ADVERTISEMENT

ಗೆಲುವಿನ ವಿಶ್ವಾಸದಲ್ಲಿ ಬಿಎಫ್‌ಸಿ

ಎಎಫ್‌ಸಿ ಕಪ್‌ ಅಂತರ ವಲಯ ಸೆಮಿಫೈನಲ್‌; ಇಂದು ಏಪ್ರಿಲ್‌ 25 ವಿರುದ್ಧ ಪಂದ್ಯ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:51 IST
Last Updated 22 ಆಗಸ್ಟ್ 2017, 19:51 IST
ಗೆಲುವಿನ ವಿಶ್ವಾಸದಲ್ಲಿ ಬಿಎಫ್‌ಸಿ
ಗೆಲುವಿನ ವಿಶ್ವಾಸದಲ್ಲಿ ಬಿಎಫ್‌ಸಿ   

ಬೆಂಗಳೂರು: ಎಎಫ್‌ಸಿ ಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿಯುವ ಛಲದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದವರು ಈ ಹಾದಿಯಲ್ಲಿ ಕಠಿಣ ಸವಾಲಿಗೆ ಎದೆಯೊಡ್ಡಲು ಸಜ್ಜಾಗಿದ್ದಾರೆ.

ಬುಧವಾರ ನಡೆಯುವ ಅಂತರ ವಲಯ ಮೊದಲ ಹಂತದ ಸೆಮಿಫೈನಲ್‌ ಹೋರಾಟದಲ್ಲಿ ಬಿಎಫ್‌ಸಿ ತಂಡ ಉತ್ತರ ಕೊರಿಯಾದ ಏಪ್ರಿಲ್‌ 25 ವಿರುದ್ಧ ಸೆಣಸಲಿದೆ. ಬಲಿಷ್ಠರ ಈ ಹೋರಾಟಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ವೇದಿಕೆಯೂ ಸಿದ್ಧವಾಗಿದೆ.

ಅಲ್ಬರ್ಟೊ ರೋಕಾ ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಬೆಂಗಳೂರಿನ ತಂಡ 2016ರ ಮಾರ್ಚ್‌ನಲ್ಲಿ ಕಂಠೀರವದಲ್ಲಿ ನಡೆದಿದ್ದ ಎಎಫ್‌ಸಿ ಕಪ್‌ ಲೀಗ್‌ ಪಂದ್ಯದಲ್ಲಿ 0–1 ಗೋಲಿನಿಂದ ಮಲೇಷ್ಯಾದ ಜೊಹೊರ್‌ ದಾರುಲ್‌ ತಂಜಿಮ್‌ ವಿರುದ್ಧ ಸೋತಿತ್ತು. ಆ ನಂತರ ತವರಿನಲ್ಲಿ ಆಡಿದ ಏಳು ಪಂದ್ಯಗಳಲ್ಲೂ ಜಯದ ಸಿಹಿ ಸವಿದಿದೆ.

ADVERTISEMENT

ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿಯಲಿರುವ ಬಿಎಫ್‌ಸಿ, ಏಪ್ರಿಲ್‌ 25 ತಂಡವನ್ನೂ ಸುಲಭವಾಗಿ ಸೋಲಿಸುವ ವಿಶ್ವಾಸ ಹೊಂದಿದೆ.

ಲೀಗ್‌ ಹಂತದಲ್ಲಿ ಆಡಿದ ಆರು ಪಂದ್ಯಗಳಿಂದ ಏಳು ಗೋಲುಗಳನ್ನು ದಾಖಲಿಸಿದ್ದ ಸುನಿಲ್‌ ಚೆಟ್ರಿ ಪಡೆ ‘ಇ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ ನಾಕೌಟ್‌ಗೆ ಲಗ್ಗೆ ಇಟ್ಟಿತ್ತು.

ಚೆಟ್ರಿ ಮತ್ತು ಸ್ಪೇನ್‌ನ ಡಿಫೆಂಡರ್‌ ಜುನಾನ್‌ ಗೊಂಜಾಲೆಜ್‌ ಅವರು ತಂಡದ ಆಧಾರ ಸ್ತಂಭಗಳಾಗಿದ್ದಾರೆ. ಮಿಡ್‌ಫೀಲ್ಡರ್‌ಗಳಾದ ಸ್ಪೇನ್‌ನ ಡಿಮಾಸ್‌ ಡೆಲ್‌ಗಾಡೊ, ಟೋನಿ ಡೊವಾಲೆ, ಅಲ್ವಿನ್‌ ಜಾರ್ಜ್‌ ಮತ್ತು ಲೆನ್ನಿ ರಾಡ್ರಿಗಸ್‌ ಅವರೂ ಎದುರಾಳಿಗಳ ರಕ್ಷಣಾಕೋಟೆಯನ್ನು ಲೀಲಾಜಾಲವಾಗಿ ಭೇದಿಸಬಲ್ಲರು.

ಗೋಲ್‌ಕೀಪರ್‌ಗಳಾದ ಗುರ್‌ಪ್ರೀತ್‌ ಸಿಂಗ್‌ ಸಂಧು ಮತ್ತು ಅಮರಿಂದರ್‌ ಸಿಂಗ್‌ ಅವರ ಮೇಲೂ ಭರವಸೆ ಇಡಬಹುದಾಗಿದೆ.

ಏಪ್ರಿಲ್‌ 25 ತಂಡ  ಬಿಎಫ್‌ಸಿಯನ್ನು ಅದರದ್ದೇ ನೆಲದಲ್ಲಿ ಮಣಿಸುವ ಹುಮ್ಮಸ್ಸಿನಲ್ಲಿದೆ. ಈ ತಂಡ ಈಸ್ಟ್‌ ಏಷ್ಯಾ ವಲಯದ ಗುಂಪು 1ರಲ್ಲಿ ಅಗ್ರಸ್ಥಾನ ಗಳಿಸಿತ್ತು. ಹೀಗಾಗಿ ಬೆಂಗಳೂರಿನ ತಂಡದವರು ಎದುರಾಳಿಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

ಪಂದ್ಯದ ಆರಂಭ: ರಾತ್ರಿ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.