ADVERTISEMENT

‘ಕ್ಲೀನ್‌ ಸ್ವೀಪ್‌’ ತಪ್ಪಿಸಿಕೊಂಡ ಬಾಂಗ್ಲಾ

ಶ್ರೀಕಾಂತ ಕಲ್ಲಮ್ಮನವರ
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST
ಬೆಳಗಾವಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಟ್ವಿಂಟಿ 20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಮಹಿಳಾ ‘ಎ’ ತಂಡದ ನಾಯಕಿ ಅನುಜಾ ಪಾಟೀಲ ರನ್‌ ಔಟ್‌ ಆದರು
ಬೆಳಗಾವಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಟ್ವಿಂಟಿ 20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಮಹಿಳಾ ‘ಎ’ ತಂಡದ ನಾಯಕಿ ಅನುಜಾ ಪಾಟೀಲ ರನ್‌ ಔಟ್‌ ಆದರು   

ಬೆಳಗಾವಿ: ಟ್ವಿಂಟಿ- 20 ಕ್ರಿಕೆಟ್‌ ಸರಣಿಯನ್ನು ‘ಕ್ಲೀನ್‌ ಸ್ವೀಪ್‌’ ಮಾಡಲು ಹೊರಟಿದ್ದ ಭಾರತ ‘ಎ’ ಮಹಿಳಾ ತಂಡದ ಕನಸನ್ನು ಬಾಂಗ್ಲಾದೇಶ ‘ಎ’ ಮಹಿಳಾ ತಂಡವು ನುಚ್ಚುನೂರು ಮಾಡಿತು. ಮೊದಲೆರಡು ಪಂದ್ಯಗಳನ್ನು ತನ್ನದಾಗಿಸಿಕೊಂಡಿದ್ದ ಭಾರತ ತಂಡಕ್ಕೆ ತಿರುಗೇಟು ನೀಡಿದ ಬಾಂಗ್ಲಾ ತಂಡ 39 ರನ್‌ಗಳಿಂದ ಅಂತಿಮ ಪಂದ್ಯವನ್ನು ಗೆದ್ದು ನಿಟ್ಟುಸಿರು ಬಿಟ್ಟಿತು.

ಇಲ್ಲಿನ ರಾಮತೀರ್ಥ ನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಟ್ವಿಂಟಿ–20 ಸರಣಿಯ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ, ಏಳು ವಿಕೆಟ್‌ ಕಳೆದುಕೊಂಡು 112 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಭಾರತ ಎಂಟು ವಿಕೆಟ್‌ಗಳಿಗೆ 73 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಬಾಂಗ್ಲಾ ತಂಡದ ಉಪ–ನಾಯಕಿ ರುಮಾನಾ ಅಹ್ಮದ್‌ 45 ಎಸೆತ ಎದುರಿಸಿ 46 ರನ್‌ ಕಲೆ ಹಾಕಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಅವರಿಗೆ ಸಲ್ಮಾ ಖಾತೂನ್‌ (21) ಮತ್ತು ನಿಗರ್‌ ಸುಲ್ತಾನ್‌ (13) ಉತ್ತಮ ಬೆಂಬಲ ನೀಡಿದರು.

ADVERTISEMENT

ಹ್ಯಾಟ್ರಿಕ್‌ ರನ್‌ಔಟ್‌: ಭಾರತ ತಂಡದ ಆಟಗಾರರು ಆರಂಭದಲ್ಲಿ ಆಘಾತ ಅನುಭವಿಸಿದರು. 22 ರನ್‌ ಗಳಿಸಿದ್ದಾಗ ಮೊದಲ ವಿಕೆಟ್‌ ಪತನವಾಯಿತು. ಮೂರು ರನ್‌ ಗಳಿಸಿದ್ದ ಡಿ.ಪಿ. ವೈದ್ಯ ಬೌಲ್ಡ್‌ ಆದರು. 30 ರನ್‌ ಗಳಿಸುವಷ್ಟರಲ್ಲಿ ರಮ್ಯಾ ಡೋಲಿ ವಿಕೆಟ್‌ ಒಪ್ಪಿಸಿದರು. ನಂತರ ಆಟಗಾರರು ನಿಧಾನಗತಿಯ ಆಟಕ್ಕೆ ಮೊರೆ ಹೋದರು. 10ನೇ ಓವರ್‌ನಲ್ಲಿ ಮೂವರು ಬ್ಯಾಟ್ಸ್‌ವುಮನ್‌ ರನ್‌ ಔಟಾದರು. ಮೊದಲ ಎಸೆತದಲ್ಲಿ ಡಿ.ಹೇಮಲತಾ, ಎರಡನೇ ಎಸೆತದಲ್ಲಿ ಸ್ವಗತಿಕಾ ರಥ್‌ ಹಾಗೂ ಮೂರನೇ ಎಸೆತದಲ್ಲಿ ನಾಯಕಿ ಅಂಜು ಪಾಟೀಲ ವಿಕೆಟ್‌ ಒಪ್ಪಿಸಿದರು.

ಆ ನಂತರ ಕ್ರಿಸ್‌ಗೆ ಬಂದ ಆಟಗಾರರು ಒತ್ತಡದಲ್ಲೇ ಬ್ಯಾಟ್ ಬೀಸಿದರು. ಕೊನೆಯ 10 ಓವರ್‌ಗಳಲ್ಲಿ 30 ರನ್‌ಗಳು ಮಾತ್ರ ಹರಿದು ಬಂದವು. ರಮ್ಯಾ ಡೋಲಿ, ಡಿ.ಹೇಮಲತಾ ಹಾಗೂ ತರನ್ನಂ ಪಠಾಣ ಮಾತ್ರ ಎರಡಂಕಿ ದಾಟಿದರು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ ಮಹಿಳಾ ‘ಎ’ ತಂಡ: 20 ಓವರ್‌ಗಳಲ್ಲಿ 7ಕ್ಕೆ 112 (ರುಮಾನಾ ಅಹ್ಮದ್‌ 46, ಸಲ್ಮಾ ಖಾತೂನ್‌ 21, ನಿಗರ್‌ ಸುಲ್ತಾನ್‌ 13, ಮುರ್ಷಿದ್‌ ಖಾತೂನ್‌ 12, ಶರ್ಮಿನ್‌ ಸುಲ್ತಾನ್‌ 10; ಅನುಜಾ ಪಾಟೀಲ 17ಕ್ಕೆ2, ತನುಜಾ ಕನ್ವರ್‌ 20ಕ್ಕೆ2); ಭಾರತ ಮಹಿಳಾ ‘ಎ’ ತಂಡ: 20 ಓವರ್‌ಗಳಲ್ಲಿ 8ಕ್ಕೆ 73 (ರಮ್ಯಾ ಡೋಲಿ 19, ಡಿ.ಹೇಮಲತಾ 10, ಪಠಾಣ್‌ 15; ನಹಿದಾ ಅಖ್ತರ್‌ 14ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.