ADVERTISEMENT

ಆತಿಥೇಯರ ಸೋಲು ತಪ್ಪಿಸಿದ ಸುರೇಶ್

ಯೂತ್ ಟೆಸ್ಟ್ ಕ್ರಿಕೆಟ್: ಡ್ರಾ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್: ಆರು ವಿಕೆಟ್ ಕಬಳಿಸಿದ ಜೋಸೆಫ್

ಪಿಟಿಐ
Published 16 ಫೆಬ್ರುವರಿ 2017, 19:13 IST
Last Updated 16 ಫೆಬ್ರುವರಿ 2017, 19:13 IST
ಆತಿಥೇಯರ ಸೋಲು ತಪ್ಪಿಸಿದ ಸುರೇಶ್
ಆತಿಥೇಯರ ಸೋಲು ತಪ್ಪಿಸಿದ ಸುರೇಶ್   
ನಾಗಪುರ: ಸುರೇಶ್ ಲೋಕೇಶ್ವರ್ (ಔಟಾಗದೆ 92) ಅವರ ದಿಟ್ಟ ಆಟದ ಫಲವಾಗಿ ಭಾರತದ 19 ವರ್ಷದೊಳಗಿನವರ ತಂಡವು ಗುರುವಾರ ಮುಕ್ತಾಯವಾದ ಇಂಗ್ಲೆಂಡ್‌ ವಿರುದ್ಧದ ಯೂತ್ ಟೆಸ್ಟ್‌ನಲ್ಲಿ  ಸೋಲಿನ ದವಡೆಯಿಂದ ಪಾರಾಯಿತು. 
 
ಜಮ್ತಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಕೊನೆಯ ದಿನ ಗೆಲುವಿಗಾಗಿ ಆತಿಥೇಯರು 238 ರನ್‌ಗಳ ಗುರಿ ಬೆನ್ನತ್ತಿದ್ದರು. ಆದರೆ, ಹೆನ್ರಿ ಬ್ರೂಕ್ಸ್‌ (56ಕ್ಕೆ3) ಮತ್ತು ಆ್ಯರನ್ ಬಿಯರ್ಡ್ (24ಕ್ಕೆ2) ಅವರ ಚುರುಕಿನ ದಾಳಿಗೆ ಐವರು ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೇವಲ 48 ರನ್‌ಗಳಾಗುಷ್ಟರಲ್ಲಿ ಪೆವಿಲಿಯನ್ ಸೇರಿದರು. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ ಸೌರಭ್ ಸಿಂಗ್ ಸೇರಿದಂತೆ ಐವರು ಬ್ಯಾಟ್ಸ್‌ಮನ್‌ಗಳು ಒಂದಂಕಿ ಗಳಿಸಿದರು. 
 
ಆದರೆ ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಲೋಕೇಶ್ವರ್ ಪ್ರವಾಸಿ ಬಳಗದ ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಡೆರಿಲ್ ಫೆರಾರಿಯೊ (37 ರನ್) ಅವರೊಂದಿಗೆ ಜೊತೆಯಾಟ ಬೆಳೆಸುವ ಪ್ರಯತ್ನ ಮಾಡಿದರು. ಆದರೆ,  15ನೇ ಓವರ್‌ನಲ್ಲಿ ಫೆರಾರಿಯೊ ಮತ್ತು 28ನೇ ಓವರ್‌ನಲ್ಲಿ ಸಿಮೊಜನ್ ಜೋಸೆಫ್ ಔಟಾಗಿ ನಿರ್ಗಮಿಸಿದರು. ತಂಡವು 100 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನತ್ತ ಸಾಗಿತ್ತು. 
 
ಆದರೂ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಕೊಂಡು ಲೋಕೇಶ್ವರ್ ಆಡಿದರು. ಪದಾರ್ಪಣೆ ಪಂದ್ಯ ಆಡುತ್ತಿರುವ ತಮಿಳುನಾಡಿನ ಲೋಕೇಶ್ವರ್  125 ಎಸೆತಗಳಲ್ಲಿ 92 ರನ್‌ ಗಳಿಸಿದರು. ಅವರು 14 ಬೌಂಡರಿಗಳನ್ನು ಹೊಡೆದರು. 
 
ಅವರು ಕಾನಿಷ್ಕ ಸೇಥ್‌ (18 ರನ್) ಅವರೊಂದಿಗೆ ಎಂಟನೇ ವಿಕೆಟ್ ಜೊತೆಯಾಟದಲ್ಲಿ 61 ರನ್‌ ಗಳಿಸಿದರು. 43ನೇ ಓವರ್‌ನಲ್ಲಿ ಕಾನಿಷ್ಕ ಅವರು ಹೋಲ್ಡನ್ ಬೌಲಿಂಗ್‌ನಲ್ಲಿ ಆರ್ಥರ್ ಗೋಡ್ಸಲ್‌ಗೆ ಕ್ಯಾಚಿತ್ತರು. ಇದರಿಂದ ಆತಿಥೇಯ ಬಳಗದಲ್ಲಿ ಒತ್ತಡ ಹೆಚ್ಚಿತು.  ಆದರೂ ದೃತಿಗೆಡದ ಲೋಕೇಶ್ವರ್ ಅವರು ವಿನೀತ್ ಪನ್ವರ್ ಅವರ ಜೊತೆಗೆ  ಮುರಿಯದ 9ನೇ ವಿಕೆಟ್ ಜೊತೆಯಾಟ ದಲ್ಲಿ 28 ರನ್‌ ಸೇರಿಸಿದರು. ಇದರಲ್ಲಿ  8 ಎಸೆತಗಳನ್ನು ಎದುರಿಸಿದ ಪನ್ವರ್ ಒಂದೂ ರನ್ ಗಳಿಸಲಿಲ್ಲ. ಆದರೆ ವಿಕೆಟ್ ಪತನವಾಗದಂತೆ ಎಚ್ಚರ ವಹಿಸಿದರು. ದಿನದಾಟ ಮುಗಿಯುವ ವರೆಗೂ ಗಟ್ಟಿಯಾಗಿ ನಿಂತು ಆಡಿದರು. ಇದರಿಂದ ತಂಡವು ಸೋಲು ತಪ್ಪಿಸಿಕೊಂಡಿತು. 
 
ಕೈಗೂಡದ ತಂತ್ರ: ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 501 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು.  ನಂತರ ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು ಬುಧವಾರ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗಳಿಗೆ 431 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು.  ಇದು ಅಚ್ಚರಿಗೆ ಕಾರಣವಾಗಿತ್ತು. 67 ರನ್‌ಗಳ ಹಿನ್ನಡೆ ಯಲ್ಲಿದ್ದರೂ ಡಿಕ್ಲೇರ್‌  ಮಾಡಿಕೊಂಡಿದ್ದ ತಂಡದ ತಂತ್ರವು ಇಂಗ್ಲೆಂಡ್ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 189 ರನ್‌ಗಳಿಗೆ ಆಲೌಟ್‌ ಮಾಡಿದಾಗ ಮೆಚ್ಚುಗೆಗೆ ಕಾರಣವಾಗಿತ್ತು. 
 
ಸ್ಪಿನ್ನರ್ ಸಿಜೊಮನ್ ಜೋಸೆಫ್  (62ಕ್ಕೆ6) ಅವರು ಅಮೋಘ ಬೌಲಿಂಗ್ ಮೂಲಕ ಭಾರತ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು.  ಕೇವಲ 238 ರನ್‌ಗಳ ಗುರಿಯನ್ನು ಮುಟ್ಟುವ ಸಾಮರ್ಥ್ಯ ಇತ್ತು. ಆದರೆ, ನಾಯಕ ಜಾಂಟಿ ಸಿಧು ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಇದರಿಂದ ಸುಲಭ ಗೆಲುವಿನ ಕನಸು ಭಗ್ನವಾಗಿ ಸೋಲಿನ ಕಹಿ ಅನುಭವಿಸುವ ಸಂದರ್ಭ ಎದುರಾಗಿತ್ತು. ಆದರೆ ಲೋಕೇಶ್ವರ್ ತಂಡವನ್ನು ಪಾರು ಮಾಡಿದರು. 
 
ಸಂಕ್ಷಿಪ್ತ ಸ್ಕೋರ್:
ಮೊದಲ ಇನಿಂಗ್ಸ್‌:
ಇಂಗ್ಲೆಂಡ್: 5 ವಿಕೆಟ್‌ಗಳಿಗೆ 501 ಡಿಕ್ಲೆರ್ಡ್‌ ;
ಭಾರತ: 8ಕ್ಕೆ 431 ಡಿಕ್ಲೆರ್ಡ್;
 
*
ಎರಡನೇ ಇನಿಂಗ್ಸ್‌:
ಇಂಗ್ಲೆಂಡ್: 53 ಓವರ್‌ಗಳಲ್ಲಿ 167 (ಹೆನ್ರಿ ಬ್ರೂಕ್ 29, ಜಾರ್ಜ್ ಬಾರ್ಟ್‌ಲೆಟ್ 68, ಡೆರಿಲ್ ಫೆರಾರಿಯೊ 17ಕ್ಕೆ2, ಸಿಜೊಮನ್ ಜೋಸೆಫ್ 62ಕ್ಕೆ6)
ಭಾರತ: 49 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 189 (ಡೆರಿಲ್ ಫೆರಾರಿಯೊ 37, ಸುರೇಶ್ ಲೋಕೇಶ್ವರ್ ಔಟಾಗದೆ 92, ಸಿಕನಿಷ್ಕ ಸೇಟ್ 18, ಹೆನ್ರಿ ಬ್ರೂಕ್ಸ್‌ 56ಕ್ಕೆ3, ಆ್ಯರನ್ ಬಿಯರ್ಡ್ 24ಕ್ಕೆ2) 
ಫಲಿತಾಂಶ: ಪಂದ್ಯ ಡ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.