ADVERTISEMENT

ಅಣ್ಣಾಮಲೈ ವಿ.ವಿ ತಂಡಕ್ಕೆ ಗೆಲುವು

ಅಂಕಪಟ್ಟಿಯಲ್ಲಿ ಕ್ಯಾಲಿಕಟ್‌ ವಿ.ವಿ ತಂಡಕ್ಕೆ ಅಗ್ರಸ್ಥಾನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:52 IST
Last Updated 20 ಜನವರಿ 2017, 19:52 IST
ಕ್ಯಾಲಿಕಟ್‌ ವಿಶ್ವವಿದ್ಯಾಲಯದ ಅಫ್ಸಲ್‌ ಹಾಗೂ ಎಸ್‌ಆರ್‌ಎಂ ತಂಡದ ಗೋಲ್‌ ಕೀಪರ್ ಪಿ. ದಿವಾಕರ್‌ ಚೆಂಡನ್ನು ಹಿಡಿಯಲು ಮುಂದಾದ ರೋಚಕ ಕ್ಷಣ ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್‌.ಜಿ.
ಕ್ಯಾಲಿಕಟ್‌ ವಿಶ್ವವಿದ್ಯಾಲಯದ ಅಫ್ಸಲ್‌ ಹಾಗೂ ಎಸ್‌ಆರ್‌ಎಂ ತಂಡದ ಗೋಲ್‌ ಕೀಪರ್ ಪಿ. ದಿವಾಕರ್‌ ಚೆಂಡನ್ನು ಹಿಡಿಯಲು ಮುಂದಾದ ರೋಚಕ ಕ್ಷಣ ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್‌.ಜಿ.   

ಕಲಬುರ್ಗಿ: ಪಂದ್ಯ ಆರಂಭವಾದ 43ನೇ ಸೆಕೆಂಡಿನಲ್ಲಿ ಮಿಡ್‌ಫೀಲ್ಡರ್‌ ಗಿರೀಶ್‌ ದಾಖಲಿಸಿದ ಗೋಲಿನ ನೆರವಿ ನಿಂದ ಅಣ್ಣಾಮಲೈ ವಿಶ್ವವಿದ್ಯಾಲಯ ತಂಡವು ಹಾಲಿ ಚಾಂಪಿಯನ್‌ ಮದ್ರಾಸ್‌ ವಿಶ್ವವಿದ್ಯಾಲಯ ತಂಡದ ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಿತು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ದಲ್ಲಿ ಶುಕ್ರವಾರ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷ ಫುಟ್‌ಬಾಲ್‌ ಟೂರ್ನಿಯ ಲೀಗ್‌ನಲ್ಲಿ ಸಾಜನ್‌ ನೇತೃತ್ವದ ಅಣ್ಣಾಮಲೈ ತಂಡ 1–0ಯಿಂದ ತಮಿಳ್‌ಸೆಲ್ವನ್‌ ಸಾರಥ್ಯದ ಮದ್ರಾಸ್‌ ತಂಡಕ್ಕೆ ಆಘಾತ ನೀಡಿತು.

ಎರಡು ಬಲಿಷ್ಠ ತಂಡಗಳ ನಡುವಿನ ಈ ಪಂದ್ಯ ಭಾರಿ ಪೈಪೋಟಿಯಿಂದ ಕೂಡಿತ್ತು. ಪಂದ್ಯದಲ್ಲಿ ಎರಡು ಹಳದಿ ಕಾರ್ಡ್‌ ಎಚ್ಚರಿಕೆ ಪಡೆದ ಮದ್ರಾಸ್‌ ತಂಡದ ರೊಮಾರಿಯೊ ದ್ವಿತೀಯಾರ್ಧ ದಲ್ಲಿ ಅಂಗಳ ತೊರೆಯಬೇಕಾಯಿತು. ಇದೇ ತಂಡದ ರಾಜದೀಪಕ್‌ ಸಹ ಒಂದು ಬಾರಿ ಹಳದಿ ಕಾರ್ಡ್‌ ಎಚ್ಚರಿಕೆ ಎದುರಿಸಬೇಕಾಯಿತು.

ಎದುರಾಳಿ ತಂಡದ ಆಟಗಾರರ ಮೇಲೆ ಮುಗಿಬಿದ್ದ ವಿಜಯಿ ತಂಡದ ಮಿಡ್‌ಫೀಲ್ಡರ್‌ಗಳಾದ ಸಿ. ಅನೀಸ್‌, ಜೂಡ್‌ ಫೆಲಿಕ್ಸ್‌ ಹಾಗೂ ನೈಜೀರಿಯಾದ ಜೆರಿಬಿ ಕೆಲಚಿ ತಲಾ ಒಂದೊಂದು ಹಳದಿ ಕಾರ್ಡ್‌ ಎಚ್ಚರಿಕೆ ಪಡೆದಿದ್ದಾರೆ.

ದಿನದ ಮತ್ತೊಂದು ಪಂದ್ಯದಲ್ಲಿ ಕ್ಯಾಲಿಕಟ್‌ ವಿಶ್ವವಿದ್ಯಾಲಯವು 3–1ರಿಂದ ಕಾಟಂಕಾಳತ್ತೂರಿನ ಎಸ್‌ ಆರ್‌ಎಂ ವಿಶ್ವವಿದ್ಯಾಲಯ ತಂಡದ ವಿರುದ್ಧ ಜಯಗಳಿಸಿತು. ಪಂದ್ಯದ ಪ್ರಥ ಮಾರ್ಧದಲ್ಲಿ ಅತ್ಯುತ್ತಮ ಕಾಲ್ಚಳಕ ತೋರಿದ ಮಹಮ್ಮದ್‌ ಶರೀಫ್‌ ಬಳಗದ ಪರ ನಾಸರ್‌ (7), ಮಹಮ್ಮದ್‌ ಶಬೀನ್ (11) ಹಾಗೂ ಎಸ್‌. ಪರಮೇಶನ್ (22) ಗೋಲು ಗಳಿಸಿದರು. ಎಸ್‌ಆರ್‌ ಎಂ ತಂಡದ ಪರ ಪಿ. ವಿಜಯ್‌ (36) ಏಕೈಕ ಗೋಲು ಬಾರಿಸಿದರು. ಎರಡು ಹಳದಿ ಕಾರ್ಡ್‌ಗೆ ಗುರಿಯಾದ ಕ್ಯಾಲಿಕಟ್‌ ವಿಶ್ವವಿದ್ಯಾಲಯ ತಂಡದ ನಾಸರ್‌ ದ್ವಿತೀಯಾರ್ಧದಲ್ಲಿ ಪಂದ್ಯದಿಂದ ಹೊರ ನಡೆದರು.

ಅಂಕಪಟ್ಟಿಯಲ್ಲಿ ಹೆಚ್ಚು ಗೋಲು (5) ಬಾರಿಸುವುದರ ಜೊತೆಗೆ ನಾಲ್ಕು ಅಂಕ ಗಳಿಸಿರುವ ಕ್ಯಾಲಿಕಟ್‌ ವಿಶ್ವವಿದ್ಯಾಲಯ ತಂಡ ಅಗ್ರಸ್ಥಾನದಲ್ಲಿದೆ. ಅಷ್ಟೇ ಅಂಗಳಿಸಿರುವ ಅಣ್ಣಾಮಲೈ ತಂಡವು ಗೋಲು ಗಳಿಕೆಯಲ್ಲಿ ಹಿಂದಿದ್ದು ದ್ವಿತೀಯ ಸ್ಥಾನದಲ್ಲಿದೆ. ಮದ್ರಾಸ್‌ ವಿಶ್ವ ವಿದ್ಯಾಲಯ ಮೂರನೇ ಸ್ಥಾನ ದಲ್ಲಿದ್ದು, ಎಸ್‌ಆರ್‌ಎಂ ಕೊನೆಯ ಸ್ಥಾನದಲ್ಲಿದೆ.
*
ರೆಫ್ರಿ ನಿಂದಿಸಿದ ಮದ್ರಾಸ್‌ ಆಟಗಾರರು
ಪಂದ್ಯದ ಸಮಯ ಮುಗಿಯುತ್ತಿದ್ದಂತೆಯೇ ರೆಫ್ರಿ ವಿಷಲ್ ಊದಿದರು. ಈ ವೇಳೆಗೆ 1–0ಯಿಂದ ಹಿಂದಿದ್ದ ಮದ್ರಾಸ್‌ ವಿಶ್ವವಿದ್ಯಾಲಯ ತಂಡದ ಆಟಗಾರರು ರೆಫ್ರಿ ಮೇಲೆ ಮುಗಿಬಿದ್ದರು. ಅಲ್ಲದೇ ಅವರನ್ನು ನಿಂದಿಸಿದರು.

ಈ ಸಂಬಂಧ ರೆಫ್ರಿ ಮದ್ರಾಸ್‌ ತಂಡದ ರೊಮಾರಿಯೊ, ನಾಯಕ ತಮಿಳ್‌ಸೆಲ್ವನ್‌ ಹಾಗೂ ಶರತ್‌ಕುಮಾರ್‌ ವಿರುದ್ಧ ದುರ್ವರ್ತನೆ ಹಾಗೂ ರೆಫ್ರಿಗೆ ಅಗೌರವ ತೋರಿಸಿದ್ದಾರೆ ಎಂದು ವರದಿ ನೀಡಿದ್ದಾರೆ. ರೆಫ್ರಿಗಳ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿ ಮದ್ರಾಸ್‌ ತಂಡದವರು ಪ್ರತಿದೂರು ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT