ADVERTISEMENT

ಕುಕ್‌ ಶತಕದ ಆಸರೆ

ಕ್ರಿಕೆಟ್‌: ಇಂಗ್ಲೆಂಡ್‌ ತಂಡದ ಸಾಧಾರಣ ಮೊತ್ತ

​ಪ್ರಜಾವಾಣಿ ವಾರ್ತೆ
Published 2 ಮೇ 2015, 19:30 IST
Last Updated 2 ಮೇ 2015, 19:30 IST

ಬ್ರಿಜ್‌ಟೌನ್‌ (ಎಎಫ್‌ಪಿ): ನಾಯಕ ಅಲಸ್ಟೇರ್‌ ಕುಕ್‌ (105) ಅವರ ಜವಾಬ್ದಾರಿಯುತ ಆಟದ ಬಲದಿಂದ ಇಂಗ್ಲೆಂಡ್‌ ತಂಡ  ವೆಸ್ಟ್‌ ಇಂಡೀಸ್‌ ವಿರುದ್ಧ ಶುಕ್ರವಾರ ಆರಂಭವಾದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾಗಿದೆ.

ಕೆನ್ಸಿಂಗ್‌ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಂಗ್ಲರ ನಾಡಿನ ಬಳಗ ಮೊದಲ ಇನಿಂಗ್ಸ್‌ನಲ್ಲಿ ದಿನದ ಆಟದ ಅಂತ್ಯಕ್ಕೆ 89.2 ಓವರ್‌ಗಳಲ್ಲಿ 7 ವಿಕೆಟ್‌ಗೆ 240ರನ್‌ಗಳ ಸಾಧಾರಣ ಮೊತ್ತ ಪೇರಿಸಿದೆ.

ಟ್ರಾಟ್‌ ವೈಫಲ್ಯ: ಇಂಗ್ಲೆಂಡ್‌ ತಂಡದ ಆರಂಭ ಉತ್ತಮವಾಗಿರಲಿಲ್ಲ. ಹಿಂದಿನ ಎರಡು ಪಂದ್ಯಗಳಲ್ಲಿ ರನ್‌ಗಳಿಸಲು ವಿಫಲರಾಗಿದ್ದ ಆರಂಭಿಕ ಆಟಗಾರ ಜೊನಾಥನ್‌ ಟ್ರಾಟ್‌ ಶೂನ್ಯಕ್ಕೆ ಔಟಾದರು. ಆಗ ತಂಡ ಇನ್ನೂ ರನ್‌ ಖಾತೆಯನ್ನೇ ತೆರೆದಿರಲಿಲ್ಲ.

ಶಾನನ್‌ ಗೇಬ್ರಿಯಲ್‌ ಹಾಕಿದ ಎರಡನೇ ಓವರ್‌ನ ಮೂರನೇ ಎಸೆತದ ಗತಿ ಅರಿಯುವಲ್ಲಿ ಎಡವಿದ ಟ್ರಾಟ್‌, ವೀರಸ್ವಾಮಿ  ಪೆರುಮಾಳ್‌ ಅವರಿಗೆ ಕ್ಯಾಚ್‌ ನೀಡಿದರು.

ಆ ನಂತರ ಬಂದ ಗ್ಯಾರಿ ಬಲಾನ್ಸ್‌ (18) ದೊಡ್ಡ ಮೊತ್ತ ಗಳಿಸಲು ವಿಫಲರಾದರೆ, ಇಯಾನ್‌ ಬೆಲ್‌ ಸೊನ್ನೆ ಸುತ್ತಿದರು. ಇವರಿಬ್ಬರನ್ನೂ ಔಟ್‌ ಮಾಡಿದ ಜಾಸನ್‌ ಹೋಲ್ಡರ್‌ ಆತಿಥೇಯ ತಂಡಕ್ಕೆ ಆರಂಭದಲ್ಲೇ ಮೇಲುಗೈ ಒದಗಿಸಿದರು.

ಆಸರೆ: ಪ್ರಮುಖ ಬ್ಯಾಟ್ಸ್‌ಮನ್‌ಗಳು ಬೇಗನೆ ಔಟಾಗಿದ್ದರಿಂದ ನಾಯಕ ಕುಕ್‌ ಮೇಲೆ ಹೆಚ್ಚಿನ ಒತ್ತಡ ಬಿತ್ತು. ಇದರ ನಡುವೆಯೂ ಅವರು ದಿಟ್ಟ ಬ್ಯಾಟಿಂಗ್‌ ನಡೆಸಿದರು. ಕುಕ್‌ ಮತ್ತು ಜೋ ರೂಟ್‌ (33; 35ಎ, 5ಬೌಂ) ನಾಲ್ಕನೇ ವಿಕೆಟ್‌ಗೆ 53ರನ್‌ಗಳ ಕಾಣಿಕೆ ನೀಡಿ ತಂಡವನ್ನು ಆರಂಭಿಕ ಅಪಾಯದಿಂದ ಪಾರು ಮಾಡಿದರು.

32ನೇ ಓವರ್‌ನಲ್ಲಿ ದಾಳಿಗಿಳಿದ ವೀರಸ್ವಾಮಿ ಪೆರುಮಾಳ್‌, ರೂಟ್‌ ಅವರ ವಿಕೆಟ್‌ ಕಬಳಿಸಿ ಈ ಜೋಡಿಯನ್ನು ಬೇರ್ಪಡಿಸಿದರು.
ಜುಗಲ್‌ಬಂದಿ: ಆ ನಂತರ ಕುಕ್‌ ಮತ್ತು ಮೋಯಿನ್‌ ಅಲಿ (58; 130ಎ, 8ಬೌಂ, 1ಸಿ) ಸೊಗಸಾದ ಇನಿಂಗ್ಸ್‌ ಕಟ್ಟಿದರು. ವಿಂಡೀಸ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ನಿಂತ ಈ ಜೋಡಿ ಐದನೇ ವಿಕೆಟ್‌ಗೆ 98ರನ್‌ ಕಲೆಹಾಕಿ ತಂಡದ ಮೊತ್ತವನ್ನು 180ರ ಗಡಿ ದಾಟಿಸಿತು. ಈ ಹಂತದಲ್ಲಿ ಮೊಯೀನ್‌ ಅನಗತ್ಯ ರನ್‌ಗಾಗಿ ಓಡಿ ರನ್‌ಔಟ್‌ ಆದರು.

ಇನ್ನೊಂದೆಡೆ ತಾಳ್ಮೆಯ ಆಟಕ್ಕೆ ಮನಸ್ಸು ಮಾಡಿದ್ದ ಕುಕ್‌, ಶಾನನ್‌ ಗೇಬ್ರಿಯಲ್‌ ಬೌಲ್‌ ಮಾಡಿದ 88ನೇ ಓವರ್‌ನ ಮೊದಲ ಎಸೆತವನ್ನು ಮಿಡ್‌ವಿಕೆಟ್‌ನತ್ತ ಬೌಂಡರಿ ಬಾರಿಸಿ  ಶತಕದ ಸಂಭ್ರಮ ಆಚರಿಸಿದರು.

ಟೆಸ್ಟ್‌ ಮಾದರಿಯಲ್ಲಿ ಕುಕ್‌ ಗಳಿಸಿದ 26ನೇ  ಶತಕ ಇದಾಗಿದೆ. ಎರಡು ವರ್ಷಗಳ ದೀರ್ಘ ಬಿಡುವಿನ ಬಳಿಕ ಅವರಿಂದ ಶತಕ ಮೂಡಿಬಂದಿತು.

368ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಅವರು 266ಎಸೆತಗಳನ್ನು ಎದುರಿಸಿ 12ಬೌಂಡರಿ ಗಳಿಸಿ ಉತ್ತಮವಾಗಿ ಆಡುತ್ತಿದ್ದರು.  ಆದರೆ ಮರ್ಲಾನ್‌ ಸ್ಯಾಮುಯೆಲ್ಸ್‌ ಹಾಕಿದ 90ನೇ ಓವರ್‌ನ ಎರಡನೇ ಎಸೆತವನ್ನು ಕಟ್‌ ಮಾಡಲು ಹೋಗಿ ವಿಕೆಟ್‌ ಕೀಪರ್‌ ದಿನೇಶ್‌ ರಾಮ್ದಿನ್‌ಗೆ ಕ್ಯಾಚ್‌ ನೀಡಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌: ಮೊದಲ ಇನಿಂಗ್ಸ್‌: 89.2 ಓವರ್‌ಗಳಲ್ಲಿ 7 ವಿಕೆಟ್‌ಗೆ 240 (ಅಲಸ್ಟೇರ್‌ ಕುಕ್‌ 105, ಜೋ ರೂಟ್‌ 33, ಮೋಯಿನ್‌ ಅಲಿ 58, ಬೆನ್‌ ಸ್ಟೋಕ್ಸ್‌ 22; ಶಾನನ್‌ ಗೇಬ್ರಿಯಲ್‌ 36ಕ್ಕೆ2, ಜಾಸನ್‌ ಹೋಲ್ಡರ್‌ 34ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.