಶ್ಲೀಲ ಚಿತ್ರಗಳು, ಆ್ಯಪ್ ಜೊತೆ ಜೊತೆ ಬರುವ ರಾಶಿ ರಾಶಿ ಜಾಹೀರಾತುಗಳನ್ನು ನೋಡುತ್ತಾ ಬೇಡವಾದದ್ದನ್ನೇ ತುಂಬಿಕೊಳ್ಳುತ್ತಾ ನಿದ್ದೆಗೆ ಜಾರಿಬಿಡುತ್ತೇವೆ. ಒಂದು ಸಮೀಕ್ಷೆ ಹೇಳುವಂತೆ ಮಹಿಳೆಯರು ಗಂಡನಿಗಿಂತ ಮೊಬೈಲ್ಗೆ ಮೊದಲ ಸ್ಥಾನ ಕೊಟ್ಟಿದ್ದಾರಂತೆ!

ಬೆಳಿಗ್ಗೆ ಏಳುತ್ತಲೇ, ಕರಾಗ್ರೇ ವಸತೆ ಲಕ್ಷ್ಮಿಗೆ ಬದಲಾಗಿ ಕಣ್ಣು ಬಿಡುತ್ತಲೇ ಮೊಬೈಲ್‌ಗೆ ತಡಕಾಡುತ್ತೇವೆ. ಯಾವ ಮಸೇಜ್? ಯಾರ ಮಿಸ್ಕಾಲ್? ಎಷ್ಟು ಲೈಕ್? ಯಾವ ಕಾಮೆಂಟ್? ಗುಂಪಿನಲ್ಲಿ ಏನ್ ಜಗಳ? ಇದರ ಬಗೆಗೆ ಚಿಂತನೆ. ಮುಂಜಾನೆ ಎದ್ದು ಯಾರ್‍ಯಾರ ನೆನೆಯಲಿ... ಎಂದು ಹಾಡುತ್ತಿದ್ದ ಜನಪದರು ಏನಾದರೂ ನಮ್ಮನ್ನು ನೋಡಿದ್ದರೆ ನಿಜಕ್ಕೂ ಮೂರ್ಛೆ ಹೋಗುತ್ತಿದ್ದರು.

ಮೊಬೈಲ್‌ನಲ್ಲಿ ಚಾರ್ಜಿಂಗ್‌ ಕಡಿಮೆ ಆದರೆ ಅಂಡು ಸುಟ್ಟ ಬೆಕ್ಕಿನಂತಾಡುತ್ತೇವೆ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಧಾವಂತ. ಕರೆಂಟ್ ಬರಲಿಲ್ಲವೆಂದರೆ ಚಾರ್ಜರ್ ಹಿಡಿದು ಕರೆಂಟ್ ಇರುವವರ ಮನೆಗೆ ನಡೆದೇಬಿಡುತ್ತೇವೆ. ನೆಟ್‌ಪ್ಯಾಕ್ ಇಲ್ಲ ಅಂದ್ರೆ ಜೀವನದಲ್ಲಿ ಏನೂ ಇಲ್ಲ ಅನ್ನೋ ಫೀಲಿಂಗ್. ನೆಟ್‌ವರ್ಕ್ ಸಿಗದ ಜಾಗಕ್ಕೆ ಹೋದರಂತೂ ಅವರ ತಳಮಳ ಆ ಶಿವನೂ ನೋಡಲಾರ.

ಮೊಬೈಲ್ ನಮ್ಮೆಲ್ಲಾ ಹುಚ್ಚಾಟಗಳಿಗೆ, ಅವಘಡಗಳಿಗೆ, ಮಾನಸಿಕ ಕಾಯಿಲೆಗಳಿಗೆ ತಾಯಿಬೇರಾಗುತ್ತಿದೆ. ಸಂಬಂಧಗಳಂತೂ ಜಾಳು ಜಾಳು. ನಿನ್ನೆ ತಾನೇ ಪರಿಚಯವಾದ ಫೇಸ್ಬುಕ್ ಹುಡುಗಿ ಇವತ್ತು ಆಗಲೇ ಏನೋ, ಬಾರೋ ಅಂತಾಳೆ. ಮುಂದಿನ ವಾರಕ್ಕಾಗಲೇ ಅವಳು ಸಂಪರ್ಕದಲ್ಲಿರುವುದಿಲ್ಲ. ಇವುಗಳ ಮುಂದೆ ಪ್ರೀತಿ, ಕಾಳಜಿ, ಸ್ನೇಹ ಇವೆಲ್ಲಾ ಅವಧಿ ಮುಗಿದ ಔಷಧಿಗಳಂತಾಗಿವೆ.

ತಲೆ ಬಗ್ಗಿಸಿ ನಡೆಯಬೇಕೆಂಬುದು ನಮ್ಮ ಹಿರಿಯರು ಹೇಳಿಕೊಟ್ಟ ಸಭ್ಯತೆಯ ನಿಯಮ. ನಮ್ಮ ಇಂದಿನ ಪೀಳಿಗೆ ಅದನ್ನಂತೂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿದೆ. ಮುತ್ತೈದೆಯರು ಕೈಯಲ್ಲಿ ಆರತಿ ಬಟ್ಟಲು ಹಿಡಿದು ಮೆರವಣಿಗೆ ಹೊರಟವರಂತೆ ನಮ್ಮ ಹುಡುಗ ಹುಡುಗಿಯರು ರಸ್ತೆಯ ಇಕ್ಕೆಲಗಳಲ್ಲಿ ನೆಲ ನೋಡುತ್ತಾ, ಐ ಮೀನ್ ಮೊಬೈಲ್ ನೋಡುತ್ತಾ ಹೋಗುತ್ತಾರೆ. ಹಿಂದೆ ಯಾರಿದ್ದಾರೆ? ಮುಂದೆ ಯಾರಿದ್ದಾರೆ? ಕೆಲವು ನಾನ್ನೆಲ್ಲಿದ್ದೇನಿ ಎಂಬುದೇ ಮರೆತುಬಿಡುತ್ತಾರೆ. ದೇವರನ್ನು ಹುಡುಕ ಹೊರಟಂತೆ ಫ್ರೀ ವೈಫೈ ಹುಡುಕಲು ಹೊರಟು ನಿಲ್ಲುತ್ತಾರೆ.

ಇನ್ನು ಕೆಲವರು ನಮ್ಮನ್ನೇ ನೋಡುತ್ತಿರುತ್ತಾರೆ. ನಮ್ಮ ಮಾತಿಗೆ ತಲೆ ಆಡಿಸುತ್ತಾರೆ, ಹೂಂಗುಟ್ಟುತ್ತಾರೆ, ನಮ್ಮ ಮುಖ ಒಂದು ಸಾರಿ, ಮೊಬೈಲ್ ಒಂದು ಸಾರಿ ನೋಡುತ್ತಿರುತ್ತಾರೆ. ಆದರೆ ಅವರ ಗಮನ ಚಾಟ್‌ಗೆ ಸಿಕ್ಕ ಇನ್ಯಾರದೋ ಮೇಲೆ. ಇಲ್ಲಿ ಮಾತಾಡಿಸುವವ ನಿಮಿತ್ತ ಮಾತ್ರ. ದೊಡ್ಡವರಾದರೆ ಹೋಗ್ಲಿ ಬಿಡಿ ಆದರೆ ಮೊಬೈಲ್ ಚಿಕ್ಕವರನ್ನು ಬಿಡುತ್ತಿಲ್ಲ. ‘ಅಯ್ಯೋ ನಮ್ ಮಗು ಹೇಗೆ ಲಾಕ್ ಓಪನ್ ಮಾಡುತ್ತೆ ಗೊತ್ತಾ?’ ‘ಕಾಲ್ ಅಟೆಂಡ್ ಮಾಡುತ್ತೇ ಗೊತ್ತಾ?’ ‘ಗ್ಯಾಲರಿ ಓಪನ್ ಮಾಡುತ್ತೆ ಗೊತ್ತಾ?’ ಎಂದು ಖುಷಿ ಪಡುವ ಬದಲು ಒಂದನಿ ಹಾಕಿ, ಇಂದು ಮಾಡುವ ಈ ಓಪನ್‌ಗಳು ನಾಳಿನ ಮಗುವಿನ ಭವಿಷ್ಯವನ್ನು ಮುಚ್ಚಬಹುದು. ಹಾಳು ಮಾಡುವುದಕ್ಕೆ ಇಷ್ಟು ಸಾಕಲ್ಲವೆ?

ರಸ್ತೆ ಅಪಘಾತಗಳು, ಗಂಡ-ಹೆಂಡಿರ ಮಧ್ಯೆ ಮನಸ್ತಾಪ, ಅಪ್ಪ ಅಮ್ಮಂದಿರಿಗೆ ಮಗುವಿನ ಬಗ್ಗೆ ಇನ್ನಿಲ್ಲದ ಆತಂಕ, ನೆಟ್‌ರೋಗ, ಮಾನಸಿಕ ಕಾಯಿಲೆಗಳು, ಹ್ಯಾಕರ್‍ಸ್‌ಗಳ ಕಾಟದಿಂದ ವೈಯಕ್ತಿಕ ಬದುಕು ಬೆತ್ತಲಾಗುವ ಭಯ. ಸೆಲ್ಫಿ ಎಂಬ ಕ್ರೇಜಿಗೆ ಹೋದ ಪ್ರಾಣಗಳು, ಖಿನ್ನತೆ, ಆತಂಕ, ತೊಳಲಾಟದಂತಹ ಮನೋರೋಗಗಳು, ಹತ್ತಿರವಿದ್ದವರನ್ನು ದೂರಮಾಡಿ, ದೂರವಿದ್ದವರನ್ನು ಸಂಪರ್ಕಿಸುವ ಹುಚ್ಚುತನ. ಸಂಬಂಧಗಳ ಬೆಸುಗೆಗಳು ಕಳಚಿ, ಹಾಳು ಬೀಳಿಸಿ ಎಲ್ಲದರ ಮಧ್ಯೆಯೂ ಒಂಟಿತನಕ್ಕೆ ತಳ್ಳಿಕೊಳ್ಳುವ ಧಾವಂತ ಇವೆಲ್ಲಾ ನಮ್ಮ ಹೈಟೆಕ್ ಯುಗದ ಮೊಬೈಲ್ ಟ್ರೆಂಡ್‌ನ ಗಿಫ್ಟ್‌ಗಳು.

ಏನ್ ಸ್ವಾಮಿ ನೀವು!?  ಮೊಬೈಲ್‌ನಿಂದ ಏನೆಲ್ಲಾ ಲಾಭಗಳಿವೆ. ಕೆಲಸ ಎಷ್ಟೊಂದು ಸಲೀಸಾಗಿದೆ. ದುನಿಯಾ ಮುಟ್ಟಿ ಮೆ ಹೈ ಅಂತೀರಾ? ಹೌದು ನಿಮ್ಮ ಮಾತು ನಿಜ. ಆದರೆ ತಂತ್ರಜ್ಞಾನವನ್ನು ನಾವು ಹೇಳಿದಂತೆ ಕೇಳುವ ಹಾಗೆ ಮಾಡಿಕೊಂಡಾಗ. ಒಂದೇ ಸೆಕೆಂಡಿನಲ್ಲಿ ಮನಿ ಟ್ರಾನ್ಸ್‌ಫರ್, ಸದ್ಯದ ಸಂಪೂರ್ಣ ಕ್ಷಣಗಳು ಅಮೇರಿಕ ಅಂಕಲ್‌ಗೆ, ಯಾವುದೇ ವಿಚಾರಗಳು ಬೆರಳ ತುದಿಯಲ್ಲಿ... ಇವೆಲ್ಲಾ ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲವೇ ಎಂಬುದು ನಿಮ್ಮ ಅಂಬೋಣ ಇರಬಹುದು.

ADVERTISEMENT

ಇವು ಅವುಗಳ ಒಳ್ಳೆತನ. ಹೇಗೆ? ಎಷ್ಟು ಬಳಸಿಕೊಳ್ಳಬೇಕೋ ಅಷ್ಟು ಬಳಸಿಕೊಂಡರೆ ಉತ್ತಮ. ಈ ಮನುಷ್ಯ ಆ ಹಂತವನ್ನು ದಾಟಿಬಿಟ್ಟಿದ್ದಾನೆ. ಆತ ಹೇಳಿದಂತೆ ಮೊಬೈಲ್ ಕೇಳುತ್ತಿಲ್ಲ, ಮೊಬೈಲ್ ಹೇಳಿದಂತೆ ಅವನು ಕೇಳುತ್ತಿದ್ದಾನೆ! ಈಗ ಆತ ತಂತ್ರಜ್ಞಾನದ ಗುಲಾಮ. ಕೊನೆಗೊಂದು ದಿನ ಅವನ ವೇಗವೇ, ಅವನ ಬುದ್ಧಿಯೇ ಅವನಿಗೆ ಮುಳುವಾಗಬಹುದಾ?

ಬುದ್ಧ ಈಗೇನಾದರೂ ಇದಿದ್ದರೆ ಕಿಸಾಗೋತಮಿಗೆ ಸಾವಿಲ್ಲದೆ ಮನೆಯ ಸಾಸಿವೆ ತಾ ಅನ್ನುತ್ತಿರಲಿಲ್ಲ. ‘ಮೊಬೈಲ್ ಇಲ್ಲದ ಮನೆಯ ಸಾಸಿವೆ ಎತ್ತಿಕೊಂಡು ಬಾ’ ಎನ್ನುತ್ತಿದ್ದನೋ ಏನೋ!?
– ಸದಾಶಿವ್ ಸೊರಟೂರು ಚಿಂತಾಮಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.