ADVERTISEMENT

ಕಬಡ್ಡಿ ಲೀಗ್‌: ಬೆಂಗಳೂರಲ್ಲಿ ನಾಲ್ಕು ಪಂದ್ಯ

ಮುಂದಿನ ತಿಂಗಳು ಆರಂಭ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST

ಬೆಂಗಳೂರು: ಮೊದಲ ಆವೃತ್ತಿಯಲ್ಲಿ ಯಶಸ್ಸು ಕಂಡಿರುವ ವೃತ್ತಿಪರ ಆಟ ಗಾರರ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಎರಡನೇ ಆವೃತ್ತಿ ಜುಲೈ 18ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಹಾಗೂ ರನ್ನರ್ಸ್‌ ಅಪ್‌ ತಂಡ ಯು ಮುಂಬಾ ಪೈಪೋಟಿ ನಡೆಸಲಿವೆ.

ಲೀಗ್‌ ಮತ್ತು ನಾಕೌಟ್‌ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಗೆಲುವು ಪಡೆಯುವ ತಂಡಕ್ಕೆ ಐದು ಪಾಯಿಂಟ್ಸ್‌ ಲಭಿಸಲಿವೆ. ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳಿಗೆ ಸೆಮಿಫೈನಲ್‌ ಪ್ರವೇಶಿಸಲು ಅರ್ಹತೆ ಪಡೆಯುತ್ತದೆ. 37 ದಿನ ನಡೆಯುವ ಟೂರ್ನಿಯಲ್ಲಿ  60 ಪಂದ್ಯಗಳು ಆಯೋಜನೆಯಾಗಿವೆ. ಎಂಟು ನಗರಗಳಲ್ಲಿ ಪಂದ್ಯಗಳು ಜರುಗಲಿವೆ.

ಹೋದ ವರ್ಷದ ಟೂರ್ನಿಯಲ್ಲಿ ಆಡಿದ್ದ ಪಿಂಕ್‌ ಪ್ಯಾಂಥರ್ಸ್‌, ಯು ಮುಂಬಾ, ಬೆಂಗಳೂರು ಬುಲ್ಸ್‌, ಪಟ್ನಾ ಪ್ಯಾರಟಸ್‌, ತೆಲುಗು ಟೈಟಾನ್ಸ್‌, ದಬಾಂಗ್‌ ಡೆಲ್ಲಿ, ಬಂಗಾಳ ವಾರಿಯರ್ಸ್‌ ಮತ್ತು ಪುನೇರಿ ಪಲ್ತಾನ್‌  ತಂಡಗಳು ಈ ಬಾರಿಯೂ ಪೈಪೋಟಿ ನಡೆಸಲಿದೆ. ಹಿಂದಿನ ಆವೃತ್ತಿಯಲ್ಲಿ ಬುಲ್ಸ್ ನಾಲ್ಕನೇ ಸ್ಥಾನ ಪಡೆದಿತ್ತು.

ಮೊದಲ ಲೆಗ್‌ ಮುಂಬೈನಲ್ಲಿ ನಡೆಯಲಿದ್ದು, ನಂತರದ ಲೆಗ್‌ಗಳು ಕ್ರಮವಾಗಿ ಕೋಲ್ಕತ್ತ, ಜೈಪುರ, ಪಟ್ನಾ, ಹೈದರಾಬಾದ್‌, ದೆಹಲಿ, ಬೆಂಗಳೂರು ಮತ್ತು ‍ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ.

12ರಿಂದ ಬೆಂಗಳೂರು ಆವೃತ್ತಿ: ನಾಲ್ಕು ಪಂದ್ಯಗಳಿಗೆ ಆತಿಥ್ಯ ವಹಿಸಿರುವ ಬೆಂಗಳೂರಿನ ಲೆಗ್‌ ಆಗಸ್ಟ್‌ 12ರಂದು ಆರಂಭವಾಗಲಿದೆ. ಬೆಂಗಳೂರು ಬುಲ್ಸ್ ತಂಡದ ತವರಿನ ಅಂಗಳ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಬುಲ್ಸ್ ಮತ್ತು ಮುಂಬಾ ಪೈಪೋಟಿ ನಡೆಸಲಿವೆ. ಎರಡು ಸೆಮಿಫೈನಲ್‌, ಫೈನಲ್‌ ಮತ್ತು ಮೂರನೇ ಸ್ಥಾನ ನಿರ್ಧರಿಸಲು ನಡೆಯುವ ‘ಪ್ಲೇ ಆಫ್‌’ ಪಂದ್ಯಗಳು ಮುಂಬೈನಲ್ಲಿ ಆಯೋಜನೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.