ADVERTISEMENT

ಆರ್‌ಸಿಬಿ ಜಯ ಕಿತ್ತುಕೊಂಡ ಪೊಲಾರ್ಡ್‌

ಕೊನೆಯ ಐದು ಓವರ್‌ಗಳಲ್ಲಿ ಬದಲಾದ ಫಲಿತಾಂಶ

ಪ್ರಮೋದ ಜಿ.ಕೆ
Published 14 ಏಪ್ರಿಲ್ 2017, 20:28 IST
Last Updated 14 ಏಪ್ರಿಲ್ 2017, 20:28 IST
ಆರ್‌ಸಿಬಿ ಜಯ ಕಿತ್ತುಕೊಂಡ ಪೊಲಾರ್ಡ್‌
ಆರ್‌ಸಿಬಿ ಜಯ ಕಿತ್ತುಕೊಂಡ ಪೊಲಾರ್ಡ್‌   

ಬೆಂಗಳೂರು: ಕಷ್ಟಪಟ್ಟು ಸರತಿ ಸಾಲಿನಲ್ಲಿ ನಿಂತು ಟಿಕೆಟ್‌ ಖರೀದಿಸಿದ್ದ ಆರ್‌ಸಿಬಿ ತಂಡದ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಗೆಲ್ಲುತ್ತದೆ ಎನ್ನುವ ಆಸೆ ಹೊಂದಿದ್ದರು. ಆರಂಭದ ಓವರ್‌ಗಳಲ್ಲಿ ಇದಕ್ಕೆ ವೇದಿಕೆಯೂ ಸಿದ್ಧವಾಗಿತ್ತು. ಆದರೆ ಬೌಂಡರಿ, ಸಿಕ್ಸರ್‌ಗಳ ಮೂಲಕ ಅಬ್ಬರಿಸಿದ ಮುಂಬೈ ಇಂಡಿಯನ್ಸ್ ತಂಡದ ಕೀರನ್‌ ಪೊಲಾರ್ಡ್ ಬೆಂಗಳೂರು ತಂಡವನ್ನು ಸೋಲಿನ ಪ್ರಪಾತಕ್ಕೆ ದೂಡಿದರು.

ಇದರಿಂದ ವಿರಾಟ್‌ ಕೊಹ್ಲಿ ನಾಯಕತ್ವದ ಬೆಂಗಳೂರಿನ ತಂಡಕ್ಕೆ ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಸತತ ಎರಡನೇ ಸೋಲು ಕಾಡಿತು. ಹಿಂದಿನ ಪಂದ್ಯದಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್‌ ಎದುರು ಸೋತಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತ್ತು. ಸಾಧಾರಣ ಗುರಿಯನ್ನು ಮುಂಬೈ ತಂಡದವರು ಏಳು ಎಸೆತಗಳು ಬಾಕಿ ಇರುವಂ ತೆಯೇ ತಲುಪಿ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿದರು. ಈ ತಂಡ ಹಿಂದಿನ ಪಂದ್ಯಗಳಲ್ಲಿ ಕ್ರಮವಾಗಿ ಕೋಲ್ಕತ್ತ ನೈಟ್‌ ರೈಡರ್ಸ್ ಮತ್ತು ಹಾಲಿ ಚಾಂಪಿಯನ್‌ ಸನ್‌ರೈಸರ್ಸ್‌ ಹೈದರಾ ಬಾದ್  ಎದುರು ಜಯ ಪಡೆದಿತ್ತು.

ಭುಜದ ನೋವಿನಿಂದ ಬಳಲಿದ್ದ ಕೊಹ್ಲಿ ಅವರು ಹಿಂದಿನ ಪಂದ್ಯಗಳಲ್ಲಿ ಆಡಿರಲಿಲ್ಲ. ಅವರು ಈ ಬಾರಿಯ ಐಪಿಎಲ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲಿಯೇ ಮಿಂಚಿದರು. 47 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿ 62 ರನ್ ಕಲೆ ಹಾಕಿದರು. ಇವರ ಜೊತೆ ಇನಿಂಗ್ಸ್ ಆರಂಭಿಸಿದ ಕ್ರಿಸ್‌ ಗೇಲ್ 22 ರನ್ ಗಳಿಸಿ ಪೆವಿಲಿಯನ್‌ ಸೇರಿದರು. ಇವರಿಬ್ಬರೂ ಮೊದಲ ವಿಕೆಟ್‌ ಜೊತೆಯಾಟದಲ್ಲಿ 62 ರನ್ ತಂದುಕೊಟ್ಟರು.

ADVERTISEMENT

ಐಪಿಎಲ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ಮೇಲಾಟವೇ ಹೆಚ್ಚು. ಆದರೆ ಈ ಪಂದ್ಯದಲ್ಲಿ ಆರ್‌ಸಿಬಿ ಬಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡಿದರು. ಡಿವಿಲಿಯರ್ಸ್‌ (19), ಕೇದಾರ್‌ ಜಾಧವ್‌ (9) ಮತ್ತು ಮನದೀಪ್‌ ಸಿಂಗ್‌ (0) ಬೇಗನೆ ಔಟಾಗಿದ್ದು ಇದಕ್ಕೆ ಸಾಕ್ಷಿ. ಆದ್ದರಿಂದ  ಮೊದಲ ಹತ್ತು ಓವರ್‌ಗಳು ಪೂರ್ಣಗೊಂಡಾಗ ತಂಡದ ಖಾತೆಯಲ್ಲಿ 66 ರನ್‌ಗಳಷ್ಟೇ ಇದ್ದವು.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಡಿವಿಲಿಯರ್ಸ್‌ ಮೇಲೆ ಕ್ರಿಕೆಟ್‌ ಪ್ರೇಮಿಗಳು ಭಾರಿ ಭರವಸೆ ಇಟ್ಟುಕೊಂಡಿದ್ದರು. ಆದರೆ ಅವರು ಒಂದೇ ಸಿಕ್ಸರ್‌ ಸಿಡಿಸಿದರು. ಆಗ ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಎದ್ದಿತಲ್ಲದೇ, ‘ಎಬಿಡಿ.... ಎಬಿಡಿ...’ ಎನ್ನುವ ಕೂಗು ಜೋರಾಯಿತು. ಆದರೆ ಅವರು ಕ್ರೀಸ್‌ಗೆ ಬಂದ ಏಳು ಓವರ್‌ಗಳಲ್ಲಿ ಔಟಾದರು.

17ನೇ ಓವರ್‌ನಲ್ಲಿ ಡಿವಿಲಿಯರ್ಸ್‌ ಕವರ್‌ ಬಳಿ ಹೊಡೆದ ಚೆಂಡನ್ನು ರೋಹಿತ್ ಶರ್ಮಾ ಎಡಕ್ಕೆ ಜಿಗಿದು ಅತ್ಯಂತ ಆಕರ್ಷಕವಾಗಿ ಚೆಂಡನ್ನು ಹಿಡಿತಕ್ಕೆ ಪಡೆದರು. ಆಗ ಡಿವಿಲಿಯರ್ಸ್‌ ಅಚ್ಚರಿಯಿಂದ ಪೆವಿಲಿಯನ್‌ನತ್ತ ನಡೆದರು. ಗೆಲುವಿನ ಆಸೆ ಮೂಡಿಸಿದ್ದ ಬದ್ರಿ: ಎರಡು ಸಲ ಐಪಿಎಲ್‌ ಟ್ರೋಫಿ ಗೆದ್ದಿರುವ ಮುಂಬೈ ತಂಡ ಇಲ್ಲಿ ಏಳು ರನ್ ಗಳಿಸುವಷ್ಟರಲ್ಲಿ ಆರಂಭಿಕ ಕ್ರಮಾಂಕದ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿತ್ತು. ಸ್ಯಾಮುಯೆಲ್‌ ಬದ್ರಿ ಹ್ಯಾಟ್ರಿಕ್‌ ವಿಕೆಟ್‌ ಪಡೆದು ಗೆಲುವಿಗೆ ಹಾದಿ ಮಾಡಿಕೊಟ್ಟಿದ್ದರು.

ವೆಸ್ಟ್‌ ಇಂಡೀಸ್‌ನ ಬದ್ರಿ ಅವರು ಮೂರನೇ ಓವರ್‌ನ ಎರಡನೇ ಎಸೆತದಲ್ಲಿ ಮೊದಲು ಪಾರ್ಥಿವ್‌ ಪಟೇಲ್‌ ವಿಕೆಟ್ ಪಡೆದರು. ನಂತರದ ಎರಡು ಎಸೆತಗಳಲ್ಲಿ ಮಿಷೆಲ್‌ ಮೆಕ್‌ಲೆನಾಗನ್ ಮತ್ತು ರೋಹಿತ್ ಶರ್ಮಾ ಅವರನ್ನು ಔಟ್‌ ಮಾಡಿ ಹ್ಯಾಟ್ರಿಕ್‌ ಸಾಧನೆ ಮಾಡಿದರು. ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ನಾಲ್ಕನೇ ವಿದೇಶಿ ಆಟಗಾರ ಎನಿಸಿದರು. ಹಿಂದೆ ದಕ್ಷಿಣ ಆಫ್ರಿಕಾದ ಮಕಾಯ್‌ ಆ್ಯಂಟಿನಿ, ಆಸ್ಟ್ರೇಲಿಯಾದ ಶೇನ್‌ ವಾಟ್ಸನ್‌, ವಿಂಡೀಸ್‌ನ ಸುನಿಲ್‌ ನಾರಾಯಣ್‌ ಸತತ ಮೂರು ವಿಕೆಟ್ ಕಬಳಿಸಿದ್ದರು.

ಫಲಿತಾಂಶ ಬದಲಿಸಿದ ಪೊಲಾರ್ಡ್‌: ಮುಂಬೈ ತಂಡ ಒಟ್ಟು 33 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ಆರ್‌ಸಿಬಿ ಗೆಲುವು ಖಚಿತವೆಂದು ಅಭಿಮಾನಿಗಳು ಭಾವಿಸಿದ್ದರು. ಈ ತಂಡ ಹತ್ತು ಓವರ್‌ಗಳು ಮುಗಿದಾಗ 48 ರನ್ ಮಾತ್ರ ಗಳಿಸಿದ್ದರಿಂದ ಅಭಿಮಾನಿಗಳ ನಿರೀಕ್ಷೆ ನಿಜವಾಗುವ ಎಲ್ಲಾ ಲಕ್ಷಣಗಳು ಇದ್ದವು.  ಆದರೆ  ಆರನೇ ವಿಕೆಟ್‌ಗೆ ಪೊಲಾರ್ಡ್‌ ಮತ್ತು ಕೃಣಾಲ್‌ ಪಾಂಡ್ಯ 93 ರನ್‌ ಕಲೆ ಹಾಕಿ ಪಂದ್ಯದ ಗತಿಯನ್ನೇ ಬದಲಿಸಿದರು.

ಅದರಲ್ಲಿಯೂ ಡೆತ್‌ ಓವರ್‌ಗಳಲ್ಲಿ ಕಳಪೆ ಫೀಲ್ಡಿಂಗ್ ಮಾಡಿದ ಆರ್‌ಸಿಬಿ ಬೆಲೆ ಕಟ್ಟಬೇಕಾಯಿತು. ಮುಂಬೈ ತಂಡ ಟೈಮಲ್‌ ಮಿಲ್ಸ್ ಹಾಕಿದ 15ನೇ ಓವರ್‌ನಲ್ಲಿ 11 ರನ್‌ ಗಳಿಸಿತು. ನಂತರದ ಓವರ್‌ನಲ್ಲಿ ಪವನ್‌ ನೇಗಿ 19 ರನ್ ನೀಡಿದ್ದರಿಂದ ಪಂದ್ಯ ಕೊಹ್ಲಿ ಪಡೆಯ ಕೈಯಿಂದ ಜಾರುವುದು ಖಚಿತವಾಗಿತ್ತು.

ಕೊನೆಯ ಆರು ಓವರ್‌ಗಳಲ್ಲಿ 63 ರನ್ ಗಳಿಸಬೇಕಿದ್ದ ತಂಡ ಪ್ರತಿ ಓವರ್‌ನಿಂದ ಓವರ್‌ಗೆ ವೇಗವಾಗಿ ರನ್ ಗಳಿಸಿ ಅಂತರವನ್ನು ಕಡಿಮೆ ಮಾಡಿಕೊಂಡು ಗೆಲುವು ತನ್ನದಾಗಿಸಿಕೊಂಡಿತು. ತಂಡ ಗೆಲುವಿನ ಸನಿಹ ಬಂದಾಗ ಪೊಲಾರ್ಡ್ ಔಟಾಗಿದ್ದು ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಸಹೋದರರಾದ ಕೃಣಾಲ್‌ ಮತ್ತು ಹಾರ್ದಿಕ್ ಅವರು ಏಳನೇ ವಿಕೆಟ್‌ಗೆ 19 ರನ್ ಕಲೆ ಹಾಕಿ ತಂಡವನ್ನು ಗೆಲುವಿನ ದಡ ಸೇರಿಸಿದರು.

***

ವಿರಾಟ್ ಕೊಹ್ಲಿ ಮೇಲೆಯೇ ಹೆಚ್ಚು ಪ್ರೀತಿ
ಬೆಂಗಳೂರು: ತವರಿನ  ಅಭಿಮಾನಿಗಳು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕಿಂತಲೂ ಆ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಮೇಲೆಯೇ ಹೆಚ್ಚು ಪ್ರೀತಿ ತೋರಿಸಿದ್ದು ಶುಕ್ರವಾರ ನಡೆದ ಪಂದ್ಯದ ವೇಳೆ ಕಂಡು ಬಂದಿದ್ದು ವಿಶೇಷವಾಗಿತ್ತು. ಭುಜದ ನೋವಿನಿಂದ ಬಳಲಿದ್ದ ಕಾರಣ ಕೊಹ್ಲಿ ಅವರು ಈ ಬಾರಿಯ ಐಪಿಎಲ್‌ ಟೂರ್ನಿಯ ಹಿಂದಿನ ಪಂದ್ಯಗಳಲ್ಲಿ ಆಡಿರಲಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವು ದರ ಬಗ್ಗೆ ಅವರು ಹೇಳಿದ್ದರು. ಅವರು ಆಡುವುದು ಖಚಿತವಾಗಿದ್ದ ಕಾರಣ ಆರ್‌ಸಿಬಿ ಮತ್ತು ಮುಂಬೈ ನಡುವಣ ಪಂದ್ಯದ ಟಿಕೆಟ್‌ಗೆ ಭಾರಿ ಬೇಡಿಕೆ ವ್ಯಕ್ತವಾಗಿತ್ತು.

ಸ್ಕೋರ್‌ಕಾರ್ಡ್‌
ರಾಯಲ್‌ ಚಾಲೆಂಜರ್ಸ್ ಬೆಂಗಳೂರು
5 ಕ್ಕೆ 142  (20 ಓವರ್‌ಗಳಲ್ಲಿ)

ಕ್ರಿಸ್ ಗೇಲ್ ಸಿ ಪಾರ್ಥಿವ್‌ ಪಟೇಲ್‌ ಬಿ ಹಾರ್ದಿಕ್‌ ಪಾಂಡ್ಯ  22
ವಿರಾಟ್‌ ಕೊಹ್ಲಿ ಸಿ ಜಾಸ್‌ ಬಟ್ಲರ್‌ ಬಿ ಮಿಷೆಲ್‌ ಮೆಕ್‌ಲೆನಾಗನ್‌  62
ಎ.ಬಿ. ಡಿವಿಲಿಯರ್ಸ್‌ ಸಿ ರೋಹಿತ್‌ ಶರ್ಮಾ ಬಿ ಕೃಣಾಲ್‌ ಪಾಂಡ್ಯ  19
ಕೇದಾರ್‌ ಜಾಧವ್‌ ರನ್‌ಔಟ್‌ (ಜಸ್‌ಪ್ರೀತ್ ಬೂಮ್ರಾ)  09
ಪವನ್ ನೇಗಿ ಔಟಾಗದೆ  13
ಮನದೀಪ್ ಸಿಂಗ್ ಬಿ ಮಿಷೆಲ್‌ ಮೆಕ್‌ಲೆನಾಗನ್‌ 00
ಸ್ಟುವರ್ಟ್‌ ಬಿನ್ನಿ ಔಟಾಗದೆ  06
ಇತರೆ: (ಬೈ–4, ಲೆಗ್ ಬೈ–3, ವೈಡ್‌–3, ನೋ ಬಾಲ್‌–1)  11

ವಿಕೆಟ್‌ ಪತನ: 1–63 (ಗೇಲ್‌; 9.2), 2–110 (ಕೊಹ್ಲಿ; 15.3), 3–115 (ಡಿವಿಲಿಯರ್ಸ್‌; 16.2), 4–127 (ಕೇದಾರ್‌; 17.6), 5–127 (ಮನದೀಪ್‌; 18.1)
ಬೌಲಿಂಗ್‌:  ಟಿಮ್‌ ಸೌಥಿ 2–0–23–0, ಹರಭಜನ್‌ ಸಿಂಗ್‌ 4–0–23–0, ಮಿಷೆಲ್‌ ಮೆಕ್‌ಲೆನಾಗನ್‌ 4–0–20–2, ಜಸ್‌ಪ್ರೀತ್ ಬೂಮ್ರಾ 4–0–39–0, ಹಾರ್ದಿಕ್‌ ಪಾಂಡ್ಯ 2–0–9–1, ಕೃಣಾಲ್‌ ಪಾಂಡ್ಯ 4–0–21–1.

ಮುಂಬೈ ಇಂಡಿಯನ್ಸ್‌
6 ಕ್ಕೆ 145  (18.1 ಓವರ್‌ಗಳಲ್ಲಿ)

ಪಾರ್ಥಿವ್‌ ಪಟೇಲ್‌ ಸಿ ಕ್ರಿಸ್‌ ಗೇಲ್‌ ಬಿ ಸ್ಯಾಮುಯೆಲ್ ಬದ್ರಿ  03
ಜಾಸ್‌ ಬಟ್ಲರ್‌ ಸಿ ಕ್ರಿಸ್‌ ಗೇಲ್‌ ಬಿ ಸ್ಟುವರ್ಟ್‌ ಬಿನ್ನಿ  02
ರೋಹಿತ್‌ ಶರ್ಮಾ ಬಿ ಸ್ಯಾಮುಯೆಲ್ ಬದ್ರಿ  00
ಮಿಷೆಲ್‌ ಮೆಕ್‌ಲೆನಾಗನ್‌ ಸಿ ಮನದೀಪ್‌ ಸಿಂಗ್‌ ಬಿ ಸ್ಯಾಮುಯೆಲ್ ಬದ್ರಿ  00
ನಿತೀಶ್‌ ರಾಣಾ ಸಿ ಎಸ್‌. ಅರವಿಂದ್‌ ಬಿ ಸ್ಯಾಮುಯೆಲ್‌ ಬದ್ರಿ  11
ಕೀರನ್ ಪೊಲಾರ್ಡ್‌ ಸಿ ಡಿವಿಲಿಯರ್ಸ್ ಬಿ ಯಜುವೇಂದ್ರ ಚಾಹಲ್‌  70
ಕೃಣಾಲ್‌ ಪಾಂಡ್ಯ ಔಟಾಗದೆ  37
ಹಾರ್ದಿಕ್‌ ಪಾಂಡ್ಯ ಔಟಾಗದೆ  09
ಇತರೆ: (ಲೆಗ್‌ ಬೈ–6, ವೈಡ್‌–7)  13
ವಿಕೆಟ್‌ ಪತನ:   1–7 (ಬಟ್ಲರ್‌; 1.5), 2–7 (ಪಾರ್ಥಿವ್‌; 2.2), 3–7 (ಮೆಕ್‌ನಾಗನ್‌; 2.3), 4–7 (ರೋಹಿತ್‌; 2.4), 5–33 (ನಿತೀಶ್‌; 7.6),      6–126 (ಪೊಲಾರ್ಡ್‌; 17.3).
ಬೌಲಿಂಗ್‌:  ಸ್ಯಾಮುಯೆಲ್ ಬದ್ರಿ 4--–1–9–4, ಸ್ಟುವರ್ಟ್‌ ಬಿನ್ನಿ 2–0–14–1, ಎಸ್‌. ಅರವಿಂದ್‌ 4–0–21–0, ಟೈಮಲ್‌ ಮಿಲ್ಸ್ 3.5–0–36–0, ಯಜುವೇಂದ್ರ ಚಾಹಲ್‌ 3–0–31–1, ಪವನ್ ನೇಗಿ 2–0–28–0.
 

ಫಲಿತಾಂಶ:    ಮುಂಬೈ ಇಂಡಿಯನ್ಸ್ ತಂಡಕ್ಕೆ 4 ವಿಕೆಟ್‌ ಗೆಲುವು.

ಪಂದ್ಯಶ್ರೇಷ್ಠ: ಕೀರನ್ ಪೊಲಾರ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.