ADVERTISEMENT

ಇಂದಿನಿಂದ ಪ್ರೊ ಕಬಡ್ಡಿ ಐದನೇ ಆವೃತ್ತಿ; ಹೈದರಾಬಾದ್‌ನಲ್ಲಿ ಉದ್ಘಾಟನೆ :ಟೈಟನ್ಸ್‌ಗೆ ತಲೈವಾಸ್‌ ಸವಾಲು

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 19:30 IST
Last Updated 27 ಜುಲೈ 2017, 19:30 IST
ಇಂದಿನಿಂದ ಪ್ರೊ ಕಬಡ್ಡಿ ಐದನೇ ಆವೃತ್ತಿ; ಹೈದರಾಬಾದ್‌ನಲ್ಲಿ ಉದ್ಘಾಟನೆ :ಟೈಟನ್ಸ್‌ಗೆ ತಲೈವಾಸ್‌ ಸವಾಲು
ಇಂದಿನಿಂದ ಪ್ರೊ ಕಬಡ್ಡಿ ಐದನೇ ಆವೃತ್ತಿ; ಹೈದರಾಬಾದ್‌ನಲ್ಲಿ ಉದ್ಘಾಟನೆ :ಟೈಟನ್ಸ್‌ಗೆ ತಲೈವಾಸ್‌ ಸವಾಲು   

ಹೈದರಾಬಾದ್‌: ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿರುವ ಪ್ರೊ ಕಬಡ್ಡಿ ಲೀಗ್‌ ಐದನೇ ಆವೃತ್ತಿಗೆ ಶುಕ್ರವಾರ ಚಾಲನೆ ಸಿಗಲಿದೆ.

ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ರಾಹುಲ್‌ ಚೌಧರಿ ನೇತೃತ್ವದ ತೆಲುಗು ಟೈಟನ್ಸ್‌ ಮತ್ತು ತಮಿಳ್‌ ತಲೈವಾಸ್‌ ತಂಡಗಳು ಹಣಾಹಣಿ ನಡೆಸಲಿವೆ. ಈ ಬಾರಿ ಲೀಗ್‌ಗೆ ಅಡಿ ಇಟ್ಟಿರುವ ತಲೈವಾಸ್‌ ಪಾಲಿಗೆ ಇದು ಚೊಚ್ಚಲ ಪಂದ್ಯವಾಗಿದೆ.

ಈ ಬಾರಿ ಲೀಗ್‌ನಲ್ಲಿ ಒಟ್ಟು 12 ತಂಡಗಳು ‍ಪ್ರಶಸ್ತಿಗಾಗಿ ಸೆಣೆಸಲಿದ್ದು, ಹೈದರಾಬಾದ್‌ ಚರಣದ ಪಂದ್ಯಗಳು ಜುಲೈ 28ರಿಂದ ಆಗಸ್ಟ್‌ 3ರವರೆಗೆ ನಡೆಯಲಿವೆ.

ADVERTISEMENT

ಹಿಂದಿನ ನಾಲ್ಕು ಆವೃತ್ತಿಗಳಲ್ಲಿ ಆಡಿರುವ ಟೈಟನ್ಸ್‌ ತಂಡ ಈ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ಹುಮ್ಮಸ್ಸಿನಲ್ಲಿದ್ದು, ಗೆಲುವಿನೊಂದಿಗೆ ಅಭಿಯಾನ ಆರಂಭಿಸುವ ಆಲೋಚನೆ ಹೊಂದಿದೆ. ತಲೈವಾಸ್‌ ತಂಡ ಕೂಡ ಜಯದ ಮಂತ್ರ ಜಪಿಸುತ್ತಿದೆ.

ರಾಹುಲ್‌, ಅಂಕಿತ್‌ ಮಲಿಕ್‌, ಅತುಲ್‌, ಮೊಹ್ಸೆನ್‌ ಮಗ್‌ಸೌಡ್ಲೌ, ನೀಲೇಶ್‌ ಸಾಳುಂಕೆ ಅವರು ರೈಡಿಂಗ್‌ನಲ್ಲಿ ಟೈಟನ್ಸ್‌ ತಂಡದ ಬಲ ಎನಿಸಿದ್ದಾರೆ. ರಕ್ಷಣಾ ವಿಭಾಗದ ಆಟಗಾರರಾದ ಅಮಿತ್‌ ಸಿಂಗ್‌ ಚಿಲಾರ್‌, ಫರ್ಹಾದ್‌, ರೋಹಿತ್‌ ರಾಣಾ ಅವರ ಮೇಲೂ ಭರವಸೆ ಇಡಬಹುದಾಗಿದೆ.

ಅಜಯ್‌ ಠಾಕೂರ್‌ ನಾಯಕತ್ವದ ತಲೈವಾಸ್‌ ಕೂಡ ಬಲಿಷ್ಠವಾಗಿದೆ. ಭವಾನಿ ರಜಪೂತ್‌, ಡಾಂಗ್‌ ಗೊಯೆನ್‌ ಲೀ, ಪ್ರಪಾಂಜನ್‌, ಸೋಮವೀರ್‌, ಅಮಿತ್‌ ಹೂಡಾ ಅವರು ಈ ತಂಡದ ಬಲ ಎನಿಸಿದ್ದಾರೆ.

ಉದ್ಘಟನಾ ಪಂದ್ಯಕ್ಕೂ ಮುನ್ನ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರು ರಾಷ್ಟ್ರಗೀತೆ ಹಾಡಲಿದ್ದಾರೆ.

ದಿನದ ಇನ್ನೊಂದು ಪಂದ್ಯದಲ್ಲಿ ಯು ಮುಂಬಾ ಮತ್ತು ಪುಣೇರಿ ಪಲ್ಟನ್‌ ತಂಡಗಳು ಸೆಣಸಲಿವೆ. ಎರಡೂ ತಂಡಗಳಲ್ಲೂ ಬಲಿಷ್ಠ ಆಟಗಾರರು ಇರುವ ಕಾರಣ ಈ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡುಬರುವ ನಿರೀಕ್ಷೆ ಇದೆ.

ಪ್ರೊ ಕಬಡ್ಡಿ 2017 ತಂಡಗಳು
ಎ ಗುಂಪು: ದಬಂಗ್ ಡೆಲ್ಲಿ, ಗುಜರಾತ್ ಫಾರ್ಚೂನ್‌ಜೈಂಟ್ಸ್‌, ಹರಿಯಾಣ ಸ್ಟೀಲರ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪುಣೇರಿ ಪಲ್ಟನ್, ಯು ಮುಂಬಾ
ಬಿ ಗುಂಪು: ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್‌, ಪಟ್ನಾ ಪೈರೇಟ್ಸ್‌, ತಮಿಳ್ ತಲೈವಾಸ್, ತೆಲುಗು ಟೈಟನ್ಸ್‌, ಯು.ಪಿ. ಯೋಧಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.