ADVERTISEMENT

ಐಪಿಎಲ್ ಫೈನಲ್ ಟಿಕೆಟ್‌ಗೆ ನೂಕುನುಗ್ಗಲು

ಉದ್ಯಾನನಗರಿ ಆವರಿಸಿದ ‘ಆರ್‌ಸಿಬಿ’ ಜ್ವರ

​ಪ್ರಜಾವಾಣಿ ವಾರ್ತೆ
Published 25 ಮೇ 2016, 19:38 IST
Last Updated 25 ಮೇ 2016, 19:38 IST
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಟಿಕೆಟ್‌ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಬ್ಯಾರಿಕೇಡ್‌ ಹಾರಲು ಯತ್ನಿಸಿದರು  ಪ್ರಜಾವಾಣಿ ಚಿತ್ರಗಳು/ ವಿಶ್ವನಾಥ ಸುವರ್ಣ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಟಿಕೆಟ್‌ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಬ್ಯಾರಿಕೇಡ್‌ ಹಾರಲು ಯತ್ನಿಸಿದರು ಪ್ರಜಾವಾಣಿ ಚಿತ್ರಗಳು/ ವಿಶ್ವನಾಥ ಸುವರ್ಣ   

ಬೆಂಗಳೂರು: ಉದ್ಯಾನನಗರಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಜ್ವರ ತಾರಕಕ್ಕೇರಿದೆ.

 ಮೇ 29ರಂದು ಚಿನ್ನಸ್ವಾಮಿ ಕ್ರೀಡಾಂ ಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗದ ಆಟವನ್ನು ವೀಕ್ಷಿಸಲು ಉತ್ಸುಕರಾಗಿರುವ  ಅಭಿಮಾನಿಗಳು ಟಿಕೆಟ್‌ ಖರೀದಿಸಲು ಬುಧವಾರ ಮುಗಿಬಿದ್ದರು. 

ಬೆಳಿಗ್ಗೆ 11 ರಿಂದ ಸಂಜೆ 6 ಗಂಟೆ ಯವರೆಗೆ ಟಿಕೆಟ್‌ ಮಾರಾಟ  ಮಾಡುವು ದಾಗಿ ಆಯೋಜಕರು ಪ್ರಕಟಿಸಿದ್ದರು.  ಅದಕ್ಕಾಗಿ ಎರಡು ಪ್ರವೇಶದ್ವಾರಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. 12ನೇ ಪ್ರವೇಶದ್ವಾರದಲ್ಲಿ ಹಣ ಪಾವತಿಸಿ ಟಿಕೆಟ್ ಪಡೆಯುವ ವ್ಯವಸ್ಥೆ ಮತ್ತು 8ರಲ್ಲಿ  ಆನ್‌ಲೈನ್‌ ಮೂಲಕ ಕಾಯ್ದಿಟ್ಟ ಟಿಕೆಟ್ ಪಡೆಯುವ ವ್ಯವಸ್ಥೆ ಮಾಡಲಾಗಿತ್ತು.

ಆದರೆ ಬೆಳಿಗ್ಗೆ 8 ಗಂಟೆಯಿಂದಲೇ ಜನರು ಬಂದು ಸೇರಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿ ದರು.  ಸರದಿ ಸಾಲಿನ ಮಧ್ಯೆ ನುಗ್ಗಲು ಕೆಲವು ಮಹಿಳೆಯರು ಕಬ್ಬಿಣದ ಗ್ರಿಲ್ ಹಾರಿ ಬರುವ ಯತ್ನ ಮಾಡಿದರು. ಇದನ್ನು ಸಾಲಿನಲ್ಲಿದ್ದವರು ವಿರೋಧಿಸಿ ದರು. ಈ ಸಂದರ್ಭದಲ್ಲಿ   ಮಾತಿನ ಚಕಮಕಿಗಳು ನಡೆದವು. ತಳ್ಳಾಟ ಹೆಚ್ಚಾಯಿತು. ಸಾಲಿನಲ್ಲಿ ನಿಂತಿದ್ದ ಮಕ್ಕಳು ಸಿಕ್ಕಿಹಾಕಿಕೊಂಡು ಅಳುತ್ತಿದ್ದ ರು.  ಆದರೂ ಟಿಕೆಟ್ ಖರೀದಿಸುವ ಪ್ರಯತ್ನ ಮಾತ್ರ ನಿಲ್ಲಲಿಲ್ಲ.

‘ಉತ್ಸಾಹಿ ಅಭಿಮಾನಿಗಳನ್ನು ನಿಯಂತ್ರಿಸುವುದು ಮತ್ತು ಸರದಿ ಸಾಲುಗಳನ್ನು ನಿಭಾಯಿಸುವುದು ನಮಗೆ ಸವಾಲಿನ ಕೆಲಸವಾಗಿತ್ತು.  ಜನರು ಕೌಂಟರ್‌ ತಲುಪಲು ನೂಕುನುಗ್ಗಲು ಉಂಟಾಗಿತ್ತು. ಆದರೆ, ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಯಾರಿಗೂ ಪೆಟ್ಟು ಬಿದ್ದಿಲ್ಲ. ಪರಿಸ್ಥಿತಿ ಕೈಮೀರದಂತೆ ನಿಭಾಯಿಸಲಾಯಿತು’ ಎಂದು ಬೆಂಗಳೂರು ಸೆಂಟ್ರಲ್ ಡಿಸಿಪಿ ಸಂದೀಪ್ ಪಾಟೀಲ ಹೇಳಿದರು. 

ಆನ್‌ಲೈನ್‌ ಟಿಕೆಟ್‌ ಕೌಂಟರ್‌ ಮುಂದಿನ ಸಾಲು ಕ್ವೀನ್ಸ್‌  ವೃತ್ತದವರೆಗೂ ಲಂಬಿಸಿತ್ತು.  ಐಪಿಎಲ್‌ಟಿ20 ಡಾಟ್‌ ಕಾಮ್ (iplT20.com) ವೆಬ್‌ಸೈಟ್‌ನಲ್ಲಿ ₹ 750 ರಿಂದ ₹ 25,000  ವರೆಗಿನ ಮುಖಬೆಲೆಯ ಟಿಕೆಟ್‌ಗಳ ಮಾರಾಟ ಮೇ 13ರಿಂದಲೇ ಆರಂಭವಾಗಿತ್ತು.  ಆದರೆ   ಬಹುತೇಕ ಎಲ್ಲ ಟಿಕೆಟ್‌ಗಳೂ ಮಾರಾಟವಾಗಿದ್ದವು. ಹಣ ಪಾವತಿ ಕೌಂಟರ್‌ನಲ್ಲಿ ಮಾರಾಟ ಆರಂಭವಾಗಿ ಎರಡು ತಾಸಿನಲ್ಲಿಯೇ ಎಲ್ಲ ಟಿಕೆಟ್‌ಗಳು ಖರ್ಚಾದವು ಎಂದು  ಮೂಲಗಳು ತಿಳಿಸಿವೆ.

ಇದರಿಂದಾಗಿ ಬಹಳ ಹೊತ್ತು ಸರದಿ ಸಾಲಿನಲ್ಲಿದ್ದು ಟಿಕೆಟ್ ಸಿಗದವರು ಬೇಸರದಿಂದ ಮರಳಿದರು.

‘ಕೇವಲ ಎರಡು ಕೌಂಟರ್‌ಗಳನ್ನು ಇಟ್ಟಿದ್ದು ನೂಕುನುಗ್ಗಲಿಗೆ ಕಾರಣವಾಯಿತು.  ಹೆಚ್ಚು ಜನರು ಬರುತ್ತಾರೆ ಎಂದು ಗೊತ್ತಿದ್ದು ಮೂರ್ನಾಲ್ಕು ಕೌಂಟರ್‌ಗಳನ್ನಾದರೂ ಇಡಬೇಕಿತ್ತು’ ಎಂದು ಟಿಕೆಟ್‌ ಸಿಗದೆ ನಿರಾಶರಾಗಿದ್ದ ನವೀನಕುಮಾರ್ ಮತ್ತು ಅವರ ಸ್ನೇಹಿತರು ಅಸಮಾಧಾನ ವ್ಯಕ್ತಪಡಿಸಿದರು.

ಐಪಿಎಲ್ ಟೂರ್ನಿಯ ಎರಡನೇ ಹಂತದಲ್ಲಿ ಮತ್ತು ಕ್ವಾಲಿಫೈಯರ್ –1 ಪಂದ್ಯದಲ್ಲಿ ಆರ್‌ಸಿಬಿ ತಂಡವು ಅಮೋಘ ಆಟವಾಡಿತ್ತು. ನಾಯಕ ವಿರಾಟ್ ಕೊಹ್ಲಿ, ಎ.ಬಿ. ಡಿವಿಲಿಯರ್ಸ್, ಕ್ರಿಸ್‌ ಗೇಲ್ ಮತ್ತು ಸ್ಥಳೀಯ ಆಟಗಾರ ಕೆ.ಎಲ್. ರಾಹುಲ್ ಅವರ ಅಮೋಘ ಬ್ಯಾಟಿಂಗ್ ಅಭಿಮಾನಿಗಳ ಮನ ಗೆದ್ದಿದೆ.

ಮಹಾರಾಷ್ಟ್ರದಲ್ಲಿ ಬರಗಾಲದ ಕಾರಣದಿಂದ ಐಪಿಎಲ್ ಪಂದ್ಯಗಳನ್ನು ಬೇರೆ ರಾಜ್ಯಗಳಿಗೆ ಸ್ಥಳಾಂತರಿಸಲಾಗಿತ್ತು. ಮುಂಬೈನಲ್ಲಿ  ನಿಗದಿಯಾಗಿದ್ದ ಫೈನಲ್ ಪಂದ್ಯವನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ.

ತವರಿನ ತಂಡವೇ ಈಗ ಫೈನಲ್‌ಗೆ ಬಂದಿರುವುದು ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ಮೇ 27ರಂದು ನಡೆಯುವ ಕ್ವಾಲಿಫೈಯರ್ –2 ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಆರ್‌ಸಿಬಿ ಎದುರಿಸಲಿದೆ.

ಬೆಂಗಳೂರು ಎರಡನೇ ಬಾರಿ ಫೈನಲ್‌ ಪಂದ್ಯದ ಆತಿಥ್ಯ ವಹಿಸುತ್ತಿದೆ. 2014ರಲ್ಲಿ  ಆಯೋಜಿಸಲಾಗಿದ್ದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಕಿಂಗ್ಸ್‌ ಇಲೆವನ್ ಪಂಜಾಬ್ ಎದುರು ಗೆದ್ದಿತ್ತು.

***

ಕ್ವಾಲಿಫೈಯರ್ ಪಂದ್ಯಕ್ಕಿಂತ ಮುನ್ನವೇ ನಾನು ಆನ್‌ಲೈನ್ ಮೂಲಕ  ಫೈನಲ್‌ ಪಂದ್ಯದ ಟಿಕೆಟ್ ಖರೀದಿಸಲು ಪ್ರಯತ್ನಿಸಿದ್ದೆ. ಆದರೆ, ಸಿಗಲಿಲ್ಲ. ನನಗೆ ಫೈನಲ್ ನೋಡಲು ಸಿಗುವುದಿಲ್ಲ ಎಂದು ಬೇಸರವಾಗುತ್ತಿದೆ
-
ರಶ್ಮಿ ಜಿ, ಸಾಫ್ಟ್‌ ವೇರ್ ಉದ್ಯೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT