ADVERTISEMENT

ಇಂಗ್ಲೆಂಡ್‌ ಫೈನಲ್‌ ಪ್ರವೇಶ

ಅಂತಿಮ ಓವರ್‌ಗಳಲ್ಲಿ ಒತ್ತಡ ಮೆಟ್ಟಿನಿಂತು ಗೆದ್ದ ಆತಿಥೇಯರು

ಪಿಟಿಐ
Published 19 ಜುಲೈ 2017, 9:46 IST
Last Updated 19 ಜುಲೈ 2017, 9:46 IST
ಸಾರಾ ಟೇಲರ್ ಬ್ಯಾಟಿಂಗ್ ವೈಖರಿ
ಸಾರಾ ಟೇಲರ್ ಬ್ಯಾಟಿಂಗ್ ವೈಖರಿ   

ಬ್ರಿಸ್ಟಲ್‌: ದಕ್ಷಿಣ ಆಫ್ರಿಕಾವನ್ನು ಎರಡು ವಿಕೆಟ್‌ಗಳಿಂದ ಮಣಿಸಿದ ಇಂಗ್ಲೆಂಡ್‌ ತಂಡದವರು ಮಹಿಳೆಯರ ವಿಶ್ವಕಪ್ ಕ್ರಿಕೆಟ್‌ನ ಫೈನಲ್‌ ಪ್ರವೇಶಿಸಿದರು.

ಮಂಗಳವಾರ ರಾತ್ರಿ ಇಲ್ಲಿನ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ 219 ರನ್‌ಗಳ ಗುರಿ ಬೆನ್ನತ್ತಿದ ಆತಿಥೇಯರು ಎರಡು ಎಸೆತಗಳು ಬಾಕಿ ಇದ್ದಾಗ ರೋಚಕ ಗೆಲುವು ಸಾಧಿಸಿದರು.

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಲಾರಾ ಓಲ್ವಾರ್ಟ್‌  ಭದ್ರ ತಳಪಾಯ ಹಾಕಿಕೊಟ್ಟರು. ಆರಂಭಿಕ ಬ್ಯಾಟ್ಸ್‌ವುಮನ್‌ ಲಿಜೆಲಾ ಲೀ ಕೇವಲ ಏಳು ರನ್‌ ಗಳಿಸಿ ಔಟಾದ ಬೆನ್ನಲ್ಲೇ ತ್ರಿಶಾ ಚೆಟ್ಟಿ ಕೂಡ ಔಟಾದರು.

ADVERTISEMENT

ಆದರೂ ಎದೆಗುಂದದೆ ಅಮೋಘ ಬ್ಯಾಟಿಂಗ್ ಮಾಡಿದ ಓಲ್ವಾರ್ಟ್‌ (66;100ಎ, 8 ಬೌಂ) ಅವರೊಂದಿಗೆ ಮಿಗ್ನಾನ್‌ ಡು ಪ್ರೀಜ್‌ (76;95ಎ, 5 ಬೌಂ) ಮೂರನೇ ವಿಕೆಟ್‌ಗೆ 77 ರನ್‌ ಗಳಿಸಿದರು.  ಔಟಾಗದೇ ಉಳಿದಪ್ರೀಜ್‌ ಅವರಿಗೆ ನಾಯಕಿ ಡೀನ್‌ ವ್ಯಾನ್ ನೀಕರ್ಕ್‌ ಮತ್ತು  ಸೂನ್‌ ಲೂಜ್‌ ಉತ್ತಮ ಸಹಕಾರ ನೀಡಿ ತಂಡದ ಮೊತ್ತ 200ರ ಗಡಿ ದಾಟಿಸಿದರು.

ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ಗೆ ಲಾರೆನ್ ವಿನ್‌ಫೀಲ್ಡ್‌ ಮತ್ತು ಟಾಮಿ ಬ್ಯೂಮಂಟ್‌ ಉತ್ತಮ ಆರಂಭ ಒದಗಿಸಿದರು. ವಿಕೆಟ್ ಕೀಪರ್ ಸಾರಾ ಟೇಲರ್‌ (54; 76ಎ, 7 ಬೌಂ) ಮತ್ತು ನಾಯಕಿ ಹೀದರ್‌ ನೈಟ್‌ (30; 56ಎ, 2 ಬೌಂ) ಮೂರನೇ ವಿಕೆಟ್‌ಗೆ 78 ರನ್‌ ಸೇರಿಸಿದರು. ಎರಡು ಓವರ್‌ಗಳ ಅಂತರದಲ್ಲಿ ಇವರಿಬ್ಬರು ಔಟಾದರು.

ಈ ಹಂತದಲ್ಲಿ ಬೌಲಿಂಗ್‌ ದಾಳಿ ಬಿಗಿ ಮಾಡಿದ ದಕ್ಷಿಣ ಆಫ್ರಿಕಾ ಆತಿಥೇಯರ ಮೇಲೆ ಒತ್ತಡ ಹೇರಿತು. ಹೀಗಾಗಿ ಪಂದ್ಯ ರೋಚಕ ಘಟ್ಟ ತಲುಪಿತು. ಅಂತಿಮ ಓವರ್‌ನಲ್ಲಿ ಮೂರು ಎಸೆತಗಳಲ್ಲಿ ಎರಡು ರನ್ ಬೇಕಾಗಿದ್ದಾಗ ಅನ್ಯಾ ಶ್ರುಬ್‌ಸೋಲೆ ಚೆಂಡನ್ನು ಬೌಂಡರಿಗೆ ಅಟ್ಟಿ ಕೇಕೆ ಹಾಕಿದರು.

ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 218 (ಲಾರಾ ಓಲ್ವಾರ್ಟ್‌ 66, ಮಿಗ್ನೊ ಡು ಪ್ರೀಜ್ ಔಟಾಗದೆ 76, ಡೀನ್ ವಾನ್ ನೀಕರ್ಕ್‌ 27; ನಟಾಲಿ ಶಿವರ್‌ 25ಕ್ಕೆ1); ಇಂಗ್ಲೆಂಡ್‌: 49.4 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 221 (ಲಾರೆನ್‌ ವಿನ್‌ಫೀಲ್ಡ್‌ 20, ಸಾರಾ ಟೇಲರ್ 54, ಹೀದರ್‌ ನೈಟ್‌ 30, ಫ್ರಾನ್‌ ವಿಲ್ಸನ್‌ 30, ಜೆನಿ ಗೂನ್‌ 27; ಅಯಬೋಂಗಾ ಖಾಕಾ 28ಕ್ಕೆ2, ಸೂನ್‌ ಲೂಜ್‌ 24ಕ್ಕೆ2). ಫಲಿತಾಂಶ–ಇಂಗ್ಲೆಂಡ್‌ಗೆ 8 ವಿಕೆಟ್‌ಗಳ ಜಯ; ಫೈನಲ್‌ಗೆ ಪ್ರವೇಶ. ಪಂದ್ಯದ ಉತ್ತಮ ಆಟಗಾರ್ತಿ–ಸಾರಾ ಟೇಲರ್‌ (ಇಂಗ್ಲೆಂಡ್‌).

ಮುಖ್ಯಾಂಶಗಳು

* 54 ರನ್‌ ಗಳಿಸಿ ಇಂಗ್ಲೆಂಡ್‌ಗೆ ಬಲ ತುಂಬಿದ ಸಾರಾ ಟೇಲರ್

* 78 ರನ್‌ಗಳ ಜೊತೆಯಾಟ ಆಡಿದ ಟೇಲರ್‌–ನೈಟ್‌
* ದಕ್ಷಿಣ ಆಫ್ರಿಕಾ ಪರ ಲಾರಾ, ಪ್ರೀಜ್‌  ಅರ್ಧಶತಕಗಳ ಮಿಂಚು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.