ADVERTISEMENT

ಆ್ಯಷಸ್ ಟೆಸ್ಟ್‌ ಸರಣಿ: ರನ್ ಗಳಿಕೆಗೆ ಇಂಗ್ಲೆಂಡ್‌ ಪರದಾಟ

ಏಜೆನ್ಸೀಸ್
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಜೇಮ್ಸ್‌ ವಿನ್ಸ್‌
ಜೇಮ್ಸ್‌ ವಿನ್ಸ್‌   

ಬ್ರಿಸ್ಬೇನ್‌: ಜೇಮ್ಸ್ ವಿನ್ಸ್‌ (83 ರನ್) ಮತ್ತು ಮಾರ್ಕ್ ಸ್ಟೋನ್‌ಮ್ಯಾನ್ (53 ರನ್) ಅವರು ಗುರುವಾರ ಆರಂಭವಾದ ಆ್ಯಷಸ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಆಸರೆಯಾದರು.

ಆಸ್ಟ್ರೇಲಿಯಾ ವಿರುದ್ಧ ಗಾಬಾದಲ್ಲಿ ನಡೆಯುತ್ತಿರುವ ಪಂದ್ಯದ ಆರಂಭದಲ್ಲಿಯೇ ಇಂಗ್ಲೆಂಡ್ ತಂಡವು ಆಘಾತ ಅನುಭವಿಸಿತ್ತು.ಆದರೆ, ವಿನ್ಸ್‌ ಮತ್ತು ಮಾರ್ಕ್ ಚೇತರಿಕೆ ನೀಡಿದರು. ಆದರಿಂದಾಗಿ ಇಂಗ್ಲೆಂಡ್ ತಂಡವು 80.3 ಓವರ್‌ಗಳಲ್ಲಿ  ನಾಲ್ಕು ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತು.  ಮಳೆ ಮತ್ತು ಮಂದಬೆಳಕಿನ ಕಾರಣ ಆಟವನ್ನು ಬೇಗನೆ ಸ್ಥಗಿತಗೊಳಿಸಲಾಯಿತು.

ಭರವಸೆಯ ಬ್ಯಾಟ್ಸ್‌ಮನ್‌ ಅಲಸ್ಟೆರ್ ಕುಕ್ ಮೂರನೇ ಓವರ್‌ನಲ್ಲಿ ಮಿಷೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಆದರೆ ಎರಡನೇ ವಿಕೆಟ್‌ಗೆ ಜೊತೆಗೂಡಿದ ಮಾರ್ಕ್ ಸ್ಟೋನ್‌ಮ್ಯಾನ್ ಮತ್ತು ಜೇಮ್ಸ್‌ ವಿನ್ಸ್‌ 125 ರನ್‌ಗಳ ಜೊತೆಯಾಟವಾಡಿದರು.

ADVERTISEMENT

ಆ್ಯಷಸ್ ಸರಣಿಯಲ್ಲಿ ಇದೇ ಮೊದಲ ಬಾರಿ ಆಡಿದ ವಿನ್ಸ್‌ ಅಮೋಘ ಬ್ಯಾಟಿಂಗ್ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. 170 ಎಸೆತಗಳಲ್ಲಿ 83 ರನ್ ಗಳಿಸಿದ ಅವರು 12 ಬಾರಿ ಚೆಂಡನ್ನು ಬೌಂಡರಿ ಗೆರೆಯಾಚೆ ಅಟ್ಟಿದರು.

ಇನ್ನೊಂದೆಡೆ ಸ್ಟೋನ್‌ಮ್ಯಾನ್ ಕೂಡ ಬೌಲರ್‌ಗಳನ್ನು ಕಾಡಿದರು. ನಿರಾಯಾಸವಾಗಿ ಬ್ಯಾಟ್‌ ಬೀಸಿದ ಅವರು 159 ಎಸೆತಗಳಲ್ಲಿ ಮೂರು ಬೌಂಡರಿ ಒಳಗೊಂಡ 53 ರನ್‌ ಗಳಿಸಿದರು. 55ನೇ ಓವರ್‌ನಲ್ಲಿ ಸ್ಟೋನ್‌ಮ್ಯಾನ್‌ ವೇಗಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಶತಕದತ್ತ ಹೆಜ್ಜೆ ಹಾಕಿದ್ದ ವಿನ್ಸ್ ಅವರನ್ನು 60ನೇ ಓವರ್‌ನಲ್ಲಿ ರನೌಟ್ ಮಾಡಿ ನೇ‌ಥನ್ ಲಿಯಾನ್‌ ಆಸ್ಟ್ರೇಲಿಯಾ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.

ಸ್ವಲ್ಪದರಲ್ಲೇ ನಾಯಕ ಜೋ ರೂಟ್ ಕೂಡ ಔಟಾದರು. ಕಮಿನ್ಸ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದ ಅವರು ಗಳಿಸಿದ್ದು ಕೇವಲ 15 ರನ್‌. ನಂತರ ಡೇವಿಡ್‌ ಮಲಾನ್ ಮತ್ತು ಮೊಯಿನ್ ಅಲಿ ಇನಿಂಗ್ಸ್‌ ಮುನ್ನಡೆಸಿದರು. ಇವರಿಬ್ಬರು ಕ್ರಮವಾಗಿ 28 ಮತ್ತು 13 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ನೇಥನ್‌ ಬೌಲಿಂಗ್‌ ಮಿಂಚು: ಆಸ್ಟ್ರೇಲಿಯಾ ತಂಡದ ಪ್ರಮುಖ ಸ್ಪಿನ್ನರ್ ನೇಥನ್‌ ಲಿಯಾನ್‌ ಮೊದಲ ದಿನದಾಟದಲ್ಲಿ ಪ್ರಭಾವಿ ಬೌಲಿಂಗ್‌ನಿಂದ ಗಮನಸೆಳೆದರು. 24 ಓವರ್‌ಗಳ ಬೌಲಿಂಗ್‌ನಲ್ಲಿ 9 ಮೇಡನ್ ಓವರ್‌ಗಳಿಂದ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕುವಲ್ಲಿ ನೆರವಾದರು.

ವಿಕೆಟ್‌ ಪಡೆಯದಿದ್ದರೂ ಕೇವಲ 40 ರನ್‌ಗಳನ್ನು ಎದುರಾಳಿ ತಂಡಕ್ಕೆ ನೀಡಿದರು. ಜೋಶ್‌ ಹ್ಯಾಜಲ್‌ವುಡ್ ಅವರ ಬೌಲಿಂಗ್‌ನಲ್ಲಿ ಕೂಡ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸಲು ಪರದಾಡಿದರು. 18 ಓವರ್‌ಗಳಲ್ಲಿ ನಾಲ್ಕು ಮೇಡನ್‌ ಓವರ್ ಮಾಡಿದ ಅವರು ಎದುರಾಳಿ ತಂಡಕ್ಕೆ 51 ರನ್ ನೀಡಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌ (ಮೊದಲ ಇನಿಂಗ್ಸ್‌): 80.3 ಓವರ್‌ಗಳಲ್ಲಿ 4ಕ್ಕೆ196 (ಜೇಮ್ಸ್ ವಿನ್ಸ್‌ 83, ಮಾರ್ಕ್ ಸ್ಟೋನ್‌ಮ್ಯಾನ್ 53, ಡೇವಿಡ್ ಮಲಾನ್‌ 28; ಪ್ಯಾಟ್ ಕಮಿನ್ಸ್‌ 59ಕ್ಕೆ2). ಆಸ್ಟ್ರೇಲಿಯಾ ಎದುರಿನ ಪಂದ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.