ADVERTISEMENT

ಕ್ಲಾರ್ಕ್‌, ಮೆಕ್ಲಮ್‌ಗೆ ಪ್ರತಿಷ್ಠೆಯ ಹೋರಾಟ

ಮೆಲ್ಬರ್ನ್‌ ಅಂಗಳದಲ್ಲಿ ನಾಳೆ ಫೈನಲ್‌: ನನಸಾಗುವುದೇ ಚೊಚ್ಚಲ ಟ್ರೋಫಿಯ ಕನಸು?

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಮೆಲ್ಬರ್ನ್‌/ನವದೆಹಲಿ (ಪಿಟಿಐ/ ಐಎಎನ್ಎಸ್‌/ ಎಎಫ್‌ಪಿ):  ಹನ್ನೊಂದನೇ ಐಸಿಸಿ ಏಕದಿನ ವಿಶ್ವಕಪ್  ಟೂರ್ನಿಯಲ್ಲಿ ಯಾರು ಫೈನಲ್‌ ಪ್ರವೇಶಿಸಲಿದ್ದಾರೆ ಎನ್ನುವ ಕುತೂಹಲ ಈಗ ತಣಿದು ಹೋಗಿದೆ. ಟೂರ್ನಿಗೆ ಆತಿಥ್ಯ ವಹಿಸಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳೇ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದು, ಟ್ರೋಫಿ ಯಾರ ಮಡಿಲು ಸೇರಲಿದೆ ಎನ್ನುವ ಚರ್ಚೆ ಜೋರಾಗಿಯೇ ನಡೆದಿದೆ.

ಆಸ್ಟ್ರೇಲಿಯಾ ತಂಡ ನಾಲ್ಕು ಸಲ ಟ್ರೋಫಿ ಎತ್ತಿ ಹಿಡಿದಿದೆಯಾದರೂ,  ತವರಿನಲ್ಲಿ ಒಮ್ಮೆಯೂ ಚಾಂಪಿಯನ್ ಎನಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. 1992ರಲ್ಲಿ ಮೊದಲ ಸಲ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದ ಕಾಂಗರೂ ಪಡೆ ಲೀಗ್‌ ಹಂತದಿಂದ ಹೊರಬಿದ್ದಿತ್ತು. ಆದರೆ, ಈ ಬಾರಿ ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಬಾಂಗ್ಲಾದೇಶ ಎದುರಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದರಿಂದ ಉಭಯ ತಂಡಗಳು ಪಾಯಿಂಟ್ಸ್‌ ಹಂಚಿಕೊಂಡಿದ್ದವು. ಕ್ವಾರ್ಟರ್‌ ಫೈನಲ್‌ನಲ್ಲಿ ಪಾಕ್‌ ತಂಡವನ್ನು ಮಣಿಸಿತ್ತು.

ಫೈನಲ್‌ ತಲುಪಿರುವ ತಂಡಗಳು ಲೀಗ್‌ ಹಂತದಲ್ಲಿ ‘ಎ’ ಗುಂಪಿನಲ್ಲಿದ್ದವು. ಒಂದು ಸಲ ಮುಖಾಮುಖಿಯಾಗಿದ್ದವು. ಆಗ ನ್ಯೂಜಿಲೆಂಡ್ ತಂಡ ಗೆಲುವು ಪಡೆದಿತ್ತು. ಕಿವೀಸ್‌ ಅಜೇಯವಾಗಿ ಫೈನಲ್‌ ಪ್ರವೇಶಿಸಿದೆ.

ಹಿಂದಿನ ಆರು ವಿಶ್ವಕಪ್‌ಗಳಲ್ಲಿಯೂ ನ್ಯೂಜಿಲೆಂಡ್  ತಂಡ ನಾಲ್ಕು ಸಲ ಸೆಮಿಫೈನಲ್‌ನಲ್ಲಿ ಸೋಲು ಕಂಡಿದೆ. ಒಟ್ಟು ಆರು ಸಲ ನಾಲ್ಕರ ಘಟ್ಟದಲ್ಲಿಯೇ ನಿರಾಸೆಗೆ ಒಳಗಾಗಿದೆ. ಆದರೆ, ಒಮ್ಮೆಯೂ ಫೈನಲ್‌ ತಲುಪಲು ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಪ್ರಶಸ್ತಿ ಸುತ್ತು ತಲುಪಿರುವ ಕಿವೀಸ್‌
ಈ ಅವಕಾಶವನ್ನು ಸ್ಮರಣೀಯವಾಗಿರಿಸಿಕೊಳ್ಳುವ ಗುರಿ ಹೊಂದಿದೆ.

ವೆಟೋರಿ ಪಾತ್ರ ಮುಖ್ಯ: ‘ನ್ಯೂಜಿಲೆಂಡ್  ಟ್ರೋಫಿ ಗೆಲ್ಲಬೇಕಾದರೆ ಹಿರಿಯ ಆಟಗಾರ ಡೇನಿಯಲ್‌ ವೆಟೋರಿ ಜವಾಬ್ದಾರಿಯಿಂದ ಆಡಬೇಕು. ತಂಡದ ಗೆಲುವಿನಲ್ಲಿ ಅವರ ಪಾತ್ರ ಪ್ರಮುಖವಾಗಿದೆ’ ಎಂದು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಹೇಳಿದ್ದಾರೆ.

‘ಮಧ್ಯಮದ ಓವರ್‌ಗಳಲ್ಲಿ ಎದುರಾಳಿ ತಂಡಕ್ಕೆ ಹೆಚ್ಚು ರನ್‌ ನೀಡಬಾರದು. ಆಲೌಟ್‌ ಮಾಡುವತ್ತ ಗಮನ ಹರಿಸಬೇಕು. ಇದು ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ’ ಎಂದೂ ದೋನಿ ಅಭಿಪ್ರಾಯ ಪಟ್ಟಿದ್ದಾರೆ.

‘ಮೆಲ್ಬರ್ನ್‌ನಲ್ಲಿ ಫೈನಲ್  ನಡೆಯಲಿರುವ ಕಾರಣ ಆಸ್ಟ್ರೇಲಿಯಾ ತಂಡಕ್ಕೆ ಹೆಚ್ಚು ಬೆಂಬಲ ಲಭಿಸುತ್ತದೆ. ಇಲ್ಲಿನ ಕ್ರೀಡಾಂಗಣ ಭಿನ್ನವಾಗಿದೆ. ಯಾರಿಗೆ ನೆರವಾಗುತ್ತದೆ ಎಂದು ನಿರೀಕ್ಷೆ ಮಾಡುವುದು ಕಷ್ಟ. ನಮ್ಮ ತಂಡ ಮೊದಲ ಬಾರಿಗೆ ಫೈನಲ್  ತಲುಪಿರುವ ಕಾರಣ ಸಾಕಷ್ಟು ಖುಷಿಯಲ್ಲಿದೆ. ತುಂಬಾ ಭಾವುಕವಾಗಿದೆ. ಆದರೆ, ಕಠಿಣ ಸವಾಲನ್ನು ಎದುರಿಸಲು ಮಾನಸಿಕವಾಗಿ ಸಜ್ಜಾಗಬೇಕು’ ಎಂದು ಕಿವೀಸ್‌ ತಂಡದ ಮಾಜಿ ನಾಯಕ ಮಾರ್ಟಿನ್‌ ಕ್ರೋವ್‌ ಸುದ್ದಿಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಕಿವೀಸ್ ಪಡೆ ಮೆಲ್ಬರ್ನ್‌ ಅಂಗಳದಲ್ಲಿ 2009ರಲ್ಲಿ ಕೊನೆಯ ಬಾರಿಗೆ ಆಡಿತ್ತು. ‘ಚಾಪೆಲ್‌–ಹ್ಯಾಡ್ಲಿ’ ಸರಣಿಯ ಎರಡನೇ ಏಕದಿನ ಇಲ್ಲಿ ನಡೆದಿತ್ತು. ಆಗ ನ್ಯೂಜಿಲೆಂಡ್ ತಂಡ ಏಳು ವಿಕೆಟ್‌ಗಳ ಗೆಲುವು ಪಡೆದಿತ್ತು.

23 ವರ್ಷಗಳ ಹಿಂದೆ ಮೆಲ್ಬರ್ನ್‌ನಲ್ಲಿ ವಿಶ್ವಕಪ್‌ನ ಫೈನಲ್‌ ನಡೆದಿತ್ತು. ಆಗ ಮೊದಲು ಬ್ಯಾಟ್‌ ಮಾಡಿದ್ದ ಪಾಕ್‌ ತಂಡ ಇಂಗ್ಲೆಂಡ್‌ ವಿರುದ್ಧ ಗೆಲುವು ಸಾಧಿಸಿತ್ತು.

‘ಫೈನಲ್‌ನಲ್ಲಿ ಬೌಲರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ. ಟ್ರೆಂಟ್ ಬೌಲ್ಟ್‌, ಮಿಷೆಲ್‌ ಸ್ಟಾರ್ಕ್‌, ಮಿಷೆಲ್‌ ಜಾನ್ಸನ್  ಮತ್ತು ಜೋಶ್‌ ಹ್ಯಾಜಲ್‌ವುಡ್‌ ಅವರ ಪಾತ್ರ ನಿರ್ಣಾಯಕ. ಸ್ಪಿನ್ನರ್‌ಗಳೂ ಪ್ರಾಬಲ್ಯ ಮೆರೆಯುವ ನಿರೀಕ್ಷೆಯಿದೆ’ ಎಂದೂ ಕ್ರೋವ್‌ ಹೇಳಿದ್ದಾರೆ.

ಗೆಲ್ಲುವ ವಿಶ್ವಾಸವಿದೆ: ‘ನಾವು ಮೊದಲ ಸಲ ಫೈನಲ್‌ ತಲುಪಿದ ಖುಷಿಯಲ್ಲಿದ್ದೇವೆ. ನಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆಯಿದೆ. ಬೌಲಿಂಗ್‌ ವಿಭಾಗವೂ ಬಲಿಷ್ಠವಾಗಿದೆ’ ಎಂದು ಕಿವೀಸ್‌ ತಂಡದ ವೇಗಿ ಟಿಮ್‌ ಸೌಥಿ ಹೇಳಿದ್ದಾರೆ.

‘ಕ್ರೀಡಾಂಗಣದ ಗಾತ್ರದ ಬಗ್ಗೆ ನಮಗೆ ಚಿಂತೆಯಿಲ್ಲ. ಇದರ ಬಗ್ಗೆ ಯೋಚಿಸುವುದೂ ಇಲ್ಲ. ಫೈನಲ್‌ ಪ್ರವೇಶಿಸಬೇಕೆನ್ನುವ ಹಲವು ವರ್ಷಗಳ ಕನಸು ನನಸಾಗಿದೆ. ವೆಟೋರಿ, ಬ್ರೆಂಡನ್ ಮೆಕ್ಲಮ್‌, ರಾಸ್‌ ಟೇಲರ್‌, ಮಾರ್ಟಿನ್  ಗುಪ್ಟಿಲ್‌ ಮೇಲೆ ತಂಡ ಅವಲಂಬಿತವಾಗಿದೆ’ ಎಂದೂ ಸೌಥಿ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.