ADVERTISEMENT

ಎರಡನೇ ಸುತ್ತಿಗೆ ಸುಮಿತ್‌

​ಪ್ರಜಾವಾಣಿ ವಾರ್ತೆ
Published 1 ಜೂನ್ 2015, 19:30 IST
Last Updated 1 ಜೂನ್ 2015, 19:30 IST

ಪ್ಯಾರಿಸ್‌ (ಪಿಟಿಐ): ಪರಿಣಾಮಕಾರಿ ಆಟ ಆಡಿದ ಭಾರತದ ಸುಮಿತ್‌ ನಗಾಲ್‌ ಇಲ್ಲಿ ನಡೆಯುತ್ತಿರುವ ಫ್ರೆಂಚ್‌ ಓಪನ್‌ ಜೂನಿಯರ್‌      ಟೆನಿಸ್‌ ಟೂರ್ನಿಯ ಬಾಲಕರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಸೋಮವಾರ ನಡೆದ ಮೊದಲ ಸುತ್ತಿನ ಹೋರಾಟದಲ್ಲಿ ಸುಮಿತ್ 6–3, 7–5ರ ನೇರ ಸೆಟ್‌ಗಳಿಂದ ಜಪಾನ್‌ನ ಯೋಸುಕೆ ವತಾನುಕಿ ಅವರನ್ನು ಪರಾಭವಗೊಳಿಸಿದರು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿ ಆಡಿದ ಸುಮಿತ್‌ ಐದು ಬ್ರೇಕ್‌ ಪಾಯಿಂಟ್ಸ್‌ಗಳನ್ನು ಕಲೆಹಾಕಿ ಮಿಂಚಿದರು. ಈ ಮೂಲಕ ಸುಲಭವಾಗಿ ಸೆಟ್‌ ಗೆದ್ದು ಮುನ್ನಡೆ ಗಳಿಸಿದರು.

ಎರಡನೇ ಸೆಟ್‌ನಲ್ಲಿ ವತಾನುಕಿ ಪ್ರಬಲ ಪೈಪೋಟಿ ಒಡ್ಡಿ ತಿರುಗೇಟು ನೀಡುವ ಮುನ್ಸೂಚನೆ ನೀಡಿದ್ದರು. ಆದರೆ ಗುಣಮಟ್ಟದ ಆಟ ಆಡಿದ ಸುಮಿತ್‌ 12 ಬ್ರೇಕ್‌ ಪಾಯಿಂಟ್ಸ್‌ ಕಾಪಾಡಿಕೊಳ್ಳುವ ಮೂಲಕ ಎದುರಾಳಿ ಆಟಗಾರನ ಲೆಕ್ಕಾಚಾರವನ್ನು ತಳೆಕೆಳಗಾಗಿಸಿ ಗೆಲುವಿನ ಸವಿಯುಂಡರು. ಮೊದಲ  ಸೆಟ್‌ನಲ್ಲಿ ಎದುರಿಸಿದ ಸವಾಲಿಗಿಂತ ಎರಡನೇ ಸೆಟ್‌ನಲ್ಲಿ ಭಾರಿ ಪೈಪೋಟಿಗೆ ಎದೆಯೊಡ್ಡಬೇಕಾಯಿತು.

ಎರಡನೇ ಸುತ್ತಿನಲ್ಲಿ ಭಾರತದ ಆಟಗಾರ ಎಂಟನೇ ಶ್ರೇಯಾಂಕಿತ ಆಟಗಾರ ದಕ್ಷಿಣ ಕೊರಿಯಾದ ಯುನ್‌ಸೆಯೊಂಗ್‌ ಚುಂಗ್‌ ಅವರ ಸವಾಲು ಎದುರಿಸಲಿದ್ದಾರೆ.

ಪ್ರಾಂಜಲ ಜೋಡಿ ಶುಭಾರಂಭ: ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ಭಾರತದ ಪ್ರಾಂಜಲ ಯಡ್ಲಪಳ್ಳಿ ಮತ್ತು ಚೀನಾದ ವುಶುವಾಂಗ್‌ ಜೆಂಗ್‌ ಶುಭಾರಂಭ ಮಾಡಿದ್ದಾರೆ.

ಮೊದಲ ಸುತ್ತಿನ ಹಣಾಹಣಿಯಲ್ಲಿ ‍ಪ್ರಾಂಜಲ ಮತ್ತು ಜೆಂಗ್‌ 6–0, 6–1ರಲ್ಲಿ ಫ್ರಾನ್ಸ್‌ನ ಸಿಂಡಿ ಕ್ಯಾಸ್ಟಿಲ್ಲೆ ಮತ್ತು ಕಾರ್ಲಾ ಹಸ್ಸಾಯಿನೆ ಎದುರು ಗೆಲುವು ಕಂಡರು.

ಭಾರತದ ಜೋಡಿ ಮೊದಲ ಸೆಟ್‌ನಲ್ಲಿ ಏಕಪಕ್ಷೀಯವಾಗಿ ಪಂದ್ಯ ಗೆದ್ದುಕೊಂಡಿತು. ಎರಡನೇ ಸೆಟ್‌ನಲ್ಲಿ ಸುಲಭ ಗೆಲುವ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.