ADVERTISEMENT

2017ರಲ್ಲಿನ ಅದ್ದೂರಿ ಬೈಕ್‌ಗಳು

ನೇಸರ ಕಾಡನಕುಪ್ಪೆ
Published 4 ಜನವರಿ 2017, 19:30 IST
Last Updated 4 ಜನವರಿ 2017, 19:30 IST
ಮತ್ತೆ ಕವಾಸಾಕಿ ಭರಾಟೆ
ಮತ್ತೆ ಕವಾಸಾಕಿ ಭರಾಟೆ   

ಮತ್ತೆ ಕವಾಸಾಕಿ ಭರಾಟೆ
ಕವಾಸಾಕಿ ಮತ್ತೆ 2017ರಲ್ಲಿ ಸದ್ದು ಮಾಡಲಿದೆ. ಕವಾಸಾಕಿಯ ‘ವಲ್ಕನ್‌ ಎಸ್‌’ ಹೊರಬರುತ್ತಿದೆ. ಆದರೆ, ಇದು ದುಬಾರಿ ಬೈಕ್‌. ₹ 6 ಲಕ್ಷದಿಂದ ಇದರ ಬೆಲೆ ಆರಂಭವಾಗಲಿದೆ. ಅದರಂತೆಯೇ ಇದು ಸೂಪರ್‌ ಬೈಕ್‌. ಟ್ವಿನ್ ಎಂಜಿನ್‌ 649 ಸಿಸಿ ಸಾಮರ್ಥ್ಯ ಇರಲಿದೆ. ಇದು ಕ್ರೂಸರ್‌. ಆದರೆ, ಸಿಟಿ ಬೈಕ್‌ನಂತೆ ಹಗುರವಾಗಿಯೂ ಇರಲಿದೆ. ಹಾಗಾಗಿ, ನಗರಮಿತಿ ಹಾಗೂ ಹೆದ್ದಾರಿಗಳಲ್ಲಿ ಇದು ಸರಾಗವಾಗಿ ಸಾಗಬಲ್ಲದು. ಐಷಾರಾಮಿ ಬೈಕ್‌ನಲ್ಲಿರುವ ಎಲ್ಲ ಆಧುನಿಕ ತಂತ್ರಜ್ಞಾನಗಳೂ ಈ ಬೈಕ್‌ನಲ್ಲಿ ಇರಲಿವೆ.

*
ಕಡಿಮೆ ಬೆಲೆಗೆ ಬಿಎಂಡಬ್ಲ್ಯೂ!

‘ಬಿಎಂಡಬ್ಲ್ಯೂ’ ಎಂದರೆ ಅದು ಕೇವಲ ಪ್ರೀಮಿಯಂ ಬೈಕ್ ಅಲ್ಲ. ಐಷಾರಾಮಿ ಪ್ರೀಮಿಯಂ ಬೈಕ್‌ಗಳ ಸಾಲಿಗೆ ನಿಲ್ಲುತ್ತದೆ. ಇಂತಹ ಬೈಕ್‌ ಹೊಂದುವುದು ಕೇವಲ ಶ್ರೀಮಂತರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ, ‘ಬಿಎಂಡಬ್ಲ್ಯೂ’ ಕೇವಲ ₹ 3 ಲಕ್ಷಕ್ಕೆ ಹೊಸ ಬೈಕ್‌ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ‘ಜಿ 310 ಆರ್‌’ ಅದರ ಹೆಸರು. 313 ಸಿಸಿಯ ಸಣ್ಣ ಎಂಜಿನ್‌ ಇದರ ಆತ್ಮ. ಲಿಕ್ವಿಡ್‌ ಕೂಲ್ಡ್‌, 6 ಸ್ಪೀಡ್‌ ಗಿಯರ್‌ ಬಾಕ್ಸ್ ಉಳ್ಳ ಈ ಎಂಜಿನ್‌ ‘ಬಿಎಂಡಬ್ಲ್ಯೂ’ನ ಬೈಕ್‌ಗಳ ಪೈಕಿ ಸಣ್ಣ ಬೈಕ್‌ ಎಂದೇ ಹೇಳಬಹುದು. ಆದರೆ, ಭಾರತದ ಪಾಲಿಗೆ ಇದು ಅತ್ಯುತ್ತಮ ಬೈಕ್‌ ಆಗಲಿದೆ. ಅತ್ಯುತ್ತಮ ತಂತ್ರಜ್ಞಾನ, ಗುಣಮಟ್ಟ ಈ ಬೈಕ್‌ ಹೊಂದಿರಲಿದೆ ಎಂದು ವಿಶೇಷವಾಗಿ ಹೇಳುವ ಅಗತ್ಯವೇ ಇಲ್ಲ.

*
ಹ್ಯೋಸಂಗ್‌ ‘ಜಿಟಿ 300– ಆರ್‌’
ಹ್ಯೋಸಂಗ್‌ ಭಾರತಕ್ಕೆ ಹೊಸತೇನೂ ಅಲ್ಲ. ಆದರೆ, ಸ್ವತಂತ್ರವಾಗಿ ಬೈಕ್‌ ಹೊರಬಿಡಲಿರುವುದು ವಿಶೇಷ. ಕೈನೆಟಿಕ್‌ ಕಂಪೆನಿಯು ಹ್ಯೋಸಂಗ್‌ನ 2005ರಲ್ಲೇ ‘ಆಕ್ವಿಲಾ’ ಬೈಕ್‌ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ‘ಜಿಟಿ 300– ಆರ್‌’ ಬೈಕ್‌ ಆಧುನಿಕ ಹಾಗೂ ಶಕ್ತಿಶಾಲಿಯಾಗಿ ಇರಲಿದೆ. 275 ಸಿಸಿ ಲಿಕ್ವಿಡ್‌ ಕೂಲ್ಡ್ ಎಂಜಿನ್‌ ಹೊಂದಿದೆ. ಸ್ಪೀಡ್‌ ಗಿಯರ್ ಬಾಕ್ಸ್ ಇದ್ದು, ನಯವಾಗಿ ಚಾಲನೆ ಮಾಡಬಹುದಾದ ವೈಶಿಷ್ಟ್ಯ ಹೊಂದಿರಲಿದೆ. ವಿನ್ಯಾಸದ ವಿಚಾರದಲ್ಲಿ ಸಹ ಇದು ಅತ್ಯುತ್ತಮವಾದ ಬೈಕ್‌. ಅಂದಾಜು ₹ 5 ಲಕ್ಷ ಇದರ ಬೆಲೆ.

ADVERTISEMENT

*
‘ಯುಎಂ’ ರಿನಗೇಡ್‌
ಅಮೆರಿಕ ಮೂಲದ ‘ಯುಎಂ’ ಬೈಕ್‌ಗಳು ಭಾರತಕ್ಕೆ 2017ರಲ್ಲಿ ಕಾಲಿಡಲಿವೆ. ಈ ಬೈಕ್‌ಗಳು ಸಹ ‘ಹಾರ್ಲಿ ಡೇವಿಡ್‌ಸನ್‌’ನಂತೆಯೇ ಕಚ್ಛಾ ಬೈಕ್‌ಗಳು. ಗಡುಸಾದ ವಿನ್ಯಾಸ, ಗುಣಮಟ್ಟ ಇವುಗಳ ವಿಶೇಷ. ಇದರ ಮೊದಲ ರಾಯಭಾರಿಯಾಗಿ ರಿನಗೇಡ್‌ ಭಾರತಕ್ಕೆ ಕಾಲಿಡುತ್ತಿದೆ. 196 ಸಿಸಿಯ ಬೈಕ್‌ ಇದು. ಅತಂಹ ದೊಡ್ಡ ಎಂಜಿನ್‌ ಏನಲ್ಲ. ಆದರೂ ದೇಹ ಉತ್ತಮವಾಗಿದೆ. ಹೆಚ್ಚು ಗಡುಸಾಗಿದೆ. ಹಾಗಾಗಿ, ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದಂತಿದೆ. ಮೇಲ್ನೋಟಕ್ಕೆ ಕೊಂಚ ರಾಯಲ್ ಎನ್‌ಫೀಲ್ಡ್ ‘ಥಂಡರ್‌ ಬರ್ಡ್‌’ ಹಾಗೂ ಬಜಾಜ್‌ನ ಅವೆಂಜರ್ ಹೋಲುತ್ತದೆ. ₹ 2 ಲಕ್ಷಕ್ಕೆ ಈ ಬೈಕ್‌ ಭಾರತೀಯರ ಕೈ ಸೇರಲಿರುವುದು ವಿಶೇಷ. ವಿದೇಶಿ ಬೈಕ್‌ಗಳೆಂದರೆ ಕನಿಷ್ಠ ₹ 6 ಲಕ್ಷಕ್ಕೂ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಎಂಬುದು ಇಲ್ಲವಾಗಲಿದೆ. ಕಡಿಮೆ ಬೆಲೆಗೇ ಉತ್ತಮ ವಿದೇಶಿ ಬೈಕ್‌ ಹೊಂದುವ ಅವಕಾಶ ಸಿಗಲಿದೆ. ಇದರ ನಂತರ ‘ಹೈಪರ್‌ ಸ್ಪೋರ್ಟ್‌’ ಎಂಬ ಬೈಕ್ ಸಹ ಹೊರಬರುತ್ತಿದೆ. ಇದು ಕೊಂಚ ದುಬಾರಿ ಬೈಕ್ 225 ಸಿಸಿ ಎಂಜಿನ್‌ ಇದರಲ್ಲಿ ಇರಲಿದೆ. ಸಂಪೂರ್ಣ ಡರ್ಟ್‌ ಟ್ರ್ಯಾಕ್‌ ಬೈಕ್‌ ವಿನ್ಯಾಸ ಇದರಲ್ಲಿರಲಿದೆ.  ₹ 3 ಲಕ್ಷ ಇದರ ಬೆಲೆಯಿರಲಿದೆ.

*
ಆಗಸ್ಟಾ ಬ್ರೂಟೇಲ್ 800
2017ರ ಅತ್ಯುತ್ತಮ ವಿನ್ಯಾಸದ ಬೈಕ್ ಎನ್ನಬಹುದು. ವಾಸ್ತವದಲ್ಲಿ ಒಬ್ಬ ಸವಾರನಿಗೆ ಮಾತ್ರ ಇದು ಸುಖದಾಯಕ ಚಾಲನೆ ಕೊಡುತ್ತದೆ. ಇಬ್ಬರಿಗೆ ಕೊಂಚ ಕಷ್ಟವೇ. ಆದರೆ, ಶಕ್ತಿಯಲ್ಲಿ ಇದು ದೈತ್ಯ. 3 ಸಿಲಿಂಡರ್‌ಗಳನ್ನು ಈ ಬೈಕ್‌ ಹೊಂದಿರುತ್ತದೆ. 243 ಕಿಲೋ ಮೀಟರ್‌ ಗರಿಷ್ಠ ವೇಗವನ್ನು ಈ ಬೈಕ್‌ ತಲುಪುವ ಶಕ್ತಿ ಹೊಂದಿರುತ್ತದೆ. 2017 ಸ್ಕೂಟರ್‌ಗಳ ಪಾಲಿಗೆ ಅಂತಹ ವಿಶೇಷವಾದ ವರ್ಷವೇನಲ್ಲ. ಅತಿ ಹೆಚ್ಚಿನ ಸಂಖ್ಯೆಯ ಉತ್ತಮ ಬೈಕ್‌ಗಳೇ ಈ ವರ್ಷದಲ್ಲಿ ಹೊರಬರಲಿವೆ.

*
ಹೀರೊನ ಬೈಕ್‌ ಸಾಲು
ಎಚ್‌ಎಕ್ಸ್ 250 ಆರ್‌ ,ಎಕ್ಸ್ಎಫ್‌ 3– ಆರ್‌

ಸಾಲು ಸಾಲಾಗಿ ‘ಹೀರೊ ಮೋಟೊಕಾರ್ಪ್‌’ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲಿದೆ. ‘ಎಚ್‌ಎಕ್ಸ್ 250 ಆರ್‌’ ಮೊದಲು ಹೊರಬರಲಿದೆ. ₹1.50 ಬೆಲೆಯ ಉತ್ತಮ ಬೈಕ್‌ ಇದು. 250 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್‌ ಇರಲಿದೆ. ಅತಿ ವೇಗವನ್ನು ತಲುಪಬಲ್ಲದು ಎಂಬುದು ಈ ಬೈಕ್‌ನ ವಿಶೇಷ. 160 ಕಿಲೋಮೀಟರ್‌ ವೇಗವನ್ನು 15 ಸೆಕೆಂಡುಗಳಲ್ಲಿ ಈ ಬೈಕ್‌ ಮುಟ್ಟಬಲ್ಲದು.  ‘ಎಕ್ಸ್ಎಫ್‌ 3– ಆರ್‌’ ಎಂಬ ಮತ್ತೊಂದು ಬೈಕ್‌ ಕೂಡ ಇದರ ಬೆನ್ನಲ್ಲೇ ಹೊರಬರಲಿದೆ. ಅದ್ಭುತ ವಿನ್ಯಾಸ ಹಾಗೂ ಸ್ಪಂದನೆಯ ಎಂಜಿನ್‌ ಇದರ ವಿಶೇಷ. ಎಬಿಎಸ್‌ ತಂತ್ರಜ್ಞಾನವೂ ಸೇರಿದಂತೆ  ಅನೇಕ ತಂತ್ರಜ್ಞಾನ ಇದರಲ್ಲಿರಲಿದೆ. ಇದು ಸಹ 250ಸಿಸಿ ಎಂಜಿನ್‌ ಹೊಂದಿರುತ್ತದೆ. ₹ 1.50 ಲಕ್ಷದ ಆಜುಬಾಜಿನಲ್ಲೇ ಬೆಲೆ ನಿಗದಿಯಾಗಲಿದೆ ಎಂಬ ಸುದ್ದಿಯಿದೆ.

*
ಹೀರೊ ಡೇರ್
‘ಡೇರ್‌’ ಎಂಬ ಸ್ಕೂಟರ್‌ ಸಹ  ಹೀರೊಯಿಂದ ಹೊರಬರಲಿದೆ. ₹80 ಸಾವಿರ ಬೆಲೆಯ ಈ ಸ್ಕೂಟರ್‌ ಅನ್ನು ಕೊಂಚ ದುಬಾರಿ ಎನ್ನಬಹುದು. ಕೇವಲ 125 ಸಿಸಿ ಎಂಜಿನ್‌ ಇರುವ ಸ್ಕೂಟರ್‌ಗೆ ಈ ಬೆಲೆ ಕೊಂಚ ಹೆಚ್ಚಾಯಿತು. ಮಹಿಳೆಯರಿಗಿಂತ ಪುರುಷ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಬೈಕ್‌ ಅನ್ನು ವಿನ್ಯಾಸಗೊಳಿಸಲಾಗಿದೆಯಂತೆ. ಎಲ್‌ಇಡಿ ‘ಡೇಟೈಮ್‌ ರನ್ನಿಂಗ್‌ ಲೈಟ್ಸ್‌’ ಹಾಗೂ ‘ಟೇಲ್ ಲೈಟ್‌’ ಇರಲಿರುವುದು ವಿನ್ಯಾಸದ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.