ADVERTISEMENT

ಇಂದಿನಿಂದ ಏಷ್ಯನ್ ಬಾಕ್ಸಿಂಗ್: ಕಣದಲ್ಲಿ ಶಿವ, ವಿಕಾಸ್

ಪಿಟಿಐ
Published 29 ಏಪ್ರಿಲ್ 2017, 19:30 IST
Last Updated 29 ಏಪ್ರಿಲ್ 2017, 19:30 IST
ಶಿವ ಥಾಪಾ
ಶಿವ ಥಾಪಾ   

ತಾಷ್ಕೆಂಟ್‌: ಭಾರತದ ವಿಕಾಸ್ ಕೃಷ್ಣನ್‌, ಶಿವಥಾಪ ಸೇರಿದಂತೆ ಹತ್ತು ಸ್ಪರ್ಧಿಗಳು ಭಾನುವಾರದಿಂದ ಇಲ್ಲಿ ಆರಂಭವಾಗಲಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಹತ್ತು ಸ್ಪರ್ಧಿಗಳಿಗೂ ಮೊದಲ ಸುತ್ತಿನಲ್ಲಿ ಬೈ ಲಭಿಸಿದೆ. ಆದ್ದರಿಂದ ಮೇ 1ರಲ್ಲಿ ನಡೆಯುವ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ ಸವಾಲು ಒಡ್ಡಲಿದೆ.

ವಿಕಾಸ್ ಕೃಷ್ಣನ್‌ ಮಿಡ್ಲ್‌ವೇಟ್‌ ವಿಭಾಗದಲ್ಲಿ ಅಗ್ರಶ್ರೇಯಾಂಕದೊಂದಿಗೆ ಆಡಲಿದ್ದಾರೆ. ಶಿವಥಾಪ 60ಕೆ.ಜಿ ವಿಭಾಗ ದಲ್ಲಿ ಕಾಣಿಸಿಕೊಳ್ಳಲಿರುವ ನಾಲ್ಕನೇ ಶ್ರೇಯಾಂಕದ ಆಟಗಾರ ಎನಿಸಿದ್ದಾರೆ.

ಮನೋಜ್‌ಕುಮಾರ್‌ ವೆಲ್ಟರ್‌ ವೇಟ್‌ ವಿಭಾಗದಲ್ಲಿ ಆರನೇ ಶ್ರೇಯಾಂಕ ಹೊಂದಿದ್ದರೆ, ಸತೀಶ್‌ ಕುಮಾರ್‌ ಸೂಪರ್ ಹೆವಿವೇಟ್‌ ವಿಭಾಗದಲ್ಲಿ ಮೂರನೇ ಶ್ರೇಯಾಂಕ ಗಳಿಸಿದ್ದಾರೆ.

ಟೂರ್ನಿಯಲ್ಲಿ 28 ದೇಶಗಳ 179 ಬಾಕ್ಸರ್‌ಗಳು ಪೈಪೋಟಿ ನಡೆಸಲಿದ್ದಾರೆ. ಆಗಸ್ಟ್‌ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ ಷಿಪ್‌ಗೆ ಇದು ಪ್ರಮುಖ ಅರ್ಹತಾ ಟೂರ್ನಿ ಎನಿಸಿದೆ.

10 ವಿಭಾಗಗಳಲ್ಲಿ ಮೊದಲ ಆರು ಸ್ಥಾನ ಪಡೆದ ಸ್ಪರ್ಧಿಗಳು ನೇರ ಅರ್ಹತೆ ಗಿಟ್ಟಿಸಲಿದ್ದಾರೆ. ಸೋಮವಾರದ ಪಂದ್ಯಗಳಲ್ಲಿ ಸುಮಿತ್‌ ಸಾಂಗ್ವನ್‌ (81ಕೆ.ಜಿ), ಗೌರವ್‌ ಬಿದುರಿ (56ಕೆ.ಜಿ), ಅಮಿತ್‌ ಪಂಗಲ್‌ (49ಕೆ.ಜಿ), ಆಶಿಶ್‌ ಕುಮಾರ್‌ (64ಕೆ.ಜಿ) ಹಾಗೂ ವಿಕಾಸ್ ಕೃಷ್ಣನ್‌ ಸ್ಪರ್ಧಿಸಲಿದ್ದಾರೆ.

ಏಷ್ಯನ್‌ ಯೂತ್‌ ಚಾಂಪಿಯನ್‌ ಷಿಪ್‌ನಲ್ಲಿ ಬೆಳ್ಳಿ ಜಯಿಸಿದ್ದ ಆಶಿಶ್ ಕುಮಾರ್‌ 64ಕೆ.ಜಿ ವಿಭಾಗದಲ್ಲಿ ಉಜ್ಬೇಕಿ ಸ್ತಾನದ ಇಕೊ ಬೊಲ್ಜನ್‌ ವಿರುದ್ಧ ಕಣಕ್ಕಿಳಿಯಲಿದ್ದಾರೆ. 2015ರ ಏಷ್ಯನ್ ಚಾಂಪಿಯನ್‌ ಷಿಪ್‌ನಲ್ಲಿ ಭಾರತ ನಾಲ್ಕು ಪದಕ ಗೆದ್ದುಕೊಂಡಿತ್ತು. ವಿಕಾಸ್ ಕೃಷ್ಣನ್ ಭಾರತಕ್ಕೆ ಏಕೈಕ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದರು. ಶಿವ, ದೇವೇಂದ್ರೊ ಮತ್ತು ಸತೀಶ್ ಕಂಚು ಜಯಿಸಿದ್ದರು.

2013ರಲ್ಲಿ ಭಾರತ ಚಿನ್ನ ಗೆದ್ದುಕೊಂಡಿತ್ತು. ಬಾಂಥಮ್‌ವೇಟ್‌ ವಿಭಾಗದಲ್ಲಿ ಶಿವ ಥಾಪ ಈ ಪದಕ ಗೆದ್ದುಕೊಂಡಿದ್ದರು. 2009ರಲ್ಲಿ ಎಮ್‌. ಸೂರನ್‌ಜಾಯ್‌ ಸಿಂಗ್‌ 52ಕೆ.ಜಿ ವಿಭಾಗದಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದರು.

ತಂಡ ಇಂತಿದೆ: ಅಮಿತ್‌ ಪಂಗಲ್‌ (49ಕೆ.ಜಿ), ಕವಿಂದರ್ ಸಿಂಗ್‌ (52ಕೆ.ಜಿ), ಗೌರವ್ ಬಿದುರಿ (56ಕೆ.ಜಿ), ಶಿವ ಥಾಪ (60ಕೆ.ಜಿ), ಆಶಿಶ್ ಕುಮಾರ್‌ (64ಕೆ.ಜಿ),  ಮನೋಜ್ ಕುಮಾರ್‌ (69ಕೆ.ಜಿ), ವಿಕಾಸ್ ಕೃಷ್ಣನ್‌ (75ಕೆ.ಜಿ), ಮನೀಶ್ ಪನ್ವರ್‌ (81ಕೆ.ಜಿ), ಸಮಿತ್‌ ಸಂಗ್ವನ್‌ (91ಕೆ.ಜಿ), ಸತೀಶ್ ಕುಮಾರ್‌ (91ಕೆ.ಜಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT