ADVERTISEMENT

ಕೆರ್ಬರ್‌ಗೆ ಆಘಾತ ನೀಡಿದ ಮಕರೋವಾ

ಕ್ವಿಟೋವಾ, ಜೆಲೆನಾ ಗೆಲುವಿನ ಆರಂಭ

ಏಜೆನ್ಸೀಸ್
Published 28 ಮೇ 2017, 19:30 IST
Last Updated 28 ಮೇ 2017, 19:30 IST
ಏಕ್ತರಿನಾ ಮಕರೋವಾ
ಏಕ್ತರಿನಾ ಮಕರೋವಾ   

ಪ್ಯಾರಿಸ್‌ (ಎಪಿ/ಎಎಫ್‌ಪಿ): ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮೊದಲ ದಿನವೇ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.

ಜರ್ಮನಿಯ ಆಟಗಾರ್ತಿ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ದಲ್ಲಿರುವ ಏಂಜಲಿಕ್‌ ಕೆರ್ಬರ್‌ ಅವರು ಆರಂಭಿಕ ಸುತ್ತಿನಲ್ಲೇ ಸೋತು ಟೂರ್ನಿ ಯಿಂದ ಹೊರಬಿದ್ದಿದ್ದಾರೆ.

ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಹೋರಾಟದಲ್ಲಿ ರಷ್ಯಾದ ಏಕ್ತರಿನಾ ಮಕರೋವಾ 6–2, 6–2ರ ನೇರ ಸೆಟ್‌ಗಳಿಂದ ಕೆರ್ಬರ್‌ ಅವರನ್ನು ಸೋಲಿಸಿದರು.

ಅಗ್ರ ರ‍್ಯಾಂಕ್‌ನ ಕೆರ್ಬರ್‌ ಅವರು  ಫ್ರೆಂಚ್‌ ಓಪನ್‌ನ ಪ್ರಥಮ ಸುತ್ತಿನಲ್ಲೇ ಸೋತ ಮೊದಲ ಆಟಗಾರ್ತಿ ಎನಿಸಿದ್ದಾರೆ.

ಆಸ್ಟ್ರೇಲಿಯಾ ಮತ್ತು ಅಮೆರಿಕಾ ಓಪನ್‌ ಟೂರ್ನಿಗಳಲ್ಲಿ ಪ್ರಶಸ್ತಿ ಎತ್ತಿಹಿಡಿ ದಿದ್ದ ಕೆರ್ಬರ್‌ ಅವರು ಮೊದಲ ಸುತ್ತಿನಲ್ಲಿ ಸುಲಭವಾಗಿ ಗೆಲ್ಲುತ್ತಾರೆ   ಎಂದೇ ಭಾವಿಸ ಲಾಗಿತ್ತು. ಆದರೆ ಟೆನಿಸ್‌ ಪ್ರಿಯರ ಈ ನಿರೀಕ್ಷೆ ಹುಸಿಯಾಯಿತು.

ವಿಶ್ವ ಕ್ರಮಾಂಕಪಟ್ಟಿಯಲ್ಲಿ 40ನೇ ಸ್ಥಾನ ಹೊಂದಿರುವ ಮಕರೋವಾ, ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದರು.

ಶರವೇಗದ ಸರ್ವ್‌ ಮತ್ತು ಬಲಿಷ್ಠ ಮುಂಗೈ ಹೊಡೆತಗಳ ಮೂಲಕ ಲೀಲಾಜಾಲವಾಗಿ ಗೇಮ್‌ ಗೆದ್ದು  ಮುನ್ನಡೆ ತಮ್ಮದಾಗಿಸಿಕೊಂಡರು.


ಏಂಜಲಿಕ್‌ ಕೆರ್ಬರ್‌

ಇದರಿಂದ ವಿಚಲಿತರಾದಂತೆ ಕಂಡ ಕೆರ್ಬರ್‌, 12 ಸ್ವಯಂಕೃತ ತಪ್ಪುಗಳನ್ನು ಮಾಡಿದರು. ಇದರ ಪೂರ್ಣ ಲಾಭ ಎತ್ತಿಕೊಂಡ ರಷ್ಯಾದ ಆಟಗಾರ್ತಿ ಸುಲಭ ವಾಗಿ ಸೆಟ್‌ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲೂ ಮಕರೋವಾ ತುಂಬು ವಿಶ್ವಾಸದಿಂದ ಆಡಿದರು.

ತಮ್ಮ ಸರ್ವ್‌ ಉಳಿಸಿಕೊಳ್ಳುವ ಜೊತೆಗೆ ಕೆರ್ಬರ್‌ ಅವರ ಸರ್ವ್‌  ಮುರಿದ ಅವರು 3–0ರಲ್ಲಿ ಮುನ್ನಡೆ ಪಡೆದರು.

ನಾಲ್ಕನೇ ಗೇಮ್‌ ನಲ್ಲಿ ಕ್ರಾಸ್‌ಕೋರ್ಟ್‌ ಮತ್ತು  ಫೋರ್‌ ಹ್ಯಾಂಡ್‌ ಹೊಡೆತಗಳ ಮೂಲಕ ಎದು ರಾಳಿಯನ್ನು ಕಂಗೆಡಿಸಿದ ಕೆರ್ಬರ್‌ ಹಿನ್ನಡೆ ಯನ್ನು 1–3ಕ್ಕೆ ತಗ್ಗಿಸಿಕೊಂಡರು.

ಬಳಿಕ ಗುಣ ಮಟ್ಟದ ಆಟ ಆಡಿದ ಮಕರೋವಾ ನಿರಾಯಾಸವಾಗಿ ಎದುರಾಳಿಯ ಸವಾಲು ಮೀರಿ ನಿಂತು ಖುಷಿಯ ಕಡಲಲ್ಲಿ ತೇಲಿದರು.
ಇನ್ನೊಂದು ಪಂದ್ಯದಲ್ಲಿ ಎರಡು ಬಾರಿಯ ವಿಂಬಲ್ಡನ್‌ ಚಾಂಪಿಯನ್‌ ಪೆಟ್ರಾ ಕ್ವಿಟೋವಾ 6–3, 6–2ರಲ್ಲಿ ಅಮೆರಿಕಾದ ಜೂಲಿಯ ಬೊಸೆರಪ್‌ ಅವರನ್ನು ಮಣಿಸಿದರು.

ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ಸ್ವೆಟ್ಲಾನ ಕುಜ್ನೆತ್ಸೋವಾ 7–5, 6–4ರಲ್ಲಿ ಕ್ರಿಸ್ಟಿನಾ ಮೆಕ್‌ಹಾಲೆ ಎದುರೂ, ಶೆಲ್ಬಿ ರೋಜರ್ಸ್‌ 7–6, 6–4ರಲ್ಲಿ ಮರಿನಾ ಎರಕೊವಿಚ್‌ ಮೇಲೂ, ಮ್ಯಾಡಿಸನ್‌ ಬ್ರೆಂಗಲ್ 1–6, 6–3, 13–11ರಲ್ಲಿ ಜೂಲಿಯ ಜಾರ್ಜಸ್‌ ವಿರುದ್ಧವೂ, ಜೆಲೆನಾ ಒಸ್ಟಾಪೆಂಕೊ 4–6, 6–3, 6–2 ರಲ್ಲಿ ಲೂಯಿಸಾ ಚಿರಿಕೊ ಮೇಲೂ, ಮೋನಿಕಾ ಪುಯಿಗ್‌ 6–3, 3–6, 6–2 ರಲ್ಲಿ ರಾಬರ್ಟ ವಿನ್ಸಿ ವಿರುದ್ಧವೂ, ಟೈಮಿ ಬ್ಯಾಕ್‌ಸಿಂಜಿಕಿ 6–1, 6–2ರಲ್ಲಿ ಸಾರಾ ಸೊರಿಬೆಸ್‌ ಟೊರ್ಮೊ ಎದುರೂ ಗೆದ್ದರು.

ರಾಮೋಸ್‌ ಗೆಲುವಿನ ಆರಂಭ: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸ್ಪೇನ್‌ನ ಅಲ್ಬರ್ಟ್‌ ರಾಮೋಸ್‌ ಗೆಲುವಿನ ಆರಂಭ ಕಂಡಿದ್ದಾರೆ.

ಆರಂಭಿಕ ಸುತ್ತಿನ ಹೋರಾಟದಲ್ಲಿ  ರಾಮೋಸ್‌ 6–1, 6–4, 6–2ರಲ್ಲಿ ರುಮೇನಿಯಾದ ಮಾರಿಯಸ್‌ ಕೊಪಿಲ್‌ ಅವರನ್ನು ಪರಾಭವಗೊಳಿಸಿದರು.

ಇತರ ಪಂದ್ಯಗಳಲ್ಲಿ ಡೊಮಿನಿಕ್‌ ಥಿಯೆಮ್‌ 6–4, 6–0, 6–2ರಲ್ಲಿ ಬರ್ನಾರ್ಡ್‌ ಟೊಮಿಕ್‌ ಎದುರೂ, ಇವೊ ಕಾರ್ಲೊವಿಚ್‌ 7–5, 7–5, 7–5, 6–4 ರಲ್ಲಿ ಸ್ಟೆಫಾನೊಸ್‌ ಸಿಟ್‌ಸಿಪಾಸ್‌ ಮೇಲೂ, ಮಿಖಾಯಿಲ್‌ ಕುಕುಸ್ಕಿನ್‌ 6–2, 6–1, 6–4 ರಲ್ಲಿ ಟೆನ್ಯಾಸ್‌ ಸ್ಯಾಂಡ್‌ಗ್ರೇನ್‌ ವಿರು ದ್ಧವೂ, ಗ್ರಿಗೊರ್‌ ಡಿಮಿಟ್ರೊವ್‌ 6–2, 6–3, 6–4ರಲ್ಲಿ  ಸ್ಟಿಫಾನೆ ರಾಬರ್ಟ್‌ ಮೇಲೂ, ಪ್ಯಾಬ್ಲೊ ಕರೆನೊ 6–4, 6–2, 6–2ರಲ್ಲಿ ಫ್ಲೋರಿಯನ್‌ ಮೇಯರ್‌ ಎದುರೂ, ಬೆಂಜಮಿನ್‌ ಬೊಂಜಿ 5–7, 6–4, 6–1, 3–1ರಲ್ಲಿ ಡೇನಿಯಲ್‌ ಮೆಡ್ವೆದೇವ್‌ ವಿರುದ್ಧವೂ, ಗುಯಿಲ್ಲರ್ಮೊ ಗಾರ್ಸಿಯಾ 7–6, 6–7, 6–2, 6–2ರಲ್ಲಿ ಗಿಲ್ಲೆಸ್‌ ಮುಲ್ಲರ್‌ ಮೇಲೂ, ಹೊರಾ ಸಿಯೊ ಜೆಬಲ್ಲೊಸ್‌ 7–5, 6–3, 6–4ರಲ್ಲಿ ಆಡ್ರಿಯನ್‌ ಮನ್ನಾರಿನೊ ವಿರುದ್ಧವೂ ಗೆಲುವು ತಮ್ಮದಾಗಿಸಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.