ADVERTISEMENT

ಒಲಿಂಪಿಕ್ಸ್‌ಗೆ ಸೀಮಾ ಅರ್ಹತೆ

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST

ನವದೆಹಲಿ (ಪಿಟಿಐ):   ಭಾರತದ ಭರವಸೆಯ ಡಿಸ್ಕಸ್‌ ಎಸೆತ ಸ್ಪರ್ಧಿ ಸೀಮಾ ಪೂನಿಯ  ಅವರು   ರಿಯೊ ಡಿ ಜನೈರೊದಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾದ ಸಲಿನಾಸ್‌ನಲ್ಲಿ ನಡೆದ ಪ್ಯಾಟ್‌ ಯಂಗ್ಸ್‌ ಥ್ರೋವರ್ಸ್‌ ಕ್ಲಾಸಿಕ್‌ ಟೂರ್ನಿಯಲ್ಲಿ ಚಿನ್ನ ಗೆಲ್ಲುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. ಹಾರ್ಟ್‌ನೆಲ್‌ ಕಾಲೇಜ್‌ ಥ್ರೋವರ್ಸ್‌ ಸಂಕೀರ್ಣದಲ್ಲಿ ಭಾನುವಾರ ನಡೆದ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಸೀಮಾ ಅವರು  ಡಿಸ್ಕ್‌ ಅನ್ನು 62.62 ಮೀಟರ್ಸ್‌ ದೂರ ಎಸೆದು ಮೊದಲ ಸ್ಥಾನ ಗಳಿಸಿದರು. ರಿಯೊಗೆ ಅರ್ಹತೆ ಗಳಿಸಲು  61 ಮೀಟರ್ಸ್‌ ದೂರ ಎಸೆಯಬೇಕಿತ್ತು.

ಇಲ್ಲಿ ಚಿನ್ನ ಜಯಿಸುವ ಮೂಲಕ ಸೀಮಾ ಅವರು ಮೂರನೇ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದರು. 2004 ಮತ್ತು 2012ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಸೀಮಾ, ಅರ್ಹತಾ ಸುತ್ತಿನಿಂದಲೇ ಹೊರಬಿದ್ದಿದ್ದರು. ಸೀಮಾ, ರಿಯೊಗೆ ರಹದಾರಿ ಪಡೆದ ಭಾರತದ 19ನೇ ಅಥ್ಲೀಟ್‌ ಎನಿಸಿದ್ದಾರೆ.
ಅನುಗೆ ಚಿನ್ನ:  ಭಾರತದ ಜಾವಲಿನ್‌ ಎಸೆತ ಸ್ಪರ್ಧಿ ಅನು ರಾಣಿ ಅವರು ಬೆಲ್ಜಿಯಂನಲ್ಲಿ ನಡೆಯುತ್ತಿರುವ ಪುಟ್‌ಬಾಸ್‌ಟೇಡಿಯನ್‌ ಕೂಟದಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ಅನು 54.61 ಮೀಟರ್ಸ್‌ ದೂರ ಜಾವಲಿನ್‌ ಎಸೆದು ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು.

ನೀರಜ್‌ಗೆ ಬೆಳ್ಳಿ:  ಪುರುಷರ ವಿಭಾಗದ ಜಾವಲಿನ್‌ ಎಸೆತ ಸ್ಪರ್ಧೆಯಲ್ಲಿ 19 ವರ್ಷದ ನೀರಜ್‌ ಚೋಪ್ರಾ ಬೆಳ್ಳಿ ಜಯಿಸಿದರು. ನೀರಜ್‌ ಅವರು 75.52 ಮೀಟರ್ಸ್‌ ದೂರ ಜಾವಲಿನ್‌ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ವಿಭಾಗದ ಕಂಚು ಭಾರತದ ಶಿವಪಾಲ್‌ ಸಿಂಗ್‌ ಅವರ ಪಾಲಾಯಿತು. ಶಿವಪಾಲ್‌ ಜಾವಲಿನ್‌ ಅನ್ನು 73.42 ಮೀಟರ್ಸ್‌  ದೂರ ಎಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.