ADVERTISEMENT

ಒಂದೇ ಗುದ್ದು; ಇತಿಹಾಸ ಬರೆದ ಜೊಲಾನಿ

ಕೇವಲ 11 ಸೆಕೆಂಡುಗಳಲ್ಲಿ ಎದುರಾಳಿಯನ್ನು ಮಣಿಸಿದ ದಕ್ಷಿಣ ಆಫ್ರಿಕಾ ಬಾಕ್ಸರ್‌

ಏಜೆನ್ಸೀಸ್
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST
ಜೊಲಾನಿ ಟೇಟೆ
ಜೊಲಾನಿ ಟೇಟೆ   

ಲಂಡನ್‌: ಎದುರಾಳಿಯನ್ನು ಒಂದೇ ಗುದ್ದಿಗೆ ನೆಲಕ್ಕೆ ಬೀಳಿಸಿದ ದಕ್ಷಿಣ ಆಫ್ರಿಕಾದ ಜೊಲಾನಿ ಟೇಟೆ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಕಿರೀಟವನ್ನು ಮುಕುಟಕ್ಕೆ ಏರಿಸಿಕೊಂಡರು. ಕೇವಲ 11 ಸೆಕೆಂಡುಗಳಲ್ಲಿ ಜಯ ಗಳಿಸಿದ ಅವರು ಬಾಕ್ಸಿಂಗ್ ಇತಿಹಾಸದಲ್ಲಿ ದಾಖಲೆಯನ್ನೂ ಬರೆದರು.

ಬೆಲ್‌ಫಾಸ್ಟ್‌ನಲ್ಲಿ ಶನಿವಾರ ರಾತ್ರಿ ನಡೆದ ಬ್ಯಾಂಟಮ್ ವೇಟ್ ವಿಭಾಗದ ಫೈನಲ್‌ನಲ್ಲಿ ಅವರು ತಮ್ಮದೇ ದೇಶದವರಾದ ಸಿಬೊನಿಸೊ ಗೊನ್ಯಾ ಅವರನ್ನು ಸೋಲಿಸಿ ಚಾಂಪಿಯನ್‌ ಪಟ್ಟವನ್ನು ತಮ್ಮಲ್ಲೇ ಉಳಿಸಿಕೊಂಡರು.

ಬೌಟ್ ಆರಂಭಗೊಂಡು ಕೇವಲ ಐದು ಸೆಕೆಂಡುಗಳಲ್ಲಿ ಟೇಟೆ ಅವರಿಗೆ ಉತ್ತಮ ಅವಕಾಶ ಲಭಿಸಿತು. ಬಲಗೈಯಲ್ಲಿ ಬಲವಾಗಿ ಗುದ್ದಿದ ಅವರು ಎದುರಾಳಿಯನ್ನು ನೆಲಕ್ಕೆ ಉರುಳಿಸಿದರು. ಗೊನ್ಯಾ ಸುಧಾರಿಸಿಕೊಳ್ಳಲು ಆರು ಸೆಕೆಂಡುಗಳ ಕಾಲ ಕಾದ ರೆಫರಿ ಫಲಿತಾಂಶ ಪ್ರಕಟಿಸುತ್ತಿದ್ದಂತೆ ಟೇಟೆ ನಗೆ ಸೂಸಿದರು.

ADVERTISEMENT

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅತಿ ವೇಗದಲ್ಲಿ ಜಯ ಗಳಿಸಿದ ದಾಖಲೆ ಇಲ್ಲಿಯ ವರೆಗೆ ಡ್ಯಾನಿಯೆಲ್ ಜಿಮೆನೆಜ್ ಅವರ ಹೆಸರಿನಲ್ಲಿತ್ತು. 1994ರಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಸೂಪರ್ ಬ್ಯಾಂಟಮ್ ವೇಟ್‌ ವಿಭಾಗದಲ್ಲಿ ಅವರು ಎದುರಾಳಿಯನ್ನು 17 ಸೆಕೆಂಡುಗಳಲ್ಲಿ ಮಣಿಸಿದ್ದರು.

‘ಈ ಸ್ಪರ್ಧೆಗಾಗಿ ನಾನು ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಗೊನ್ಯಾ ಅವರು ಬೌಟ್‌ನಲ್ಲಿ ಹೆಚ್ಚು ಕಾಲ ಆಡಲಾರರು ಎಂದು ನನಗೆ ತಿಳಿದೇ ಇತ್ತು’ ಎಂದು ಸ್ಥಳೀಯ ಸುದ್ದಿ ಚಾನೆಲ್‌ಗೆ ಟೇಟೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.