ADVERTISEMENT

ಅಂತಿಮ ಘಟ್ಟಕ್ಕೆ ರಾಮಕುಮಾರ್‌ ರಾಮನಾಥನ್

ತಲ್ಲಾಹಸ್ಸಿ ಚಾಲೆಂಜರ್‌ ಟೆನಿಸ್‌ ಟೂರ್ನಿ; ಡಬಲ್ಸ್‌ನಲ್ಲಿ ಪ್ರಶಸ್ತಿ ಸುತ್ತಿಗೆ ಪೇಸ್‌ ಜೋಡಿ

ಪಿಟಿಐ
Published 29 ಏಪ್ರಿಲ್ 2017, 19:30 IST
Last Updated 29 ಏಪ್ರಿಲ್ 2017, 19:30 IST
ರಾಮಕುಮಾರ್ ರಾಮನಾಥನ್
ರಾಮಕುಮಾರ್ ರಾಮನಾಥನ್   

ತಲ್ಲಾಹಸ್ಸಿ, ಫ್ಲೋರಿಡಾ: ಡೇವಿಸ್‌ಕಪ್‌ನಲ್ಲಿ ಆಡಿದ ಅನುಭವ ಹೊಂದಿರುವ ರಾಮಕುಮಾರ್‌ ರಾಮನಾಥನ್‌ ಅವರು ಇಲ್ಲಿ ನಡೆಯುತ್ತಿರುವ ಎಟಿಪಿ ತಲ್ಲಾಹಸ್ಸಿ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ  ಫೈನಲ್‌ ಪ್ರವೇಶಿಸಿದ್ದಾರೆ.

ಡಬಲ್ಸ್‌ ವಿಭಾಗದಲ್ಲಿ ಭಾರತದ ಅನುಭವಿ ಆಟಗಾರ ಲಿಯಾಂಡರ್‌ ಪೇಸ್‌ ಮತ್ತು ಅಮೆರಿಕಾದ ಸ್ಕಾಟ್‌ ಲಿಪ್ಸಿಕಿ ಅವರು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ರಾಮಕುಮಾರ್‌ 6–2, 5–7, 6–4ರಲ್ಲಿ ಇಟಲಿಯ ಆ್ಯಂಡ್ರೆ ಅರ್ನಾಬೊಲ್ಡಿ ಅವರನ್ನು ಪರಾಭವಗೊಳಿಸಿದರು.

ಈ ಮೂಲಕ 22 ವರ್ಷದ ಆಟಗಾರ ರಾಮಕುಮಾರ್‌ ಅವರು ಚಾಲೆಂಜರ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು. ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ರಾಮಕುಮಾರ್‌ಗೆ ಸ್ಲೊವೇನಿಯಾದ ಬ್ಲೇಜ್‌ ರೋಲಾ ಅವರ ಸವಾಲು ಎದುರಾಗಲಿದೆ.

ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ರೋಲಾ 6–3, 5–7, 6–4ರಲ್ಲಿ ಅಮೆರಿಕಾದ ಮಿಷೆಲ್‌ ಕ್ರುಯೆಗರ್‌ ಸವಾಲು ಮೀರಿ ನಿಂತರು. ಸೆಮಿಫೈನಲ್‌ ಹೋರಾಟದಲ್ಲಿ ಶುರುವಿನಿಂದಲೂ ಚುರುಕಾಗಿ ಆಡಿದ ರಾಮಕುಮಾರ್‌ ಮೊದಲ ಸೆಟ್‌ನಲ್ಲಿ ಎಲ್ಲಾ ಸರ್ವ್‌ಗಳನ್ನು ಕಾಪಾಡಿಕೊಳ್ಳುವ ಜೊತೆಗೆ ಎರಡು ಬಾರಿ ಎದುರಾಳಿಯ ಸರ್ವ್‌ ಮುರಿದು ಮುನ್ನಡೆ ಪಡೆದರು.

ಇದರಿಂದ ಒತ್ತಡಕ್ಕೆ ಒಳಗಾದ ಆಂಡ್ರೆ ಹಲವು ಸ್ವಯಂಕೃತ ತಪ್ಪುಗಳನ್ನು ಮಾಡಿದರು.ಇದರ ಲಾಭ ಎತ್ತಿಕೊಂಡು ಮತ್ತಷ್ಟು ಗುಣಮಟ್ಟದ ಆಟ ಆಡಿದ ಭಾರತದ ಆಟಗಾರ ಸೆಟ್‌ ತಮ್ಮದಾಗಿಸಿೊಂಡರು. ಇದರಿಂದ ಇಟಲಿಯ ಆ್ಯಂಡ್ರೆ ವಿಶ್ವಾಸ ಕಳೆದುಕೊಳ್ಳಲಿಲ್ಲ. ಭಾರತದ ಆಟಗಾರನ ಪ್ರಬಲ ಪೈಪೋಟಿಯ ನಡುವೆಯೂ ಅವರು ಎರಡನೇ ಸೆಟ್‌ನಲ್ಲಿ ಗೆದ್ದು 1–1ರಲ್ಲಿ ಸಮಬಲ ಮಾಡಿಕೊಂಡರು.

ಪೇಸ್‌ ಜೋಡಿಗೆ ಜಯ: ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಲಿಯಾಂಡರ್‌ ಪೇಸ್‌ ಮತ್ತು ಅಮೆರಿಕಾ ದ ಸ್ಕಾಟ್‌ ಲಿಪ್ಸಿಕಿ  6–1, 6–7, 10–3ರಲ್ಲಿ ಈಕ್ವೇಡರ್‌ನ ರಾಬರ್ಟೊ ಕ್ವಿರೊಜ್‌ ಮತ್ತು ಗೊಂಜಾಲೊ ಎಸ್ಕೊಬರ್‌ ಅವರನ್ನು ಸೋಲಿಸಿದರು.

ಪೇಸ್‌ ಮತ್ತು ಸ್ಕಾಟ್‌ ಅವರು ಪ್ರಶಸ್ತಿಗಾಗಿ ಅರ್ಜೆಂಟೀನಾದ ಲಿಯೊ ನಾರ್ಡೊ ಮೇಯರ್‌ ಮತ್ತು ಮ್ಯಾಕ್ಸಿಮೊ ಗೊಂಜಾಲೆಜ್‌ ವಿರುದ್ಧ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT