ADVERTISEMENT

ಕನಸು ನುಚ್ಚುನೂರು

ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ, ಸಿಡ್ನಿಯಲ್ಲಿ ಭಾರತ ತಂಡಕ್ಕೆ ಮುಖಭಂಗ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2015, 19:30 IST
Last Updated 26 ಮಾರ್ಚ್ 2015, 19:30 IST

ಸಿಡ್ನಿ: ಟ್ರೋಫಿ ಉಳಿಸಿಕೊಳ್ಳುವ ಭಾರತದ ಕನಸು ಭಗ್ನಗೊಂಡಿದೆ. ನಾಲ್ಕು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾ ತಂಡ ಹನ್ನೊಂದನೇ ಐಸಿಸಿ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ 95 ರನ್‌ಗಳ ಅಪೂರ್ವ ಗೆಲುವು ಪಡೆದು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.

ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿರುವ ಆಸ್ಟ್ರೇಲಿಯಾ ಮತ್ತು ಎರಡನೇ ಸ್ಥಾನದಲ್ಲಿರುವ ಭಾರತ ನಡುವಣ ಹಣಾಹಣಿಯು  ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿತ್ತು.

ಸಿಡ್ನಿ ಅಂಗಳದಲ್ಲಿ ಗುರುವಾರ ನಡೆದ ಪಂದ್ಯಕ್ಕೆ ಶೇ 70ರಷ್ಟು ಭಾರತ ತಂಡದ ಅಭಿಮಾನಿಗಳೇ ಕ್ರೀಡಾಂಗಣದಲ್ಲಿ ಸಾಕ್ಷಿಯಾಗಿದ್ದರು.
ವೇಗಿ ಮಿಷೆಲ್‌ ಸ್ಟಾರ್ಕ್‌ 46ನೇ ಓವರ್‌ನ ಐದನೇ ಎಸೆತದಲ್ಲಿ ‘ಬಾಲಂಗೋಚಿ’ ಬ್ಯಾಟ್ಸ್‌ಮನ್‌ ಉಮೇಶ್‌ ಯಾದವ್‌ ಅವರನ್ನು ಬೌಲ್ಡ್‌ ಮಾಡುತ್ತಿದ್ದಂತೆ ಕಾಂಗರೂಗಳ ನಾಡಿನ ಅಭಿಮಾನಿಗಳಲ್ಲಿ ಖುಷಿಯ ಅಲೆ ಚಿಮ್ಮಿತು. ಆದರೆ, ಭಾರತ ತಂಡವನ್ನು ಬೆಂಬಲಿಸಲು ಬಂದಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಒಂದು ಕ್ಷಣ ಹೃದಯದ ಬಡಿತವೇ ನಿಂತಂತಾಯಿತು.

‘ದೋನಿ ಪಡೆ ಟ್ರೋಫಿ ತನ್ನಲ್ಲಿಯೇ ಉಳಿಸಿಕೊಳ್ಳಲಿ’ ಎಂದು ಅಭಿಮಾನಿಗಳು ಹಾರೈಸಿದ್ದರು.   ಹಾರೈಕೆ ಫಲಿಸಲೆಂದು ದೇವರ  ಮೊರೆ  ಹೋಗಿದ್ದರು. ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ್ದರು. ಇನ್ನೂ ಕೆಲವರು ಆಟಗಾರರಿಗೆ ಶುಭಾಶಯ ಪತ್ರವನ್ನೂ ಕಳುಹಿಸಿದ್ದರು. ಸಾಮಾಜಿಕ ತಾಣಗಳಲ್ಲಿ ‘ಭಾರತ ತಂಡವನ್ನು ಬೆಂಬಲಿಸಿ’ ಅಭಿಯಾನ ನಡೆಸಿದ್ದರು.

ಆದರೆ, ಸಿಡ್ನಿ ಅಂಗಳದಲ್ಲಿ ಭಾರತ ಕೆಟ್ಟ ರೀತಿಯಲ್ಲಿ ಸೋಲು ಕಂಡಿತು. ದುರ್ಬಲ ಬೌಲಿಂಗ್ ಮತ್ತು  ಬ್ಯಾಟ್ಸ್‌ಮನ್‌ಗಳ  ವೈಫಲ್ಯ ನಿರಾಸೆಗೆ ಕಾರಣವಾಯಿತು. ‘ಭಾರತ ಮೊದಲು ಬ್ಯಾಟ್‌ ಮಾಡಿದರೆ ಮಾತ್ರ ಗೆಲುವಿನ ಅವಕಾಶ’ ಎಂದು ಬುಧವಾರ ಹೇಳಿದ್ದ ಮಾಜಿ ನಾಯಕ ಸುನಿಲ್‌ ಗಾವಸ್ಕರ್‌ ಮಾತು ನಿಜವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.