ADVERTISEMENT

ಅಂತಃಸತ್ವದ ಶಕ್ತಿಗೆ ’ಸಾಕ್ಷಿ’

ಜಿ.ಎನ್.ಶಿವಕುಮಾರ
Published 23 ಆಗಸ್ಟ್ 2016, 6:35 IST
Last Updated 23 ಆಗಸ್ಟ್ 2016, 6:35 IST
ರಿಯೊ ಒಲಿಂಪಿಕ್ಸ್‌ನಲ್ಲಿ ಕಿರ್ಗಿಸ್ತಾನದ ಟೈನಿಬೆ ಕೊವಾ ಐಸುಲು ಅವರ ವಿರುದ್ಧ ಸಾಕ್ಷಿ ಮಲಿಕ್‌ ಸೆಣಸಾಡಿದ ಕ್ಷಣ –ಪ್ರಜಾವಾಣಿ ಚಿತ್ರ/ಕೆ.ಎನ್‌.ಶಾಂತಕುಮಾರ್
ರಿಯೊ ಒಲಿಂಪಿಕ್ಸ್‌ನಲ್ಲಿ ಕಿರ್ಗಿಸ್ತಾನದ ಟೈನಿಬೆ ಕೊವಾ ಐಸುಲು ಅವರ ವಿರುದ್ಧ ಸಾಕ್ಷಿ ಮಲಿಕ್‌ ಸೆಣಸಾಡಿದ ಕ್ಷಣ –ಪ್ರಜಾವಾಣಿ ಚಿತ್ರ/ಕೆ.ಎನ್‌.ಶಾಂತಕುಮಾರ್   

ಯಾರೇ ಆಗಲಿ ಆಯಾ ವ್ಯಕ್ತಿಗೆ ಆಯಾ ಕ್ಷೇತ್ರದ ಹುಚ್ಚುಹತ್ತಬೇಕು. ಹೀಗೆ, ಅವರವರ ಕ್ಷೇತ್ರ ವೃತ್ತಿಯ ಹುಚ್ಚುಹತ್ತದೆ ಅದರಲ್ಲಿ ಪರಿಪೂರ್ಣತೆ, ಸಮೃದ್ಧಿಯನ್ನು ಪಡೆಯಲು ಸಾಧ್ಯವಾಗದು. ಇದನ್ನೇ ಸಂತ ಮೀರಾ ‘ಸಾಧನ ಕರನಾ ಚಾಹೀಯೇ ಮನವಾ’ ಎಂದಿದ್ದಾರೆ.

ಆರೋಗ್ಯ, ದಷ್ಟಪುಷ್ಟಮಾಂಸಖಂಡ, ಸೌಂದರ್ಯ ಈ ಮೂರು ಕೂಡಿದ ಕಟುಮಸ್ತಾದ ಆಕರ್ಷಕ ಶರೀರವನ್ನು ಹೊಂದಬೇಕು ಎಂದು ಬಯಸಿ, ಇಚ್ಛೆಪಟ್ಟ ಮಾತ್ರಕ್ಕೆ ಸಿಗುವುದಿಲ್ಲ. ಅದರ ಹಿಂದೆ ಸಾಧನೆ ಬೇಕು. ಆಗ ಸಾಧನೆಗೆ ತಕ್ಕ ಫಲ ಸಿಗುತ್ತದೆ.

-ಹೀಗೆ, ಕುಸ್ತಿಯ ಹುಚ್ಚುಹತ್ತಿ, ಸಾಧನೆಯ ಬೆನ್ನುಬಿದ್ದು, ದಶಕದ ಕಾಲ ಕಠಿಣ ಪರಿಶ್ರಮ ಹಾಕಿ, 'ಹಾಲು ಕುಡಿ ಕುಸ್ತಿ ಕಲಿ' ಎಂಬಂತೆ ಕುಸ್ತಿಗಾಗಿ ಬೆವರು ಹರಿಸಿದ್ದರ ಫಲವಾಗಿ ಭಾರತದ ಕುಸ್ತಿಪಟು ಸಾಕ್ಷಿ ಮಲಿಕ್‌ ರಿಯೊ ಒಲಿಂಪಿಕ್ಸ್‌ನಲ್ಲಿ ಪದಕದ ಮುನ್ನುಡಿ ಬರೆಯಲು ಸಾಧ್ಯವಾಯಿತು.

ಒಲಿಂಪಿಕ್ಸ್ ಆರಂಭವಾಗಿ 10 ದಿನ ಕಳೆಯಿತು ಒಂದೂ ಪದಕ ಇಲ್ಲ ಎಂದು ಇಡೀ ದೇಶದ ಜನ ಬ್ರೆಸಿಲ್‌ನ ಕ್ರೀಡಾ ಗ್ರಾಮದತ್ತ ಆಸೆಗಣ್ಣಿನಿಂದಲೇ ನೋಡುತ್ತಿದ್ದರು.

ಗುರುವಾರ(18ರಂದು) ಬೆಳಗಿನಜಾವ(ಭಾರತೀಯ ಕಾಲಮಾನ ಪ್ರಕಾರ 2.35ಕ್ಕೆ) ಕಂಚಿಗಾಗಿ ನಡೆದ ಹೋರಾಟ ಎನ್ನುವುದಕ್ಕಿಂತ ರಿಯೊ ಒಲಿಂಪಿಕ್ಸ್‌ನಲ್ಲಿ ರಾಷ್ಟ್ರಕ್ಕೆ ಸಂದ ಮೊದಲ ಪದಕಕ್ಕಾಗಿ ನಡೆದ ಮಹಿಳೆಯರ 58 ಕೆ.ಜಿ. ವಿಭಾಗದ ಹಣಾಹಣಿಯಲ್ಲಿ ಭಾರತದ(ಹರಿಯಾಣ ರಾಜ್ಯ) ಕುಸ್ತಿಪಟು ಸಾಕ್ಷಿ 8-5ರಿಂದ ಕಿರ್ಗಿಸ್ತಾನದ ಟೈನಿಬೆ ಕೊವಾ ಐಸುಲು ಅವರನ್ನು ಮಣಿಸಿ ವಿಜಯಿಯಾದರು. 

ಏಕಾಏಕಿ ಅಖಾಡಕ್ಕಿಳಿದರೆ? ಇಲ್ಲ. ಅವರಲ್ಲಿ ಸಾಧನಾಬಲವಿತ್ತು, ಶಕ್ತಿ ಸಂಪನ್ನತೆ ಇತ್ತು, ರಟ್ಟೆಯಲ್ಲಿ ಕಸುವಿತ್ತು, ಅಖಾಡತಂತ್ರದ ಅರಿವಿತ್ತು. ಈ ಎಲ್ಲವನ್ನೂ ಕಾಯ್ದಿಟ್ಟುಕೊಂಡಿದ್ದ ಸಾಕ್ಷಿ ಆರು ನಿಮಿಷ ಪಂದ್ಯದ ಕೊನೆಯ 9 ಸೆಕೆಂಡುಗಳಲ್ಲಿ ಎದುರಾಳಿಯ ಮೇಲೆ ಪ್ರಯೋಗಿಸಿದರು. ಪಂದ್ಯದ ಆರಂಭದಲ್ಲಿ ಹಿನ್ನಡೆಯಲ್ಲಿದ್ದರೂ(0-5, 4-5, 5-5) ಧೃತಿಗೆಡದೆ ಆತ್ಮ ಸ್ಥೈರ್ಯದಿಂದ ಮುನ್ನುಗ್ಗಿ ಪಟ್ಟು(ಡಬಲ್ ಲೆಗ್) ಹಾಕಿ ಎದುರಾಳಿಯನ್ನು ಮಕಾಡೆ ಮಲಗಿಸಿ ಮೂರು ಪಾಯಿಂಟ್ ಗಳಿಸಿದರು. ಕೊನೆಗೆ ತ್ರಿವರ್ಣ ಧ್ವಜ ಹಿಡಿದು ವಿಜಯದ ಸಂಭ್ರಮವನ್ನಾಚರಿಸಿದರು. ಈ ಮೂಲಕ ರಾಷ್ಟ್ರದ ಮಹಿಳಾ ಕುಸ್ತಿಪಟುವೊಬ್ಬರು ಪ್ರಥಮಬಾರಿಗೆ ಒಲಿಂಪಿಕ್ಸ್‌ನ ಪದಕ ಗೆದ್ದ ಕೀರ್ತಿ ಹಾಗೂ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಂದ ಮೊದಲ ಪದಕಕ್ಕೆ ಮುತ್ತಿಕ್ಕಿದ ಐತಿಹಾಸಿಕ ಕ್ಷಣಕ್ಕೆ ‘ಸಾಕ್ಷಿ’ಯಾದರು.

‘ಸಾಕ್ಷಿ’ ಎಂಬ ಪದಕ್ಕೆ ‘ರುಜುವಾತು’ ಎಂಬ ಅರ್ಥವಿದೆ. ‘ಶಕ್ತಿತ್ರಯ’ ಎಂಬ ಪದಕ್ಕೆ ‘ಪ್ರಭು’/‘ಯಜಮಾನ’, ‘ಮಂತ್ರ’ ಮತ್ತು ‘ಉತ್ಸಾಹ’ಗಳೆಂಬ ಮೂರು ಶಕ್ತಿಗಳು ಎಂದರ್ಥವಿದೆ. ಇದಕ್ಕೆ ಅನ್ವರ್ಥವಾಗುವಂತೆ ಸಾಕ್ಷಿ ತನ್ನ ‘ಅಂತಃಸತ್ವ’ದ 'ಶಕ್ತಿ'ಯ ರುಜುವಾತಿಗೆ ‘ಸಾಕ್ಷಿ’ಯಾಗಿದ್ದಾರೆ. ಪದಕದ ‘ಒಡತಿ’ಯಾಗಿದ್ದಾರೆ, ಪದಕ ಗೆಲ್ಲಲೇಬೇಕೆಂದು ತಾನು ಪಠಿಸಿದ್ದ ‘ಮಂತ್ರ’ಕ್ಕೆ ಸಾಕಾರರೂಪ ನೀಡಿ, ರಾಷ್ಟ್ರದ ಯುವ ಸಮೂಹಕ್ಕೆ ‘ಉತ್ಸಾಹ’ದ ಚಿಲುಮೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.