ADVERTISEMENT

ಹೊಸ ಕಾರಿಲ್ಲ ಮೇಲ್ದರ್ಜೆಯದೇ ವಿಶೇಷ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 19:30 IST
Last Updated 10 ಜನವರಿ 2018, 19:30 IST
ಹ್ಯುಂಡೈ ಕೋನಾ
ಹ್ಯುಂಡೈ ಕೋನಾ   

2018ರಲ್ಲಿ ಹೊಸ ಕಾರುಗಳ ಬಿಡುಗಡೆ ಕಡಿಮೆಯೇ. ರೆನೊ ಕಂಪನಿಯು ವರ್ಷಕ್ಕೊಂದು ಹೊಸ ಕಾರು ಬಿಡುಗಡೆಗೊಳಿಸುವುದಾಗಿ ಹಿಂದಿನಿಂದಲೂ ಹೇಳಿಕೊಂಡು ಬರುತ್ತಿದೆ. ಅಂತೆಯೇ 2018ಕ್ಕೂ ಹೊಸ ಕಾರಿನ ಪರಿಕಲ್ಪನೆ ಇದ್ದೇ ಇರುತ್ತದೆ. ಆದರೆ, ಮಿಕ್ಕ ಕಾರು ಕಂಪನಿಗಳು ಹೊಸ ಕಾರುಗಳನ್ನು ಬಿಡುಗಡೆಗೊಳಿಸುವುದಾಗಿ ಪ್ರಕಟಿಸಿಲ್ಲ. ತಮ್ಮ ಬಳಿ ಸಾಕಷ್ಟು ಹೊಸ ಕಾರುಗಳಿವೆ ಎಂದು ಮಾರುತಿ ಸುಜುಕಿ, ಟಾಟಾ, ಹ್ಯುಂಡೈ ಕಂಪನಿಗಳು ಹೇಳಿಕೊಳ್ಳುತ್ತವಾದರೂ, ಬಿಡುಗಡೆಗೆ ಸಜ್ಜಾಗಿರುವ ಹೊಸ ಕಾರುಗಳು ಕಡಿಮೆಯೇ.

ಮಾರುತಿ ಸುಜುಕಿ ಹೊಸ ಸ್ವಿಫ್ಟ್‌: 2005ರಲ್ಲಿ ಬಿಡುಗಡೆಯಾಗಿ ಇನ್ನೂ ಚಾಲ್ತಿಯಲ್ಲಿರುವ ಮಾರುತಿ ಸುಜುಕಿಯ ಸ್ವಿಫ್ಟ್ ಈವರೆಗೆ ಐದು ಬಾರಿ ಮೇಲ್ದರ್ಜೆ ಕಂಡಿದೆ. ಅಂತೆಯೇ, 2018ರಲ್ಲೂ ಮೇಲ್ದರ್ಜೆಗೊಂಡು ಸಿಂಗರಿಸಿಕೊಳ್ಳುತ್ತಿದೆ. ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಇರಲಿದೆ. ಹೊಸ ಬಂಪರ್‌ಗಳು, ಹೊಸ ದೀಪಗಳು ಗಮನಸೆಳೆಯುತ್ತವೆ. ಒಳಾಂಗಣದಲ್ಲಿ ಡ್ಯಾಷ್ ಬೋರ್ಡ್ ವಿಶೇಷವಾಗಿದೆ. ಮರದ ವಿನ್ಯಾಸ ಗಮನ ಸೆಳೆಯಲಿದೆ. ಅತಿ ವಿಶಾಲವಾದ ಎಲ್‌ಸಿಡಿ ಪರದೆಯ ಬಹುಮಾಧ್ಯಮ ವ್ಯವಸ್ಥೆ ಮನರಂಜನೆ ಹಾಗೂ ಸರಾಗ ಚಾಲನೆಗೆ ಸಹಾಯ ಮಾಡಲಿದೆ. ಎಕ್ಸ್‌ ಶೋರೂಂ ಬೆಲೆ ₹ 4.5 ಲಕ್ಷದಿಂದ ಆರಂಭಗೊಳ್ಳುತ್ತದೆ.‌

ಸಿಯಾಜ್‌: ಸ್ವಿಫ್ಟ್ ಜತೆಗೆ ಸಿಯಾಜ್‌ ಸಹ ಮೇಲ್ದರ್ಜೆ ಕಾಣಲಿದೆ. ಮಾರುತಿ ಸುಜುಕಿಯ ಪ್ರೀಮಿಯಂ ಸೆಡಾನ್‌ ಇದು. ಸ್ವಿಫ್ಟ್‌ನಂತೆಯೇ ಹೊಸ ಬಂಪರ್‌, ದೀಪಗಳು ಇರಲಿದೆ. ಒಳಾಂಗಣ ಮತ್ತಷ್ಟು ಐಷಾರಾಮಿತನವನ್ನು ಹೊಂದಲಿದೆ. ಸಿಯಾಜ್‌ನ ಬೆಲೆ ಎಕ್ಸ್‌ ಶೋರೂಂ ₹6 ಲಕ್ಷದಿಂದ ಆರಂಭಗೊಳ್ಳಲಿದೆ.

ADVERTISEMENT

ಡಟ್ಸನ್‌ ಗೊ ಕ್ರಾಸ್: ಅಮೆರಿಕ ಮೂಲದ ಡಟ್ಸನ್‌ ಗೊ ಕ್ರಾಸ್‌ ಕಾರು ಮಧ್ಯಮ ವರ್ಗದವರಿಗೆ ಸಾಕಷ್ಟು ಮನರಂಜನೆ ಕೊಡಲಿದೆ. ಹಾಲಿ ಇರುವ ಡಟ್ಸನ್‌ ಗೊ ಉತ್ತಮ ಕಾರ್‌ ಎಂದು ಸಾಬೀತಾಗಿದೆ. ಕ್ರಾಸ್‌ ಅವತರಣಿಕೆಯಲ್ಲಿ ಹೊಸ ದೀಪಗಳು, ಗ್ರ್ಯಾಬ್‌ ರೇಲ್‌ಗಳು ಸಾಮಾನ್ಯ. ಅಂತೆಯೇ, ದ್ವಿವರ್ಣಗಳಲ್ಲೂ ಡಟ್ಸನ್‌ ಗೊ ಕ್ರಾಸ್‌ ಮನ ಸೆಳೆಯಲಿದೆ. ಕಾರಿನ ಬೆಲೆ ಎಕ್ಸ್‌ ಶೋರೂಂ ₹4.5 ಲಕ್ಷದಿಂದ ಆರಂಭ.

ಫಿಯೆಟ್ ಟಿಪೊ: ಡೀಸೆಲ್‌ ಎಂಜಿನ್‌ ಕಾರ್‌ಗಳ ಗಾಡ್‌ ಫಾದರ್‌ ಎಂದೇ ಖ್ಯಾತಿ ಪಡೆದಿರುವ ಫಿಯೆಟ್‌ 2018ರಲ್ಲಿ ಮತ್ತೊಂದು ಡೀಸೆಲ್‌ ಕಾರ್‌ ಹೊರಬಿಡುತ್ತಿದೆ. ಅದು ಫಿಯೆಟ್‌ ಟಿಪೊ. ತನ್ನ ಲೀನಿಯಾ ಹಳೆಯದಾದ ಕಾರಣ, ಅದನ್ನೇ ಕೊಂಚ ಬದಲಿಸಿ ಟಿಪೊವನ್ನು ಹೊರಬಿಡಲಿದೆ. ಇದು ಮಾರುತಿಯ ಬಲೆನೊ ಕಾರಿಗೆ ಪ್ರತಿಸ್ಪರ್ಧಿ. ಆದರೆ, ಇದು ಸೆಡಾನ್‌ ಕಾರಾಗಿರುವ ಕಾರಣ, ಬಲೆನೊಗಿಂತಲೂ ಮುಂಚೂಣಿಯಲ್ಲಿ ನಿಲ್ಲಲಿದೆ ಎಂಬ ಅಂದಾಜು ವಾಹನತಜ್ಞರದು. ಅಲ್ಲದೇ ಇದು ಪ್ರೀಮಿಯಂ ಸಿ ಕ್ಷೇತ್ರದ ಕಾರಾದ ಕಾರಣ, ಐಷಾರಾಮಿ ಸೌಲಭ್ಯ ಇರಲಿದೆ. ಇದರ ಬೆಲೆ ಎಕ್ಸ್ ಶೋರೂಂ ₹ 8 ಲಕ್ಷದಿಂದ ಆರಂಭ.

ಹ್ಯುಂಡೈ ಕೋನಾ: ವಿಭಿನ್ನ ಹೆಸರಿನ ಹ್ಯಾಚ್‌ಬ್ಯಾಕ್‌ ‘ಕೋನಾ’ ವಿಶೇಷ ಕಾರ್. ಹ್ಯುಂಡೈನ ಇಲೈಟ್‌ ಐ20ಯನ್ನು ಇದು ಹಿಂದಿಕ್ಕಲಿದೆ. 2000 ಸಿಸಿ ಎಂಜಿನ್‌ ಉಳ್ಳ ಶಕ್ತಿಶಾಲಿ ಕಾರು ಇದು. ಸಣ್ಣ ಕಾರುಗಳಿಗೆ ದೊಡ್ಡ ಎಂಜಿನ್ ಕೂರಿಸಿದರೆ ಕಾರ್ಯಕ್ಷಮತೆ ಶ್ರೇಷ್ಠವಾಗಿರುತ್ತದೆ. ಸಂಪೂರ್ಣ ವಿದೇಶಿ ತಂತ್ರಜ್ಞಾನ ಇರುವ ಕಾರಣ, ಐಷಾರಾಮಿತನಕ್ಕೆ ಏನೂ ಕಡಿಮೆಯಿಲ್ಲ. ಎಲ್‌ಇಡಿ ದೀಪಗಳು, ಸಂಪೂರ್ಣ ಸ್ವಯಂಚಾಲಿತ ಗಿಯರ್‌ ವ್ಯವಸ್ಥೆ ಉತ್ತಮ ಎನಿಸಲಿವೆ. ಇದರ ಬೆಲೆ ಎಕ್ಸ್‌ಶೋರೂಂ ₹ 8 ಲಕ್ಷದಿಂದ ಆರಂಭಗೊಳ್ಳಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.