ADVERTISEMENT

ಅಥ್ಲೆಟಿಕ್ ಸಂಸ್ಥೆ ಚುನಾವಣೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 19:30 IST
Last Updated 24 ಜೂನ್ 2017, 19:30 IST
ಅಶ್ವಿನಿ ನಾಚಪ್ಪ
ಅಶ್ವಿನಿ ನಾಚಪ್ಪ   

ಬೆಂಗಳೂರು: ಜುಲೈ ಒಂದರಂದು ನಡೆಸಲು ನಿರ್ಧರಿಸಿದ್ದ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಚುನಾವಣೆಯನ್ನು ಮುಂದೂಡಲಾಗಿದೆ.

ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಶನಿವಾರ ನಡೆಯಬೇಕಾಗಿತ್ತು. ಆದರೆ ಚುಣಾವಣಾಧಿಕಾರಿ ಕಚೇರಿಗೆ ಬಾರದೇ ಇದ್ದ ಕಾರಣ ಈ ಪ್ರಕ್ರಿಯೆ ನಡೆಯಲಿಲ್ಲ. ಇದರಿಂದ ಬೇಸರಗೊಂಡ ಕೆಲ ಹಿರಿಯ ಅಥ್ಲೀಟ್‌ಗಳು ಕಚೇರಿಯ ಬಳಿ ಜಮಾಯಿಸಿ ಪದಾಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.

‘ಅಥ್ಲೆಟಿಕ್ ಸಂಸ್ಥೆಯ ನಿಷ್ಕಾಳಜಿಯಿಂದ ಈ ರೀತಿ ಆಗಿದೆ’ ಎಂದು ಅಶ್ವಿನಿ ನಾಚಪ್ಪ ದೂರಿದರು.

ADVERTISEMENT

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ ರೈ ‘ಸದ್ಯಕ್ಕೆ ಚುನಾವಣೆಯನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ನಿರ್ಧರಿಸಬೇಕಾಗಿದೆ’ ಎಂದು ತಿಳಿಸಿದರು. ‘ಚುನಾವಣಾ ಅಧಿಕಾರಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಶುಕ್ರವಾರ ಮೊದಲು ದೂರವಾಣಿ ಕರೆ ಮಾಡಿ, ನಂತರ ಪತ್ರ ಕಳುಹಿಸಿ ಚುನಾವಣಾ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಶನಿವಾರ ನಾಮಪತ್ರ ಪರಿಶೀಲನೆ ನಡೆಯಲಿಲ್ಲ’ ಎಂದು ತಿಳಿಸಿದ ರೈ ‘ತಮಗೆ ಬರಲು ಸಾಧ್ಯವಾಗದಿದ್ದರೆ ಪ್ರತಿನಿಧಿಯಾಗಿ ಯಾರನ್ನಾದರೂ ಕಳುಹಿಸಬೇಕಾಗಿತ್ತು. ಇದ್ಯಾವುದನ್ನೂ ಮಾಡದೆ ಚುನಾವಣಾ ಅಧಿಕಾರಿ ನುಣುಚಿಕೊಂಡಿದ್ದಾರೆ. ಹೊಸತಾಗಿ ಪ್ರಕ್ರಿಯೆಯನ್ನು ಆರಂಭಿಸುವ ಅನಿವಾರ್ಯ ಸ್ಥಿತಿ ಈಗ ನಿರ್ಮಾಣವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.