ADVERTISEMENT

ದುಬಾರಿ ಬೈಕುಗಳ ದರ್ಬಾರು

ನೇಸರ ಕಾಡನಕುಪ್ಪೆ
Published 10 ಜನವರಿ 2018, 19:30 IST
Last Updated 10 ಜನವರಿ 2018, 19:30 IST
ಡುಕಾಟಿ ಮಾನ್‌ಸ್ಟರ್‌ 821
ಡುಕಾಟಿ ಮಾನ್‌ಸ್ಟರ್‌ 821   

2017ರಲ್ಲಿ ಮೋಟಾರ್‌ಸೈಕಲ್‌ಗಳ ಹವಾ ಅಷ್ಟೇನೂ ಹೆಚ್ಚಿರಲಿಲ್ಲ. ಹಳೆಯ ಬೈಕುಗಳ ಹೊಸ ಅವತಾರ ಕಂಡವಷ್ಟೇ. ಆದರೆ, 2018 ಹಾಗಿಲ್ಲ; ಸಾಕಷ್ಟು ಹೊಸತನ ಇರಲಿದೆ. ಈ ವರ್ಷ ವಿದೇಶಿ ದುಬಾರಿ ಬೈಕುಗಳು ದರ್ಬಾರು ನಡೆಸಲಿವೆ.

ಭಾರತೀಯರ ಕೊಳ್ಳುವ ಸಾಮರ್ಥ್ಯ ಹೆಚ್ಚಿರುವ ಹಿನ್ನೆಲೆಯಲ್ಲೇ ವಿದೇಶಿ ಬೈಕ್‌ ಕಂಪನಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳ ಪೈಕಿ ಪ್ರಮುಖವಾದವು ಹಾರ್ಲಿ ಡೇವಿಡ್‌ಸನ್, ಡಿಎಸ್‌ಕೆ ಬನೆಲ್ಲಿ. ಈ ವರ್ಷ ಈ ಸಾಲಿಗೆ ಬಿಎಂಡಬ್ಲ್ಯೂ, ಟ್ರಿಂಫ್‌, ಹೋಂಡಾ ಕವಾಸಾಕಿ ಸೇರಲಿವೆ. ಈ ಕಂಪನಿಗಳ ದೈತ್ಯ ಬೈಕುಗಳು ರಸ್ತೆಗಳ ಮೇಲೆ ಸದ್ದು ಮಾಡಲಿವೆ. ₹ 10 ಲಕ್ಷ ಒಳಗಿನ ಸೂಪರ್‌ ಬೈಕ್‌ಗಳ ಬಗ್ಗೆ ಮಾತ್ರ ಇಲ್ಲಿ ಪರಿಚಯ ನೀಡಲಾಗಿದೆ.

ಹೋಂಡಾ ಸಿಬಿ 500ಎಕ್ಸ್‌: ಈ  ಬೈಕ್‌ ಭಾರತ ದಲ್ಲಿ ಇನ್ನೂ ಬಿಡುಗಡೆಯಾಗಿಲ್ಲ. ವಿದೇಶದಲ್ಲಿ ಹೆಸರು ಗಳಿಸಿರುವ ಬೈಕ್‌ ಇದು. ಇದರಲ್ಲಿ 500 ಸಿಸಿ ಲಿಕ್ವಿಡ್‌ ಕೂಲ್ಡ್ ಎಂಜಿನ್ ಇದೆ. 47 ಬಿಎಚ್‌ಪಿ, 43 ಎನ್‌ಎಂ ಟಾರ್ಕ್‌ ಈ ಬೈಕಿನಲ್ಲಿದೆ. 60 ಕಿ.ಮೀ ವೇಗವನ್ನು ಇದು ಕೇವಲ 3.2 ಸೆಕೆಂಡ್‌ಗಳಲ್ಲಿ ಮುಟ್ಟಬಲ್ಲದು. ಇದರ ಬೆಲೆ ₹ 5.5 ಲಕ್ಷದಿಂದ ₹ 7 ಲಕ್ಷ ಇರಲಿದೆ.

ADVERTISEMENT

ಕವಾಸಾಕಿ ಜೆಡ್‌ 900 ಆರ್‌ಎಸ್: ಕೊಂಚ ಕ್ರೂಸರ್ ಶೈಲಿಯಲ್ಲಿ ನೇಕಡ್‌ ಬೈಕ್‌ ಇದು. ಅಂದರೆ, ಸ್ಪೋರ್ಟ್ಸ್‌ ಬೈಕ್‌ಗಳಂತೆ ಇದಕ್ಕೆ ಎಂಜಿನ್‌ ಮುಚ್ಚಿಕೊಂಡಿರುವುದಿಲ್ಲ. ಹಾಗಾಗಿ, ಇದರಲ್ಲಿ ಗಾಳಿಯಿಂದ ಎಂಜಿನ್‌ ತಂಪಾಗುವ, ಜತೆಗೆ ದ್ರವದ ಮೂಲಕ ತಂಪಾಗಿಸುವ ಸೌಲಭ್ಯಗಳೆರಡೂ ಇರುತ್ತದೆ. 900 ಸಿಸಿ ಎಂಜಿನ್‌ ಇರಲಿದೆ. ಅದಕ್ಕೆ ತಕ್ಕಂತೆ 110 ಬಿಎಚ್‌ಪಿ, 98 ಎನ್‌ಎಂ ಟಾರ್ಕ್‌ ಇದರಲ್ಲಿದೆ. 60 ಕಿ.ಮೀ. ವೇಗವನ್ನು ಕೇವಲ 3 ಸೆಕೆಂಡ್‌ಗಳಲ್ಲಿ ಮುಟ್ಟುತ್ತದೆ. ₹8 ಲಕ್ಷದಿಂದ ಬೆಲೆ ಆರಂಭ.

ಬನೆಲ್ಲಿ ಟಿಆರ್‌ಕೆ 502: 500ಸಿಸಿ ಎಂಜಿನ್‌ ಇರುವ ಈ ಸೂಪರ್ ಬೈಕ್‌, ‘ಆಲ್‌ ಟೆರೈನ್‌ ಬೈಕ್‌’ ಪ್ರಭೇದಕ್ಕೆ ಸೇರುತ್ತದೆ. ಅಂದರೆ, ನಯವಾದ ರಸ್ತೆಯಿಂದ–ಕಚ್ಚಾ ರಸ್ತೆಯವರೆಗೂ ಸರಾಗವಾಗಿ ಚಲಿಸಬಲ್ಲ ಸಾಮರ್ಥ್ಯ ಹೊಂದಿರುತ್ತದೆ. 6 ಸ್ಪೀಡ್‌ ಗಿಯರ್‌ ಬಾಕ್ಸ್ ಇದರಲ್ಲಿದೆ. 47 ಬಿಎಚ್‌ಪಿ ಹಾಗೂ 45 ಎನ್‌ಎಂ ಟಾರ್ಕ್‌ ಇದೆ. 19 ಇಂಚಿನ ವಿಶಾಲ ಮುಂಭಾಗದ ಹಾಗೂ 17 ಇಂಚಿನ ಹಿಂಭಾಗದ ಚಕ್ರಗಳು ಒಳ್ಳೆಯ ರಸ್ತೆ ಹಿಡಿತವನ್ನು ನೀಡುತ್ತವೆ. 20 ಲೀಟರ್‌ ಇಂಧನ ಸಾಮರ್ಥ್ಯದ ಪೆಟ್ರೋಲ್‌ ಟ್ಯಾಂಕ್‌ ಇದ್ದು, ದೂರದ ಪ್ರಯಾಣಕ್ಕೆ ತುಂಬಾ ಅನುಕೂಲಕಾರಿ. ಬೆಲೆ ತೀರಾ ಹೆಚ್ಚೇನೂ ಅಲ್ಲ.

₹ 6 ಲಕ್ಷ. ಈ ಬೈಕಿನ ವಿಶೇಷವೆಂದರೆ, ಇದರ ಜತೆಗೆ ಸಿಗಲಿರುವ ಅಕ್ಸೆಸರೀಸ್‌. ಬಟ್ಟೆ ಇಟ್ಟುಕೊಳ್ಳಲು ಬೀಗ ಇರುವ ಸದೃಢ ಜೋಡಿ ಡಬ್ಬಿ, ವಿಂಡ್‌ ಶೀಲ್ಡ್‌ ಮೋಹಕವಾಗೂ ಇವೆ, ಉಪಯೋಗಕಾರಿಯೂ ಆಗಿವೆ.

ಬಿಎಂಡಬ್ಲ್ಯೂ ಎಫ್‌ 750 ಜಿಎಸ್‌: ಮೇಲೆ ಉಲ್ಲೇಖಿಸಿದ ಬೈಕ್‌ ಮಾದರಿಯ ಸೂಪರ್ ಲಕ್ಷುರಿ ಬೈಕ್‌ ಇದು. ಬಿಎಂಡಬ್ಲ್ಯೂ ಕಂಪನಿಯ ಎಂಜಿನ್‌ಗಳು ಸರ್ವಶ್ರೇಷ್ಠ ಎಂಬ ಮಾತಿದೆ. ಅದರಂತೆಯೇ ಬೆಲೆಯೂ ಹೆಚ್ಚಿರುತ್ತದೆ. ₹10 ಲಕ್ಷದಿಂದ ಆರಂಭ. ಅತ್ಯುತ್ತಮ 750 ಸಿಸಿ ಎಂಜಿನ್ ಇದರಲ್ಲಿ ಇರಲಿದೆ. ಅತಿ ಎತ್ತರದ ನಿಲುವು ದೂರದ ಪ್ರಯಾಣಕ್ಕೆ ಹೇಳಿ ಮಾಡಿಸಿ‌ದಂತಿದೆ. ಶ್ರೇಷ್ಠವಾದ 80 ಬಿಎಚ್‌ಪಿ ಶಕ್ತಿ ಈ ಬೈಕಿಗಿರುವುದು ವಿಶೇಷ. 60 ಕಿ.ಮೀ. ವೇಗವನ್ನು ಈ ಬೈಕ್‌ ಕೇವಲ 3 ಸೆಕೆಂಡ್‌ಗಳಲ್ಲಿ ಮುಟ್ಟುತ್ತದೆ.

ಟ್ರಿಂಫ್‌ ಬಾನ್‌ವಿಲ್‌ ಟಿ120: ಇದು ಬ್ರಿಟಿಷ್‌ ಮೋಟಾರ್‌ಸೈಕಲ್. ಸದೃಢ ಮೈಕಟ್ಟಿಗೆ ಟ್ರಿಂಫ್ ಹೆಸರುವಾಸಿ. ಬಾನ್‌ವಿಲ್‌ ಟಿ 120 ಅತ್ಯುತ್ತಮ ಬೈಕ್‌ಗಳಲ್ಲಿ ಒಂದು. ಬರೋಬ್ಬರಿ 1200 ಸಿಸಿ ಎಂಜಿನ್‌ ಇದರಲ್ಲಿದೆ. 105 ಎನ್‌ಎಂ ಶಕ್ತಿಯ 6 ಸ್ಪೀಡ್‌ ಗಿಯರ್‌ ಬಾಕ್ಸ್ ಉಳ್ಳ ಬಲಶಾಲಿ ಹೃದಯ ಇದಕ್ಕಿದೆ. ಬಲಶಾಲಿ ಸಸ್ಪೆನ್ಷನ್‌ ವ್ಯವಸ್ಥೆ ಇದ್ದು, ಕುಲುಕಾಟವಿಲ್ಲದ ಪ್ರಯಾಣದ ಭರವಸೆ ನೀಡುತ್ತದೆ. ಅತಿ ಚಿಕ್ಕನೆ ದೇಹ, ಕಠಿಣ ತಿರುವುಗಳಲ್ಲಿ ಉತ್ತಮ ನಿಯಂತ್ರಣ ನೀಡುವುದು ಇದರ ಖ್ಯಾತಿ. ಬೆಲೆ ₹ 7.5 ಲಕ್ಷದಿಂದ ಆರಂಭ.

ಡುಕಾಟಿ ಮಾನ್‌ಸ್ಟರ್‌ 821: ಹೆಸರೇ ಹೇಳುವಂತೆ ಇದು ದೈತ್ಯ ಬೈಕ್‌. ಡುಕಾಟಿ ಬೈಕ್‌ಗಳು ಮೂಲತಃ ರೇಸ್‌ ಉದ್ದೇಶಕ್ಕಾಗಿ ತಯಾರಾದವು. ಆದರೆ, ಈಗ ನಾಗರಿಕ ರಸ್ತೆಗಳಲ್ಲೂ ಪ್ರಸಿದ್ಧ. ಈ ಬೈಕಿಗೆ 821 ಸಿಸಿ ಎಂಜಿನ್‌ ಇದೆ. 108 ಪಿಎಚ್‌ ಶಕ್ತಿ ಹಾಗೂ 86 ಎನ್‌ಎಂ ಟಾರ್ಕ್‌ ಈ ಬೈಕಿಗಿದ್ದು, ಉತ್ತಮ ವೇಗವನ್ನು ನೀಡುತ್ತದೆ. ಇದು ಕಾರ್ಯಕ್ಷಮತೆ ಜತೆಗೆ ಇದರ ನೋಟಕ್ಕೂ ಹೆಚ್ಚು ಪ್ರಸಿದ್ಧ. ನೇಕೆಡ್‌ ವಿಭಾಗದ ಈ ಬೈಕ್‌ ಯುವಕರ ಮೆಚ್ಚುಗೆ ಗಳಿಸಿದೆ. ಇದರ ಬೆಲೆ ₹ 10 ಲಕ್ಷದಿಂದ ಆರಂಭ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.