ADVERTISEMENT

ಋತುವಿನ ಅಂತ್ಯಕ್ಕೆ ಭಾರತಕ್ಕೆ ಅಗ್ರಪಟ್ಟ

ಟೆಸ್ಟ್ ರ್‌್ಯಾಂಕಿಂಗ್ ಬಗ್ಗೆ ದೋನಿ ಅಭಿಮತ

ಪಿಟಿಐ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST
ಮಹೇಂದ್ರಸಿಂಗ್ ದೋನಿ
ಮಹೇಂದ್ರಸಿಂಗ್ ದೋನಿ   

ಲೌಡರ್‌ಹಿಲ್‌, ಅಮೆರಿಕ (ಪಿಟಿಐ): ‘ಈ ಋತುವಿನ ಅಂತ್ಯದ ವೇಳೆಗೆ ವಿರಾಟ್‌ ಕೊಹ್ಲಿ ಸಾರಥ್ಯದ ಭಾರತ ತಂಡ ಟೆಸ್ಟ್‌ ತಂಡಗಳ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ’ ಎಂದು   ಮಹೇಂದ್ರಸಿಂಗ್‌ ದೋನಿ ಅಭಿಪ್ರಾಯಪಟ್ಟಿದ್ದಾರೆ.

‘ಭಾರತ ತಂಡ ಮುಂದಿನ ದಿನಗಳಲ್ಲಿ ನ್ಯೂಜಿಲೆಂಡ್‌, ಇಂಗ್ಲೆಂಡ್‌, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಒಟ್ಟು 13 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ತಂಡದ ಬೌಲರ್‌ಗಳು ಇತ್ತೀಚಿನ ಸರಣಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದಾರೆ.

ಬಹುಮುಖ್ಯವಾಗಿ ಎಲ್ಲರೂ ಫಿಟ್‌ ಆಗಿದ್ದಾರೆ. ಮುಂಬರುವ ಸರಣಿಗಳಲ್ಲೂ ಅವರು ಇದೇ ಆಟವನ್ನು ಮುಂದುವರಿಸುವ ವಿಶ್ವಾಸ ಇದೆ. ಜೊತೆಗೆ ಕೊಹ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ತಂಡ ಅಗ್ರಪಟ್ಟಕ್ಕೇರುವುದು ಖಚಿತ’ ಎಂದು ದೋನಿ ಹೇಳಿದ್ದಾರೆ.

‘ತಂಡದಲ್ಲಿ ಈಗ 10 ಮಂದಿ ಪರಿಣತ ಬೌಲರ್‌ಗಳಿದ್ದಾರೆ. ಮುಂಬರುವ ಸರಣಿಗಳಲ್ಲಿ ಅಗತ್ಯ ಬಿದ್ದರೆ, ಹೆಚ್ಚೆಚ್ಚು ಬದಲಾವಣೆಗೆ ಕೈ ಹಾಕಬಹುದು. ತಂಡದಲ್ಲಿ ಅನುಭವಿ ಬ್ಯಾಟ್ಸ್‌ಮನ್‌ಗಳೂ ಇದ್ದಾರೆ. ಎಲ್ಲರೂ ಉತ್ತಮವಾಗಿ ಆಡುತ್ತಿರುವುದು ಶುಭ ಸೂಚಕ’ ಎಂದಿದ್ದಾರೆ.

‘ವೆಸ್ಟ್‌ ಇಂಡೀಸ್‌ ವಿರುದ್ಧದ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಆರಂಭಿಕ ಪಂದ್ಯದಲ್ಲಿ  ಚೆನ್ನಾಗಿಯೇ ಆಡಿದ್ದೆವು. ಆದರೆ ಅದೃಷ್ಟ ನಮ್ಮ ಪರವಾಗಿರಲಿಲ್ಲ. ಎರಡನೇ ಪಂದ್ಯದಲ್ಲಿ ಬೌಲರ್‌ಗಳಿಂದ ಮೂಡಿಬಂದ ಸಾಮರ್ಥ್ಯ ಅಮೋಘವಾದುದು.

ಅದರಲ್ಲೂ ಅಮಿತ್‌ ಮಿಶ್ರಾ ತುಂಬಾ ಸೊಗಸಾಗಿ ದಾಳಿ ನಡೆಸಿದರು. ಹೀಗಾಗಿ ನಾವು ವಿಂಡೀಸ್‌ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಲು ಸಾಧ್ಯವಾಗಿತ್ತು. ಆದರೆ ಮಳೆ ಬಂದಿದ್ದರಿಂದ ನಮ್ಮ ಗೆಲುವಿನ ಕನಸು ಕಮರಿತು’ ಎಂದು ಅವರು ನುಡಿದಿದ್ದಾರೆ.

‘ದೊಡ್ಡ ಮೊತ್ತವನ್ನು ಬೆನ್ನಟ್ಟುವಾಗ ಸಹಜವಾಗಿಯೇ ಒತ್ತಡ ಇದ್ದೇ ಇರುತ್ತದೆ. ಇದರ ನಡುವೆಯೂ ನಮ್ಮ ಬ್ಯಾಟ್ಸ್‌ಮನ್‌ಗಳು ಕೆಚ್ಚೆದೆಯಿಂದ ಹೋರಾಡಿದರು. ತಂಡದಲ್ಲಿರುವ ಬಹು ತೇಕರು ಹೆಚ್ಚೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಐಪಿಎಲ್‌ನಲ್ಲಿ ಆಡಿದ ಅನುಭವವೂ ಎಲ್ಲರಿಗಿದೆ’ ಎಂದರು.

‘ಸತತವಾಗಿ  ಟೆಸ್ಟ್‌ ಪಂದ್ಯಗಳನ್ನು ಆಡಿ ಕೂಡಲೇ ಚುಟುಕು ಮಾದರಿಗೆ ಹೊಂದಿಕೊಳ್ಳುವುದು ಸವಾಲಿನ ಕೆಲಸ. ಹೀಗಿದ್ದರೂ ನಮ್ಮ ಆಟಗಾರರು ವಿಂಡೀಸ್‌ ವಿರುದ್ಧ ತುಂಬಾ ಚೆನ್ನಾಗಿ ಆಡಿದರು.  ಕೆ.ಎಲ್‌. ರಾಹುಲ್‌ ಬ್ಯಾಟಿಂಗ್‌ ವೈಖರಿ ಮನಸೂರೆಗೊಳ್ಳುವಂತಿತ್ತು. ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು’ ಎಂದು ತಿಳಿಸಿದರು.

‘ಅಮೆರಿಕದಲ್ಲಿ ಕ್ರಿಕೆಟ್‌ಗೆ ಉತ್ತಮ ವಾತಾವರಣ ಇದೆ. ಇಲ್ಲಿಯ ಜನರು  ಕ್ರೀಡೆಯನ್ನು ತುಂಬಾ ಪ್ರೀತಿಸುತ್ತಾರೆ. ಮುಂದೆ ಇಲ್ಲಿ ಹೆಚ್ಚೆಚ್ಚು ಪಂದ್ಯಗಳು ನಡೆಯಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT