ADVERTISEMENT

ಕಾಮಗಾರಿ ಎಂಬುದು ಮಿಥ್ಯೆ ಕಣಾ

ರವೀಂದ್ರ ಭಟ್ಟ
Published 26 ಅಕ್ಟೋಬರ್ 2014, 19:30 IST
Last Updated 26 ಅಕ್ಟೋಬರ್ 2014, 19:30 IST

ರಾಜ್ಯದಲ್ಲಿ ಪಂಚಾಯತ್‌ ರಾಜ್ ವ್ಯವಸ್ಥೆ ಜಾರಿಗೆ ಬಂದಾಗ ‘ಇದು ಅಧಿಕಾರದ ವಿಕೇಂದ್ರೀ­ಕರಣ ಅಲ್ಲ. ಭ್ರಷ್ಟಾಚಾರದ ವಿಕೇಂದ್ರೀಕರಣ’ ಎಂದು ಕೆಲವರು ಟೀಕೆ ಮಾಡಿದ್ದರು. ಕಳೆದ 20 ವರ್ಷ­-­ಗಳ ಅನುಭವದ ನಂತರ ಈ ಮಾತು ನಿಜ­ವಾಗುತ್ತಿದೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾ ಪಂಚಾಯಿತಿಯವರೆಗೆ ಬಹುತೇಕ ಎಲ್ಲ ಕಡೆ ಲಂಚಗುಳಿತನ ಸಾಮಾನ್ಯವಾಗಿದೆ. ವ್ಯವಸ್ಥೆಯ ಒಂದು ಭಾಗವಾಗಿದೆ. ಲಂಚ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ಇದಕ್ಕೆ ಕೇವಲ ಪಂಚಾಯತ್ ರಾಜ್ ವ್ಯವಸ್ಥೆಯನ್ನು ದೂರಿದರೆ ಫಲವಿಲ್ಲ. ಇತರ ವ್ಯವಸ್ಥೆಗಳೂ ಇದಕ್ಕೆ ಕಾರಣವಾಗಿವೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸದಸ್ಯರೂ ಕೂಡ ಹಣದ ಆಸೆಗೆ ಬಲಿಯಾಗಿದ್ದಾರೆ. ಇದಕ್ಕೆ ಬಹುಮಟ್ಟಿಗೆ ಅಧಿಕಾರಿಶಾಹಿಗಳ ಹಣದಾಹ ಮೂಲಧಾತುವಾಗಿದೆ. ರಾಜ್ಯ ಸರ್ಕಾರದ ನಿಯಮ­ಗಳೂ ಇದಕ್ಕೆ ತನ್ನದೇ ಆದ ಕೊಡುಗೆ­ಯನ್ನು ನೀಡುತ್ತಿವೆ. ಈ ಹಿಂದೆ ಒಬ್ಬ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಒಂದು ಜಾಗದಲ್ಲಿ ಕನಿಷ್ಠ 5 ವರ್ಷ ಇರುತ್ತಿದ್ದ. ಅದೇ ರೀತಿ ಕಾರ್ಯಪಾಲಕ ಎಂಜಿನಿಯರ್ ಹಾಗೂ ಇತರ ಅಧಿಕಾರಿಗಳು 5 ವರ್ಷ ಇರುತ್ತಿದ್ದರು.

ಒಂದೇ ಜಾಗದಲ್ಲಿ ಬಹಳ ಕಾಲದಿಂದ ಒಬ್ಬ ಅಧಿಕಾರಿ ಇದ್ದರೆ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅಧಿಕಾರಿಗಳ ಅವಧಿಯನ್ನು 2 ವರ್ಷಕ್ಕೆ ಇಳಿಸಲಾಯಿತು. ಸಿದ್ದರಾಮಯ್ಯ ಸರ್ಕಾರ ಅದನ್ನು ಒಂದು ವರ್ಷಕ್ಕೆ ಇಳಿಸಿದೆ. ಹೀಗೆ ಒಂದೇ ವರ್ಷಕ್ಕೆ ಅಧಿಕಾರಿಗಳನ್ನು ವರ್ಗಾವಣೆ ಮಾಡಬಹುದು ಎಂಬ ನಿಯಮ ಬಂದ ನಂತರ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆ ವ್ಯವಸ್ಥೆಯಲ್ಲಿ ಇರುವವರು ಹೇಳುತ್ತಾರೆ.

ಉದಾಹರಣೆಗೆ ಅವರು ಎಂಜಿನಿಯರ್ ಕತೆಯನ್ನೇ ಹೇಳುತ್ತಾರೆ. ಪ್ರತಿ ವರ್ಷ ವರ್ಗಾವಣೆ ಮಾಡಿಸಿಕೊಳ್ಳಲು ಅಥವಾ ವರ್ಗ ಮಾಡದಂತೆ ನೋಡಿಕೊಳ್ಳಲು ಅವರು ‘ಬಂಡವಾಳ’ ಹೂಡಲೇ ಬೇಕು. ಹೀಗೆ ಬಂಡವಾಳ ಹೂಡಿ ಅಧಿಕಾರದಲ್ಲಿ ಉಳಿದವರು ಅಥವಾ ಬಂಡವಾಳ ಹೂಡಿ ಅಧಿಕಾರಕ್ಕೆ ಬಂದವರು ಸುಮ್ಮನೆ ಕುಳಿತಿರಲು ಸಾಧ್ಯವೇ ಇಲ್ಲ. ಈಗ ತಾವು ಹೂಡಿದ ಬಂಡವಾಳವನ್ನು ವಸೂಲಿ ಮಾಡಿಕೊಳ್ಳಬೇಕು. ಅಲ್ಲದೆ ಮುಂದಿನ ವರ್ಷಕ್ಕೆ ಮತ್ತಷ್ಟು ಬಂಡವಾಳ ಹೂಡಲು ಹಣ ಸಂಗ್ರಹಿಸಲೇ ಬೇಕು. ಇದಕ್ಕೆಲ್ಲಾ ಸರ್ಕಾರ ವಿವಿಧ ಕಾಮಗಾರಿಗೆ ನೀಡುವ ಹಣವೇ ಆಧಾರ.

ಈ ಹಣ ಹೇಗೆ ಖರ್ಚಾಗುತ್ತದೆ ಎನ್ನುವುದೂ ಕುತೂಹಲಕಾರಿಯಾಗಿದೆ. ಉದಾಹರಣೆಗೆ ರಾಜ್ಯ ಸರ್ಕಾರ ಯಾವುದೋ ಒಂದು ಕಾಮಗಾರಿಗೆ 25 ಲಕ್ಷ ಮಂಜೂರು ಮಾಡಿದರೆ ಅದನ್ನು ಗುತ್ತಿಗೆ ಪಡೆದ ಗುತ್ತಿಗೆದಾರನಿಗೆ ಕಾಮಗಾರಿಗಾಗಿ ಸಿಗುವುದು ಶೇ 50ಕ್ಕಿಂತ ಕಡಿಮೆ ಹಣ. ಶೇ 50ಕ್ಕಿಂತ ಕಡಿಮೆ ಹಣದಲ್ಲಿ ಆತ ಕಾಮಗಾರಿಯನ್ನೂ ಮಾಡಿ ತನ್ನ ಲಾಭವನ್ನೂ ಇಟ್ಟುಕೊಳ್ಳಬೇಕು ಎಂದರೆ ಆ ಕಾಮಗಾರಿ ಕಳಪೆಯಾಗುತ್ತದೆಯೇ ವಿನಾ ಒಳ್ಳೆಯ ಕಾಮಗಾರಿ ಸಾಧ್ಯವೇ ಇಲ್ಲ.

₨ 25 ಲಕ್ಷಗಳಲ್ಲಿ ಆದಾಯ ತೆರಿಗೆ, ರಾಯಲ್ಟಿ, ಮಾರಾಟ ತೆರಿಗೆ, ಸಿಬಿಎಫ್ ಎಂದು ಶೇ 25ರಷ್ಟು ಕಡಿತವಾಗುತ್ತದೆ. ಕಾಮಗಾರಿಯ ಅಂದಾಜು ತಯಾರಿಸುವುದಕ್ಕೇ  ಶೇ 3ರಷ್ಟು ಹಣ ಹೋಗುತ್ತದೆ. (ಇದರಲ್ಲಿ ಸೆಕ್ಷನ್ ಎಂಜಿನಿಯರ್‌ಗೆ ಶೇ1, ಎಇಇಗೆ ಶೇ0.5, ಕಾರ್ಯಪಾಲಕ ಎಂಜಿನಿಯರ್‌ಗೆ ಶೇ 1, ಸೆಕ್ಷನ್ ಅಧಿಕಾರಿಗೆ ಶೇ 0.5ರಷ್ಟು ನೀಡುವ ಹಣ ಸೇರಿದೆ). ಕಾಮಗಾರಿಗೆ ಒಪ್ಪಿಗೆ ನೀಡುವಾಗ ಶೇ 1ರಷ್ಟು ಕಡಿತ ಮಾಡಲಾಗುತ್ತದೆ.

ಕಾಮಗಾರಿಯ ಬಿಲ್ ತೆಗೆದುಕೊಳ್ಳುವಾಗ ಸೆಕ್ಷನ್ ಎಂಜಿನಿಯರ್‌ಗೆ ಶೇ 5, ಎಇಇಗೆ ಶೇ 3, ಕಾರ್ಯಪಾಲಕ ಎಂಜಿನಿಯರ್‌ಗೆ ಶೇ 5, ಬಿಲ್ ಲೆಕ್ಕ ಪರಿಶೋಧಕರಿಗೆ ಶೇ 0.5, ಅಕೌಂಟ್ ಸೂಪರಿಂಟೆಂಡೆಂಟ್‌ಗೆ ಶೇ 0.5, ಮುಖ್ಯ ಎಂಜಿನಿಯರ್‌ಗೆ ಶೇ 3, ಗುಣಮಟ್ಟ ನಿಯಂತ್ರಕರಿಗೆ ಶೇ 0.5, ಉಳಿದ ಕಚೇರಿ ಕೆಲಸಕ್ಕೆ ಶೇ 5 ಹೀಗೆ ಕಾಮಗಾರಿಯ ಒಟ್ಟು ಹಣದಲ್ಲಿ ಶೇ 51ರಷ್ಟು ಹಣ ಸೋರಿಕೆಯಾಗುತ್ತದೆ. ಉಳಿದ ಶೇ 49ರಷ್ಟು ಹಣದಲ್ಲಿ ಗುತ್ತಿಗೆದಾರ ಕಾಮಗಾರಿಯನ್ನು ಮಾಡಬೇಕು. ಅದಕ್ಕೇ ಆತ ಗುಣಮಟ್ಟದ ಕಾಮಗಾರಿಯನ್ನು ಮಾಡಲು ಸಾಧ್ಯವಾಗುವುದೇ ಇಲ್ಲ ಎಂದು ಪಂಚಾಯತ್ ರಾಜ್ ವ್ಯವಸ್ಥೆಯ ಒಳಹೊರಗನ್ನು ಬಲ್ಲ ಗುತ್ತಿಗೆದಾರರೊಬ್ಬರು ಹೇಳುತ್ತಾರೆ.

ಜಿಲ್ಲಾ ಪಂಚಾಯಿತಿಯಿಂದ ಹಿಡಿದು ಗ್ರಾಮ ಪಂಚಾಯಿತಿವರೆಗೆ ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣಕ್ಕೆ ಸಾಕಷ್ಟು ಹಣ ಹರಿದು ಬರುತ್ತದೆ. ಕುಡಿಯುವ ನೀರು ಪೂರೈಕೆ ಮಾಡುವ ಕೊಳವೆಗಳನ್ನು ಜೋಡಿಸಲು ನಿಯಮಗಳಿವೆ. ನಿರ್ದಿಷ್ಟ ಪ್ರಮಾಣದ ಗುಣಮಟ್ಟ ಇರುವ ಕೊಳವೆಗಳನ್ನೇ ಅಳವಡಿಸಬೇಕು ಎಂದು ಈ ನಿಯಮ ಹೇಳುತ್ತದೆ. ಗುತ್ತಿಗೆದಾರ ಕೊಳವೆ ಅಳವಡಿಸಿದ ನಂತರ ಅದನ್ನು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಾರೆ. ಆದರೆ ಸಾಮಾನ್ಯವಾಗಿ ಗುತ್ತಿಗೆದಾರರಿಗೆ ಅಧಿಕಾರಿಗಳು ಎಲ್ಲಿ ಪರಿಶೀಲನೆ ಮಾಡುತ್ತಾರೆ ಎನ್ನುವುದು ಗೊತ್ತಿರುತ್ತದೆ.

ಕೊಳವೆ ಮಾರ್ಗದ ಆರಂಭದಲ್ಲಿ, ಅಂತ್ಯದಲ್ಲಿ ಮತ್ತು ಮಧ್ಯದಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಹೀಗೆ ಪರಿಶೀಲನೆ ನಡೆಸುವ ಜಾಗದಲ್ಲಿ ಮಾತ್ರ ನಿಗದಿತ ಪ್ರಮಾಣದ ಗುಣಮಟ್ಟ ಇರುವ ಕೊಳವೆಗಳನ್ನೇ ಜೋಡಿಸಿರಲಾಗುತ್ತದೆ. ಉಳಿದೆಡೆ ಕಳಪೆ ಗುಣಮಟ್ಟದ ಕೊಳವೆಗಳಿರುತ್ತವೆ. ಇದು ಅಧಿಕಾರಿಗೂ ಗೊತ್ತಿರುತ್ತದೆ. ಆದರೆ ಅವರಿಗೆ ಅವರ ಪಾಲಿನ ಹಣ ಬಂದರೆ ಆಯಿತು. ಬಹುತೇಕ ಬಾರಿ ಗುಣಮಟ್ಟ ನಿಯಂತ್ರಕರು ಸ್ಥಳಕ್ಕೇ ಹೋಗುವುದಿಲ್ಲ. ಕಚೇರಿಯಲ್ಲಿಯೇ ಕುಳಿತು ಗುಣಮಟ್ಟ ಅತ್ಯುತ್ತಮವಾಗಿದೆ ಎಂದು ಪ್ರಮಾಣ ಪತ್ರ ನೀಡುತ್ತಾರೆ.

ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಕೊಳವೆ ಮಾರ್ಗ ಇರುತ್ತದೆ. ಆದರೆ ನೀರೇ ಇರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಕೊಳವೆ ಮಾರ್ಗ ಅಳವಡಿಸಿದರೆ ಗುತ್ತಿಗೆದಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು, ಪಂಚಾಯಿತಿ ಸದಸ್ಯರಿಗೆ ಅವರವರ ಪಾಲು ಹಣ ಸಿಗುತ್ತದೆ. ನೀರು ಬಂದರೆಷ್ಟು ಬಿಟ್ಟರೆಷ್ಟು. ನೀರು ಬಂದಿಲ್ಲ ಎಂದು ಜನ ಗಲಾಟೆ ಮಾಡಿದರೆ ಕೊಳವೆ ಮಾರ್ಗವನ್ನೇ ತೋರಿಸಿ ಅವರನ್ನು ಸಮಾಧಾನ ಮಾಡಲಾಗುತ್ತದೆ.

ರಾಜ್ಯದಲ್ಲಿ ಈಗ ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ ಇಂತಹ ಭೂಮಿ ಒತ್ತುವರಿಗೆ ಪಂಚಾಯತ್ ರಾಜ್ ಸಂಸ್ಥೆಗಳ ಕೊಡುಗೆ ಸಾಕಷ್ಟಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಖರಾಬು, ಗುಡ್ಡಭೂಮಿ, ಗೋಮಾಳ, ರೈತರ ಕಣ ಮುಂತಾದವುಗಳನ್ನು ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳೇ ಮುಂದೆ ನಿಂತು ಒತ್ತುವರಿ ಮಾಡಿಸುತ್ತಾರೆ. ‘ಇಲ್ಲ. ಹಾಗೆಲ್ಲ ಇಲ್ಲ’ ಎಂದು ಯಾರಾದರೂ ಹೇಳಿದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದೇ ಲೆಕ್ಕ ಎಂದು ಪಂಚಾಯತ್ ರಾಜ್ ಸಂಸ್ಥೆಯ ಸದಸ್ಯರೊಬ್ಬರು ಖಡಾಖಂಡಿತವಾಗಿ ಹೇಳುತ್ತಾರೆ.

ಜಿಲ್ಲಾ ಪಂಚಾಯಿತಿಯಲ್ಲಿ ಸ್ಥಾಯಿ ಸಮಿತಿಗಳಿವೆ. ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಹಣಕಾಸು, ಕೈಗಾರಿಕೆ ಮುಂತಾದ ಸ್ಥಾಯಿ ಸಮಿತಿಗಳಿವೆ. ಇವುಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸ್ಥಾಯಿ ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಸದಸ್ಯರು ಸಾಕಷ್ಟು ಹಣ ಮಾಡುತ್ತಾರೆ. ಉಳಿದವರು ಮಾಡಲ್ಲ ಎಂದಲ್ಲ. ಆದರೆ ಇವರಿಗೆ ಅವಕಾಶ ಹೆಚ್ಚು ಅಷ್ಟೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಹಲವಾರು ಹಾಸ್ಟೆಲ್‌ಗಳು ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿವೆ. ಅವುಗಳನ್ನು ಪರಿಶೀಲನೆ ಮಾಡುವ ನೆಪದಲ್ಲಿಯೇ ಭ್ರಷ್ಟಾಚಾರ ನಡೆಯುತ್ತದೆ ಎಂದು ಸ್ಥಾಯಿ ಸಮಿತಿ ಸದಸ್ಯರೊಬ್ಬರು ಮಾಹಿತಿ ನೀಡುತ್ತಾರೆ.

ಅಧಿಕಾರಿಗಳ ನೆಪ ಹೇಳಿ ಸದಸ್ಯರು, ಸದಸ್ಯರ ಹೆಸರು ಹೇಳಿ ಅಧಿಕಾರಿಗಳು ಹಣ ವಸೂಲಿ ಮಾಡುತ್ತಾರೆ. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಎಂದ ಹಾಗೆ ಈ ಇಬ್ಬರ ಹಣ ಮಾಡುವ ಚಟಕ್ಕೆ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಸಿಗುವುದೇ ಇಲ್ಲ. ಇದೇ ರೀತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯಲ್ಲಿಯೂ ನಡೆಯುತ್ತದೆ. ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಈಗ ಹೆಚ್ಚಿನ ಅಧಿಕಾರವಿಲ್ಲ. ಬಹುತೇಕ ಅನುದಾನಗಳು ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೇ ಹಂಚಿಕೆ­ಯಾಗುತ್ತವೆ. ಆದರೂ ತಾಲ್ಲೂಕು ಪಂಚಾಯಿತಿ ಸಮಿತಿ ಸದಸ್ಯರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹಣ ಮಾಡುತ್ತಾರೆ.

ತಾಲ್ಲೂಕು ಪಂಚಾಯಿತಿಯಲ್ಲಿಯೂ ಕೆಡಿಪಿ ಸಭೆ ನಡೆಯುತ್ತದೆ. ಅದಕ್ಕೆ ಎಲ್ಲ ಅಧಿಕಾರಿಗಳೂ ಬರಬೇಕು ಎಂದು ಅವರು ಬಯಸುತ್ತಾರೆ. ಹೀಗೆ ಅಧಿಕಾರಿಗಳನ್ನು ಕರೆಸಿಕೊಳ್ಳುವ ಅವರಿಗೆ ಹೆಚ್ಚಿನ ಜವಾಬ್ದಾರಿ ಏನೂ ಇರುವುದಿಲ್ಲ. ಆದರೂ ಅವರನ್ನು ಕರೆಸಿಕೊಂಡು ಏನಾದರೂ ಗಿಂಜಲು ಸಾಧ್ಯವೇ ಎಂದು ನೋಡುತ್ತಾರೆ ಎಂದು ಹೆಸರು ಹೇಳಲು ಬಯಸದ ತಾಲ್ಲೂಕು ಪಂಚಾಯಿತಿ ಸದಸ್ಯರೇ ಹೇಳುತ್ತಾರೆ.

ಉದ್ಯೋಗ ಗ್ಯಾರಂಟಿ ಯೋಜನೆ, ಪಡಿತರ ವಿತರಣೆ, ಮನೆಗಳ ವಿತರಣೆ ಮುಂತಾದ ಜನಪ್ರಿಯ ಯೋಜನೆಗಳ ಹೆಸರಿನಲ್ಲಿಯೂ ಹಣ ಮಾಡಲಾಗುತ್ತದೆ. ‘ಛೇ ಎಲ್ಲ ಕಡೆ ಹಾಗಿಲ್ಲ. ಎಲ್ಲ ಪಂಚಾಯಿತಿ ಸದಸ್ಯರೂ, ಎಲ್ಲ ಅಧಿಕಾರಿಗಳೂ ಭ್ರಷ್ಟರು ಎಂದು ಹೇಳುವುದೂ ಸರಿಯಲ್ಲ’ ಎಂದು ಹೇಳಿದರೆ ‘ಹೌದು ಸ್ವಾಮಿ ನೀವು ಹೇಳುವುದು ಸರಿ. ಆದರೆ ಅಧಿಕಾರಕ್ಕೆ ಬಂದ ಬಹುತೇಕ ಎಲ್ಲ ರಾಜ್ಯ ಸರ್ಕಾರಗಳೂ ವರ್ಷಕ್ಕೆ 5ರಿಂದ 6 ಲಕ್ಷ ಮನೆ ಹಂಚಿಕೆ ಮಾಡುವುದಾಗಿ ಹೇಳುತ್ತವೆ. ಆದರೂ ಇನ್ನೂ ಗುಡಿಸಲಿನಲ್ಲಿ ವಾಸ ಮಾಡುವ, ಮನೆಯೇ ಇಲ್ಲದ ಲಕ್ಷಾಂತರ ಮಂದಿ ಇದ್ದಾರೆ.  ವರ್ಷದಿಂದ ವರ್ಷಕ್ಕೆ ಸಾವಿರ ಸಾವಿರ ಕೋಟಿ ರೂಪಾಯಿಗಳ ಅನುದಾನ ಹೆಚ್ಚಾಗುತ್ತಲೇ ಇದೆ.

ಅಷ್ಟೆಲ್ಲಾ ಹಣ ನಿಜವಾಗಿಯೂ ಪ್ರಾಮಾಣಿಕ ಉದ್ದೇಶಕ್ಕೆ ವೆಚ್ಚ ಮಾಡಿದ್ದರೆ ಇಷ್ಟು ಹೊತ್ತಿಗೆ ನಮ್ಮ ರಾಜ್ಯ ರಾಮರಾಜ್ಯವಾಗಿರುತ್ತಿತ್ತು. 2016ಕ್ಕೆ ನಮ್ಮ ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದು 30 ವರ್ಷ ಆಗುತ್ತದೆ. ಕಳೆದ 30 ವರ್ಷ ನಾವು ಮನೆ ಕಟ್ಟಿಕೊಟ್ಟಿದ್ದೇವೆ. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದೇವೆ. ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದ್ದೇವೆ. ಆದರೂ ಬಯಲು ಶೌಚಾಲಯ ನಿರ್ಮೂಲನೆ ಆಗಿಲ್ಲ. ಕುಡಿಯುವ ನೀರಿಗೆ ಹಾಹಾಕಾರ ತಪ್ಪಿಲ್ಲ. ನೆಲವೇ ಹಾಸಿಗೆ, ಆಕಾಶವೇ ಹೊದಿಕೆ ಎಂದು ಮಲಗುವವರ ಸಂಖ್ಯೆಯೂ ಕಡಿಮೆಯಾಗಿಲ್ಲ. ಇದೇ ಏನ್ ಸಾರ್ ಪ್ರಾಮಾಣಿಕತೆ’ ಎಂದು ಅವರು ಪ್ರಶ್ನೆ ಮಾಡುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.