ADVERTISEMENT

ಅಧ್ಯಕ್ಷರ ಇಲೆವೆನ್ ತಂಡಕ್ಕೆ ಪ್ರಶಸ್ತಿ

ಶಫಿ ದಾರಾಶಾ ಕ್ರಿಕೆಟ್‌ ಟೂರ್ನಿ: ಕೊನೆಯ ಪಂದ್ಯವೂ ಡ್ರಾ

​ಪ್ರಜಾವಾಣಿ ವಾರ್ತೆ
Published 19 ಜುಲೈ 2016, 19:30 IST
Last Updated 19 ಜುಲೈ 2016, 19:30 IST
ಶಫಿ ದಾರಾಶಾ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಅಧ್ಯಕ್ಷರ ಇಲೆವೆನ್‌ ತಂಡದ ಆಟಗಾರರು. ನಿಂತವರು, ಎಡದಿಂದ: ಶ್ರೇಯಸ್‌ ಗೋಪಾಲ್‌, ಎಸ್‌. ಪ್ರಶಾಂತ್‌,  ವಿ. ಕೌಶಿಕ್‌, ಪೃಥ್ವಿ ವರದರಾಜನ್‌, ಸುರೇಶ್ ಎಚ್‌. ಕರಣಿ, ಎಂ. ಕ್ರಾಂತಿಕುಮಾರ್‌, ಶ್ರವಣ್‌ (ಫಿಸಿಯೊ), ಅನಿರುದ್ಧ್‌ ಜೋಶಿ, ಕೆ. ಗೌತಮ್. ಮೀರ್ ಕೌನೇನ್‌ ಅಬ್ಬಾಸ್‌. ಕುಳಿತವರು: ಶರತ್‌ ಶ್ರೀನಿವಾಸ್‌, ಅಂಕಿತ್‌ ಉಡುಪ, ಕೆ.ಎನ್‌. ಭರತ್‌, ಜೆ. ಸುಚಿತ್‌ ಮತ್ತು  ನಿಶಾಂತ್ ಸಿಂಗ್ ಶೇಖಾವತ್‌.
ಶಫಿ ದಾರಾಶಾ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಅಧ್ಯಕ್ಷರ ಇಲೆವೆನ್‌ ತಂಡದ ಆಟಗಾರರು. ನಿಂತವರು, ಎಡದಿಂದ: ಶ್ರೇಯಸ್‌ ಗೋಪಾಲ್‌, ಎಸ್‌. ಪ್ರಶಾಂತ್‌, ವಿ. ಕೌಶಿಕ್‌, ಪೃಥ್ವಿ ವರದರಾಜನ್‌, ಸುರೇಶ್ ಎಚ್‌. ಕರಣಿ, ಎಂ. ಕ್ರಾಂತಿಕುಮಾರ್‌, ಶ್ರವಣ್‌ (ಫಿಸಿಯೊ), ಅನಿರುದ್ಧ್‌ ಜೋಶಿ, ಕೆ. ಗೌತಮ್. ಮೀರ್ ಕೌನೇನ್‌ ಅಬ್ಬಾಸ್‌. ಕುಳಿತವರು: ಶರತ್‌ ಶ್ರೀನಿವಾಸ್‌, ಅಂಕಿತ್‌ ಉಡುಪ, ಕೆ.ಎನ್‌. ಭರತ್‌, ಜೆ. ಸುಚಿತ್‌ ಮತ್ತು ನಿಶಾಂತ್ ಸಿಂಗ್ ಶೇಖಾವತ್‌.   

ಬೆಂಗಳೂರು: ಶಫಿ ದಾರಾಶಾ ಕ್ರಿಕೆಟ್‌ ಟೂರ್ನಿಯ ಕೊನೆಯ ಲೀಗ್ ಪಂದ್ಯಗಳೂ ಡ್ರಾ ಕಂಡವು. ಆದ್ದರಿಂದ ಇನಿಂಗ್ಸ್‌ ಮುನ್ನಡೆ ಪಡೆಯುವ ಜೊತೆಗೆ ಸರಾಸರಿಯಲ್ಲಿಯೂ ಮುಂದಿದ್ದ ಅಧ್ಯಕ್ಷರ ಇಲೆವೆನ್ ತಂಡ ಈ ಬಾರಿ ಚಾಂಪಿಯನ್‌ ಆಯಿತು.

ಐಎಎಫ್‌ ಮೈದಾನದಲ್ಲಿ ಮಂಗಳವಾರ ಮುಗಿದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಸಂಯುಕ್ತ ಇಲೆವೆನ್ 46.3 ಓವರ್‌ಗಳಲ್ಲಿ 111 ರನ್‌ ಕಲೆ ಹಾಕಿತ್ತು.
ರಣಜಿ ಮತ್ತು ಇತರ ದೇಶಿ ಟೂರ್ನಿಗಳಲ್ಲಿ ಆಡಿದ್ದ ಬಹುತೇಕ ಆಟಗಾರರನ್ನು ಹೊಂದಿದ್ದ ಅಧ್ಯಕ್ಷರ ಇಲೆವೆನ್‌ ಪ್ರಥಮ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ ನಷ್ಟಕ್ಕೆ 436 ರನ್ ಗಳಿಸಿತ್ತು. ಬಲಗೈ ಬ್ಯಾಟ್ಸ್‌ಮನ್‌ ಶ್ರೇಯಸ್ ಗೋಪಾಲ್‌ ಅವರು ಆಟ ಇದಕ್ಕೆ ಕಾರಣವಾಯಿತು. 188 ಎಸೆತಗಳನ್ನು ಎದುರಿಸಿದ ಶ್ರೇಯಸ್‌ 17 ಬೌಂಡರಿ ಮತ್ತು ಒಂದು ಸಿಕ್ಸರ್‌ ಬಾರಿಸಿದರು.

ಶರತ್ ಶ್ರೀನಿವಾಸ್‌ 83 ರನ್‌ ಕಲೆ ಹಾಕಿದರೆ, ಕೆ. ಗೌತಮ್‌ ಅರ್ಧಶತಕ ಬಾರಿಸಿ ತಂಡ ಸವಾಲಿನ ಮೊತ್ತ ಕಲೆ ಹಾಕಲು ಕಾರಣರಾದರು. ಮೊದಲ ದಿನದಾಟದಲ್ಲಿಯೇ ಆರು ವಿಕೆಟ್‌ಗಳನ್ನು ಕಬಳಿಸಿದ್ದ ಬಲಗೈ ವೇಗಿ ಅಭಿಮನ್ಯು ಮಿಥುನ್‌ ಅವರು ಎರಡನೇ ದಿನ ಒಂದು ವಿಕೆಟ್ ಪಡೆಯಲಷ್ಟೇ ಶಕ್ತರಾದರು.

ಸಂಯುಕ್ತ ಇಲೆವೆನ್ ತಂಡ ಎರಡನೇ ಇನಿಂಗ್ಸ್‌ನಲ್ಲಿ 16  ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 76 ರನ್ ಗಳಿಸಿದ್ದ ವೇಳೆ ಕೊನೆಯ ದಿನದಾಟಕ್ಕೆ ತೆರೆ ಬಿದ್ದಿತು.  ಆದಿತ್ಯ ಮೈದಾನದಲ್ಲಿ ನಡೆದ ಉಪಾಧ್ಯಕ್ಷರ ಇಲೆವೆನ್‌ ಮತ್ತು ಬೆಂಗಳೂರು ವಲಯ ನಡುವಣ ಪಂದ್ಯ ಕೂಡ ಡ್ರಾ ಆಯಿತು.  ಇನಿಂಗ್ಸ್‌ ಮುನ್ನಡೆ ಪಡೆದ ಉಪಾಧ್ಯಕ್ಷರ ಇಲೆವೆನ್‌ ತಂಡ ಮೂರು ಪಾಯಿಂಟ್ಸ್‌ ಪಡೆಯಿತು. ಬೆಂಗಳೂರು ವಲಯಕ್ಕೆ ಒಂದು ಪಾಯಿಂಟ್‌ ಲಭಿಸಿತು.

ಅಂತಿಮವಾಗಿ ಅಧ್ಯಕ್ಷರ ಇಲೆವೆನ್‌ ಮತ್ತು ಬೆಂಗಳೂರು ವಲಯ ತಂಡಗಳು ತಲಾ ಏಳು ಪಾಯಿಂಟ್ಸ್‌ ಕಲೆ ಹಾಕಿದ್ದವು. ಆದರೆ ಸರಾಸರಿ ಆಧಾರದ ಮೇಲೆ ಅಧ್ಯಕ್ಷರ ಇಲೆವೆನ್ ತಂಡಕ್ಕೆ ಪ್ರಶಸ್ತಿ ಲಭಿಸಿತು.  ಈ ತಂಡ ಒಟ್ಟು 7.308 ಸರಾಸರಿ ಹೊಂದಿದೆ. ಎರಡನೇ ಸ್ಥಾನ ಗಳಿಸಿದ ಬೆಂಗಳೂರು ವಲಯ 1.256 ಸರಾಸರಿ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರು:
ಐಎಎಫ್‌ ಮೈದಾನ: 
ಸಂಯುಕ್ತ ಇಲೆವೆನ್‌ 111 ಮತ್ತು ಎರಡನೇ ಇನಿಂಗ್ಸ್ 16  ಓವರ್‌ಗಳಲ್ಲಿ  ವಿಕೆಟ್ ನಷ್ಟವಿಲ್ಲದೆ 76 (ಆರ್‌. ಸಮರ್ಥ್‌ ಔಟಾಗದೆ 26, ಮಸೂಕ್‌ ಹುಸೇನ್‌ ಔಟಾಗದೆ 43). ಅಧ್ಯಕ್ಷರ ಇಲೆವೆನ್‌ 90 ಓವರ್‌ಗಳಲ್ಲಿ 9 ವಿಕೆಟ್‌ಗೆ 436 (ಶ್ರೇಯಸ್‌ ಗೋಪಾಲ್ 149, ಶರತ್‌ ಶ್ರೀನಿವಾಸ್‌ 83, ಕೆ. ಗೌತಮ್‌ 50; ಅಭಿಮನ್ಯು ಮಿಥುನ್‌ 7ಕ್ಕೆ53). ಫಲಿತಾಂಶ: ಡ್ರಾ.

ಆದಿತ್ಯ ಮೈದಾನ: ಉಪಾಧ್ಯಕ್ಷರ ಇಲೆವೆನ್‌ 264 ಮತ್ತು ಎರಡನೇ ಇನಿಂಗ್ಸ್‌ 18.1 ಓವರ್‌ಗಳಲ್ಲಿ  1 ವಿಕೆಟ್‌ಗೆ 93 (ಕಯಾನ್‌ ಅಬ್ಬಾಸ್ ಔಟಾಗದೆ 50, ಆರ್‌. ಪ್ರತೀಕ್ಷ್‌ 25, ರೋಹನ್‌ ಕದಮ್‌ 1ಕ್ಕೆ20). ಬೆಂಗಳೂರು ವಲಯ 80.5 ಓವರ್‌ಗಳಲ್ಲಿ  232 (ಮಯಂಕ್‌ ಅಗರವಾಲ್‌ 23, ಪ್ರದೀಪ್‌ ಗಂಗಾಧರ್‌ 26, ರೋಹಿತ್ ಗೌಡ 31, ಆದಿತ್ಯ ಸೋಮಣ್ಣ 36, ಎಂ.ಬಿ ದರ್ಶನ್‌ 24; ಲಿಖಿತ್‌ ಬನ್ನೂರ 6ಕ್ಕೆ65). ಫಲಿತಾಂಶ: ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.