ADVERTISEMENT

ಅಗ್ರಸ್ಥಾನದಲ್ಲಿ ಮುಂದುವರಿದ ಕೊಹ್ಲಿ

ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿ

ಪಿಟಿಐ
Published 18 ಆಗಸ್ಟ್ 2017, 19:36 IST
Last Updated 18 ಆಗಸ್ಟ್ 2017, 19:36 IST
ಅಗ್ರಸ್ಥಾನದಲ್ಲಿ ಮುಂದುವರಿದ ಕೊಹ್ಲಿ
ಅಗ್ರಸ್ಥಾನದಲ್ಲಿ ಮುಂದುವರಿದ ಕೊಹ್ಲಿ   

ದುಬೈ (ಪಿಟಿಐ): ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಶುಕ್ರವಾರ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಬಿಡುಗಡೆ ಮಾಡಿರುವ ನೂತನ ಏಕದಿನ ಮಾದರಿಯ ಬ್ಯಾಟ್ಸ್‌ಮನ್‌ಗಳ ವಿಶ್ವಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ವಿರಾಟ್‌ ಅವರ ಖಾತೆಯಲ್ಲಿ 873 ಪಾಯಿಂಟ್ಸ್‌ ಇವೆ. ಭಾನುವಾರದಿಂದ ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿ ನಡೆಯಲಿದ್ದು ಇದರಲ್ಲಿ ಕೊಹ್ಲಿ ಉತ್ತಮ ಆಟ ಆಡಿದರೆ ಪಾಯಿಂಟ್ಸ್‌ ಹೆಚ್ಚಲಿದೆ.

ಮಹೇಂದ್ರಸಿಂಗ್‌ ದೋನಿ (12), ಶಿಖರ್‌ ಧವನ್‌ (13) ಮತ್ತು ಭಾರತ ತಂಡದ ಉಪನಾಯಕ ರೋಹಿತ್‌ ಶರ್ಮಾ (14) ಅವರು ಅಗ್ರ 15ರೊಳಗೆ ಸ್ಥಾನ ಹೊಂದಿದ್ದಾರೆ.

ADVERTISEMENT

ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಅವರು ಎರಡನೇ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ನಂತರದ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನ ಜೋ ರೂಟ್‌ ಮತ್ತು ಪಾಕಿಸ್ತಾನದ ಬಾಬರ್‌ ಆಜಂ ಅವರು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿದ್ದಾರೆ.

ಭುವನೇಶ್ವರ್‌ ಕುಮಾರ್‌ ಅವರು ಪಟ್ಟಿಯಲ್ಲಿ ಗರಿಷ್ಠ ಕ್ರಮಾಂಕ ಹೊಂದಿರುವ ಭಾರತದ ಬೌಲರ್‌ ಆಗಿದ್ದಾರೆ. ಅವರು 13ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

732 ಪಾಯಿಂಟ್ಸ್‌ ಸಂಗ್ರಹಿಸಿರುವ ಆಸ್ಟ್ರೇಲಿಯಾದ ಜೋಶ್‌ ಹ್ಯಾಜಲ್‌ವುಡ್‌ ಅವರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಇಮ್ರಾನ್‌ ತಾಹಿರ್‌, ಆಸ್ಟ್ರೇಲಿಯಾದ ಮಿಷೆಲ್‌ ಸ್ಟಾರ್ಕ್‌, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಮತ್ತು ನ್ಯೂಜಿಲೆಂಡ್‌ನ ಟ್ರೆಂಟ್‌ ಬೌಲ್ಟ್‌ ಅವರು ಕ್ರಮವಾಗಿ ಎರಡರಿಂದ ಐದನೇ ಸ್ಥಾನಗಳಲ್ಲಿದ್ದಾರೆ.

ಭಾರತಕ್ಕೆ ಮೂರನೇ ಸ್ಥಾನ: ಐಸಿಸಿ ಏಕದಿನ ತಂಡಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಭಾರತ ತಂಡ ಮೂರನೇ ಸ್ಥಾನ ಹೊಂದಿದೆ. ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ನಂತರದ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವಿರಾಟ್‌ ಪಡೆ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿದರೆ ಮೂರನೇ ಸ್ಥಾನದಲ್ಲಿ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.