ADVERTISEMENT

ಒಕುಹರಾಗೆ ಮಣಿದ ಸಿಂಧು

ಪ್ರಣಯ್‌, ಶ್ರೀಕಾಂತ್‌ಗೆ ಜಯ, ಸೈನಾಗೆ ಸೋಲು

ಪಿಟಿಐ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಪಿ.ವಿ. ಸಿಂಧು ಆಟದ ವೈಖರಿ.
ಪಿ.ವಿ. ಸಿಂಧು ಆಟದ ವೈಖರಿ.   

ಟೋಕಿಯೊ: ಭಾರತದ ಅಗ್ರಗಣ್ಯ ಆಟಗಾರ್ತಿ ಪಿ.ವಿ ಸಿಂಧು ಅವರು ಜಪಾನ್ ಓಪನ್ ಸೂಪರ್ ಸೀರಿಸ್ ಟೂರ್ನಿಯಲ್ಲಿ ಗುರುವಾರ ನೊಜೊಮಿ ಒಕುಹರಾ ಎದುರು ಸೋಲು ಅನುಭವಿಸಿದ್ದಾರೆ.

ತವರಿನಲ್ಲಿ ಆಡುತ್ತಿರುವ ಒಕುಹರಾ ಅವರ ಸವಾಲನ್ನು ಮೆಟ್ಟಿನಿಲ್ಲಲು ಸಿಂಧು ವಿಫಲರಾಗಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಒಕುಹರಾ ಎದುರು ಭಾರತದ ಆಟಗಾರ್ತಿ ಸೋತಿದ್ದರು. ಈಚೆಗೆ ನಡೆದ ಕೊರಿಯಾ ಓಪನ್‌ ಫೈನಲ್‌ನಲ್ಲಿ ಸಿಂಧು ಗೆದ್ದಿದ್ದರು.

ಎರಡನೇ ಸುತ್ತಿನಲ್ಲಿಯೇ ಸಿಂಧು 18–21, 8–21ರಲ್ಲಿ ನೇರ ಗೇಮ್‌ಗಳಿಂದ ಸೋಲು ಕಂಡಿದ್ದಾರೆ. 47 ನಿಮಿಷದ ಹಣಾಹಣಿಯಲ್ಲಿ ಭಾರತದ ಆಟಗಾರ್ತಿ ತಮ್ಮ ಎಂದಿನ ಆಟ ಆಡುವಲ್ಲಿ ಹಿಂದೆ ಉಳಿದರು. ಅಲ್ಲದೇ ಸಾಕಷ್ಟು ಅನಗತ್ಯ ತಪ್ಪುಗಳಿಂದಾಗಿ ಬೆಲೆ ತೆತ್ತರು.

ADVERTISEMENT

ಹಿಂದಿನ ಎರಡೂ ಟೂರ್ನಿಗಳಲ್ಲಿ ಭಾರತದ ಆಟಗಾರ್ತಿ ಒಕುಹರಾ ಎದುರು ಅಮೋಘ ಸಾಮರ್ಥ್ಯದಿಂದ ಹೋರಾಡಿದ್ದರು. ಎರಡೂ ಫೈನಲ್‌ ಪಂದ್ಯಗಳು ಕ್ರಮವಾಗಿ 110 ಹಾಗೂ 83 ನಿಮಿಷದ ಹೋರಾಟ ಎನಿಸಿದ್ದವು. ಆದರೆ ಈ ಪಂದ್ಯ‌ದಲ್ಲಿ ಸಿಂಧು ದೀರ್ಘವಾದ ರ‍್ಯಾಲಿಗಳನ್ನು ಆಡಲಿಲ್ಲ.

ಮೊದಲ ಗೇಮ್‌ನಲ್ಲಿ ಸಿಂಧು 6–2ರಲ್ಲಿ ಮುನ್ನಡೆ ಪಡೆದುಕೊಂಡರು. ಆದರೆ ಒಕುಹರಾ ಈ ಅಂತರವನ್ನು 9–8ಕ್ಕೆ ತಗ್ಗಿಸಿದರು. ಎದುರಾಳಿಯ ಕ್ರಾಸ್‌ ಕೋರ್ಟ್‌ ಹೊಡೆತಗಳನ್ನು ಎದುರಿಸುವಲ್ಲಿ ಸಿಂಧು ಕಷ್ಟಪಡುತ್ತಿದ್ದರು. ನೆಟ್‌ ಬಳಿ ಕೂಡ ಪರಿಣಾಮಕಾರಿಯಾಗಿ ಆಡಲು ಅವರಿಂದ ಸಾಧ್ಯವಾಗಲಿಲ್ಲ. ಈ ನಡುವೆಯೂ ಸಿಂಧು 11–9ರಲ್ಲಿ ಮುನ್ನಡೆ ಹೊಂದಿದ್ದರು. ದೀರ್ಘ ರ‍್ಯಾಲಿಯಲ್ಲಿ ಒಕುಹರಾ 12–11ರಲ್ಲಿ ಮುಂದೆ ಸಾಗಿದರು.

14–15ರಲ್ಲಿ ಹಿಂದೆ ಇದ್ದ ವೇಳೆ ಕೂಡ ಅಲ್ಪ ಅಂತರದ ಹೋರಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಸಿಂಧುಗೆ 18–16ರಲ್ಲಿ ಮುನ್ನಡೆ ಸಿಕ್ಕಿತು. ಆದರೆ ಇದನ್ನು ಬಳಸಿಕೊಳ್ಳುವಲ್ಲಿ ಭಾರತದ ಆಟಗಾರ್ತಿ ವಿಫಲರಾದರು. ಒಕುಹರಾ ನಾಲ್ಕು ನೇರ ಪಾಯಿಂಟ್ಸ್ ಪಡೆದು ಗೇಮ್‌ ಗೆದ್ದುಕೊಂಡರು.

ಎರಡನೇ ಗೇಮ್‌ನಲ್ಲಿ ಸಂಪೂರ್ಣ ಚಿತ್ರ ಬದಲಾಯಿತು. 3–0, 9–3ರಲ್ಲಿ ಒಕುಹರಾ ಮುಂದಿದ್ದರು. ಈ ಮುನ್ನಡೆಯನ್ನು ಅವರು 11–4ಕ್ಕೆ ಕೊಂಡೊಯ್ದರು. ಆದರೆ ಸಿಂಧು ಅವರಿಂದ ಈ ಹಂತದಲ್ಲೂ ತಕ್ಕ ಪೈಪೋಟಿ ನಡೆಸಲು ಸಾಧ್ಯವಾಗಲಿಲ್ಲ.

ಸೈನಾಗೆ ಸೋಲು: ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಕೊಂಡಿರುವ ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ 16–21, 13–21ರ ನೇರ ಗೇಮ್‌ಗಳಿಂದ ಒಲಿಂಪಿಕ್ಸ್‌ ಚಾಂಪಿಯನ್ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಎದುರು ಸೋಲು ಕಂಡಿದ್ದಾರೆ.

ಕಾಲುನೋವಿನಿಂದ ಬಳಲುತ್ತಿದ್ದ ಸೈನಾ ಮೊದಲ ಸುತ್ತಿನ ಪಂದ್ಯದಲ್ಲಿ ಸುಲಭ ಗೆಲುವು ದಾಖಲಿಸಿದ್ದರು. ಐದನೇ ಶ್ರೇಯಾಂಕದ ಮರಿನ್ ವಿರುದ್ಧ ಎರಡೂ ಗೇಮ್‌ಗಳ ಆರಂಭದಲ್ಲಿ ಸೈನಾ ಮುನ್ನಡೆ ಹೊಂದಿದ್ದರು. ಆದರೆ ಬಳಿಕ ಅವರಿಂದ ಉತ್ತಮ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ.

ಕ್ವಾರ್ಟರ್‌ಗೆ ಶ್ರೀಕಾಂತ್‌, ಪ್ರಣಯ್‌: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ ಎನಿಸಿರುವ ಕಿದಂಬಿ ಶ್ರೀಕಾಂತ್‌ ಹಾಗೂ ಎಚ್‌.ಎಸ್‌. ಪ್ರಣಯ್‌ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿರುವ ಶ್ರೀಕಾಂತ್‌ 21–12, 21–11ರಲ್ಲಿ ಹಾಂಕಾಂಗ್‌ನ ಹು ಯುನ್ ಮೇಲೆ ಜಯಸಾಧಿಸಿದರು. ಈ ಋತುವಿನಲ್ಲಿ ಇಂಡೊನೇಷ್ಯಾ ಹಾಗೂ ಆಸ್ಟ್ರೇಲಿಯಾ ಓಪನ್‌ಗಳಲ್ಲಿ ಪ್ರಶಸ್ತಿ ಗೆದ್ದಕೊಂಡಿರುವ ಶ್ರೀಕಾಂತ್‌ 30 ನಿಮಿಷಗಳಲ್ಲಿ ಪಂದ್ಯ ಗೆದ್ದುಕೊಂಡರು.

ಮುಂದಿನ ಪಂದ್ಯದಲ್ಲಿ ಭಾರತದ ಆಟಗಾರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಎತ್ತಿಹಿಡಿದಿರುವ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್‌ಸನ್ ಅವರನ್ನು ಎದುರಿಸಲಿದ್ದಾರೆ. ಹಿಂದಿನ ನಾಲ್ಕು ಪಂದ್ಯಗಳ ಮುಖಾಮುಖಿಯಲ್ಲಿ ವಿಕ್ಟರ್ ಎದುರು ಶ್ರೀಕಾಂತ್‌ 2–2ರ ಸಮಬಲದ ಗೆಲುವಿನ ದಾಖಲೆ ಹೊಂದಿದ್ದಾರೆ. ಆದರೆ ಹಿಂದಿನ ಎರಡು ಪಂದ್ಯಗಳನ್ನು ವಿಕ್ಟರ್‌ ನೇರ ಗೇಮ್‌ಗಳಿಂದ ಗೆದ್ದುಕೊಂಡಿದ್ದಾರೆ.

ಅಮೆರಿಕ ಓಪನ್ ಚಾಂಪಿಯನ್ ಎಚ್‌.ಎಸ್ ಪ್ರಣಯ್ 21–16, 23–21ರಲ್ಲಿ ಚೀನಾ ತೈಪೆಯ ಸು ಜೆನ್ ಹುವಾ ವಿರುದ್ಧ ಗೆದ್ದರು. ಮುಂದಿನ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಚೀನಾದ ಶಿ ಯೂಕಿ ಮೇಲೆ ಆಡಲಿದ್ದಾರೆ.

ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಶಿ ಯೂಕಿ ಫೈನಲ್ ತಲುಪಿದ್ದರು. ಇನ್ನೊಂದು ಪಂದ್ಯದಲ್ಲಿ ಅವರು 10–21, 21–17, 21–15ರಲ್ಲಿ ಭಾರತದ ಸಮೀರ್ ವರ್ಮಾ ಅವರನ್ನು ಮಣಿಸಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಹೊಂದಿದ್ದಾರೆ.

ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್  ರಣಕಿರೆಡ್ಡಿ 27–29, 21–16, 12–21ರಲ್ಲಿ ಇಂಡೊನೇಷ್ಯಾದ ನಾಲ್ಕನೇ ಶ್ರೇಯಾಂಕದ ಪ್ರವೀಣ್ ಜೋರ್ಡನ್ ಮತ್ತು ದೆಬೆ ಸುಸಾಂತೊ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.